ಒಂದು ಚಿತ್ರ - ನೋಟ ಮೂರು !

ಒಂದು ಚಿತ್ರ - ನೋಟ ಮೂರು !

ಬರಹ

ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ.

ಕವನ ೧

ಕಪಿಯ ಚೇಷ್ಠೆ

(ಪರಿವರ್ಧಿನಿ ಷಟ್ಪದಿ)

ಗಡಣವ ತೊರೆಯುತ ಬೀದಿಗೆ ಬಂದಿಹ

ಗಡವವು ಕುಳಿತಿದೆ ಪತ್ರಿಕೆಯೋದುತ

ಬಿಡದೆಯೆ ಸುದ್ದಿಯನೆಲ್ಲವ ಮನದೊಳು ಶೇಖರಿಸಿತು ನೋಡಿ

ಸಡಗರದಿಂದಲಿ ಗಹನ ವಿಚಾರವ

ಗಡಿಬಿಡಿಯಿಲ್ಲದೆ ನೋಡುತಲಿರುವುದು

ನಡೆಯುವುದನುದಿನ ಜನನ ಮರಣಗಳು ಲೋಕದಲೆಲ್ಲೆಡೆಯು

 

ಅಂಗಡಿ ಮಾಲಕ ನೋಡಿದನಾಗಲೆ

ಮಂಗವು ಬಾಗಿಲ ಸನಿಹಕೆ ಬಂದುದ

ಜಂಗಮವಾಣಿಯ ಕರದಲಿ ಹಿಡಿಯುತ ತೆಗೆದನು ಚಿತ್ರವನು

ಭಂಗವ ಮಾಡಿದನರಿತಿಹ ಕೋತಿಯು

ಛಂಗನೆ ನೆಗೆಯುತ ಮುಖವನು ಪರಚಿತು

ಸಂಗರ ಮಾಡಲು ಸಿದ್ಧತೆ ನಡೆಸಿತು ಮನದಲಿ ಕಪಿ ತಾನು

 

ನನ್ನಯ ಪಾಡಿಗೆ ಸುಮ್ಮನೆಯಿದ್ದರೆ

ನಿನ್ನಯ ಪೌರುಷ ತೋರಿದೆಯೇತಕೆ

ಕಣ್ಣಿಗೆ ತೊಂದರೆ ಜಂಗಮವಾಣಿಯ ಬೆಳಕದು ನಮಗೆಲ್ಲ

ಎನ್ನುತ ಮಂಗವು ಮಾಲಕನೆದುರಿಸಿ

ತನ್ನಯ ಭಾಷೆಯಲುಸುರಿತು ತಕ್ಷಣ

ಸಣ್ಣವ ನಾನಿಹೆನೆಂದರೆ ತಪ್ಪದು ಬಲ್ಲೆನು ನಾನೆಲ್ಲ

 

ಮಾಡಿದ ತಪ್ಪನು ಮನ್ನಿಸಲೋಸುಗ

ಬೇಡಿದ ಮಾಲಕನಾಕ್ಷಣದಲ್ಲಿಯೆ

ನೋಡುತ ಕೋತಿಯ ಮುಖವನು ಹಾಗೆಯೆ ನಿಂತನು ಬೆಪ್ಪಾಗಿ

ಕಾಡಿನ ಮೃಗಗಳು ತಿನ್ನಲು ಸಿಗದೆಯೆ

ನಾಡಿಗೆ ಬರುವುದು ಸಹಜವದೆಲ್ಲೆಡೆ

ಜಾಡಿಸಿಯೊದೆಯಲು ಬೇಡಿರಿ ಮನುಜರೆ ಮೂಕ ಪ್ರಾಣಿಗಳ

✍️ಲತಾ ಬನಾರಿ

ಕವನ ೨

(ದತ್ತ ಅಕ್ಷರ *ಗ*)

ಮಂಗನೋದಿದ ಪತ್ರಿಕೆ ಸುದ್ದಿ

(ಭಾ ಷ)

ಗತ್ತಿನಿಂದಲೆ ಸುದ್ದಿಯೋದುತ

ಸುತ್ತಗಮನವ ಹರಿಸಿ ನಿಲುತಲಿ

ಕತ್ತು ಸರಿಸದೆ ಮೇಲೆಯೆತ್ತದೆ ದಿನದ

ಪತ್ರಿಕೆಯ|

ಮತ್ತೆ ಮುಂದಿನ ಪುಟದ ಸುದ್ದಿಯ

ದತ್ತ ಚಿತ್ರವ ನೋಡಿ ತಿರುಗಿಸಿ

ಚಿತ್ತ ಬದಲಿಸಿ ವಿಜಯವಾಣಿಯ

ಪತ್ರಿಕೆಯನೋದಿ||

 

ಹಿರಿಯನಂತೆಯೆ ಕುಳಿತುಪೀಠದಿ

ಮರಿಯ ಕೋತಿಯು ರಾಜನಂತೆಯೆ

ಸರಿಯ ಸಮಯದಿ ಬಂದು ನೋಡಲು

ಕಪಿಯು ತಂಗಿಹುದು|

ಬರಿಯ ಸುದ್ದಿಯನಲದೆ ಮೆಲ್ಲಗೆ

ಸುರಿಸಿ ಕಂಗಳ ನೀರ ತಾನದು

ದುರುಳ ಕೋರೊನ ಸುದ್ದಿ ಸಾವದು

ಮುಖದ ಪುಟದಲ್ಲಿ||

ಶಂಕರಾನಂದ ಹೆಬ್ಬಾಳ

 

ಹನಿ

ಬ್ರೆಡ್ಡು ಕದ್ದ ಮಗುವ ಕಂಡು

ಮರುಗುವರು ಈ ಜನ

ನಮ್ಮ ಕಂಡರೇಕಮ್ಮ

ಮರೆಯುವರು ಕರುಣೆಯನ್ನ

ತಿಂದ ಒಂದು ಎಳನೀರಿಗೆ

ಸುಡುಮದ್ದು ಬೇಕೇನಮ್ಮ

ಕಾಣಬಹುದೇ ಇವರೊಳಗೆ

ಮಾನವತೆಯ ನೆರಳನ್ನ....

 

✍🏼 ನಿಶ್ಮಿತಾ ಪಳ್ಳಿ

 

 

 

ಚಿತ್ರ್