ಒಂದು ಕಪ್ ಚಹಾ ಸಿಗಬಹುದೇ?

ಒಂದು ಕಪ್ ಚಹಾ ಸಿಗಬಹುದೇ?

ಪುಸ್ತಕದ ಲೇಖಕ/ಕವಿಯ ಹೆಸರು
ಆರತಿ ಪಟ್ರಮೆ
ಪ್ರಕಾಶಕರು
ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು
ಪುಸ್ತಕದ ಬೆಲೆ
ರೂ.150.00, ಮುದ್ರಣ: 2022

ಆರತಿಯವರ ಬರೆಹದಲ್ಲಿ ಸ್ತ್ರೀ ಪರವಾದ ಧೋರಣೆಯಿದೆ. ಅದು ಸಹಜ ಮತ್ತು ನ್ಯಾಯ ಸಮ್ಮತ ಕೂಡ. ನಾವು ಬಹಳ ಆಧುನಿಕರಾಗಿದ್ದೇವೆ ಎಂಬ ಹೆಮ್ಮೆಯ ಒಳಗೆ ಅವಿತ ನೂರಾರು ಕರಾಳಮುಖಗಳನ್ನು, ವಿಷ ಹೃದಯಗಳನ್ನು ಕಾಣಲಾರೆವು. ಈ ಒಣ ಹೆಮ್ಮೆಯ ಬಣವೆಗೆ ಸಣ್ಣ ಕಿಡಿಸೋಕಿಸುತ್ತಾರೆ, ಲೇಖಕಿ ಎಂಬುದು ಲೇಖಕ ರಾಧಾಕೃಷ್ಣ ಕಲ್ಚಾರ್ ಅವರ ಮಾತು. ಲೇಖಕಿ ಆರತಿ ಪಟ್ರಮೆ ಅವರ ‘ಒಂದು ಕಪ್ ಚಹಾ ಸಿಗಬಹುದೇ ?’ ಎಂಬ ಲಲಿತ ಪ್ರಬಂಧ ಸಂಕಲದಲ್ಲಿ ಅವರು ಬರೆದ ಮುನ್ನುಡಿಯಾದ “ನಲ್ನುಡಿ" ಇಲ್ಲಿದೆ... 

“ಲೇಖಕಿಯಾಗಿ, ಯಕ್ಷಗಾನ ಕಲಾವಿದೆಯಾಗಿ, ಅಂಕಣಕಾರ್ತಿಯಾಗಿ ಈಗಾಗಲೇ ಪ್ರಸಿದ್ಧರಾಗಿರುವ ಆರತಿ ಪಟ್ರಮೆಯವರ ಲೇಖನಿ ಸಶಕ್ತವಾದುದು. ಅವರ ಹಿಂದಿನ ಕೃತಿಗಳು ಓದುಗರ ಗಮನ ಸೆಳೆದು ಸಾರ್ಥಕವಾಗಿವೆ. ಆ ಪುಸ್ತಕಗಳ ಸಾಲಿಗೆ ಒಂದು ಹೊಸ ಸೇರ್ಪಡೆ, 'ಒಂದು ಕಪ್ ಚಹಾ ಸಿಗಬಹುದೇ?' ಈ ಬರೆಹಗಳ ಹಿಂದೆ ಲೇಖಕಿಯ ಜೀವನಾನುಭವದ ದ್ರವ್ಯವಿದೆ. ತಾನು ನಿತ್ಯದ ಬದುಕಿನಲ್ಲಿ ಕಂಡ ನೋಟಗಳು, ಎದುರಿಸಿದ ಸಂದಿಗ್ಧಗಳು, ಒಡೆಯುತ್ತಿರುವ ಸಂಬಂಧಗಳು, ವಿದ್ಯಾರ್ಥಿಗಳ ಸಂಕಷ್ಟಗಳು, ಶಿಕ್ಷಕರ ಸಮಸ್ಯೆಗಳು, ಮನೆಯೊಳಗಿನ ಸಂಘರ್ಷಗಳು, ದಾಂಪತ್ಯದ ಸೂಕ್ಷ್ಮಗಳು... ಹೀಗೆ ಹತ್ತು ಮುಖಗಳಿಂದ ಜೀವನಾವಲೋಕನ ಮಾಡುವ ಪ್ರಯತ್ನವಿದು.

ಈ ಬರೆಹಗಳನ್ನು ಯಾವ ವರ್ಗಕ್ಕೆ ಸೇರಿಸೋಣ? ಕನ್ನಡ ಸಾಹಿತ್ಯದ ಲಲಿತಪ್ರಬಂಧ ಪ್ರಕಾರದ ಕೆಲವು ಲಕ್ಷಣಗಳು ಇಲ್ಲೂ ಇವೆ. ಆದರೆ ಪೂರ್ಣವಾಗಿ ಲಲಿತಪ್ರಬಂಧಗಳು ಎನ್ನಲಾಗದು. ಲಘುಧಾಟಿಯ ಹಾಸ್ಯಲೇಖನಗಳ ಸಾಲಿನಲ್ಲಿ ನೋಡೋಣವೆ? ಇಲ್ಲ, ಹಾಸ್ಯವನ್ನು ಮೀರಿದ ಗಾಂಭೀರ್ಯದ ಆಳವಿದೆ. ಅಂಕಣ ಲೇಖನಗಳ ಯಾಂತ್ರಿಕತೆಯನ್ನು ದಾಟಿದ ಲವಲವಿಕೆಯಿದೆ. ಚಿಂತನೆಯಲ್ಲಿ ನಾವೀನ್ಯವಿದೆ.

ಪ್ರಕಾರ ಯಾವುದೇ ಇರಲಿ, ಒಂದು ಬರೆಹಕ್ಕೆ ಬೇಕಾದ ಪ್ರಾಥಮಿಕ ಗುಣ ಯಾವುದು? ಅದು ಓದಿಸಿಕೊಂಡು ಹೋಗಬೇಕು. ಅದು ಮಾತಿಗೆ ಕೇಳಿಸಿಕೊಳ್ಳುವ ಗುಣವಿದ್ದಂತೆ. ಈ ಮೊದಲ ಪರೀಕ್ಷೆಯಲ್ಲಿ ಗೆದ್ದರೆ ಅರ್ಧ ಯುದ್ಧ ಗೆದ್ದ ಹಾಗೆ. ಆರತಿಯವರ ಬರೆಹದಲ್ಲಿ ಓದಿಸಿಕೊಳ್ಳುವ ಗುಣ ಅವರ ಶಕ್ತಿಯಾಗಿ ಒದಗಿದೆ. ಹೀಗಾಗಿ ಅವರ ಪುಸ್ತಕವನ್ನು ಓದುವುದಕ್ಕೆ ಎತ್ತಿಕೊಂಡವರು ಪೂರ್ತಿ ಮುಗಿಸಿಯೇ ಕೆಳಗಿಡುತ್ತಾರೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದು ಲೇಖಕಿ ಆರಿಸಿಕೊಳ್ಳುವ ವಿಷಯಗಳು. ಇಲ್ಲಿರುವ ವಿಷಯಗಳೆಲ್ಲ ನಮ್ಮ ದಿನಚರಿಗೆ ಸಂಬಂಧಿಸಿದ್ದು. ನಾವು ಪ್ರತಿಕ್ಷಣ ಎದುರಿಸುವ ಸಮಸ್ಯೆಗಳು. ಕಣ್ಣುಬಿಟ್ಟಲ್ಲೆಲ್ಲ ಕಾಣಿಸುವ ನಿತ್ಯಚಿತ್ರಗಳು. ಹಾಗಾಗಿ ಅನೇಕ ಕಡೆಗಳಲ್ಲಿ ಇದು ನಮ್ಮ ಕಥೆ ಎಂಬ ಆಪ್ತಭಾವವೂ ಉಂಟಾಗುತ್ತದೆ.

ಆರತಿಯವರು ಎತ್ತಕೊಳ್ಳುವ ವಿಷಯಗಳು ವಿಸ್ತಾರವಾದ ವಲಯದ್ದಲ್ಲ. ಅವರ ಜೀವಾನುಭವದ ವರ್ತುಲದ ಒಳಗಿನದ್ದು. ತನ್ನ ಆಂಗ್ಲಭಾಷಾ ಸಾಹಿತ್ಯದ ಓದಿನ ಅನುಭವವನ್ನು ಕೂಡ ಅವರು ವಿಸ್ತರಿಸಿ ಬರೆದಿಲ್ಲ. ಅಂದರೆ ತನ್ನ ವ್ಯಕ್ತಿಗತ ಅನುಭವಕ್ಕಷ್ಟೇ ಪ್ರಾಮಾಣಿಕರಾಗಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ತೀರ ಸಾಧಾರಣ ಅನುಭವಗಳು ಇವು ಅನಿಸಿಬಿಡಬಹುದು. ಆದರೆ ಅಷ್ಟೇ ಅಲ್ಲ. ಇದೆಲ್ಲ ಒಂದು ರೀತಿ ಬೇಂದ್ರೆಯವರಂತಹ ಕವಿಗಳ ಕಾವ್ಯದ ಹಾಗೆ. ತೀರ ಸಣ್ಣದಾದ, ಖಾಸಗಿಯಾದ ಅನುಭವದ ಬಿಂದುವಿನಿಂದ ಹೊರಟ ಅವರ ಕಾವ್ಯವು ಕೊನೆಯಲ್ಲಿ ಒಂದು ಜಾಗತಿಕ ಅಥವಾ ಸಾರ್ವತ್ರಿಕವಾದ ಮಿಂಚನ್ನು ಹೊಳೆಯಿಸುವಂತೆ. ಅದು ಹೇಗೆಂದರೆ, ನಮ್ಮ ಕಣ್ಣಿನಲ್ಲಿ ನಾವು ಪ್ರಪಂಚವನ್ನು ನೋಡುತ್ತೇವೆ. ಕಣ್ಣು ಸಣ್ಣದು. ಆದರೆ ಅದು ಕಾಣಿಸುವ ಪ್ರಪಂಚ ಸಣ್ಣದಲ್ಲ. ಅನುಭವ ಸಣ್ಣದು. ಆದರೆ ಅದರಿಂದ ಗ್ರಹಿಸತಕ್ಕ ಸತ್ಯ ಸಣ್ಣದಲ್ಲ. ಇಂದಿನ ಜಗತ್ತನ್ನು ತಲ್ಲಣಗೊಳಿಸುವ ನೂರಾರು ಸಮಸ್ಯೆಗಳ, ಸಂಕಟಗಳ ಮೂಲ ಬೇರು ಇರುವುದು ಇಲ್ಲಿ. ಆದುದರಿಂದ ಇದನ್ನು ಅರ್ಥಮಾಡಿಕೊಂಡವನಿಗೆ ಸಮಸ್ಯೆಯನ್ನು ಬಿಡಿಸುವ ಸೂತ್ರವು ಸಿಕ್ಕಿದಂತೆ. ಈ ಸೂತ್ರಗಳನ್ನು ಒಂದೆಡೆ ಸೇರಿಸಿ 'ಹೀಗೂ ಉಂಟಲ್ಲ' ಎನ್ನುವ ಅಚ್ಚರಿಯನ್ನು ಹುಟ್ಟಿಸುವ ಕೆಲಸವನ್ನು ಇಲ್ಲಿನ ಲೇಖನಗಳು ಮಾಡುತ್ತವೆ.

ಆರತಿಯವರ ಬರೆಹದಲ್ಲಿ ಸ್ತ್ರೀ ಪರವಾದ ಧೋರಣೆಯಿದೆ. ಅದು ಸಹಜ ಮತ್ತು ನ್ಯಾಯ ಸಮ್ಮತ ಕೂಡ. ನಾವು ಬಹಳ ಆಧುನಿಕರಾಗಿದ್ದೇವೆ ಎಂಬ ಹೆಮ್ಮೆಯ ಒಳಗೆ ಅವಿತ ನೂರಾರು ಕರಾಳಮುಖಗಳನ್ನು, ವಿಷ ಹೃದಯಗಳನ್ನು ಕಾಣಲಾರೆವು. ಈ ಒಣ ಹೆಮ್ಮೆಯ ಬಣವೆಗೆ ಸಣ್ಣ ಕಿಡಿಸೋಕಿಸುತ್ತಾರೆ, ಲೇಖಕಿ. ಹಾಗೆಂದು ಯಾರ ಮೇಲೂ ಆರೋಪಗಳಿಲ್ಲ. ಆಕ್ರೋಶದ ಆರ್ಭಟವಿಲ್ಲ. ಮಂದಗಾಮಿನಿಯಾದ ಈ ಪ್ರವಾಹ ಕೊಳೆಯನ್ನು ತೊಳೆಯುವುದಕ್ಕೆ ಯಥಾ ಸಾಧ್ಯ ಶ್ರಮಿಸುತ್ತದೆ. ಅದು ಯಾಕೆಂದರೆ- ಈ ಲೇಖಕಿಯ ಒಳಗೆ ಒಬ್ಬಾಕೆ ಮಮತಾಮಯಿ ತಾಯಿಯಿದ್ದಾಳೆ. ಒಬ್ಬಾಕೆ ಹೃದಯವಂತ ಗೆಳತಿಯಿದ್ದಾಳೆ. ಸಾಮಾಜಿಕ ಕಾರ್ಯಕರ್ತೆ ಇದ್ದಾಳೆ. ಆಪ್ತ ಸಲಹಾಕಾರ್ತಿ ಇದ್ದಾಳೆ. ಒಬ್ಬಳು ಕಾಳಜಿ ಉಳ್ಳ ಶಿಕ್ಷಕಿಯಿದ್ದಾಳೆ.”

-ಸಂತೋಷ್ ಕುಮಾರ್, ಸುರತ್ಕಲ್