ಒಂದು ಬಂಡೆಯ ಕಥೆ
ಎಲ್ಲೆಡೆಯೂ ಹೊಂಬಣ್ಣದ ಬೆಳಕು. ಸೂರ್ಯನು ತನ್ನ ದಿನನಿತ್ಯದ ಕರ್ತವ್ಯ ಮುಗಿಸಿ ಮನೆಗೆ ತೆರಳಲು ಹವಣಿಸುತ್ತಿದ್ದ. ಒಂದೆಡೆ ಎಲ್ಲೆಡೆಯೂ ಕಾಣುವ ಸಮುದ್ರದ ನೀರಿನ ಸೆಳೆತ. ಮತ್ತೊಂದೆಡೆ ಮುಂಜಾನೆಯಿಂದ ಸೂರ್ಯನ ಶಾಖಕ್ಕೆ ನಗರ ಬಿಸಿಯಾದ ನನ್ನ ದೇಹ ತಂಪು ಗಾಳಿಗೆ ಶರಣಾಗಿತ್ತು.
ನಾನೊಂದು ಬಂಡೆ. ನನ್ನೂರು ಮಲ್ಪೆ. ಮಲ್ಪೆಯ ವಿಶಾಲವಾದ ಸಮುದ್ರದ ತೀರದಲ್ಲಿ ಅನೇಕ ಶತಮಾನಗಳಿಂದ ಈ ದೈತ್ಯ ದೇಹದಿಂದ ಆವೃತವಾದ ನಾನು ಬದುಕಿದ್ದೇನೆ. ನಾನೊಂದು ಕಲ್ಲುಬಂಡೆ. ನನ್ನಲ್ಲಿ ಯಾವುದೇ ಭಾವನೆಗಳಿಲ್ಲ ಎಂಬುದು ಎಲ್ಲರ ವಿಚಾರ. ಆದರೆ ನನಗೂ ನನ್ನ ದೇಹದ ಭಾವನೆಗಳಿವೆ. ಪ್ರತಿನಿತ್ಯ ನನ್ನ ಮೇಲೆ ಹಲವಾರು ಜನರು, ಪುಟಾಣಿಗಳು, ದಂಪತಿಗಳು, ಪ್ರೇಮಿಗಳು ಅಡ್ಡಾಡುತ್ತಾರೆ. ಸೆಲ್ಫೀ ತೆಗೆಯುತ್ತಾರೆ, ಇವರನ್ನು ನೋಡುತ್ತಾ ನನ್ನ ಮೇಲೆ ಸಮುದ್ರ ಮಾಡುವ ದಬ್ಬಾಳಿಕೆ, ಸೂರ್ಯನ ಬಿಸಿಲು, ಎಲ್ಲವನ್ನು ಮರೆತು ನಾನು ಅವರ ಸಂತೋಷದಲ್ಲಿ ಭಾಗಿಯಾಗುತ್ತಿದ್ದೆ.
ಹೀಗೆ ಒಂದು ದಿನ ಒಂದು ಜೋಡಿ ಪ್ರೇಮಿಗಳು ನನ್ನಲ್ಲಿಗೆ ಬರುತ್ತಾರೆ. ಅನುಪಮ ಜೋಡಿಯಾಗಿರುವ ಇವರನ್ನು ಕಂಡು ಒಂದು ಕ್ಷಣ ಮೈಮರೆತೆ. ಅವರು ನನ್ನ ಮೇಲೆ ಕುಳಿತು ಅವರ ಭಾವನೆಗಳನ್ನು ವ್ಯಕ್ತ ಪಡಿಸಿ ಜೋಡಿ ಹಕ್ಕಿಗಳಂತೆ ವಿಹರಿಸುವುದನ್ನು ಕಂಡು ಈ ಕ್ಷಣ ಅವರ ಜೀವನದಲ್ಲಿ ಶಾಶ್ವತವಾಗಿರಲೆಂದು ಹಾರೈಸಿದೆ. ಹೀಗೆ ಹೋದ ಈ ಜೋಡಿಯು ಅನೇಕ ದಿನಗಳವರೆಗೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ನಾನು ಮತ್ತೊಮ್ಮೆ ನೋಡಲು ನನ್ನ ಮನಸ್ಸು ಹಾತೊರೆಯುತ್ತಿತ್ತು. ಅಂತೂ ಒಂದು ವಾರದ ನಂತರ ಬಂದ ಜೋಡಿ ನೋಡಿ ಅತೀವ ಆನಂದವಾಯಿತು. ಸತತವಾಗಿ ನಾಲ್ಕು ವರ್ಷಗಳಲ್ಲಿ ವಾರ ವಾರ ತಪ್ಪದೆ ಬರುವ ಪ್ರೇಮಿಗಳು ಒಮ್ಮೆಯೂ ಮುನಿಸಿಕೊಂಡದಾಗಲಿ, ಜಗಳವಾಡಿದ್ದಾಗಲಿ ನಾನು ನೋಡಿರಲಿಲ್ಲ. ಅವರನ್ನು ನೋಡಿ ನಾನು " ಈ ಲೋಕದಲ್ಲಿ ಹೀಗೆ ಎಂದರೇನು ಎಷ್ಟು ಚೆಂದ" ಎಂಬ ಕಲ್ಪನೆಯಲ್ಲಿ ತೇಲುತ್ತಿದ್ದೆ. ಎಲ್ಲಾ ಕಾಲವೂ ವಸಂತವಾಗಿರುವುದಿಲ್ಲ. ಒಮ್ಮೆ ಸೂರ್ಯಾಸ್ತದ ಸಮಯದಲ್ಲಿ ಬಂದ ಈ ಜೋಡಿಯು ತುಂಬಾ ದುಗುಡದಿಂದ ಇದ್ದರು.
ಎಂದಿನಂತೆ ನನ್ನ ದೇಹದ ಮೇಲೆ ಕುಳಿತ ಈ ಜೋಡಿಯು ಮಾತನಾಡುತ್ತಾರೆ, ಅಳುತ್ತಾರೆ, ಈ ಲೋಕವನ್ನು ಶಪಿಸುತ್ತಾರೆ. ಇದರಿಂದ ಈ ಜೋಡಿಯು ಅನ್ಯಧರ್ಮೀಯರು ಎಂದೂ, ಇವರ ಪ್ರೇಮಕ್ಕೆ ಮನೆ. ಸಮಾಜ ಒಪ್ಪುವುದಿಲ್ಲವೆಂದೂ ತಿಳಿಯಿತು.
ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ಇವರ ಮುಖದಲ್ಲಿದ್ದ ನೋವು ಕಂಡು ಒಂದು ಕ್ಷಣ ನನ್ನ ಎದೆಗೆ ಇರಿದಂತಾಗಿತ್ತು. ಕಾಣದ ದೇವರಲ್ಲಿ ಇವರ ಪ್ರೇಮ ಫಲಪ್ರದವಾಗಲು ಪ್ರಾರ್ಥಿಸಿದೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ. ವಿಧಿ ಇವರನ್ನು ಕ್ರೂರವಾಗಿ ಶಿಕ್ಷಿಸಿತು. ಪರಿಹಾರ ಹುಡುಕೋಣ ಎಂದು ತೆರಳಿದ ಜೋಡಿ ಮಾರನೆಯ ದಿನ ಬೆಳಗಿನ ಜಾವವೇ ನನ್ನಲ್ಲಿಗೆ ಬಂದರು. ಇದೇನು ಈ ಸಮಯದಲ್ಲಿ? ಎಂದು ಯೋಚಿಸಿ ಅವರ ಮುಖ ನೋಡಿದೆ. ಅವರ ಮುಖದಲ್ಲಿ ಯಾವುದೋ ನಿರ್ಧಾರದ ಕುರುಹು ಇತ್ತು.
ಬೆಳಗಿನಿಂದ ಸಂಜೆಯವರೆಗೂ ಸಮಯ ಕಳೆದ ಈ ಜೋಡಿಯನ್ನು ಕಂಡು ಪ್ರೇಮದ ಫಲವಾಗಿದೆ ಎಂದೆನಿಸಿದೆ. ಆದರೆ ಆ ಕ್ಷಣ... ಅಬ್ಬಾ!... ಸೂರ್ಯನು ಮುಳುಗುವ ಹೊತ್ತಿಗೆ ಜೋಡಿಯು ಕೈ ಕೈ ಹಿಡಿದು ನನ್ನ ಮೇಲೆ ಮಂಡಿಯೂರಿ ಅಳಲಾರಂಭಿಸುತ್ತಾರೆ. ಅರೆ! ನನಗಾಶ್ಚರ್ಯ ಬೆಳಗಿನ ಸಂತಸದಿಂದಿದ್ದ ಜೋಡಿಗೆ ಈಗೇನಾಯ್ತು? ಎಂದು ನನ್ನ ಯೋಚನೆ.
ದೀಪವು ಆರುವ ಮುಂಚೆ ಒಮ್ಮೆ ಪ್ರಕಾಶವಾಗಿ ಉರಿಯವುದಂತೆ. ಇವರು ಕೊನೆಯೆಂಬಂತೆ ನೀರಿನಲ್ಲಿ ಆಟವಾಡಿ ಈಗ ಜೊತೆಯಲ್ಲೆ ಸಾಯುವ ನಿರ್ಧಾರ ಮಾಡಿದ್ದಾರೆ! ನೀರಿಗೆ ಹತ್ತಿರ ಹತ್ತಿರ ಬರುವ ಜೋಡಿಯನ್ನು " ಪ್ರೇಮಿಗಳ ಆತ್ಮಹತ್ಯೆ ಮಾಡಬೇಡಿ" ಎಂದು ಕೂಗಿ ಹೇಳುವ ಯತ್ನ ಮಾಡಿದೆ. ಆದರೆ ಸಮುದ್ರದ ಅಲೆಗಳ ಅಬ್ಬರದ ಮುಂದೆ ನನ್ನ ಧ್ವನಿ ಕರಗಿತು. ಕೈಹಿಡಿದು ನಿಲ್ಲಿಸೋಣವೆಂದರೇ.... ದುರದೃಷ್ಟ ನನಗೆ ಕೈಗಳು ಇಲ್ಲ. ಅಯ್ಯೋ ಅನೇಕ ವರ್ಷಗಳ ಕಾಲ ನೋಡಿದ ಈ ಜೋಡಿಯು ನೀರಿಗೆ ಧುಮುಕಿ ಬಿಟ್ಟರು. ನೀರಿನ ಅಲೆಗಳ ನಡುವೆ ಮುಳುಗಿ ತೇಲಿ ಹೋದ ಇವರು ನನ್ನ ಕಣ್ಣೆದುರೇ ಮರೆಯಾಗಿ ಕಾಣದ ಊರಿಗೆ ಶಾಶ್ವತವಾಗಿ ಹೋದರು. ಈ ದೃಶ್ಯ ನೋಡಲಾಗದೆ ಕಣ್ಣನ್ನು ಮುಚ್ಚೋಣವೆಂದರೆ ನಾನು ಕೇವಲ ಒಂದು ಕಲ್ಲು ಬಂಡೆ.
ನನ್ನ ಮನಸ್ಸು ರೋದಿಸುತ್ತಿದೆ. ಜಾತಿಯ ಬಲೆಯಲ್ಲಿ ಸಿಲುಕಿದ ಈ ಜೋಡಿ ಒದ್ದಾಡಿ ಕೊನೆಗೂ ಕಣ್ಮರೆಯಾದರು. ಅವರು ಮುಂದಿನ ಜನ್ಮದಲ್ಲಾದರೂ ಜೊತೆ ಆಗಲೆಂದು ನನ್ನ ಹಾರೈಕೆ. ಅವರ ನೆನಪು ನನ್ನ ಹೃದಯದಲ್ಲಿ ಶಾಶ್ವತವಾಗಿದೆ. ನನ್ನಂತ ಕಲ್ಲು ಬಂಡೆಯ ಹೃದಯ ಕರಗಿದೆಯಾದರೂ ಈ ಸಮಾಜವು ಏಕೆ ಬಂಡೆಯಂತೆ ನಿಂತಿದೆ? ಈ ವಿಚಾರವಿನ್ನೂ ನನಗೆ ಅರ್ಥವಾಗುತ್ತಿಲ್ಲ...
-ಮಮತಾ ಮಿರಾಂದಾ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ