ಒಂದು ಒಳ್ಳೆಯ ನುಡಿ - 99

ಒಂದು ಒಳ್ಳೆಯ ನುಡಿ - 99

'ತನ್ನ ಅಭಿಪ್ರಾಯವನ್ನೇ ಎಲ್ಲರೂ ಬೆಂಬಲಿಸಬೇಕು. ತಾನು ಹೇಳಿದ್ದಕ್ಕೆ ಸೈ ಸೈ ಅನ್ನಬೇಕು. ತಾನು ಹಾಕಿದ ಗೆರೆ ಲಕ್ಷ್ಮಣರೇಖೆ, ಅದನ್ನು ದಾಟಬಾರದು' ಎಂಬುದಾಗಿ ಯಾರ ಮನಸ್ಸಿನಲ್ಲಿದೆಯೋ ಆತ ಒಂದು ದಿನ ನೆಲಕಚ್ಚುವುದು ನೂರಕ್ಕೆ ನೂರು ಸತ್ಯ. ಎಷ್ಟು ದಿನ ಜನರನ್ನು ನಂಬಿಸಬಹುದು? ಒಂದು ಸೂಕ್ಷ್ಮತೆಯಲ್ಲಿ ಸಣ್ಣ ಹೊಗೆ ಹೊರ ಬಂದಾಗ ಹತ್ತಿ ಉರಿಯಲೇ ಬೇಕು.

ಭಗವಾನ್ ಶ್ರೀಕೃಷ್ಣ ನಾಡಿದ ನುಡಿ ಇಂದಿಗೂ ಪ್ರಸ್ತುತ. ಪ್ರಯೋಜನವಿದೆ ಎಂದು ನಂಬಿಸಿ, ಅರ್ಥವಿಲ್ಲದ ಕೆಲಸಕಾರ್ಯಗಳನ್ನು ತನ್ನಿಚ್ಛೆಯಂತೆ ಮಾಡಿಸಿ ವ್ಯರ್ಥವಾಗಿ ಹೆಮ್ಮೆ ಕೊಚ್ಚಿಕೊಂಡವನ  ಹುಳುಕು ಹೊರಬರಲು ಹೆಚ್ಚು ದಿನ ಬೇಡ. ಒಂದಲ್ಲ ಒಂದು ದಿನ ಆತನ ಬಂಡವಾಳ ಹೊರಬಂದೇ ಬರುವುದು. ಹಾಗಾಗಿ ಕೈಗೊಂಡ ಕೆಲಸ ಕಾರ್ಯಗಳು ವಿವೇಕಯುತವಾಗಿರಲಿ. ನಾಲ್ಕು ಜನ ಒಪ್ಪುವಂತಿರಲಿ, ಅನುಕರಣೆ ಮಾಡುವಂತಿರಲಿ. ಯಾರು ಏನೇ ಹೇಳಿದರೂ ನಮ್ಮ ಒಳಮನಸ್ಸಿನ ವಾಣಿಯಂತೆ ನಾವಿರಬೇಕಾದ್ದು ಅತಿ ಅಗತ್ಯ. ಯೋಚಿಸಿ ಹೆಜ್ಜೆಯನ್ನು ನೆಲದ ಮೇಲೆ ಗಟ್ಟಿಯಾಗಿ ಊರೋಣ.

-ರತ್ನಾ ಕೆ.ಭಟ್ ತಲಂಜೇರಿ (ಅನುಭವ ಬುತ್ತಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ