ಒಂದು ಕಪ್ಪು ಮುತ್ತಿನ ಕಥೆ !

ಒಂದು ಕಪ್ಪು ಮುತ್ತಿನ ಕಥೆ !

ಒಂದು ಕಪ್ಪು ಮುತ್ತಿನ ಕಥೆ. ಇದು ನಿಜ, ಆದರೆ, ಈ ಮುತ್ತಿಗೆ ಜೀವ ಇತ್ತು. ಅದನ್ನ ಹತ್ತಿರದಿಂದ ಕಂಡವರು ಮೆಚ್ಚಿದ್ದರು. ಹೊಗಳಿದ್ದರು. ಉತ್ತುಂಗದ ಸ್ಥಿತಿಗೂ ಕೊಂಡೊಯ್ದಿದ್ದರು. ಒಂದೇ ಒಂದು ದಶಕದಲ್ಲಿ ಆ ಬ್ಲಾಕ್​ ಪರ್ಲ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಬೆಳ್ಳಿ ತೆರೆಗೆ ಹೊಸ ಹುರುಪು ತಂದು ಕೊಟ್ಟಿತ್ತು. ಆದರೆ, ಈಗ ಆ ಮುತ್ತು ಬಾಲಿವುಡ್​ ದೃವತಾರೆ. ತೆರೆ ಮೇಲೆಷ್ಟ ಕಾಣಿಸಿಕೊಳ್ಳುತ್ತದೆ. ಅದನ್ನ ಎಲ್ಲರೂ ಕರೆಯೋದು ಸ್ಮಿತಾ ಪಾಟೀಲ್.

ಸ್ಮಿತಾ ಪಾಟೀಲ್. ಬಾಲಿವುಡ್​ ಕಂಡ ಅದ್ಭುತ ನಟಿ. ಬ್ರಿಡ್ಜ್ ಸಿನಿಮಾಗಳ ಲೀಡಿಂಗ್ ಲೇಡಿ.ಕಮರ್ಷಿಲ್ ಚಿತ್ರದಲ್ಲೂ ಛಾಪು ಮೂಡಿಸಿದ್ದು ಸ್ಮಿತಾ ಪ್ರತಿಭೆಯ ತಾಕತ್ತು. 1975 ರಲ್ಲಿ ಬೆಳ್ಳಿ ತೆರೆಗೆ ಬಂದಿದ್ದ ಸ್ಮಿತಾ ಒಂದು ದಶಕದಲ್ಲಿ 80 ಚಿತ್ರ ಮಾಡಿದ್ದರು. ಒಂದೊಂದು ಚಿತ್ರವೂ ಒಂದೊಂದು ಮುತ್ತು. ಅವುಗಳನ್ನ ಸವಿದವರೇ ಶ್ರೇಷ್ಟರು. ಶ್ಯಾಮ್ ಬೆನಗಲ್ ರಂತಹ ನಿರ್ದೇಶಕರು ಈ ನಟಿಯನ್ನ ಚರಣ್ ದಾಸ್ ಚೋರ ಚಿತ್ರದಲ್ಲಿ  ಮೊದಲು ಪರಿಚಯಿಸಿದರು. ಭೂಮಿಕಾದಲ್ಲೂ ಸ್ಮಿತಾ ಕಂಡ ಪರಿ ಅದ್ಭುತ. ಮಂಥನ್ ಮತ್ತೊಂದು ಪ್ರಾಯೋಗಿಕ ಚಿತ್ರ. ಶ್ಯಾಮ್ ಬೆನಗಲ್ ಸೃಷ್ಠಿಸಿದ್ದ ಅಷ್ಟೂ ಪಾತ್ರಕ್ಕೂ ಸ್ಮಿತಾ ಒಗ್ಗಿಕೊಳ್ಳುತ್ತಿದ್ದರು. ಜನ ಅದನ್ನೂ ಮೆಚ್ಚಿಕೊಳ್ಳುತ್ತಿದ್ದರು. ಅದು ಸ್ಮಿತಾ ಅಭಿನಯದ ಶಕ್ತಿ.

ಸ್ಮಿತಾ ಪಾಟೀಲರನ ಚಿತ್ರಗಳನ್ನ ವೀಕ್ಷಿಸಿದಾಗ, ಹೆಚ್ಚು ಹೆಚ್ಚು ಅವುಗಳ ಬಗ್ಗೆ ಅವರ ಬಳಿಯೇ ಕೇಳಬೇಕು ಅನಿಸುತ್ತದೆ. ಆದರೆ, 1986 ರಲ್ಲಿಯೇ ಸ್ಮಿತಾ ತೀರಿ ಹೋದರು. ಚಿತ್ರಗಳಲ್ಲಿ ಇನ್ನೂ ಹಾಗೆ ಉಳಿದಿದ್ದಾರೆ. ಆದರೂ, ಸ್ಮಿತಾ ಬಗ್ಗೆ ಯಾರಲ್ಲಿ ಕೇಳೋದು. ಒಂದು ಸದಾವಕಾಶ ಒದಗಿ ಬಂದಿತ್ತು. ಸ್ಮಿತಾ ಸೋದರಿ ಅನಿತಾ ಪಾಟೀಲ್ ಅಚಾನಕ್ಕಾಗಿ ಸಿಕ್ಕರು. ಅದು ಸ್ಮಿತಾ ಪಾಟೀಲ್ ಚಿತ್ರಗಳ ಚಿತ್ರೋತ್ಸವದಲ್ಲಿ ಅನ್ನೋದು ವಿಶೇಷವೇ ಆಗಿತ್ತು.  ಮಾತನಾಡಿದರು ಅನಿತಾ. ಸೋದರಿ ಸ್ಮೀತಾ ಆಗ ನಮ್ಮುಂದೆ ತೆರೆದು ಕೊಂಡದ್ದು ನಿಜಕ್ಕೂ ಅನುಕರಣೀಯ.

ಸ್ಮಿತಾ ಪಾಟೀಲ್ ಬಗ್ಗೆ ಹೇಳಿ ?
ಸ್ಮೀತಾ ಪಾಟೀಲ್ ಎಲ್ಲರಿಗೂ ಇಷ್ಟವಾದ ನಟಿ. ಎಂದೂ ಯಾವುದಕ್ಕೂ ತೆಲೆ ಕೆಡಸಿಕೊಂಡವಳಲ್ಲ. ದುಡ್ಡು ಕಾಸು ಅಂತ ಮೊದಲೇ ಇಲ್ಲ. ನಟನೆ ಆಕೆಯ ಫ್ಯಾಷನ್. ಮಹಿಳಾ ಸಬಲೀಕರಣ ಹೆಚ್ಚಾಗಬೇಕು ಅಂತ ಆಗಲೇ ಕೂಗು ಹಾಕಿದವಳು ಸ್ಮಿತಾ.

ಸ್ಮಿತಾ ಪಾಟೀಲ್ ಆಗಿನ ಸ್ಪರ್ಧೆಯನ್ನ ಹೇಗೆ ಮ್ಯಾನೇಜ್ ಮಾಡುತ್ತಿದ್ದರು ?
ಸ್ಮಿತಾ ಎಂದೂ ಸ್ಪರ್ಧೆ ಬಗ್ಗೆ ತಲೆ ಕೆಡಿಸಿಕೊಂಡವಳೇ ಅಲ್ಲ. ಸಿನಿಮಾ ಮಾಡುತ್ತಿದ್ದಳು. ಒಳ್ಳೆ ಚಿತ್ರಗಳನ್ನೇ ಮಾಡಬೇಕೆಂಬೋದು ಸ್ಮಿತಾ ಸರ್ವಕಾಲಿಕ ಆಸೆ ಆಗಿತ್ತು.

ಸ್ಮಿತಾ ಜೀವನ ಚರಿತ್ರೆಯನ್ನ ಸಿನಿಮಾ ಮಾಡೋ ಆಸೆ ಇದೆಯೇ ?
ನಾನು ಬಣ್ಣ ಹೆಚ್ಚಿದವಳು ಅಲ್ಲ. ಸಿನಿಮಾ ರಂಗಕ್ಕೂ ನನಗು ನಂಟಿಲ್ಲ. ಒಂದು ವೇಳೇ ಬೇರೆ ಯಾರಾದರೂ ಮಾಡಬಹುದು. ಮಾಡಿದರೂ ಸ್ಮಿತಾ ಭಾವ ತೀವ್ರತೆಯನ್ನ ಕಟ್ಟಿಕೊಡಲು ಸಾಧ್ಯವೇ ಇಲ್ಲ. ಅಂತಹ ನಟಿಯರು ಈಗ ಯಾರು ಇದ್ದಾರೆ ಹೇಳಿ.

ಸ್ಮಿತಾ ಬಗ್ಗೆ ಮಾತು ಹೀಗೆ ಸಾಗಿದವು. ಅನಿತಾ ಉತ್ತರವಾಗಿ ಪ್ರತಿಕ್ರಿಯೆಸುತ್ತಲೇ ಹೋದರು. ಅಷ್ಟೊತ್ತಿಗೆ ಆಡಿಟೋರಿಯಂ ನಲ್ಲಿ ಸ್ಮಿತಾ ಪಾಟೀಲ್ ಮತ್ತು ನಸೀರುದ್ಧೀನ್ ಶಾ ಅಭಿನಯ ಚಕ್ರ ಚಿತ್ರದ ಪ್ರದರ್ಶನ ನಡೆಯಿತಿತ್ತು.

ಸ್ಮಿತಾ ಪಾಟೀಲ್ ಚಿತ್ರಗಳು ಅಪರೂಪವಾಗಿಯೇ ಇವೆ. ವಾಸಂತಿ ಹರಿಪ್ರಕಾಶ್ ಒಂದ್ ಒಳ್ಳೆ ಕೆಲಸ ಮಾಡಿದ್ದರು. ತಮ್ಮ ಪಿಕಲ್ ಜಾರ್ ಹೆಸರಿನ ಸಂಘಟನೆ ಮೂಲಕ ‘ಭೂಮಿಕಾ’ ಹೆಸರಲ್ಲಿ ಸ್ಮಿತಾ ಪಾಟೀಲ್ ಅಭಿನಯದ 10 ಚಿತ್ರಗಳನ್ನ ಪ್ರದರ್ಶನ ಮಾಡಿದರು. ಏಪ್ರೀಲ್ 8,9,10 ರಂದು ಮೂರು ದಿನ ಚಿತ್ರಗಳು ಪ್ರದರ್ಶನ ಕಂಡವು. ಶ್ಯಾಮ್ ಬೆನಗಲ್,ಟಿ.ಎಸ್.ನಾಗಾಭರಣ, ಮಹೇಶ್ ಭಟ್,ತಿಥಿ ಚಿತ್ರದ ರಾಮ್ ರೆಡ್ಡಿ, ಕಿರಗೂರಿನ ಗಯ್ಯಾಳಿಗಳು ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು, ನಟ ಪ್ರಕಾಶ್ ಬೆಳವಾಡಿ, ಇವರೆಲ್ಲರೂ ಬಂದು ಪ್ಯಾನಲ್ ಡಿಸ್ಕಷನ್ ಮಾಡಿದರು. ಇಲ್ಲಿ ಸ್ಮಿತಾ ಪಾಟೀಲ್ ಅಭಿನಯದ ಚಿತ್ರ ವೀಕ್ಷಿಣೆ ಮತ್ತು ಸಿನಿಮಾ ಮಂಥನವೂ ಬಹುವಾಗಿ ನಡೆಯಿತು. ಒಂದ್ ಒಳ್ಳೆ ಅವಕಾಶ. ಒಂದ್ ಒಳ್ಳೆ ಅನುಭವ ಈ ಚಿತ್ರೋತ್ಸವದಲ್ಲಿ ಅನೇಕರಿಗೆ ಸಿಕ್ಕಿದೆ. ಒಂದು ಕಪ್ಪು ಮುತ್ತಿನ ಕಥೆ ಇಲ್ಲಿಗೆ ಮುಗೀತು.ನಮಸ್ಕಾರ.

-ರೇವನ್ ಪಿ.ಜೇವೂರ್