ಒಂದು ಗಝಲ್...
ಕವನ
ಶರಧಿ ದಂಡೆಯಲಿ ಮರಳು ಮನೆ ಕಟ್ಟಿ
ಕಾಯುತಿರುವೆ ಯಾರಿಗಾಗಿ
ಮುದದಿ ರಂಗುರಂಗಾದ ಕನಸುಗಳ ಕಾಣುತಿರುವೆ ಯಾರಿಗಾಗಿ ||
ಕಡಲ ಕಿನಾರೆಯ ತೀರದಿ ಬೀಸುವ ತಂಬೆಲರು ಬಿಸಿಯಾಯಿತೇಕೆ
ಒಡಲ ಆಳದ ನೂರಾರು ಭಾವಗಳಿಗೆ
ಬೇಯುತಿರುವೆ ಯಾರಿಗಾಗಿ ||
ಸಾಗರದ ಮಡಿಲಲ್ಲಿ ಆಡಿದ ಸಲಿಗೆ ಸಲ್ಲಾಪಗಳು ನೆನಪಾದವೇ
ಮಾಗಿಯ ಚಳಿಯಲಿ ಎಸಗಿದ ತಪ್ಪಿಗಾಗಿ
ನೋಯುತಿರುವೆ ಯಾರಿಗಾಗಿ ||
ಪ್ರೇಮದ ಅರಮನೆಗೆ ರಾಜನಿಲ್ಲದ ಮಹಾರಾಣಿ ನೀನಾದೆಯಲ್ಲ
ಕಾಮನೆಗಳ ಬುತ್ತಿಗಂಟು ಬಿಚ್ಚಿ ಉಣ್ಣಲು ಕೂಗುತಿರುವೆ ಯಾರಿಗಾಗಿ ||
ಸಂಜೆಯ ಹೊಂಬಣ್ಣಗಳ ನಡುವೆ ಬಿಜಲಿಯ ರಶ್ಮಿಯ ಸರಣಿ ಮಿನುಗಿತಲ್ಲ
ಮಂಜು ಕವಿದ ಬಾಳಲಿ ನಲ್ಲನೆದುರು ಬರಲು
ಇನ್ನೂ ಕುಳಿತಿರುವೆ ಯಾರಿಗಾಗಿ ||
-ಈರಪ್ಪ ಬಿಜಲಿ ಕೊಪ್ಪಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್