ಒಂದು ಬದಲಾವಣೆ...

ಒಂದು ಬದಲಾವಣೆ ಗುರಿ ಉದ್ದೇಶ ಒಂದೇ ದಿನದಲ್ಲಿ ಆಗಿ ಹೋಗುವಂತಾದ್ದು ಅಲ್ಲ... ನೂರಾರು ಸಹಸ್ರ ವರ್ಷಗಳೇ ಬೇಕು. ಅಲ್ಲಿಯವರೆಗೂ ಬದಲಾವಣೆಗಾಗಿ ಹೊರಟವರು ಸಂತರಂತೆ ನಿಶ್ಚಿಂತರಾಗಿರಬೇಕು. ನಿಶ್ಚಲ ಮನಸ್ಸು ನಮ್ಮದಾಗಿರಬೇಕು. ನಾವು ಹುಟ್ಟಿರುವುದು ಕೂಗಾಡಲಲ್ಲ, ಹಾರಾಡಲಲ್ಲ ಕೈಯಲ್ಲಿ ಲಾಠಿ ದೊಣ್ಣೆ ಲಾಂಗು ಮಚ್ಚು ಹಿಡಿದು ಆಕ್ರೋಶದ ಜೊತೆಗೆ ಹೋರಾಡಲೂ ಅಲ್ಲ, ಅರಚಾಡಲೂ ಅಲ್ಲ.
ನಮ್ಮ ಮಾತುಗಳಲ್ಲಿ ಯಾವತ್ತೂ ಸೌಜನ್ಯವಿರಲಿ. ಬೆಂಕಿಯುಗುಳುವುದು ಬೇಡ. ಆದರೆ ನಮ್ಮ ಕೃತಿಗಳಲ್ಲಿ , ಕವಿತೆಗಳಲ್ಲಿರಲಿ . ಜಗಳ ಮನುಷ್ಯರ ಜೊತೆಗೆ ಒಳ್ಳೆಯ ವಿಚಾರದಲ್ಲಿ ಮಾಡಿರಿ, ಗುದ್ದಾಡಿರಿ ಹೊಡೆದಾಡಿರಿ ಅದರಿಂದ ಜನಸಾಮಾನ್ಯರಿಗೆ ಉಪಕಾರ ಆಗುವಂತಿದ್ದರೆ ಮಾತ್ರ. ಸ್ನೇಹತ್ವದೊಂದಿಗೆ ಗೆಲುವು ಸಾಧಿಸೋಣ.
ಓದು ಬರೆಹ ಮನುಷ್ಯನ ಪಳಗಿಸುತ್ತದೆ. ಆದುದರಿಂದ ತಿಳಿದ ಜನ ತುಳಿತಕ್ಕೆ ಒಳಗಾದವರು ಅದು ಯಾವುದೇ ಜಾತಿ ಪಂಗಡದಲ್ಲಿರಲಿ ಅವರಿಗೆ ಧ್ವನಿಯಾಗಿರಿ ಆ ಮೂಲಕ ಸಮಾನತೆಗಾಗಿ ಹೋರಾಡಿರಿ. ಅವ್ಯವಸ್ಥೆಯ ವಿರುದ್ಧ ಸ್ವರ ಹೊರಡಿಸಿರಿ ಜನಸಾಮಾನ್ಯರ ಪರ ಹೋರಾಟ ಮಾಡಿರಿ ಚಿಂತನೆಯ ಪಾಠದೊಳಗೆ, ಸಾಮಾಜಿಕ ಸಮಾನತೆಯೊಂದಿಗೆ ಸಾಗಿರಿ. ಪ್ರಗತಿಪರ ಎನ್ನುವ ನಿಜವಾದ ಚಿಂತನೆಯ ಜನರಿಗೆ ತಲುಪಿಸಿರಿ.
ಇಂದು ಪ್ರತಿಯೊಂದು ಪಂಗಡದಲ್ಲೂ ನೋವಿನ ಕೆಂಡವನುಂಡ ಜನರಿದ್ದಾರೆ. ಅಂಥವರ ಹುಡುಕುವ ಕೆಲಸ ಸರಕಾರ ,ಸಂಘ ಸಂಘಟನೆಗಳು ಪ್ರಗತಿಪರರು ಚಿಂತಕರು ಮಾಡಬೇಕಾಗಿದೆ. ಆ ಮೂಲಕ ಅಂಥಹ ಜನಸಾಮಾನ್ಯರ ಧ್ವನಿಗಳಿಗೆ ದನಿಯಾಗಿ ,ಅವರ ನೋವು ದುಃಖ ದುಮ್ಮಾನಗಳಿಗೆ ನಾವು ವರವಾಗಬೇಕಾಗಿದೆ. ನಮಗೆ , ನಮ್ಮ ಕಣ್ಣಿಗೆ ಕಂಡಿದ್ದನ್ನು; ಹೇಳಿದ್ದನ್ನು ಬರೆಯಲು ಯಾರ ಅಪ್ಪಣೆಯೂ ಬೇಡ. ಯಾವ ಟೀಕೆಗೂ ಬರಹಗಾರರು , ಜಗ್ಗಬಾರದು ಅಂಜಬಾರದು. ಎಲ್ಲರ ಜೊತೆಗೆ ಸಾಗುವ ಮನಸ್ಥಿತಿಯನ್ನು ಬರಹಗಾರನಾದವನು ಬೆಳೆಸಿಕೊಳ್ಳಬೇಕು.
ಉಲ್ಲಾಸ, ಉತ್ಸಾಹದ ಅರಿವಿನೊಂದಿಗೆ ನಾವು ಸಾಗುತ್ತಾ ,ವಿರೋಧ ತುಳಿತಕ್ಕೆ ಒಳಗಾದವರ ಜೊತೆಗೆ ಇರೋಣ. ಸಮಾಜಿಕ ಪ್ರಜ್ಞೆಯೊಂದಿಗೆ ಕ್ರಾಂತಿಕಾರಿ ಸಂತನಾಗೋಣ. ಸಾವು ಇಂದು ಬರಬಹುದು, ಬಾರದೆಯೂ ಇರಬಹುದು .ಅದು ಪ್ರಶ್ನಾತೀತ ಸಾವಿಗೆ ಹೆದರಿ ಕುಳಿತುಕೊಳ್ಳದೆ ಆತ್ಮೀಯತೆ, ಹಾಸ್ಯಪ್ರಜ್ಞೆ ಇವೆರಡರೊಂದಿಗೆ ಇದ್ದು ದಮನಿತರ ನೋವಿಗೆ ಹಾಡಾಗೋಣ. ಯಾಕೆಂದರೆ ಇಲ್ಲಿರುವುದೀಗ ನೋವು ದುಃಖ ದುಮ್ಮಾನ.
ಕೊನೆಯದಾಗಿ, ಪ್ರತಿಯೊಂದು ವಿರೋಧಕ್ಕೂ ಒಂದು ಸೈದ್ಧಾಂತಿಕ ನೆಲೆಯಿದೆ ಎನ್ನುವಂತೆ ಅದರ ಮೂಲಕ ನವ ಭಾರತದ ನಿರ್ಮಾಣ ಮಾಡೋಣ ಆ ಮೂಲಕ ಜನಸಾಮಾನ್ಯರ ಬದುಕಲ್ಲಿ ಬದಲಾವಣೆಯ ಬದುಕಿನ ಜ್ಯೋತಿಯನ್ನು ಹಚ್ಚೋಣ.
-ಹಾ ಮ ಸತೀಶ, ಬೆಂಗಳೂರು
ಚಿತ್ರ : ಇಂಟರ್ನೆಟ್ ತಾಣ