ಒಂದು ಒಳ್ಳೆಯ ನುಡಿ (9) - ಸ್ಥಿತ ಪ್ರಜ್ಞ

ಒಂದು ಒಳ್ಳೆಯ ನುಡಿ (9) - ಸ್ಥಿತ ಪ್ರಜ್ಞ

ಸ್ಥಿತಪ್ರಜ್ಜ ಎಂದಾಕ್ಷಣ ಎಲ್ಲವನ್ನೂ ಬಿಟ್ಟವನು, ಇವನಿಗೆ ಏನೂ ಬೇಡ, ಸರ್ವ ಸಂಗ ಪರಿತ್ಯಾಗಿ, ಇವ ತಪಸ್ಸಿಗೆ ಲಾಯಕ್ ಎಂದು ಭಾವಿಸುವುದು ತಪ್ಪು. ಹೊರನೋಟವನ್ನು ನೋಡಿ ಯಾರನ್ನು, ಯಾವುದನ್ನು ಅಳೆಯಲಾಗದು. ಸ್ಥಿತ ಅಂದರೆ ಸ್ಥಿರ, ಗಟ್ಟಿ , ಅಚಲ ಹೀಗೆಲ್ಲ ವ್ಯಾಖ್ಯಾನಿಸಬಹುದೇನೋ. ಪ್ರಜ್ಞೆ ನಮಗೆ ಗೊತ್ತಿದ್ದ ವಿಷಯವೇ ಆಗಿದೆ. ಎಷ್ಟೋ ಸಲ ಹೇಳ್ತೇವೆ ಅವನಿಗೆ ಮೈಮೇಲೆ ಪ್ರಜ್ಞೆ ಬೇಡವೇ, ಹೀಗೂ ಮಾತನಾಡಿದನಲ್ಲ? ಹಳ್ಳಿ ಭಾಷೆಯಲ್ಲಿ ಅವನಿಗೆ ಒಂದು ಸುತ್ತು ಕಡಿಮೆಯಾ, ಅಕಲಿಲ್ಲವೇ, ಏನಾದರೂ ಹಾಕಿ ಮಾತನಾಡುತ್ತಾನೆಯೇ ಹೀಗೆಲ್ಲ ತೀರ್ಮಾನಕ್ಕೆ ಬರುತ್ತೇವೆ.

ಅವರವರ ನಿತ್ಯ ಜೀವನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿ ಮುಗಿಸಿ, ಆತ್ಮಾನು ಸಂಧಾನವನ್ನು ಯಾವಾತನು ಹೊಂದುತ್ತಾನೋ ಆತ ಸ್ಥಿತಪ್ರಜ್ಜ ಎನ್ನಬಹುದು. ಅವರಿಗೆ ಕರ್ಮ ಸಂಬಂಧಗಳಲ್ಲಿ ವಿಶೇಷ ಆಸಕ್ತಿ ಇಲ್ಲವಾದರೂ, ಪ್ರಪಂಚ ಮುಖಕ್ಕೆ ತೆರೆದುಕೊಳ್ಳುವ ಮನೋಭಾವ ಖಂಡಿತಾ ಇದೆ. ಜನಸಾಗರಕ್ಕೆ ಒಳ್ಳೆಯ ಆದರ್ಶಗಳನ್ನು, ಮಾನವೀಯ ಮೌಲ್ಯಗಳನ್ನು ನೀಡುವಲ್ಲಿ ಆಸಕ್ತರಾಗಿರುತ್ತಾರೆ. ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿ ಬರುವುದು-ಹಿಮಾಲದಲ್ಲಿ ಕುಳಿತು ಧ್ಯಾನ ಮಾಡಿ ಬಂದವರಂತೆ ಅವರು, ಮಹಾ ಯೋಗಿಗಳು, ಜ್ಞಾನಿಗಳು ಎಂಬುದಾಗಿ. ಅವರೆಲ್ಲರೂ ಸ್ಥಿತಪ್ರಜ್ಜರೇ ಎಂದರೆ ಅದಕ್ಕೆ ಉತ್ತರ ಶೂನ್ಯ.

ಎಲ್ಲೋ ಒಂದೆಡೆ ಒಬ್ಬ ವ್ಯಕ್ತಿ ಕುಳಿತಿರುವಾಗ, ಅವನ ಎದುರಲ್ಲೇ ಇಬ್ಬರೊಳಗೆ ವಾದ ವಿವಾದಗಳು ನಡೆದು, ವಿಕೋಪದ ಹಂತಕ್ಕೆ ಬರಬಹುದು. ಕುಳಿತವನು ಹೇಳಿದ ಯಾವ ಮಾತನ್ನು ಕಿವಿಗೆ ಹಾಕಿಕೊಳ್ಳದ ಈರ್ವರೂ ಹೋರಾಡುತ್ತಲೇ ಇರುವುದನ್ನು ನೋಡಿ, ಬಿಡಿಸಲು, ತಡೆಯಲು ಹೋಗದಿದ್ದಾಗ ಅವನನ್ನು ಸ್ಥಿತಪ್ರಜ್ಜ ಎಂದು ಹೇಳಲಾಗದು. ಬುದ್ಧಿವಾದ ಹೇಳುವಷ್ಟು ಹೇಳಿ ಸೋತು, ಇವರು ಏನು ಬೇಕಾದರೂ ಮಾಡಲಿ ಅಂತ ಅವ ಮೌನಿಯಾದ. ಒಂದುಂಟು ಸ್ಥಿತಪ್ರಜ್ಜರು ಯಾವತ್ತೂ ಏನಾದರೂ ತಲೆಕೆಡಿಸಿಕೊಳ್ಳಲಾರರು. ತಾವಾಯಿತು ತಮ್ಮ ಕೆಲಸವಾಯಿತು, ಊದುವ ಶಂಖವನ್ನು ಊದಿ ಬಿಡೋಣವೆಂದು ಭಾವಿಸುವವರಾಗಿರುತ್ತಾರೆ. ಸರಿ ಪಡಿಸಲು ನೋಡುವಷ್ಟು ನೋಡಿ ಮತ್ತೆ ಕೈಚೆಲ್ಲುತ್ತಾರೆ.

ದೇವರು, ಕಣ್ಣಿಗೆ ಕಾಣದ ಶಕ್ತಿ ಎಂದು ಬಲವಾಗಿ ನಂಬಿಕೆ ಇಟ್ಟುಕೊಂಡಿರುವ ಇವರು (ನಾವೆಲ್ಲರೂ ಸಹ ಅದೇ ನಂಬಿಕೆಯಲ್ಲಿದ್ದೇವೆ) ಅನಪೇಕ್ಷತೆ, ಶುಚಿತ್ವ, ದಕ್ಷತೆ, ಉದಾಸೀನತೆ, ಗತವ್ಯಥಿತ್ವ, ಅಷ್ಟ್ಯೈಶ್ವರ್ಯ, ಪರಿತ್ಯಾಗ ಮುಂತಾದ ಗುಣಗಳಿಂದ ಕೂಡಿದವನಾಗಿ, ದೇವರ ಭಜಕನಾಗುತ್ತಾನೆ. ಹೇಗಿರುತ್ತಾನೆ ಎಂದರೆ ಕನ್ನಡಿಯೊಳಗಿನ ಪ್ರತಿಬಿಂಬಕ್ಕೆ ಅಂಟುವಿಕೆ ಇಲ್ಲವೋ ಹಾಗೆ. ತಾವರೆ ಎಲೆ ನೀರಿನಲ್ಲೇ ಇದ್ದರೂ ಒದ್ದೆಯಾಗದು,ಇದೇ ರೀತಿ, ಸತ್ಯ, ಪ್ರಾಮಾಣಿಕತೆ, ಭಕ್ತಿಭಾವಗಳಿಂದ ತುಂಬಿದವನಾಗಿದ್ದು,ಎಲ್ಲರಿಗೂ ಪ್ರಿಯನಾಗುತ್ತಾನೆ.
 

-ರತ್ನಾ ಭಟ್ ತಲಂಜೇರಿ

-ಚಿತ್ರ : ಶ್ರೇಯಸ್ ಕಾಮತ್, ಬೆಂಗಳೂರು