ಒಂದು ಚಾರಣ ಅನುಭವ...

ಒಂದು ಚಾರಣ ಅನುಭವ...

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಯ್ಯನಗಿರಿ ( Velliangiri ) ಚಾರಣ. ಬೆಂಗಳೂರಿನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳ ಮತ್ತು ನೆಲದಿಂದ ಸುಮಾರು 15 ಕಿಲೋಮೀಟರ್, ಸಮುದ್ರ ಮಟ್ಟದಿಂದ ಸುಮಾರು 5833 ಅಡಿಗಳಷ್ಟು ಎತ್ತರದಲ್ಲಿದೆ.

ಎತ್ತರದ ಹೋಲಿಕೆಗಾಗಿ ಕೆಲವು ಬೆಟ್ಟಗಳ ಎತ್ತರ....

ನಂದಿ ಬೆಟ್ಟ 1450 ಅಡಿ,

ಶಬರಿಮಲೆ 1535 ಅಡಿ,

ತಿರುಪತಿ ಬೆಟ್ಟ ( ತಿರುಮಲ ) 3200 ಅಡಿ,

ಕುಮಾರ ಪರ್ವತ ( ಪುಪ್ಷಗಿರಿ ) 5617 ಅಡಿ,

ವೆಲ್ಲಯ್ಯನಗಿರಿ 5833 ಅಡಿ,

ಮುಳ್ಳಯ್ಯನಗಿರಿ 6330 ಅಡಿ,

ಬೆಂಗಳೂರಿನ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಹವ್ಯಾಸಿ ಚಾರಣ ತಂಡದ ಪ್ರೀತಿಯ ಆಹ್ವಾನದ ಮೇರೆಗೆ  9 ಗೆಳೆಯರ ತಂಡ 16/03/2022 ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಹೊರಟೆವು. ಕೇವಲ ನಾಲ್ಕು ತಿಂಗಳ ಹಿಂದೆ ಸುಮಾರು 11500 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ರಾಜ್ಯವನ್ನು ಸುತ್ತಿದ ನಂತರ ಆಹಾರದ ಪಥ್ಯದಲ್ಲಿ ಇದ್ದ ಕಾರಣ ತೂಕ ಸ್ವಲ್ಪ ಕಡಿಮೆಯಾಗಿದೆ. ಬೆಟ್ಟ ಹತ್ತುವ ಪ್ರಯತ್ನ ಕಷ್ಟ ಎಂದು ಮನಸ್ಸು ಹೇಳುತ್ತಿತ್ತು. ಆದರೂ ಈ ಒಂದು ಸಾಹಸ ಮಾಡಲು ನಿರ್ಧರಿಸಿದೆ. ಈ ಚಾರಣ ಅಂತಿಮ ಗುರಿ ತಲುಪಲು ಒಟ್ಟು ಏಳು ಬೆಟ್ಟಗಳನ್ನು ಹತ್ತಬೇಕು. ಸೆವೆನ್‌ ಹಿಲ್ಸ್...

ಮಾರನೆಯ ದಿನ ಅಂದರೆ 17/03/2022 ಬೆಳಗಿನ ಜಾವ 2 ಗಂಟೆಗೆ ಆ ಸ್ಥಳ ತಲುಪಿ ವಿರಾಮ ಪಡೆಯದೆ 2/30 ನಿಮಿಷಕ್ಕೆ ಸರಿಯಾಗಿ ನೆಲದಿಂದ ಬೆಟ್ಟ ಹತ್ತಲು ಪ್ರಾರಂಭಿಸಿದೆವು. ನೀರು ಒಂದಷ್ಟು ಹಣ್ಣು ಮತ್ತು ಕುರುಕಲು ಆಹಾರ, ಅಲ್ಲಿನ ನಿಯಮದಂತೆ ಪ್ಲಾಸ್ಟಿಕ್ ರಹಿತವಾಗಿ ಒಂದಷ್ಟು ಅತ್ಯವಶ್ಯಕ ವಸ್ತುಗಳು, ಕತ್ತಲು ಹೋಗಲಾಡಿಸಲು ಟಾರ್ಚ್, ಒಂದು ಬಿದರಿನ ಉದ್ದದ ಊರು ಗೋಲಿನ ಸಮೇತ ಹೆಜ್ಜೆ ಹಾಕತೊಡಗಿದೆವು.

ಈಗಾಗಲೇ ಸಣ್ಣ ಪ್ರಮಾಣದ ಚಾರಣದ ಅನುಭವ ನನಗಿತ್ತು. ಆ ಧೈರ್ಯ ನನ್ನೊಂದಿಗಿತ್ತು. ಆದರೆ ಪ್ರಾರಂಭದಲ್ಲಿಯೇ ಈ ಬೆಟ್ಟ ಹತ್ತುವ ನೇರ ಎತ್ತರ ಗಾಬರಿ ಉಂಟು ಮಾಡಿತು. ಬಹುತೇಕ 60 ರಿಂದ 75 ಡಿಗ್ರಿ ಕೋನದಲ್ಲಿ ನೇರವಾಗಿದೆ. ಸಾಮಾನ್ಯ ದಾರಿಗಿಂತ ಬೆಟ್ಟ ಹತ್ತಲು ಹತ್ತು ಪಟ್ಟು ಹೆಚ್ಚು ಶ್ರಮ ಬೇಕಾಗುತ್ತದೆ. ಕಲ್ಲಿನ ಮೆಟ್ಟಲು, ಸ್ವಲ್ಪ ಬಂಡೆ ಕಲ್ಲುಗಳು, ಮಳೆಗಾಲದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಕೊರಕಲಾದ ಹಳ್ಳ ಗುಂಡಿಗಳು, ದಾರಿಗೆ ಅಡ್ಡವಾಗಿ ಬಿದ್ದಿರುವ ಮರಗಳು, ಚಂದ್ರನ ಸ್ವಲ್ಪ ಮಂದ ಬೆಳಕಿನ ನಡುವೆ ಎತ್ತರೆತ್ತರಕ್ಕೆ ಚಾರಣ ‌ಸಾಗುತ್ತಿತ್ತು. 

ಬೇಸಿಗೆಯ ಕಾರಣ ಉಷ್ಣಾಂಶ ಹೆಚ್ಚಾಗಿತ್ತು. ಬೆವರ ಹನಿಗಳು ಉದುರತೊಡಗಿದವು. ನನ್ನ ಸಾಮಾನ್ಯ ನಿರೀಕ್ಷೆ ತಪ್ಪಾಗತೊಡಗಿತು. ಎತ್ತರ ಎತ್ತರ ಎತ್ತರ ಎಷ್ಟಿತ್ತೆಂದರೆ ಒಂದು ಸಣ್ಣ ಸಮತಟ್ಟಾದ ಜಾಗವೂ ಇರಲಿಲ್ಲ. ಆ ಬೆಳದಿಂಗಳಲ್ಲಿ ತಲೆ ಎತ್ತಿ ನೋಡಿದರೆ ಕಣ್ಣಿಗೆ ಕಾಣುವಷ್ಟು ಎತ್ತರ. ಹಿಂದಿನ ದಿನ ಬೆಳಗ್ಗೆ ಮಾಡಿದ್ದ ಓಟ ಮತ್ತು ವ್ಯಾಯಾಮ,  ಸುಮಾರು ಹತ್ತು ಗಂಟೆಗಳ ಪ್ರಯಾಣ, ನಡು ರಾತ್ರಿಯ ನಿದ್ದೆಯ ಸೆಳೆತ ಈಗ ಎತ್ತರದ ಬೆಟ್ಟ ಹತ್ತುವುದು.

ಹೀಗೆ ಹತ್ತುವಾಗ ಈಗಾಗಲೇ ಹತ್ತಿ ಇಳಿಯುತ್ತಿದ್ದ ಕೆಲವರು ಎದುರಾಗುತ್ತಿದ್ದರು. ಹಾಗೆ ಸಿಕ್ಕಿದ ಅನೇಕರ ಬಳಿ ಮೊದಲನೆಯ ಬೆಟ್ಟ ತಲುಪಲು ಇನ್ನೂ ಎಷ್ಟು ದೂರ ಇದೆ. ಯಾವ ಬೆಟ್ಟ ಎಷ್ಟು ಕಷ್ಟ. ಯಾವುದು ಸುಲಭ, ನಿಮಗೆ ಎಷ್ಟು ಸಮಯ ಹಿಡಿಯಿತು ಹೀಗೆ ತುಂಬಾ ತಲೆ ತಿನ್ನುತ್ತಿದ್ದೆ. ಏಕೆಂದರೆ ನಮ್ಮ ತಂಡದ ಗೆಳೆಯರ ಅಂದಾಜಿನಂತೆ ಗುರಿ ತಲುಪಲು ಸುಮಾರು 9 ಗಂಟೆ ಮತ್ತು ಇಳಿಯಲು ಸುಮಾರು 5 ಗಂಟೆ ಎಂದು ಅಂದಾಜಿಸಲಾಗಿತ್ತು. ನಮ್ಮ ತಂಡದ ಯಾವ ಸದಸ್ಯರು ಈ ಬೆಟ್ಟವನ್ನು ಗುರಿ ಮುಟ್ಟಿದ ಅನುಭವ ಇರಲಿಲ್ಲ. ಆದರೆ ಇತರೆ ಅನೇಕ ಬೆಟ್ಟಗಳನ್ನು ಹತ್ತಿದ್ದಾರೆ.

ಮನಸ್ಸಿಗೆ ಸಮಾಧಾನ ಕೊಡುತ್ತಿದ್ದ ಒಂದು ಅಂಶವೆಂದರೆ ನಾವಷ್ಟೇ ಅಲ್ಲ ಇನ್ನೂ ಅನೇಕ ವಯೋಮಾನದ ಜನರು ಹತ್ತುವುದು ಇಳಿಯುವುದು ಮಾಡುತ್ತಿದ್ದರು. ಅದರಲ್ಲೂ ಶಬರಿಮಲೆ ದೇವಸ್ಥಾನದ ನಿಯಮದಂತೆ ಇಲ್ಲಿಯೂ ಹೆಣ್ಣುಮಕ್ಕಳಿಗೆ ಈ ಚಾರಣ ನಿಷಿದ್ಧ. ಕೇವಲ ಹತ್ತು ವರ್ಷ ವಯಸ್ಸಿನ ಒಳಗಿನ ಮತ್ತು 60 ವರ್ಷ ಮೇಲ್ಪಟ್ಟ ಹೆಂಗಸರು ಚಾರಣ ಮಾಡಬಹುದಿತ್ತು. ಆ ರೀತಿಯ ಕೆಲವರು ನಮ್ಮ ಕಣ್ಣಿಗೆ ಕಾಣಿಸಿದರು. ಅವರನ್ನು ನೋಡಿ ನಾವೊಂದಿಷ್ಟು ಸ್ಪೂರ್ತಿ ಪಡೆಯುತ್ತಿದ್ದೆವು.

ಬೆಳಗಿನ ಜಾವ 4 ಗಂಟೆ, 5 ಗಂಟೆ, 6 ಗಂಟೆ, 7 ಗಂಟೆ ಹೀಗೆ ಸತತವಾಗಿ ನಡೆಯುತ್ತಾ ಸಾಗಿದೆವು. ಮಧ್ಯೆ ಮಧ್ಯೆ ಒಂದೈದು ನಿಮಿಷದ ವಿರಾಮ. ತುಂಬಾ ಹೆಚ್ಚು ಹೊತ್ತು ವಿಶ್ರಾಂತಿ ಪಡೆದರೆ ದೇಹ ಬೇಗ ನಿದ್ದೆಗೆ ಜಾರುವ ಅಪಾಯ ಮತ್ತು ಸಮಯವು ಹೆಚ್ಚಾಗುತ್ತದೆ. ವಿಶ್ರಾಂತಿ ನಂತರ ಮತ್ತೆ ಪ್ರಯಾಣ ತುಂಬಾ ಕಷ್ಟ. ದೇಹ ಮತ್ತು ಮನಸ್ಸು ಜಿಡ್ಡಾಗುತ್ತದೆ. ಆದ್ದರಿಂದ ಬೆಟ್ಟ ಹತ್ತುತ್ತಲೇ ಇರಬೇಕು.

ಸುಮಾರು 7 ಗಂಟೆಯ ಹೊತ್ತಿಗೆ ಶೇಕಡಾ 60% ಭಾಗ ಹತ್ತಿದಂತೆ ಆಯಿತು. ಅಷ್ಟು ಹೊತ್ತಿಗಾಗಲೇ ಸೂರ್ಯನ ನಯನ ಮನೋಹರ ದೃಶ್ಯ ಸ್ವಲ್ಪ ಆಯಾಸ ಕಡಿಮೆ ಮಾಡಿತು. ಪ್ರಕೃತಿಯ ಸೌಂದರ್ಯ ಸ್ಪಷ್ಟವಾಗಿ ಕಾಣಿಸಿ ಮನಸ್ಸು ಮತ್ತು ‌ದೇಹ ಸ್ವಲ್ಪ ಸಮಾಧಾನಗೊಂಡವು. ಅಲ್ಲಿಗೆ ಮೂರು ಅತ್ಯಂತ ಕಠಿಣ ಬೆಟ್ಟಗಳನ್ನು ಏರಿಯಾಗಿತ್ತು. ನಂತರದ 4 ಮತ್ತು 5 ಇರುವುದರಲ್ಲಿ 1/2/3 ಕ್ಕೆ ಹೋಲಿಕೆ ಮಾಡಿದಾಗ ಸ್ವಲ್ಪ ಪರವಾಗಿಲ್ಲ ಎನಿಸಿತು. 6ನೆಯ ಬೆಟ್ಟ ಇಳಿಜಾರು. ಬೆಟ್ಟ ಹೇಗೆ ಇಳಿಜಾರು ಎಂದು ಕೇಳಬೇಡಿ. ಹಾದಿ ಇದ್ದದ್ದೇ ಹಾಗೆ. ಬಹುಶಃ ಆರನೆಯ ಬೆಟ್ಟದಿಂದ ಏಳನೆಯ ಬೆಟ್ಟದ ನಡುವೆ ಒಂದು ನದಿ ಹರಿಯುವುದರಿಂದ ಈ ರೀತಿ ಆಗಿರಬಹುದು. ನಂತರ 7 ನೆಯ ಮತ್ತು ಕೊನೆಯ ಬೆಟ್ಟ. ಇದು ಎಲ್ಲಕ್ಕಿಂತ ಹೆಚ್ಚು ಎತ್ತರ ಮತ್ತು ದೂರ. ಆದರೂ ಬೆಳಗಿನ ತಣ್ಣನೆಯ ಗಾಳಿ , ಪ್ರಕೃತಿಯ ಸೌಂದರ್ಯ ಮತ್ತು ಬೆಟ್ಟದ ತುದಿ ಕಣ್ಣಿಗೆ ಕಾಣುತ್ತಿದ್ದುದರಿಂದ ಹೇಗೋ ಸುಮಾರು ಬೆಳಗಿನ 9 ಗಂಟೆಯ ವೇಳೆಗೆ ಏಳನೇ ಬೆಟ್ಟದ ತುತ್ತ ತುದಿ ಎಲ್ಲರೂ ತಲುಪಿದೆವು.  ಸ್ವಲ್ಪ ವಿಶ್ರಾಂತಿಯ ನಂತರ ಒಂದಷ್ಟು ಹಣ್ಣುಗಳು ಬ್ರೆಡ್ ಬಿಸ್ಕತ್ತುಗಳ ಉಪಹಾರ ಸೇವಿಸಿ ಒಂದಷ್ಟು ಸುತ್ತಾಡಿ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಇಳಿಯಲು ಪ್ರಾರಂಭಿಸಿದೆವು...

ಬಿಸಿಲು, ಧೂಳು ಕೆಳಮುಖವಾಗಿ ಚಲಿಸುವಾಗ ಕಾಲಿನ ಮೇಲೆ ಬೀಳುವ ಒತ್ತಡ ಕಲ್ಲುಬಂಡೆಗಳ ಹಾದಿಯ ಜಾರುವಿಕೆ ಎಲ್ಲವನ್ನೂ ಅನುಭವಿಸುತ್ತಾ ಇಳಿಯತೊಡಗಿದೆವು. ಇದು ಕೂಡ ನಿರೀಕ್ಷೆಗಿಂತ ಹೆಚ್ಚು ಕಷ್ಟ ಮತ್ತು ಸಮಯ ತೆಗೆದುಕೊಂಡಿತು. ಸುಮಾರು ‌6 ಗಂಟೆಗಳ ಕಾಲ ಇಳಿದು ಸಂಜೆಯ 5 ಗಂಟೆಯ ಹೊತ್ತಿಗೆ ಕೆಳಕ್ಕೆ ಇಳಿದೆವು. ನಂತರ ಬೆಂಗಳೂರಿನ ಕಡೆಗೆ ಪಯಣ.

ಚಾರಣ ಒಂದು ಹವ್ಯಾಸಿ ಕ್ರೀಡೆ ಎನ್ನಬಹುದು. ದೇಹ ಮತ್ತು ಮನಸ್ಸುಗಳ ಸಮೀಕರಣ ಹಾಗು ಪ್ರಾಕೃತಿಕ ಸವಾಲುಗಳನ್ನು ಎದುರಿಸುತ್ತಾ, ನಮ್ಮನ್ನು ನಾವು ಪರೀಕ್ಷೆಗೆ ಒಳಪಡಿಸುವುದು ಮತ್ತು ಅನುಭವಿಸುವ ಒಂದು ವಿಶಿಷ್ಟ ಹವ್ಯಾಸ. ಆಧುನಿಕ ಯುಗದಲ್ಲಿ ಪ್ರಕೃತಿಯೊಂದಿಗೆ ಮತ್ತೆ ಒಡನಾಡುವ ಒಂದು ಅವಕಾಶ. ಇಲ್ಲಿ ಎದುರಾಗುವ ಸಮಸ್ಯೆಗಳಿಗೆ ನಾವು ಪ್ರತಿಕ್ರಿಯಿಸುವ ಅನೇಕ ನಿರ್ಣಯಗಳು ಅನುಭವಿಸುವ ಭಾವಗಳು ನಮ್ಮ ದೈನಂದಿನ ಕೌಟುಂಬಿಕ ಆರ್ಥಿಕ ವ್ಯಾವಹಾರಿಕ ಸಮಸ್ಯೆಗಳಿಗೆ ಒಂದು ಉತ್ತರ ರೂಪದ ಸಮಾಧಾನಕರ ಪರಿಹಾರವೂ ಸಿಗುತ್ತದೆ. ಜೊತೆಗೆ ಬದುಕಿನ ಜಂಝಡಗಳಿಂದ ಅಲ್ಪ ಮಾನಸಿಕ ವಿರಾಮವೂ ದೊರಕುತ್ತದೆ. ಪ್ರಕೃತಿಯ ಅಗಾಧತೆಯ ಮುಂದೆ ನಮ್ಮ ಯೋಗ್ಯತೆಯೂ ಅನಾವರಣ ಗೊಳ್ಳುತ್ತದೆ.

ಅನುಕೂಲ ಆಸಕ್ತಿ ಇದ್ದವರು ‌ಸಮಯಾವಕಾಶ ಸಿಕ್ಕರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನುರಿತ ಹವ್ಯಾಸಿ ತಂಡದ ಜೊತೆಯಲ್ಲಿ ಸಣ್ಣ ಸಣ್ಣ ಪ್ರಮಾಣದ ಚಾರಣ ಕೈಗೊಂಡರೆ ಒಂದು ಉಲ್ಲಾಸದಾಯಕ ಅನುಭವ ಪಡೆಯಬಹುದು. ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಹೇಳುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ