ಒಂದು ಒಳ್ಳೆಯ ನುಡಿ - 96

ಒಂದು ಒಳ್ಳೆಯ ನುಡಿ - 96

ಸದಾ ಚಟುವಟಿಕೆಯಲ್ಲಿರುವವರಿಗೆ, ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯ ಬೇಕಾದಂತೆ ಸಿಗುತ್ತದೆ. ಸೋಮಾರಿಗಳಿಗೆ, ಕುಂಟುನೆಪ ಹೇಳುವವರಿಗೆ, ಆಲಸಿಗಳಿಗೆ ಸಮಯವೇ ಸಿಗುವುದಿಲ್ಲ. ಏನು ಹೇಳಿದರೂ ಪುರುಸೊತ್ತಿಲ್ಲ ಎಂದು ಹೇಳುವುದು ಅವರ ಸ್ವಭಾವ. ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶಹಬ್ಬಾಸ್ ಅನಿಸಿಕೊಳ್ಳುವವರು ನಮ್ಮ ನಿಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಆದರೆ ಅವರನ್ನು ಹುಡುಕುವ ಕೆಲಸ ಆಗುತ್ತಿಲ್ಲ. ಅವರು ನಾಮುಂದು ತಾ ಮುಂದು ಎಂದು ಬರಲಾರರು. ನಾವೇ ಗುರುತಿಸಿ ಹೊರಬರುವಂತೆ ಮಾಡಬೇಕು. ಪ್ರಚಾರ ಅವರಿಗೆ ಆಗದು. ಅವರು ಪ್ರಚಾರ ಪ್ರಿಯರಲ್ಲ. ನಾವೆಷ್ಟೋ ಜನರನ್ನು ನೋಡಿದ್ದೇವೆ, ಅವರ ಬಗ್ಗೆ ಕೇಳಿದ್ದೇವೆ ಒಂದು ಸಣ್ಣ ಕಾರ್ಯ ಮಾಡಿದರೂ ಅವರು ದೊಡ್ಡ ಗುಡ್ಡವನ್ನು ಅಗೆದು ಸಮತಟ್ಟು ಮಾಡಿದಷ್ಟು ಭಾವಚಿತ್ರಗಳು, ವರದಿಗಳು ಓದಿ ಸಾಕಾಗಿಹೋಗುತ್ತದೆ. ಆದರೆ ಓದುವವರು ಅಳತೆ ಮಾಡುವುರೆಂಬ ಸಾಮಾನ್ಯ ಜ್ಞಾನ ಸಹ ಇರುವುದಿಲ್ಲ.

ಆಲಸಿಗಳನ್ನು, ಕೆಲಸಗಳನ್ನುರನ್ನು, ಮೈಗಳ್ಳರನ್ನು ಹಿಡಿದು ಚೆನ್ನಾಗಿ ದುಡಿಸುವ ಕಾರ್ಯವಾಗಬೇಕು. ಅಂಥವರ ಮೇಲೆ ಸ್ವಲ್ಪವೂ ಅನುಕಂಪ, ಕನಿಕರ ಮಾಡಬಾರದು. ಸ್ವಾಮಿ ವಿವೇಕಾನಂದರು ಹೇಳಿದ್ದು ಅದನ್ನೇ "ಎಲ್ಲರೂ ದುಡಿಯಿರಿ, ಗಳಿಸಿ. ಮಾನವನ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಚಟುವಟಿಕೆಗಳಿರಬೇಕು. ಎಲ್ಲರನ್ನೂ ತೊಡಗಿಸಿಕೊಳ್ಳಬೇಕು. ಪ್ರಗತಿಶೀಲ ಹೊಸ ಸಮಾಜದ ನಿರ್ಮಾಣ ನಮ್ಮ ಕೈಯಲ್ಲೇ ಇದೆ. ಪರಸ್ಪರ ಒಬ್ಬರಿಗೊಬ್ಬರು ಸ್ಫೂರ್ತಿಯಾಗಬೇಕು. ಜ್ಞಾನಶಕ್ತಿಯನ್ನು ಧಾರೆಯೆರೆದು ಸೂರ್ಯನಂತೆ ತಮ್ಮ ಮಾತು, ವ್ಯವಹಾರ, ಗುಣಗಳಿಂದ ಬಾಳಿಗೆ ಬೆಳಕಾದವರು.

ನಾವು ನಮ್ಮ ಬದುಕನ್ನು ವಿಕಸನಗೊಳಿಸುವಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಉತ್ತಮ ಆಲೋಚನೆಗಳು, ಗೊತ್ತಿರುವವರು ಹತ್ತಿರ ಮಾತುಕತೆಗಳನ್ನು ಮಾಡುವುದರ ಮೂಲಕ ಪ್ರಗತಿಯನ್ನು ಸಾಧಿಸಬಹುದು. ಕೆಲಸ ಮಾಡಿ ಹೆಸರು ಪಡೆಯೋಣ, ಬಾಳು ಹಸನಾಗಿಸೋಣ.

-ರತ್ನಾ ಕೆ.ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ