ಒಂದು ಬಹಿರಂಗ ಪತ್ರ.
ಮೈ ಡಿಯರ್ ಕಾರ್ಪೋರೇಟರ್ ಅಂಕಲ್,
ತುಂಬಾ ವಿಷಾದದಿಂದ ಈ ಪತ್ರ ಬರೆಯುತ್ತಿದ್ದೇನೆ ಅಂಕಲ್ . ಈ ಐಪಿಎಲ್ ಕ್ರಿಕೆಟ್ ವಾಲಾಗಳು ನಿಮಗೆಲ್ಲ ಹೀಗೆ ಮಾಡಬಾರದಿತ್ತು . ನೀವೆಲ್ಲ ಕೇಳಿದ್ದು ಯಃಕಶ್ಚಿತ್ ವಿಐಪಿ ಪಾಸ್. ಅದನ್ನು ನಿರಾಕರಿಸುವ ದಾರ್ಷ್ಟ್ಯವನ್ನು ಅವರು ತೋರಿಸಿದ್ದಾರೆ. ಹೀಗಾಗಬಾರದಿತ್ತು.
ಅಂಕಲ್ , ಅವರನ್ನು ಕ್ಷಮಿಸಿ. ಅವರೇನು ಮಾಡುತ್ತಿದ್ದಾರೆಂದು ಅವರಿಗೇ ಗೊತ್ತಿಲ್ಲ. ನಮ್ಮ ಪುರಪಿತೃಗಳನ್ನು ಹೀಗೆ ಅವರು ನಡೆಸಿಕೊಳ್ಳುವುದು ಸಲ್ಲ ಎಂದೇ ನನ್ನ ಭಾವನೆ. ಅವರು ನಿಮಗೆ ಆರ್ಡಿನರಿ ಪಾಸ್ ಗಳನ್ನು ಕೊಟ್ಟಿರುವುದು ಇನ್ನಷ್ಟು ಖೇದಕರ ಸಂಗತಿ. ಅದು ಉಪ್ಪಿಗೇ ಗಾಯ ಸವರುವಂತಹ ಕೃತ್ಯ. ನೀವೇ ನಿಮ್ಮ ಆಸ್ತಿಯನ್ನು (ಭಾಗಶಃ) ಘೋಷಿಸಿರುವಂತೆ ನೀವೆಲ್ಲ ಕೋಟ್ಯಧಿಪತಿಗಳು ಬೆಂಕಯ್ಯು, ನಾಣಯ್ಯ, ಸೀನಯ್ಯ ಮುಂತಾದವರ ಜತೆ ಕೂರಿಸುವುದು ಎಂದರೇನು?
ಈ ಕೋಟ್ಯಧಿಪತಿಗಳು ತಮ್ಮ ಟಿಕೆಟ್ ತಾವೇ ಕೊಳ್ಳಬಾರದೇಕೆ? ಎಂದು ನನ್ನ ಗೆಳೆಯನೊಬ್ಬ ಒಂದು ಮೂರ್ಖ ಪ್ರಶ್ನೆ ಕೇಳಿದ. ನಮ್ಮೆಲ್ಲರ ಜನಪ್ರತಿ ನಿಧಿಗಳಿಗೆ ಅತ್ಯಂತ ಗೌರವಾದರಗಳನ್ನು ತೋರಿಸಿ ಅವರು ಏನೇ ಕೇಳಿದ ತಕ್ಷಣ ಕೊಡುವುದು ಶಿಷ್ಟಾಚಾರ ಎಂದು ಅವನ ಬಾಯಿ ಮುಚ್ಚಿಸಿದೆ. ಅವನು ಬಾಯಿ ಇನ್ನೂ ತೆರೆದೇ ಇಲ್ಲ. ಟಿಕೆಟ್ ಗಾಗಿ ಇನ್ನೂ ಬಿರುಬಿಸಿಲಿನಲ್ಲಿ ಕ್ಯೂನಲ್ಲಿ ನಿಂತಿದ್ದಾನೆ. ನಿಲ್ಲಿ ಬಿಡಿ. ಮುಂದೊಂದು ದಿನ ಈ ನಗರದ ಪೂಜ್ಯ ಮಹಾಪೌರರಾಗುವಂತಹ ಗೌರವಾನ್ವಿತ ಕಾರ್ಪೋರೇಟರ್ ಗಳ ವಿರುದ್ಧ ಹೀಗೆ ಮಾತನಾಡಿದ್ದಕ್ಕೆ ಅದು ತಕ್ಕ ಶಿಕ್ಷೆ ಎಂದೇ ನಮ್ಮ ಭಾವನೆ. ಸರಿ ಅಲ್ಲವೇ ಅಂಕಲ್ ?
ಐಪಿಎಲ್ ಪಂದ್ಯಗಳನ್ನು ನೋಡುವ ಎಲ್ಲ ಅರ್ಹತೆಗಳು ನಿಮಗಿವೆ. ಏಕೆಂದರೆ ಅವುಗಳಿಗಿಂತ ಹೆಚ್ಚು ಮನರಂಜನೆ ಕೊಡುವಂತಹ ಕ್ರೀಡೆ ಇನ್ನೊಂದಿಲ್ಲ. ನಿಮಗೋ ಅದೆಷ್ಟು ಕೆಲಸಗಳಿರುತ್ತವೆ. ಕಂಟ್ರಾಕ್ಟರ್ ಮತ್ತು ಅಧಿಕಾರಿಗಳ ಜತೆ ಟೆಂಡರ್ ಗಳ ಬಗ್ಗೆ ಚರ್ಚಿಸಿ ಪರ್ಸೆಂಟ್ ನಿರ್ಧರಿಸಿರುವ ಹೊತ್ತಿಗೆ ನೀವು ಹೈರಾಣಾಗಿರುತ್ತೀರಿ. ಆ ಸಮಯದಲ್ಲಿ ಚಿಯರ್ ಗರ್ಲ್ ಯುುಕ್ತ ಐಪಿಎಲ್ ಪಂದ್ಯ ನೋಡುತ್ತಾ ನೀವು ರಿಲಾಕ್ಸ್ ಮಾಡಿಕೊಳ್ಳಬಹುದು. ಅದಕ್ಕೆ ವಿಐಪಿ ಪಾಸ್ ಅತ್ಯಗತ್ಯ. ಅಂದಹಾಗೆ ಈ ಮೀಟಿಂಗ್ ಗಳಿಗೆ ಹೋಗುವಾಗ ಹುಷಾರಾಗಿ ಡ್ರೈವ್ ಮಾಡಿ. ರಸ್ತೆಯಲ್ಲಿ ಅನೇಕ ಗುಂಡಿಗಳಿರುತ್ತವೆ. ಅವುಗಳನ್ನು ನೀವು ನೋಡಿಲ್ಲದೆ ಇರಬಹುದು.
ಪಾಸ್ ಸಿಕ್ಕಿದ್ದರೆ ನೀವು ಅದನ್ನು ನಿಮ್ಮ ಕ್ಷೇತ್ರದ ಮಂದಿಗೆ ಕೊಡಲು ಬಯಸಿದ್ದೀರಿ ಎಂದು ಕೇಳಿದೆ . ಆದರೆ ಅಂಕಲ್, ನಿಮಗೆ ಸಿಗುವ ಅಥವಾ ಸಿಗಬಹುದಾಗಿದ್ದ ಎರಡು ಪಪಾಸ್ ಗಳನ್ನು ಅಷ್ಟು ಮಂದಿಯಲ್ಲಿ ಯಾರಿಗೆ ಹಂಚುತ್ತೀರಿ? ಹೇಗೆ? ನೀವೇ ಇಬ್ಬರನ್ನು ಆಯ್ಕೆಮಾಡಿದರೆ ನಿಮಗೆ ಚುನಾವಣಾ ಟಿಕೆಟ್ ತಪ್ಪಿದರೆ ಎಷ್ಟು ನಿರಾಶೆ ನಿಮ್ಮ ಕ್ಷೇತ್ರದ ಐಪಿಎಲ್ ಕ್ರಿಕೆಟ್ ವಂಚಿತರಿಗೆ ಆಗುತ್ತದೆ . ಆದುದರಿಂದ ನನ್ನ ಸಲಹೆ ಏನೆಂದರೆ ನೀವು ಇಂತಹ ಪಾಸ್ ಗಳನ್ನು ಪಾರದರ್ಶಕವಾಗಿ ಹರಾಜು ಹಾಕಿ, ಬಂದ ದುಡ್ಡನ್ನು ಏನು ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿ , ಹಣಕಾಸು ವಿಷಯಗಳಲ್ಲಿ ನಾನು ಮೂಗು ತೂರಿಸಿವುದು ಸರಿಯಲ್ಲ.
ಅಂಕಲ್ , ಅಂದಹಾಗೆ ನಾನೂ ಒಬ್ಬ ಕಾರ್ಪೋರೇಟರ್ ಆಗಲು ಬಯಸಿದ್ದೆ. ಆದರೆ ಐಪಿಎಲ್ ಪಂದ್ಯಗಳಿಗೆ ವಿಐಪಿ ಪಾಸ್ ಸಿಗಲಾರದು ಎಂದಿರುವುದರಿಂದ ನನ್ನ ಆ ಆಸೆ ಕಮರಿದೆ. ಅದರ ಬದಲು ಈಗಿನಿಂದಲೇ ಹಣ ಕೂಡಿಡುತ್ತಾ ಬಂದು ಮುಂದಿನ ಐಪಿಎಲ್ ಗೆ ನಾನೇ ಟಿಕೆಟ್ ಕೊಳ್ಳಲು ನಿರ್ಧರಿಸಿದ್ದೇನೆ. ವಿಐಪಿ ಪಾಸ್ ಇಲ್ಲದ ಕಾರ್ಪೋರೇಟರ್ ಗಳನ್ನು ಜನ ಸ್ಟೇಡಿಯಂನಲ್ಲಿ ಶೇಖರವಾದ ಕಸದಂತೆ ಕಾಣಬಹುದು. ಅಲ್ಲವೇ ಅಂಕಲ್?
ವಂದನೆಗಳೊಡನೆ,
ಚಿಂಕು
(ಚಿತ್ರ ಕೃಪೆ : ಗೂಗಲ್ )