ಒಂದು ಒಳ್ಳೆಯ ನುಡಿ - 95

ಒಂದು ಒಳ್ಳೆಯ ನುಡಿ - 95

*ಸೂರ್ಯಂ ಪ್ರತಿ ರಜಃ ಕ್ಷಿಪ್ತಂ* *ಸ್ವಚಕ್ಷುಷಿ ಪತಿಷ್ಯತಿ/*

*ಬುಧಾನ್ ಪ್ರತಿ ಕೃತಾsವಜ್ಞಾ ಸಾ*  *ತಥಾ ತಸ್ಯ ಭಾವಿನೀ//*

ಪ್ರಕಾಶಮಾನವಾಗಿ ಇಡೀ ಪ್ರಪಂಚಕ್ಕೆ ಬೆಳಕನ್ನು, ಶಾಖವನ್ನು ಕೊಡುವ ಸೂರ್ಯನಿಗೆ ಯಾರಾದರು ಮಣ್ಣನ್ನು ಎಸೆಯುತ್ತೇನೆ ಎಂದು ಹೊರಟರೆ ಆ ಮಣ್ಣು ಎಸೆದವನ ಮುಖಕ್ಕೆ ಬಂದು ಬೀಳಬಹುದು. ಕಣ್ಣಿಗೆ ಬಂದು ಬಿದ್ದು ಕಣ್ಣು ಮಣ್ಣಿನಿಂದ ತುಂಬಬಹುದು‌. ಇದೇ ರೀತಿ ಒಳ್ಳೆಯವರು, ಗುಣವಂತರು, ಉತ್ತಮರು, ಹೃದಯವಂತರು ಅನಿಸಿಕೊಂಡವರನ್ನು ನಾವುಗಳು ನಿಂದಿಸಿ ಅಪಮಾನ ಮಾಡಿದರೆ, ಅದು ಪುನಃ ಅವಮಾನಿಸಿದವನಿಗೆ ಬಂದು ಬಡಿಯಬಹುದು. ಯಾರನ್ನಾದರೂ ಹೇಳುವ ಮೊದಲೇ ಆಲೋಚನೆ ಮಾಡಿ ಹೇಳಬೇಕು. ಇಲ್ಲದಿದ್ದರೆ ಹೇಳಿದವರು ತೊಂದರೆ ಅನುಭವಿಸಲು ಸಿದ್ಧರಿರಬೇಕಾದೀತು. ಮಾತನಾಡಲು ಬರುತ್ತದೆ ಎಂದು ಏನಾದರೂ ಮಾತನಾಡುವುದು ಸರಿಯಲ್ಲ. ಹದವರಿತು, ತೂಕದಮಾತುಗಳನ್ನು ಆಡೋಣ. ಸಮಯ ಸಂದರ್ಭ ಜನ ನೋಡಿ ಮಾತನಾಡೋಣ. ಬೇರೆಯವರಿಗೆ ತೊಂದರೆ ಕೊಡುವುದು, ಅವರನ್ನು ಅವಹೇಳನ ಮಾಡುವುದು, ಅವರ ಕೆಲಸಗಳಲ್ಲಿ ಮೂಗು ತೂರಿಸುವುದು ಸಲ್ಲದು. ಸಜ್ಜನರ ನಡುವೆ ಇದ್ದು ನಾವು ಸಹ ಒಂದಷ್ಟು ಕಲಿಯೋಣ. ತಲೆಗೆ ಎರೆದ ಎಣ್ಣೆ ಕಾಲಿಗೆ ಇಳಿಯಬಹುದೆಂಬ ಕಲ್ಪನೆ, ಆಲೋಚನೆ, ಒಳಪ್ರಜ್ಞೆ ನಮ್ಮಲ್ಲಿರಲಿ.

-ರತ್ನಾ ಕೆ.ಭಟ್ ತಲಂಜೇರಿ 

(ಶ್ಲೋಕ: ಸರಳ ಸುಭಾಷಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ