ಒಂದು ಗಝಲ್
ಕವನ
ನಿನ್ನೊಲವಿನ ವಿರಹವೆಲ್ಲವೂ ಲಾವಾರಸವಾಗಿ ಕಪ್ಪಾಗುತ್ತಿದೆ ಹುಡುಗ
ಬೆಳಗೀಗ ಆಗುವುದಿಲ್ಲವೇನೋ ಭ್ರಮೆಯು ಕೆಂಪಾಗುತ್ತಿದೆ ಹುಡುಗ
ಕಣ್ಣುಗಳು ಹುಡುಕುತ್ತಿದೆ ನಿನ್ನಧರಗಳ ನಿಲ್ಲಲಾರದು ಬಳಿಯೇ ಯಾಕೆ
ಈಗೀಗ ಹೆಚ್ಚಾಗಿಯೇ ಕನಸು ಮನದೊಳಗೆ ನೆನಪಾಗುತ್ತಿದೆ ಹುಡುಗ
ಚಡಪಡಿಕೆಯ ನೋವಿನ ಬೇರುಗಳ ಆಳವು ನಿನಗಿಂದು ಗೊತ್ತಿದೆಯೇ
ಬೇಡವೆಂದರೂ ಮುತ್ತಿಟ್ಟ ಗಳಿಗೆಯ ವಿಷವು ಕಹಿಯಾಗುತ್ತಿದೆ ಹುಡುಗ
ನಿನ್ನೊಳಗಿನ ಸೌಂದರ್ಯ ಮಯೂರದಂತೆ ನಾನು ಹೇಳಿದ್ದು ನೆನಪಿದೆ
ಒಡಲ ವಯ್ಯಾರದ ವರ್ಣನೆಯು ನಡುವೆ ಮರೆಯಾಗುತ್ತಿದೆ ಹುಡುಗ
ನನಸು ಸುಡುತ್ತಾ ಕರಕಲಾಗಿದೆ ಇನ್ನಾದರೂ ತಿಳಿಯಲಾರೆಯಾ ಈಶಾ
ಮೋದವಿರದ ಬಾಳುವೆ ಜೊತೆ ಪ್ರೀತಿಯು ಬೇರೆಯಾಗುತ್ತಿದೆ ಹುಡುಗ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
