ಒಂದು ಚಿತ್ರಕ್ಕೆ ಎರಡು ಗಝಲ್ ಗಳ ಸಂಭ್ರಮ

Submitted by Shreerama Diwana on Thu, 09/10/2020 - 09:15
ಬರಹ

ಗಝಲ್ ೧

 

ಒಲವಿನಲಿ ಪ್ರೇಮರಾಗವ ಮೋಹದಲಿ

ಹಾಡುತಿರಲು ನಾ ಬಂದೆ|

ಚೆಲುವಿನ ಸಿರಿಯನು ನೋಡುತ್ತ

ಕುಳಿತಿರಲು ನಾ ಬಂದೆ||

 

ಗಂಧರ್ವ ದಂಪತಿಯಾಗಿ ಗಗನದಲಿ

ಬದುಕೋಣ ಸಾವಿಲ್ಲದಂತೆ|

ನಂದಾದೀಪದ ಬೆಳಕು ಮಂದವಾಗಿ

ಚೆಲ್ಲುತಿರಲು ನಾ ಬಂದೆ||

 

ಹರಿಯುವ ಜಲದಲ್ಲಿ ಮತ್ಸ್ಯದಂತೆ

ಮನವನು ಕಲಕಿರುವೆ|

ಕೊರೆಯುವ ಚಳಿಯದು ತನುವನು

ಅಪ್ಪುತಿರಲು ನಾ ಬಂದೆ||

 

ವನದಲ್ಲಿ ದುಂಬಿಯದು ಕುಸುಮದ

ಮಕರಂದ ಹೀರುತಿದೆ|

ಕಣಕಣದಿ ಹೃದಯದ ಆಳವನು

ಸೇರುತಿರಲು ನಾ ಬಂದೆ||

 

ನಭದಲ್ಲಿ ಹಸೆಮಣೆಯು ಸಿಂಗರಗೊಂಡು

ಇಬ್ಬರನು ಕರೆಯುತಿದೆ|

ಅಭಿನವನ ಕಾವ್ಯವದು ಕೈಬೀಸುತ

ಕರೆಯುತಿರಲು ನಾ ಬಂದೆ||

 

-ಶಂಕರಾನಂದ ಹೆಬ್ಬಾಳ 

*******

ಗಝಲ್-೨

ಒಲವ ದಿಬ್ಬಣದ ಹೂ ಮಂಚದ ನಾದಸ್ವರ

ಕರೆಯುತಿವೆ ಮನವೆ|

ಕಲೆಯು ಬಾಂದಳದಿ ಸೊಬಗ ಸೂಸುತಲಿ

ಸುರಿಯುತಿವೆ ಮನವೆ||

 

ರಸಸಂಜೆಯ ಹೊನ್ನ ಕಿರಣದಡಿ ತನುವು

ನೆಮ್ಮದಿಯ ಸುಖವದು|

ಯಶದಲಿ ಒಗ್ಗೂಡಿದ ಹೃದಯಗಳ ಮಿಲನ

ಮೆರೆಯುತಿವೆ ಮನವೆ|

 

ಮುಸ್ಸಂಜೆಯ ತಣ್ಣನೆ ಗಾಳಿಗೆ ಮೈಯೊಡ್ಡಿ

ಮಾತಿಗಿಳಿದವು ಜೋಡಿಯು|

ಮುಂಜಾನೆಯ ತುಹಿನದಲಿ ಬೆರತು ಕಲೆತು

ಕುಣಿಯುತಿವೆ ಮನವೆ|

 

ಅಜ್ಞಾನದ ಅಂಗಳವ ತೊಳೆದು ತಮೋಘ್ನ

ಪಡೆಯಲಿ ಒಂದಾಗಿವೆ|

ಸುಜ್ಞಾನ ಮಾರ್ಗದಲಿ ನವ್ಯತೆಯ ಕನಸವು

ನಲಿಯುತಿವೆ ಮನವೆ||

 

ಕವಿದ ಕಾರ್ಮೋಡದ ಕುಳಿರ್ಗಾಳಿ ಬೀಸಿದೆ

ತಂಪಾದ ಬಯಲೊಳಗೆ|

ಕವನದ ಸಾಲಿನಲಿ ಅಭಿಜ್ಞಾಳ ಚಿನ್ನುಡಿಯು

ಬರೆಯುತಿವೆ ಮನವೆ||

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್