ಒಂದು ಒಳ್ಳೆಯ ನುಡಿ - 98

ಒಂದು ಒಳ್ಳೆಯ ನುಡಿ - 98

ನಮ್ಮ ಬದುಕಿನಲ್ಲಿ ಪರಿಶುದ್ಧತೆ ಮತ್ತು ಚೊಕ್ಕಟತನಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಯಾರು ಶುಚಿಯಾಗಿರುವರೋ ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡಿಕೊಳ್ಳುವರು. ಜಾಣನಾದವ ಶುದ್ಧನಾಗಿಯೇ ಇರಬಹುದೆಂಬ ಭ್ರಮೆ ಬೇಡ. ಅಶುದ್ಧತೆ, ಹೊಲಸುತನ ರೋಗಕ್ಕೆ ಕಾರಣವಾಗಬಹುದು. ಭಗವಂತ ಪರಿಶುದ್ಧನು ಮತ್ತು ಪವಿತ್ರನು. ಅಲ್ಲಿ ಅಶುದ್ಧತೆಯ ಮಾತೇ ಇಲ್ಲ. ಅದಕ್ಕೆ ಅಲ್ಲವೇ ಪುಟ್ಟ ಮಕ್ಕಳನ್ನು ದೇವರಿಗೆ ಹೋಲಿಸುವುದು. ನಮ್ಮ ದೇಹವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ವ.

ಹಿಡಿದ ಕೆಲಸದಲ್ಲಿ ಶ್ರದ್ಧೆ, ಏಕಾಗ್ರತೆ, ಅಂತರಂಗ ಬಹಿರಂಗ ಶುದ್ಧಿ, ನೆಮ್ಮದಿ ಇರಲೇಬೇಕು. ಸ್ವಚ್ಛತೆ ಎಂದರೆ ಬಾಹ್ಯವಾಗಿ ಕಾಣುವ ಶರೀರದ ಶುದ್ಧತೆಯಲ್ಲ. ಅಂತರಂಗವೂ ಇರಬೇಕು. ಅದಕ್ಕಾಗಿ ಹಿರಿಯರು ಹಾಕಿಕೊಟ್ಟ ಪಂಕ್ತಿ, ಕಾಲಕ್ಕೆ ಸರಿಯಾಗಿ ವ್ಯವಸ್ಥೆಗೆ ಹೊಂದಾಣಿಕೆ, ನೈತಿಕ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಿಕೆ ಇವೆಲ್ಲವೂ ಬೇಕು. ಮಾತು ಮನಸ್ಸು ಎರಡೂ ಸ್ವಚ್ಛವಿದ್ದಾಗ ಅಲ್ಲಿ ಬೇರೆಯವರು ಬಾಯಿ ಹಾಕಿ ಮಾತನಾಡುವ ಅವಕಾಶ ಬರುವುದಿಲ್ಲ. ಮನಸಿನ ಅಶುಚಿತ್ವಕ್ಕೆ ಚಾಡಿ ಮಾತುಗಳು, ಕೋಪ, ಅಸಹನೆ, ಸಿಟ್ಟು, ಭಯ, ಆತಂಕ, ಚಿಂತೆ ಎಲ್ಲವೂ ಕಾರಣವಾಗಬಲ್ಲುದು. ಯಾರೋ ಓರ್ವ ವ್ಯಕ್ತಿ ಇಲ್ಲಸಲ್ಲದ ಆರೋಪ, ಕೆಟ್ಟ ಅಭಿಪ್ರಾಯಗಳನ್ನು ಹೇಳಬಹುದು. ತಕ್ಷಣ ಕಿವಿಗೆ ಬಿದ್ದಾಗ ಹೌದಾಗಿರಬಹುದೇನೋ ಎಂಬ ಆಲೋಚನೆ ಬರಲೂ ಸಾಕು. ಆದರೆ ಸ್ವಚ್ಛ ಮನಸ್ಸಿನವ ಈ ಬಗ್ಗೆ ಯೋಚಿಸಿಯಾನು. ತುಲನಾತ್ಮಕತೆಯಿದ್ದಲ್ಲಿ ಇತ್ತಂಡ ವಾದ, ಯೋಚನೆ, ಗ್ರಹಿಕೆಗೆ ಆಸ್ಪದವಿಲ್ಲ. ಆತನಲ್ಲಿ ದೃಢತೆಯಿರುತ್ತದೆ. ಯಾರ ಮಾತೂ ಕೇಳಲಾರ. ನಾವು ನಾವಾಗಿರೋಣ, ನಿರ್ಧಾರಗಳು ನಮ್ಮದಾಗಿರಲಿ. ಸಮಾಜದಲ್ಲಿ ಎಲ್ಲರೂ ಬೇಕು. ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಮುಂದೆ ಹೋಗುವ ಪರಿಶುದ್ಧ ಹೃದಯ ನಮ್ಮದಾಗಲಿ.

-ರತ್ನಾ ಕೆ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ