ಒಂದು ಕ್ಷಣ

ಒಂದು ಕ್ಷಣ

ಕವನ

ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು

ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ 

ನಿನ್ನ ಸೌಂದರ್ಯ ಕಣ್ಣಿನಾಳದ ನೋಟ

ಬಹು ಮಾಟ ತಡೆಯಲಾರದೆ ಓಡಿ ಬಂದೆ 

ಅದೆಷ್ಟು ಸಮಯದಿಂದ ನಿನ್ನ ನೋಡಿದೆ

ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ

ನಾನು ನೋಡುತ್ತಲೇ ಇದ್ದೆ ನಿನ್ನ ಮುಗಳು ನಗುವ

ನಿನ್ನಮೈ ಮಾಟದ ಎದೆ ಹರವ

ನಿನ್ನ ಮುಂಗುರುಳ  ಸವಿ ಹೂಟವ

ತಡೆಯಲಿಲ್ಲ ಕೇಳಿದೆ ನೀನಾರು ?

ನೀ ಹೇಳಿದ ಉತ್ತರ ನಾ ಕನ್ನಡ ಕುವರ

 

ಒಲವೇ ಹೀಗೆ ಒಮ್ಮೆ ಕೈ ಹಿಡಿದರೆ

ಸಧ್ಯಕ್ಕೆ ಬಿಡುವ ಪ್ರಶ್ನೆಯೇ ಇಲ್ಲ

ಹಾಗೆಯೇ ಆಯಿತು ಕೈ ಕೈ ಹಿಡಕೊಂಡು

ಸುತ್ತಿದ್ದೇ ಸುತ್ತಿದ್ದು ಹಳ್ಳಿ ಪಟ್ಟಣಗಳಲ್ಲಿ

ತಿರುಗಿದ್ದೇ ತಿರುಗಿದ್ದು ಯಾರ ಹಂಗು ಇಲ್ಲದೆ 

ಅಷ್ಟರ ತನಕ ಬೆಂಗಳೂರಿನ ಒಂದೂ

ಉಧ್ಯಾನವನವನ್ನೂ ಸರಿಯಾಗಿ 

ನೋಡದ ನಾನು ಪ್ರತಿಯೊಂದನ್ನೂ 

ನೋಡುವಂತಾಯಿತು ಮಾತು ಕತೆಯಾಯಿತು

ಅವನ ಮೋಟಾರು ಬೈಕ್ ಅದರ ಹಿಂದೆ

ಕುಳಿತು ಬಾಚಿ ತಬ್ಬಿ ಹಿಡಿದು ಸವಾರಿ

ಮಾಡುವುದೆಂದರೆ ಯಾವುದೋ ಲೋಕದಲ್ಲಿ

ಪ್ರಯಾಣ  ಮಾಡುವಂತಿತ್ತು

ಅವನು ಪ್ರಸನ್ನನಾದರೆ ನಾ ಸುಪ್ರಸನ್ನ ! 

 

ಕಾಲ ಸಾಗುತ್ತಲೇ ಇತ್ತು ಪ್ರೀತಿಯಲ್ಲೂ

ಸಾಲವಿದೆಯೆಂದು ತಿಳಿದದ್ದೇ ಆಗ

ಸಾಲಕ್ಕೆ ಬಡ್ಡಿ ಚಕ್ರಬಡ್ಡಿ ಇರುವಂತೆ

ಪ್ರೀತಿಗೂ ಇದೆಯೆಂದು ಗೊತ್ತಾದದ್ದೇ ತಡ

ಇನ್ನು ತಡಮಾಡಬಾರದೆಂದು

ಈ ಹುಡುಗರೇ ಇಷ್ಟು ಆಳವಾಗಿ ಪ್ರೀತಿಸುತ್ತಾರೆ

ಕ್ಷಣ ಎಲ್ಲವನ್ನೂ ಮರೆಯುತ್ತಾರೆ 

ಆದರೆ ನಾವು ಸಾವ ತನಕ ಎದೆಯೊಳಗಿಟ್ಟು

ಕಾಪಿಡುತ್ತೇವೆ . ಒಂದು ಲೆಕ್ಕದಲ್ಲಿ

ಪ್ರೀತಿ ಹುಟ್ಟಿದ್ದೇ ನಮಗಾಗಿ 

 

ಪ್ರೀತಿಯನ್ನು ಹೆಚ್ಚು ಬೆಳೆಸಬಾರದು

ಬೆಳೆಸಲು ಬಿಡಲೂ ಬಾರದು

ಹಾಗೇನಾದರೂ ಆದಲ್ಲಿ ಹೈ ವೋಲ್ಟೇಜ್

ಕರೆಂಟು ಬಂದು ಮನೆಯ ವಸ್ತುಗಳು

ನಾಶವಾದಂತೆ ಹುಡುಗಿಯರ ಜೀವನ 

ನಾಶವಾಗುವುದು ಖಂಡಿತ

ಬುದ್ದಿವಂತಳಾದ ನಾನು ಅವನಲ್ಲಿ ಹೇಳಿದೆ

ಕಾಲ ಕೆಡುವ ಮೊದಲೆ ಒಂದಾಗುವ 

ನಮ್ಮ ಪಯಣ ಮನೆಯ ತನಕ ಸಾಗಲು 

ನೂರಾರು ಅಡ್ಡಿ ನಾವೆಷ್ಟೇ ಕಲಿತರೂ

ಈ ಪ್ರೀತಿಗೆ ಕಲಿಯುವಿಕೆ ಎಂಬುವುದಿಲ್ಲ 

ನೋಡಿ ಕೆಂದಾವರೆಯಂತೆ ತಾನಾಗೆ ಅರಳುತ್ತದೆ 

ಬೇಡವೆಂದರೆ ಮುದುಡುತ್ತದೆ.

 

ಗಂಡು ಹೆಣ್ಣಲ್ಲಿ ಪ್ರೀತಿ ಸಹಜ ದೇವನ

ಸೃಷ್ಟಿಯದು ಆದರೆ ಈ ಮದುವೆ ಗಂಡ ಹೆಂಡತಿ

ಸಂಸಾರ ನಮ್ಮ ಸೃಷ್ಟಿಯು . ಈ ವಿಷಯದಲ್ಲಿ

ಅವನ ಪರದಾಟ ನೋಡಿ ಬೇಸರವಾಯ್ತು

ನಾನೇ ಮಾಡಿಕೊಂಡ ಎಡವಟ್ಟನ್ನು

ನಾನೇ ಬಗೆಹರಿಸಿಕೊಂಡೆ ಹೆಣ್ಣು ಪ್ರೀತಿಸುವ ಗಂಡಿಗೆ 

ಯಾವತ್ತೂ ಒಲಿದರೆ ನಾರಿಯಂತಿರಬೇಕೇ ಹೊರತು

ಮುನಿದರೆ ಮಾರಿಯಂತಿರಬಾರದು

ಈಗ ಮದುವೆಯಾಗಿ ನಮ್ಮದು ಸುಖಿ ಜೀವನ

ವಂಶ ಉದ್ಧಾರಕ್ಕೆ ಮಗು ಬೆಳಕಾಗಿದೆ 

ಬದುಕಲು ದುಡಿಮೆಯಿದೆ ಭಯಕ್ಕೆ

ಅಭಯ ನೀಡಲು ದೇವರಿದ್ದಾನೆ

ಹುಟ್ಟಿಸಿದ ದೇವರು ಹುಲ್ಲಾದರೂ

ಕೊಡದೆ ಇರುವನೇ ಎಂಬ ನಂಬಿಕೆಯೊಂದಿಗೆ

ಪ್ರೀತಿಯ ಗಂಡ ಮಗುವಿನೊಂದಿಗೆ

ಬದುಕುತ್ತಿರುವೆ ಸುಂದರ ಗೃಹಿಣಿಯಾಗಿ 

 

-ಹಾ ಮ  ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್