ಒಂದು ಪ್ರೀತಿಯ ಹುಟ್ಟು...
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ ತಲುಪಿ ಅಲ್ಲಿಂದ ಬೆಂಗಳೂರಿಗೆ ಹೊರಡುತ್ತದೆ. ಸಾಮಾನ್ಯವಾಗಿ ಯಾವಾಗಲೂ ನನ್ನ ಆಯ್ಕೆ ಅದೇ ಆಗಿರುತ್ತಿತ್ತು.
ಇಡೀ ದಿನದ ಕೆಲಸದ ಒತ್ತಡದಿಂದ ತುಂಬಾ ಆಯಾಸವಾಗಿ ನಿದ್ರೆ ಬರುತ್ತಿತ್ತು. ಅದನ್ನು ತಡೆಯಲು ಅಲ್ಲಿಯೇ ಇದ್ದ ಕಾಫಿ ಡೇಯಲ್ಲಿ ನನ್ನ ಇಷ್ಟದ ಮೆಕ್ಸಿಕನ್ ಕಾಫಿ ಕುಡಿಯುತ್ತಾ ಕುಳಿತೆ. ವಾಟ್ಸಾಪ್ ಆನ್ ಮಾಡಿ ಕೆಲವು ಸ್ನೇಹಿತರಿಗೆ ಸಂದೇಶ ಕಳುಹಿಸಿ ಬೇಕಂತಲೇ ಅವರ ನಿದ್ರೆಗೆ ಭಂಗ ಮಾಡಿ ಗೋಳಾಡಿಸಿದೆ.
ವಿಮಾನ ಸರಿಯಾದ ಸಮಯಕ್ಕೆ ಬಂದಿತು. ಎಮಿರೇಟ್ಸ್ ನ ಆ ಬೃಹತ್ ಅಂತರರಾಷ್ಟ್ರೀಯ ವಿಮಾನದಲ್ಲಿ ದೆಹಲಿಯ ಪ್ರಯಾಣಿಕರೇ ಹೆಚ್ಚಿಗೆ ಇದ್ದು ಬಹುತೇಕರು ಅಲ್ಲಿಯೇ ಇಳಿದರು. ಕೇವಲ 60 ಜನ ಮಾತ್ರ ಬೆಂಗಳೂರಿನತ್ತ ಹೊರಟೆವು. ಆರಾಮವಾಗಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಿದ್ರೆಗೆ ಜಾರಿದೆ. ಬೆಂಗಳೂರಿಗೆ ಸುಮಾರು 2 ಗಂಟೆ 20 ನಿಮಿಷದಷ್ಟು ಪ್ರಯಾಣ.
ವಿಮಾನ ಟೇಕ್ ಆಫ್ ಆಗಿ 20 ನಿಮಿಷವೂ ಆಗಿರಲಿಲ್ಲ. ನನ್ನ ಮುಂದಿನ ಸೀಟಿನಿಂದ ಒಂದು ಹೆಣ್ಣು ಧ್ವನಿ ನೋವಿನಿಂದ ನರಳುತ್ತಿರುವುದು ಕೇಳಿಸಿತು. ತಕ್ಷಣ ಎದ್ದು ನನ್ನಿಂದ ಏನಾದರೂ ಸಹಾಯ ಬೇಕೆ ಎಂದು ಕೇಳಿದೆ. ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು. ನಾನು ಅಲ್ಲಿನ ಪರಿಚಾರಕಿಯರಿಗೆ ಹೇಳಬೇಕು ಎನ್ನುವಷ್ಟರಲ್ಲಿ ನಾನು ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಲಿನ ಎಸಿಯ ತೊಂದರೆಗಾಗಿ ಇರಲಿ ಎಂದು OTRIVIN ADULT NOSE DROPS ತಗೆದುಕೊಂಡು ಹೋಗಿರುತ್ತೇನೆ. ಈಗ ಅದರ ನೆನಪಾಗಿ ಬ್ಯಾಗಿನಿಂದ ಅದನ್ನು ತೆಗೆದುಕೊಟ್ಟೆ. ಆಕೆ ಅದನ್ನು ಉಪಯೋಗಿಸಿದ ಕೆಲ ನಿಮಿಷಗಳಲ್ಲೇ ನಿರಾಳ ಉಸಿರಾಟ ಸಾಧ್ಯವಾಯಿತು. ಆಕೆ ಅತಿ ಎನಿಸುವಷ್ಟು ಕೃತಜ್ಞತೆ ಅರ್ಪಿಸಿದಳು.
ಸಮಸ್ಯೆ ಪ್ರಾರಂಭವಾಗಿದ್ದು ಇಲ್ಲಿಂದಲೇ. ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು. ಕನಸಿನ ಕನ್ಯೆ ಧರೆಗಿಳಿದು ಬಂದಂತ ಸೌಂದರ್ಯ ಅವಳಲ್ಲಿ ತುಂಬಿತ್ತು. ನೀಲಿ ಜೀನ್ಸ್ ಸ್ಕರ್ಟ್, ಸ್ಲೀವ್ ಲೆಸ್ ಬಿಳಿ ಬಣ್ಣದ ಟಿ-ಶರ್ಟ್ ತೊಟ್ಟಿದ್ದ ಆಕೆ ಗುಂಗುರು ಕೂದಲಿನಿಂದಾಗಿ ನನಗೆ ಸಾಕ್ಷಾತ್ ಮರ್ಲಿನ ಮೆನ್ರೋ ತರ ಕಾಣುತ್ತಿದ್ದಳು.
ಒಂದಷ್ಟು ಸಂಕೋಚ ಸ್ವಭಾವದ ನಾನು ನಾಚಿಕೆಯಿಂದಲೇ ಆಕೆಯೊಂದಿಗೆ ಮಾತಿಗಿಳಿದೆ. ಆಕೆಯ ಹೆಸರು ಸಮೃದ್ಧಿ. ಬೆಂಗಳೂರಿನವರು..ಇಂಗ್ಲೆಂಡಿನ ಆಕ್ಸ್ ಫರ್ಡ್ ಶಾಲೆಯಲ್ಲಿ ನಲ್ಲಿ ಪದವಿಯನ್ನು ಮಾಡಿ ಈಗ ತಾನೆ ಅಲ್ಲಿಂದ ಪ್ರಮಾಣ ಪತ್ರ ಪಡೆದು ನೇರ ಬೆಂಗಳೂರಿನ ಅವಳ ಮನೆಗೆ ಹೊರಟಿದ್ದಳು. ಆಕೆಯ ಅಪ್ಪ ನಿವೃತ್ತ ಕರ್ನಲ್. ಅಮ್ಮ ಸ್ತ್ರೀರೋಗ ತಜ್ಞೆ. ಮನೆ ಜೆ ಪಿ ನಗರದಲ್ಲಿ. ಮುಂದೆ ಬೆಂಗಳೂರಿನಲ್ಲಿಯೇ ಕೆಲಸ ಮಾಡಬೇಕೆಂಬ ಯೋಜನೆಯಿದೆ.
ನನ್ನನ್ನು ಸಣ್ಣದಾಗಿ ಪರಿಚಯಿಸಿಕೊಂಡೆ. ವಿಮಾನ ಇಳಿಯುವ ಸೂಚನೆ ಬಂದಾಗಲೇ ನಾನು ಈ ಲೋಕಕ್ಕೆ ಬಂದದ್ದು. ವಿಮಾನದ ಪೈಲೆಟ್ ಏನಾದರೂ ನನ್ನ ಸ್ನೇಹಿತನಾಗಿದ್ದಿದ್ದರೆ ಏನೋ ಒಂದು ನೆಪ ಹೇಳಿ ವಿಮಾನವನ್ನು ಮತ್ತೆ ದೆಹಲಿಗೇ ತಿರುಗಿಸು ಎಂದೇಳುತ್ತಿದ್ದೆ. ಅಷ್ಟರ ಮಟ್ಟಿಗೆ ಆಕೆಯ ಮೋಹಕ್ಕೆ ಒಳಗಾಗಿದ್ದೆ.
ಇಬ್ಬರೂ ಒಟ್ಟಿಗೆ ಕೆಳಗಿಳಿದು ಬ್ಯಾಗ್ ಬರುವುದನ್ನು ಕಾಯುತ್ತಾ ನಿಂತಿರುವಾಗ ಆಕೆ ಕೇಳಿದಳು " ನೀವು ಇರುವುದೆಲ್ಲಿ" . ನಾನು ಆರ್ ಟಿ ನಗರ ಎಂದು ಹೇಳಿದೆ. ಹೇಗೆ ಹೋಗುವಿರಿ ಕೇಳಿದಳು. ಟ್ಯಾಕ್ಸಿ ಎಂದೆ. ಬೇಡ ನನಗೆ ಅಪ್ಪಾ ಅವರ ಸಹಾಯಕನ ಜೊತೆ ಕಾರು ಕಳಿಸಿದ್ದಾರೆ. ಹೇಗೂ ನಾನು ಹಾಗೆಯೇ ಹೋಗಬೇಕು ಡ್ರಾಪ್ ಮಾಡುತ್ತೇನೆ ಎಂದಳು. ನಾನು ಸೌಜನ್ಯಕ್ಕೂ ಬೇಡ ಎನ್ನದೆ ಒಪ್ಪಿಕೊಂಡೆ.
ನಾವು ಹೊರಗೆ ಬರುತ್ತಿದ್ದಂತೆ ಆಕೆಯ ಕಾರು ನಮ್ಮ ಮುಂದೆ ನಿಂತಿತು. ಬೆಳಗಿನ ಸಮಯದಲ್ಲಿ ವಿಮಾನ ನಿಲ್ದಾಣದಿಂದ ನನ್ನ ಮನೆ ತಲುಪಲು ಸುಮಾರು 30 ನಿಮಿಷ ಬೇಕಾಗುತ್ತದೆ. ಆ ಸಮಯದಲ್ಲಿ ನಮ್ಮ ನಡುವೆ ಫೋನ್ ನಂಬರ್, ಇ ಮೈಲ್, ಫೇಸ್ಬುಕ್ ಐಡಿ ಎಲ್ಲಾ ವಿನಿಮಯವಾಯಿತು. ಬೇಡವೆಂದರೂ ಮನೆಯ ಹತ್ತಿರವೇ ಕಾರು ನಿಲ್ಲಿಸಿ, ಕೆಳಗಿಳಿದು ಶೇಕ್ ಹ್ಯಾಂಡ್ ಮಾಡಿ ಮೊನಲಿಸಾಳಂತೆ ಒಂದು ಸುಂದರ ನಗು ಬಿಸಾಡಿ ಟಾಟಾ ಮಾಡುತ್ತಾ ಹೊರಟು ಹೋದಳು.
ಮನಸ್ಸು ಒದ್ದಾಡತೊಡಗಿತು. ಮನೆಯಲ್ಲಿ ಸ್ವಲ್ಪ ನಿದ್ದೆ ಮಾಡೋಣ ಎಂದು ಮಲಗಿದೆ. ನಿದ್ದೆ ಹತ್ತಿರ ಸುಳಿಯಲಿಲ್ಲ. ಏನೋ ಒಂಥರ ಚೇತೋಹಾರಿ. ಎದ್ದು ಎಂದಿನಂತೆ ಜಿಮ್ ಗೆ ಹೊರಟೆ. ಟ್ರೆಡ್ ಮಿಲ್ ಮೇಲೆ ಓಡತೊಡಗಿದೆ. ಸಾಮಾನ್ಯವಾಗಿ ಪ್ರತಿದಿನ ಗಂಟೆಗೆ 12 ಕಿ.ಮೀ ವೇಗದಲ್ಲಿ 45-50 ನಿಮಿಷ ಓಡುತ್ತೇನೆ. ಇಂದು 5 ನಿಮಿಷವೂ ಸಾಧ್ಯವಾಗಲಿಲ್ಲ. ಕೆಳಗಿಳಿದು ಭಾರ ಎತ್ತಲು ಮುಂದಾದೆ. ಶಕ್ತಿಯೇ ಇರಲಿಲ್ಲ. ಮನಸ್ಸಿನ ತುಂಬಾ ಸಮೃಧ್ಧಿಯೇ ತುಂಬಿಕೊಂಡಿದ್ದಳು. ಜಿಮ್ ತರಭೇತುದಾರನಿಗೆ ಏನೋ ನೆಪ ಹೇಳಿ ಮನೆಗೆ ವಾಪಸ್ ಬಂದೆ.
ಆಫೀಸ್ ಗೆ ರೆಡಿಯಾಗಲು ಸ್ನಾನದ ಕೋಣೆ ಹೊಕ್ಕೆ. ಅಲ್ಲಿರುವ ಎಫ್ ಎಂ ರೇಡಿಯೋದಲ್ಲಿ ರಾಜ್ ಕುಮಾರ್ ಅವರ ಚಿತ್ರದ "ಆಗುಂಬೆಯಾ ಪ್ರೇಮ ಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ " ಹಾಡು ಬರುತ್ತಿತ್ತು. ಅದನ್ನು ಆಸ್ವಾದಿಸುತ್ತಾ ಎಂದಿನ 20 ನಿಮಿಷದ ಸ್ನಾನಕ್ಕೆ ಬದಲು ಬಾತ್ ಟಬ್ ನಲ್ಲಿ ಖುಷಿ ಖುಷಿಯಾಗಿ ಒಂದು ಗಂಟೆ ಕಳೆದೆ.
ಮತ್ತೆ ರೆಡಿಯಾಗಿ ಉಪಹಾರ ಸೇವಿಸಲು ಟೇಬಲ್ ಗೆ ಬರುವಷ್ಟರಲ್ಲಿ ಗುರುವಾರದ ಟೈಂ ಟೇಬಲ್ ನಂತೆ ಅಮೆರಿಕನ್ ಶೈಲಿಯ ಬ್ರೆಡ್ ಆಮ್ಲೆಟ್, ಕಾರ್ನ್ ಫ್ಲೇಕ್ಸ್, ಕತ್ತರಿಸಿದ ಹಣ್ಣುಗಳು ಮತ್ತು ಆಫ್ರಿಕನ್ ಚಹಾ ಸಿದ್ದವಿತ್ತು. ಆದರೂ ತಿನ್ನುವ ಮನಸ್ಸಾಗಲಿಲ್ಲ. ಒಂದೆರಡು ಹಣ್ಣುಗಳ ಪೀಸ್ ಬಾಯಿಗೆ ಹಾಕಿಕೊಂಡು ಅಷ್ಟರಲೇ ಮುಗಿಸಿ ನಾನೇ ಕಾರ್ ಡ್ರೈವ್ ಮಾಡಿಕೊಂಡು ಆಫೀಸ್ ಗೆ ಹೊರಟೆ.
ಟ್ರಾಫಿಕ್ ದಿನವೂ ಕಿರಿಕಿರಿ ಮಾಡುತ್ತಿತ್ತು. ಆದರೆ ಇವತ್ತು ಅಸಹನೆ ಮೂಡಲೇ ಇಲ್ಲ. ಕಾರಿನ ಗ್ಲಾಸ್ ಕ್ಲೋಸ್ ಮಾಡಿ ಸಮೃಧ್ಧಿಯ ನೆನಪಿನಲ್ಲೇ ಸಾಗುತ್ತಿದ್ದೆ. ಎಫ್ ಎಮ್ ಆನ್ ಮಾಡಿದೆ. ಯಾವುದೋ ಸಿನಿಮಾದ ಹಾಡು " ಒಪ್ಕೊಂಡ್ ಬಿಟ್ಲು ಕಂಡ್ಲ ಪ್ರೀತಿ ಮಾಡೋಕೆ " ಬರುತ್ತಿತ್ತು. ಅದರ ಜೊತೆಗೆ ಹಾಡುತ್ತಾ ಒಳಗೊಳಗೆ ಹುಚ್ಚನಂತೆ ಒಬ್ಬನೇ ನಗುತ್ತಾ ಆಫೀಸ್ ತಲುಪಿದೆ.
ನನ್ನ ಕ್ಯಾಬಿನ್ ನಲ್ಲಿ ಕುಳಿತು ಮಾಡಿದ ಮೊದಲ ಕೆಲಸವೆಂದರೆ ಆಕೆಗೆ ಫೇಸ್ ಬುಕ್ ಪೇಜ್ ಗೆ ಗೆಳೆತನದ ರಿಕ್ವೆಸ್ಟ್ ಕಳಿಸಿದ್ದು. ಆಮೇಲೆ ವಾಟ್ಸಾಪ್ ಓಪನ್ ಮಾಡಿ ಒಂದು ಪ್ರೀತಿಯ ನುಡಿಗಳಿದ್ದ ಬೆಳಗ್ಗಿನ ಶುಭಾಶಯದ ಸಂದೇಶ ಕಳುಹಿಸಿದೆ. ಅಷ್ಟರಲ್ಲಿ ಕಚೇರಿ ಸಹಾಯಕಿ ತಂದಿಟ್ಟ ಅರೇಬಿಯನ್ ಟೀ ಕುಡಿಯುತ್ತಾ - ಕಿಟಕಿಯಾಚೆಗಿನ ದಿಗಂತವನ್ನು ನೋಡುತ್ತಾ ಪ್ರತಿ ಗುಟುಕಿನಲ್ಲೂ ಸಮೃಧ್ಧಿಯ ನೆನಪನ್ನು ಆಸ್ವಾದಿಸುತ್ತಾ ಮೈಮರೆತಿದ್ದೆ.
ಆಫೀಸಿನಲ್ಲಿ ಮಾಡಲು ಬಹಳಷ್ಟು ಕೆಲಸವಿತ್ತು. ಆಂತರಿಕವಾಗಿ ದೃಢ ಮನಸ್ಸಿನ ಕೆಲಸದಲ್ಲಿ ಅಪಾರ ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆಯವನಾದ ನಾನು ಇಂದೇಕೋ ಸಂಪೂರ್ಣ ಬದಲಾಗಿದ್ದೆ . ಹಗುರವಾದ ವಿವರಿಸಲಾಗದ ಮನಸ್ಸಿನ ಅಲೆಯಲ್ಲಿ ತೇಲುತ್ತಿದ್ದೆ. ನೋಡ ನೋಡುತ್ತಿದ್ದಂತೆ 1.30. ಊಟದ ಸಮಯ. ನನ್ನ ಟೇಬಲ್ ಗೆ ಮಂಗಳೂರು ಶೈಲಿಯ ಊಟದ ಥಾಲಿ ತಂದಿಟ್ಟರು. ಅಂಜಲ್ ಮೀನು ಫ್ರೈ, ಬಾಂಗಡ ಕರಿ, ಬಿಳಿ ಮಾಂಜಿ ತವಾ ಪ್ರೈ, ನೀರ್ ದೋಸೆ ಮತ್ತು ಕೆಂಪಕ್ಕಿ ಅನ್ನ. ಊಟಕ್ಕೆ ಕುಳಿತರೇ ಹಸಿವೇ ಇಲ್ಲ. ಸಮೃಧ್ಧಿಯೊಂದಿಗೆ ಮನ ವಿಹರಿಸುತ್ತಿತ್ತು. ಕೆದಕಿ ಕೆದಕಿ ಸ್ವಲ್ಪ ಅಂಜಲ್ ತಿಂದೆ. ಹಾಗೇ ಎದ್ದು ಬಿಟ್ಟೆ
ನಿಧಾನವಾಗಿ ಅರ್ಥವಾಗತೊಡಗಿತು. ಪ್ರೀತಿಯ ಸೆಳೆತಕ್ಕೆ ಸಿಲುಕಿರಬಹುದೆಂದು. ಅರೆ ಕೇವಲ ಒಂದು ಭೇಟಿಯಿಂದಲೇ ಪ್ರೀತಿ ಮೂಡುತ್ತದೆಯೇ. ಇಲ್ಲ ಇಲ್ಲ ಇದು ನನ್ನ ಕಲ್ಪನೆ ಇರಬೇಕು ಎಂದು ಯೋಚಿಸುತ್ತಾ ಫೇಸ್ಬುಕ್ ಓಪನ್ ಮಾಡಿದೆ. ಆಕೆ ಆಹ್ವಾನವನ್ನು ಸ್ವೀಕಾರ ಮಾಡಿದ್ದಳು. ನನ್ನ ಮೂಗಿನ ಔಷಧಿಯ ಸಹಾಯಕ್ಕಾಗಿ ಮತ್ತೆ ಕೃತಜ್ಞತೆ ಸಲ್ಲಿಸಿ ‘ನಿಮ್ಮ ಸಹಕಾರಕ್ಕಾಗಿ ನನ್ನ ತುಂಬು ಹೃದಯದ ಧನ್ಯವಾದಗಳು' ಎಂದು ಮೆಸೇಜ್ ಬೇರೆ ಇತ್ತು. ಸ್ವರ್ಗಕ್ಕೆ ಮೂರೇ ಗೇಣಿದೆ ಎಂದು ಭಾವಿಸಿದೆ. ಅದಕ್ಕೆ ನನ್ನದೇ ಭಾಷೆಯಲ್ಲಿ ಉತ್ತರಿಸಿ ವಾಟ್ಸಾಪ್ ಓಪನ್ ಮಾಡಿದೆ. ಅವಳೂ ಸುಂದರ ಸಂದೇಶದ ಶುಭೋದಯದ ಸಂದೇಶ ಕಳಿಸಿದ್ದಳು.
" ನಾನು ಒಬ್ಬಳೇ ನಡೆಯುತ್ತಿರುವಾಗ ದಾರಿ ಬೇಗ ಕೊನೆಯಾಗಲಿ ಎನಿಸುತ್ತಿತ್ತು ಈಗ ನೀನು ಜೊತೆಯಾಗಿರುವಾಗ ದಾರಿ ಎಂದೆಂದಿಗೂ ಮುಗಿಯದಿರಲಿ ಎನಿಸುತ್ತಿದೆ. " ವಾ ವಾ ಎಂತ ಅತ್ಯಮೋಘ ಸಂದೇಶ. ಪ್ರೀತಿ ಪ್ರೇಮ ಮಾನವೀಯ ಸಂಬಂಧದ ತುತ್ತ ತುದಿ...
ಸಮಯ 4 ಗಂಟೆಯಾಯಿತು. ನನ್ನ ಟೀ ಟೇಬಲ್ ಮೇಲೆ ಕ್ಯೂಬನ್ ಕಾಫಿ ಮತ್ತು ಪಾಕಿಸ್ತಾನದ ಕರಾಚಿ ಬೇಕರಿಯ ರುಚಿಯಾದ ಸಿಹಿಯಾದ ಡ್ರೈಫ್ರುಟ್ಸ್ ಬಿಸ್ಕಿಟ್ ಇತ್ತು. ಆದರೆ ಸಮೃಧ್ಧಿಯ ನೆನಪಿನ ಸಿಹಿಯ ಮುಂದೆ ಅದು ರುಚಿಸಲಿಲ್ಲ. ಸ್ವಲ್ಪ ಮಾತ್ರ ಕಾಫಿ ಕುಡಿದೆ. ಆಫೀಸಿನಲ್ಲಿ ಇರಲಾಗಲಿಲ್ಲ. ನೇರ ಮನೆಗೆ ಬಂದೆ. ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಸಂಜೆ ಎಂದಿನಂತೆ ಯೋಗ ಮತ್ತು ಧ್ಯಾನ ಕ್ಲಾಸ್ ಗೆ ಹೊರಟೆ.
ಧ್ಯಾನದ ಸಮಯದಲ್ಲಿ ಉಸಿರಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದೆ. ಆದರೆ ಆ ಉಸಿರಿನಲ್ಲಿ ಸಮೃಧ್ಧಿಯೇ ಆಮ್ಲಜನಕವಾಗಿದ್ದಳು. ಅದರ ಪ್ರಮಾಣ ಎಷ್ಟಿತ್ತೆಂದರೆ ಯೋಗ ಟೀಚರ್ ಒಂದೆರಡು ಬಾರಿ ಭುಜ ಮುಟ್ಟಿ ಎಚ್ವರಿಸಬೇಕಾಯಿತು. ಹೇಗೋ ಅದನ್ನು ಒಂದು ಗಂಟೆ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಬೇಗ ಮಲಗೋಣ ಎಂದು ಡೈನಿಂಗ್ ಹಾಲ್ ಗೆ ಹೋದೆ. ಚೀನೀ ಶೈಲಿಯ ಊಟ ಟೇಬಲ್ ಅಲಂಕರಿಸಿತ್ತು ವೆಜಿಟೇಬಲ್ ಸೂಪ್, ಬೇಯಿಸಿದ ಮೊಟ್ಟೆ, ನೂಡಲ್ಸ್ ಮತ್ತು ಹಸಿರು ಚಹಾ ಇತ್ತು.
ಎಲ್ಲಿಯ ಹಸಿವು ಎಲ್ಲಿಯ ಊಟ. ಬೆಳಗಿನಿಂದ ವಿಶ್ವದ ಬೇರೆ ಬೇರೆ ಪ್ರದೇಶದ ಊಟ ತಿಂಡಿ ಕಾಫಿ ಟೀ ಇದ್ದರೂ ಮನಸ್ಸು ಮಾತ್ರ ಭಾರತೀಯವಾಗೇ ಇತ್ತು. ಕೇವಲ ಗ್ರೀನ್ ಟೀ ಕುಡಿದು ಹಾಸಿಗೆಯ ಮೇಲೆ ಹೊರಳಿದೆ. ನಿದ್ದೆ ಹತ್ತಲಿಲ್ಲ. ಟಿವಿ ಆನ್ ಮಾಡಿದೆ. ಯಾವುದೋ ಚಾನಲ್ ನಲ್ಲಿ ಶಾರುಕ್ ಖಾನ್ ಮತ್ತು ಕಾಜೋಲ್ ಅಭಿನಯದ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ ಪ್ರಸಾರವಾಗುತ್ತಿತ್ತು. ಅದನ್ನು ಬಹಳಷ್ಟು ಬಾರಿ ನೋಡಿದ್ದರೂ ಇಂದು ಏನೋ ಹೊಸ ಹೊಸ ಅರ್ಥ ಮೂಡಿಸುತ್ತಿತ್ತು. ಮನಸ್ಸು ಹಗುರಾಗುತ್ತಿತ್ತು. ಕಣ್ಣು ಮಬ್ಬಾಗಿತ್ತಿತ್ತು. ಆಗ ವಾಟ್ಸಾಪ್ ಬಿಪ್ ಮಾಡಿತು.
“ಹಾಯ್ ಸ್ವೀಟ್ ಹಾರ್ಟ್, ಗುಡ್ ನೈಟ್" ಸಮೃಧ್ಧಿಯ ಮೆಸೇಜ್....
ಪುಟ್ಟ ಮಗುವಿನಿಂದ ವೃದ್ಧರವರೆಗೂ ಎರಡು ಭಿನ್ನ ಲಿಂಗಗಳ ಪ್ರೀತಿಯ ಆಕರ್ಷಣೆ ಸೃಷ್ಟಿಯ ಜೀವನೋತ್ಸಾಹದ ಕುರುಹಾಗಿ ಉಳಿದಿದೆ.
- ಜ್ಞಾನ ಭಿಕ್ಷಾ ಪಾದಯಾತ್ರೆಯ 224 ನೆಯ ದಿನ ದಾವಣಗೆರೆ ಜಿಲ್ಲೆಯ ಕೊಮಾರನಹಳ್ಳಿ ಗ್ರಾಮದಿಂದ ಸುಮಾರು 8 ಕಿಲೋಮೀಟರ್ ದೂರದ ಮಲೇಶಹಳ್ಳಿ ತಲುಪಿ ಅಲ್ಲಿ ವಾಸ್ತವ್ಯ ಹೂಡಿತು..
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ