ಒಂದು ಪೆಲಕಾಯಿ ಪ್ರೇಮ ಕಥೆ

ಒಂದು ಪೆಲಕಾಯಿ ಪ್ರೇಮ ಕಥೆ

ನನ್ನ ಬಾಲ್ಯದ ದಿನಗಳಲ್ಲಿ ಪೆಲಕಾಯಿಯ (ಹಲಸು) ಸೀಸನು ಸುರುವಾಯಿತು ಎಂದರೆ ಸಾಕು (ಸಾಧಾರಣವಾಗಿ ಫೆಬ್ರವರಿ ತಿಂಗಳಿಂದ ಜೂನ್ ವರೆಗೆ), ನಮ್ಮ ಮನೆಯ ಊಟದ ತಟ್ಟೆಗಳಲ್ಲಿ ಪ್ರತಿದಿನ ಎಂಬಂತೆ ಯಾವುದಾದರೂ ಒಂದು ಬಗೆಯ ಪೆಲಕಾಯಿ ವ್ಯಂಜನ ಇರುವುದು ಸರ್ವೇ ಸಾಮಾನ್ಯವಾಗಿತ್ತು. ಆಗ ಊರಲ್ಲಿ ಹಲಸಿನ ಮರ ಇಲ್ಲದ ಹಿತ್ತಿಲುಗಳು ಬಹಳ ವಿರಳ ಎಂದೇ ಹೇಳಬಹುದು. ನೆರೆಕರೆಯವರ ಹಿತ್ತಿಲಲ್ಲಿ, ನೆಂಟರಿಷ್ಟರ ತೋಟಗಳಲ್ಲಿ ಎಂದು ಬೇಡ, ಎಲ್ಲೆಡೆಯಲ್ಲೂ ಹಲಸಿನ ಮರಗಳಿದ್ದು ಪ್ರತಿಯೊಬ್ವರೂ "ಪೆಲಕಾಯಿ ಬೋಡಾಂಟ ಕೊಂಡೋಲೆ" (ಹಲಸಿನ ಕಾಯಿ ಬೇಕಾದ್ರೆ ಕೊಂಡೋಗಿ"ಎಂದು ಹೇಳುವಷ್ಟು ಹಲಸಿನ ಬೆಳೆ ಆಗುತ್ತಿತ್ತು. ಜನರೂ ಹಲಸಿನ ಮಟ್ಟಿನಲ್ಲಿ ಉದಾರಮತಿಗಳಾಗಿದ್ದರು.  

ಆಗಿನ ದಿನಗಳಲ್ಲಿ ಹಲಸು ಇದ್ದವರು ಪರಸ್ಪರ ಹಂಚಿ ತಿನ್ನುವುದು ವಾಡಿಕೆಯಾಗಿದ್ದುದರಿಂದಲೋ ಏನೋ ಕಾಸರಗೋಡು ಪೇಟೆಯಲ್ಲಿ ಹಲಸು ವ್ಯಾಪಾರಿಗಳು ಬಹಳ ಅಪರೂಪವೇ ಆಗಿದ್ದರು. ಹಾಗಿದ್ದರೂ, ಜಾಲ್ಸೂರು ರಸ್ತೆಯ 'ಪ್ಲಾವಿಂಡಡಿ'ಯಲ್ಲಿ (ಹಲಸಿನ ಮರದಡಿ - ಪ್ಲಾವಿಂಡಡಿಯ ಬಗ್ಗೆ ಮೊದಲೊಮ್ಮೆ ವಿಸ್ತಾರವಾಗಿ ಬರೆದಿದ್ದೆ) ಒಬ್ಬ ಮಾಪ್ಳೆ ಹಲಸಿನ ಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಬೀದಿಬದಿ ಅಂಗಡಿ ಇಟ್ಟಿದ್ದ. ಅವನಲ್ಲಿ ಕಡಿಯೂ (ತುಂಡು) ಇಡಿಯೂ ಎರಡೂ ಸಿಗುತ್ತಿತ್ತು. ಹೆಚ್ಚಾಗಿ ಕಡಪ್ಪರದ ಮುಕ್ಕೊತ್ತಿಯರು ಅವನ ಗಿರಾಕಿಗಳು. ಬೆಳಿಗ್ಗೆ ಮೀನು ಮಾರ್ಕೆಟಿಗೆ ಹೋಗುವಾಗ ಬಟ್ಟಿ ತುಂಬಾ ಮೀನಾದರೆ, ಸಂಜೆ ಮನೆಗೆ ವಾಪಾಸಾಗುವಾಗ ಖಾಲಿಯಾದ ಬಟ್ಟಿಯಲ್ಲಿ 'ಚಕ್ಕ, ಚಕ್ಕ ಕಂಡ, ಚಕ್ಕಕುರು' (ಹಲಸು, ಹಲಸಿನ ತುಂಡು, ಹಲಸಿನ ಬೀಜ) ಪ್ಲಾವಿಂಡಡಿ ಮಾಪ್ಳೆಯಿಂದ ಖರೀದಿಸಿ ತುಂಬಿಸುತ್ತಿದ್ದರು.  ಈಗಂತೂ ಕಾಸರಗೋಡಿನಲ್ಲಿ ಹಲಸಿನ ಕಾಯಿ ವ್ಯಾಪಾರ ಮಾಡುವವರು ಇಲ್ಲವೆಂದೇ ಕಾಣ್ತದೆ. ಎಲ್ಲಿಯಾದರೂ ಇದ್ದರೆ ಮಾರ್ಕೆಟ್ ರಸ್ತೆಯಲ್ಲಿ ಇರಬಹುದೋ ಏನೋ....  ಗೊತ್ತಿಲ್ಲ.

ಒಮ್ಮೊಮ್ಮೆ ನಮ್ಮ ಮನೆಯಲ್ಲಿ, ಹೀಗೆ ನೆರೆಕರೆಯವರು ಯಾರೋ ತಂದು ಕೊಟ್ಟು, ಅಡುಗೆ ಕೋಣೆಯ ಗೋಡೆಗೆ ಒರಗಿಸಿಟ್ಟ ಪೆಲಕಾಯಿ ಹಣ್ಣಾಗಿದೆಯಾ ಇಲ್ಲವಾ ಎಂದು ದಿನಾಲೂ ಚೊಟ್ಟಿಯೂ, ಮೂಸಿಯೂ ನೋಡುವುದು ನನ್ನ ಕೆಲಸ ಆಗಿತ್ತು. ಕೊನೆಗೂ ಒಂದು ದಿನ ಹಲಸು ಹಣ್ಣಾಗಿ ಮನೆಯಿಡೀ ತನ್ನ ಪರಿಮಳ ಪಸರಿಸಿ, ಅವತ್ತು ಸಂಜೆ ಪೆಲಕಾಯಿಗೆ ಗಡಿ ಬೀಳುವುದಂತೂ ಗ್ಯಾರಂಟಿ ಎಂಬ ಸಂಭ್ರಮದಲ್ಲಿ ಶಾಲೆಗೆ ಹೊರಟು ಹೋಗಿದ್ದೆ.  ಸಂಜೆ ವಾಪಸಾಗುವಾಗ, ಹಣ್ಣಾದ ಹಲಸನ್ನು ಮೂರಬಹುದು ಎಂಬ ನಿರೀಕ್ಷೆಯಲ್ಲಿ ಖುಷಿಯಿಂದ ಮುಖ ತಡ್ಪೆಯಷ್ಟು (ಗೆರಸಿ) ಅಗಲ ಮಾಡಿಕೊಂಡೇ ಶಾಲೆಯಿಂದ ಬಂದಿದ್ದೆ.  

ನಾವು ಶಾಲೆ ಬಿಟ್ಟು ಮನೆಗೆ ಮುಟ್ಟಿದಂತೆ, ಅಮ್ಮ ಮನೆಯ ಹಿಂದಿನ ತಿನೆಯಲ್ಲಿ (ಜಗಲಿ) ಹಳೆಯ ಗೋಣಿಯೊಂದನ್ನು ಹರಡಿ, ಅದರ ಮೇಲೆ ಮುಟ್ಟಾತ್ತಿಯನ್ನು (ಮೆಟ್ಟುಕತ್ತಿ) ಇಟ್ಟು, ಪೆಲಕಾಯಿಯನ್ನು ಮೂರಲು (ತುಂಡು ಮಾಡಲು) ತೊಡಗುತ್ತಿದ್ದರು. ಮುಟ್ಟಾತ್ತಿಯಿಂದ ಸ್ವಲ್ಪ ದೂರ ಕೂತು ಕಾತುರದಿಂದ ಕಾಯುತ್ತಿದ್ದ ನಮ್ಮ ಕೈಗೆ ಕೂಂಜಿಯನ್ನು (ಕಾಂಡ) ಕೆತ್ತಿ ತೆಗೆದ ಹಲಸಿನ ಕಡಿಯನ್ನು ತಿನ್ನಲು ಕೊಡುತ್ತಿದ್ದರು. ಕಡಿಯಿಂದ ಸಣ್ಣಗೆ ಅರಿಯುವ ಮಯಣವನ್ನು ಮನೆಯ ಮಾಡಿನ ಎಡೆಯಲ್ಲಿ ಸಿಕ್ಕಿಸಿಟ್ಟ ಮಯಣ ಕೋಲಿನಿಂದಲೋ (ಕೋಲಿನಲ್ಲಿದ್ದ ಮಯಣ ಒಣಗಿದ ಮೇಲೆ ಕೊಡಪಾನ ಮುಂತಾದ ಪಾತ್ರೆಗಳ ಸಣ್ಣ ಪುಟ್ಟ ಒಟ್ಟೆ ಮುಚ್ಚಲು ಉಪಯೋಗವಾಗುತ್ತಿತ್ತು), ತಿಂದು ಖಾಲಿಯಾದ ರೆಚ್ಚೆಯ ಕಡಿಯಿಂದಲೋ ಒರಸಿ ತೆಗೆದು, ಸೊಳೆಯ ಪೆಲತ್ತರಿ ಪೀಂಕಿಸಿ (ಬೀಜ ತೆಗೆದು), ಪಚ್ಚಿಲುಗಳನ್ನು (ಸೊಳೆ) ಬಕಬಕನೆ ತಿಂದು ಖಾಲಿ ಮಾಡಿ, ರೆಚ್ಚೆಯಲ್ಲಿರುವ ಕಣ್ಣಿ ಪಚ್ಚಿಲನ್ನೂ (ಸೊಳೆಯಷ್ಟೇ ರುಚಿ ಇರುವ ಬೀಜ ಇಲ್ಲದ ಸಣ್ಣ ಸೊಳೆ) ಬಿಡದೆ ಹುಡುಕಿ ತೆಗೆದು ತಿಂದರೂ, ರಾವು (ಆಸೆ) ಬಿರಿಯದೆ, ಇನ್ನೂ ಬೇಕೆಂದು ಅಮ್ಮನತ್ರ ಚೆರೆ ಚೆರೆ ಮಾಡಿ ಎರಡು ಪಚ್ಚಿಲಾದರೂ ವಸೂಲು ಮಾಡಿ ತಿಂದಾದ ನಂತರವೇ ಮನಸ್ಸಿಗೆ ಸಮಾಧಾನ ಆಗುತ್ತಿದ್ದದ್ದು.

ತಿನ್ನುವಾಗ ಕೈಗೆ ಅಂಟಿದ ಅಲ್ಪ ಸ್ವಲ್ಪ ಮಯಣವನ್ನು ತೆಗೆಯಲು ಅಡಿಗೆ ಕೋಣೆಯ ಅಡ್ಡ ಹಲಗೆಯ ಮೇಲಿರಿಸಿದ ಎಣ್ಣೆಯ ಚೆಂಬಿನಿಂದ ಒಂದು ಸೂರಿ (ಚಮಚ) ತೆಂಗಿನೆಣ್ಣೆ ಕೈಗೆ ಸುರಿದು, ಮಯಣ ಹೋಗುವ ವರೆಗೆ ಚನ್ನಾಗಿ ತಿಕ್ಕಿಯೂ ಎಣ್ಣೆ ಪಸೆ ಬಾಕಿ ಇದ್ದರೆ, ಹೊರಗೆ ಬಸಳೆ ದೊಂಪದ ಅಡಿಯಲ್ಲಿದ್ದ ನೀರಿನ ಮಂಡೆಯ ಪಕ್ಕದ ಕಲ್ಲಿನ ಮೇಲಿರಿಸಿದ 'ಪಾಳೆಕಿಳ್ಳಿ'ಯಲ್ಲಿನ (ಅಡಿಕೆ ಹಾಳೆಯಲ್ಲಿ ಮಾಡಿದ ಸಣ್ಣ ಪಾತ್ರೆ) ಬೂದಿಯನ್ನು ಕೈಗೆ ಹಾಕಿ ಚೆಪ್ಪಿನ (ತೆಂಗಿನ ಸಿಪ್ಪೆ) ನಾರಿನಲ್ಲಿ ತಿಕ್ಕಿ ತೊಳೆದು, ಚಂಡಿ ಕೈಯನ್ನು ಅಮ್ಮ ಕಾಣದಂತೆ ಚಡ್ಡಿಯ ಕುಂಡೆಯ ಭಾಗಕ್ಕೆ ಒರಸಿ (ಅಮ್ಮ ಕಂಡರೆ ಬೈಗಳು ಗ್ಯಾರಂಟಿ) ಹಿತ್ತಿಲು ಗೆಳೆಯನೊಡನೆ ಆಡಲು ಹೋದರೆ ಮತ್ತೆ ಬರುವುದು ಒಂದಾ ಹೊಟ್ಟೆ ಹಸಿವಾಗಲು ಸುರು ಆಗಬೇಕು, ಇಲ್ಲದಿದ್ದರೆ  "ಪೊರ್ತ್  ಕಂತ್ಂಟಲ ಇಲ್ಲಡೆಗ್ ಬರ್ಪುಣ ಯೇಚನೆ ಇದ್ದಿಯಣಿ. ಈಯಾತೇ ಬರ್ಪನ, ಅತ್ತ್ ಏನ್ ಬರೊಡಾ" (ಹೊತ್ತು ಕಂತಿದರೂ ಮನೆಗೆ ಬರುವ ಯೋಚನೆ ಇಲ್ಲವನ. ನೀನಾಗಿ ಬರ್ತಿಯಾ, ಅಲ್ಲ ನಾನು  ಬರ್ಬೇಕಾ) ಎಂಬ ಅಮ್ಮನ ಗದರು ದನಿ ಕೇಳಬೇಕು. ಈ ರೀತಿಯಾಗಿ ಪೆಲಕಾಯಿಯನ್ನು ಇಷ್ಟ ಪಡುತ್ತಾ, ಕಟ್ಟಾ ಪೆಲಕಾಯಿ ಪ್ರೇಮಿಯಾಗಿ, ಪೆಲಕಾಯಿಯನ್ನು ಆಸ್ವಾದಿಸುತ್ತಾ ತಿಂದು ಬೆಳೆದವನು ನಾನು.

ವರ್ಷಗಳು ಕಳೆದಂತೆ ನಮ್ಮ ಜನರಲ್ಲಿ ಪೆಲಕಾಯಿ ಪ್ರೇಮ ಕಮ್ಮಿಯಾಗುತ್ತಾ ಹೋಯಿತು.  ಈಗಂತೂ, ಬರೀ ಆಟಿ ಕೂಟಗಳಲ್ಲಿ, ಹಲಸು ಪ್ರದರ್ಶನ ಮೇಳಗಳಲ್ಲಿ ಮಾತ್ರ ಕಾಣಸಿಗುವ ವಸ್ತುವಾಗಿ ಹೋಗಿದೆ ಹಲಸು.  ಹಾಗೆಯೇ ಅದರಿಂದ ಮಾಡುವ ವಿವಿಧ ಬಗೆಯ ರುಚಿಕರ ಖಾದ್ಯಗಳು. ಹಲಸು ತಿಂದರೆ ಗ್ಯಾಸು ಎಂದು ಹೆಚ್ಚಿನವರು ಹೆದರಿಯೆ "ಪೆಲಕಾಯಿಯಾ, ಎಂಕ್ ಬೋತ್ರಿಯಪ್ಪಾ" (ಹಲಸಾ, ನನಗೆ ಬೇಡಪ್ಪಾ) ಎಂದು ತಿನ್ನುವುದನ್ನೆ ಕಡಿಮೆ ಮಾಡಿದ್ದಾರೆ.  ಹಲಸನ್ನು ತುಂಡು ಮಾಡುವ, ಮಾಡಿ ಅದರ ಸೊಳೆಯನ್ನು ಬಿಡಿಸಿ ತೆಗೆಯುವ ಕಚರೆ (ಕಚಡ) ಕೆಲಸ ಕೂಡಾ ಹಲಸನ್ನು ಇಷ್ಟಪಡುವವರ ಸಂಖ್ಯೆ ಕಡಿಮೆ ಆಗುವುದಕ್ಕೆ ಒಂದು ಕಾರಣ ಆಗಿದ್ದಿರಬಹುದು. ಅದೂ ಅಲ್ಲದೆ ಮಾವು, ಚಿಕ್ಕು, ಪೇರಳೆ, ಸೇಬು, ದ್ರಾಕ್ಷೆ, ಕಿತ್ತಳೆ, ಮೂಸುಂಬಿ, ದಾಳಿಂಬೆಗಳಂತೆ, ಹಣ್ಣಿನ ಅಂಗಡಿಗಳಲ್ಲಿ ರೆಡಿ ಟು ಈಟ್' ರೀತಿಯಲ್ಲಿ ಸಿಗದೆ ಇರುವುದೂ ಕೂಡಾ ಒಂದು ಹೆಳೆ (ಕಾರಣ) ಆಗಿರಲೂ ಬಹುದು.  

ಹೀಗಿದ್ದರೂ ಹಲಸಿನ ಹಣ್ಣು ತಿನ್ನ  ಬೇಕೆಂಬ ಆಸೆ ಇದ್ದವರಿಗಾಗಿಯೋ ಎಂಬಂತೆ ಮಂಗಳೂರು, ಬೆಂಗಳೂರು, ಚೆನ್ನೈ ಮೊದಲಾದ ನಗರಗಳಲ್ಲಿ ಹತ್ತು ರುಪಾಯಿಗೆ ಒಂದು ಸೊಳೆಯಂತೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಹಾಕಿ ಮಾರಾಟ ಮಾಡುವುದನ್ನು ಕಂಡಿದ್ದೇನೆ. ಆಸೆಯಿಂದ ಆ ಸೊಳೆಯನ್ನು ಖರೀದಿಸಿ ತಿನ್ನುವವರನ್ನು ಕೂಡಾ ನೋಡಿದ್ದೇನೆ.

ಆದರೆ ನನ್ನ ಮಟ್ಟಿಗೆ ಹೇಳುವುದಾದರೆ ನಾನೊಬ್ಬ, ಅಂದೂ, ಇಂದೂ, ಎಂದೂ ಹಲಸನ್ನು ದ್ವೇಷಿಸದೆ ಇಷ್ಟಪಡುವ "ಪೆಲಕಾಯಿ ಪ್ರೇಮಿ"ಯಾಗಿ ಬಿಟ್ಟಿದ್ದೇನೆ.  ಈಗಲೂ ಡಾಕ್ಟರರೂ, ದೇಹವೂ ಬೇಡ ಎಂದರೂ, ಮನಸ್ಸೂ, ನಾಲಿಗೆಯೂ ಬೇಕು ಎನ್ನುವಷ್ಟು ನನ್ನ "ಪೆಲಕಾಯಿ ಪ್ರೇಮ" ಅಳಿಯದೆ ಹಾಗೆಯೇ ಉಳಿದಿದೆ.

-ಮುರಳೀಧರ ಕಾಸರಗೋಡು (ಕನ್ನಡ-ತುಳು ಭಾಷಾ ಲೇಖಕರು)

ಚಿತ್ರ ಕೃಪೆ: ಇಂಟರ್ನೆಟ್ ತಾಣ