ಒಂದು ಮರದ ಅಳಲು

ಒಂದು ಮರದ ಅಳಲು

ಬರಹ

ಒಂದು ಮರದ ಅಳಲು
ಒಂದಾನೊಂದು ಕಾಲದಲ್ಲಿ
ನನ್ನೊಡನಾಡಿದ ಗೆಳೆಯರೆ
ಇಂದೆಲ್ಲಿ ಮಾಯವಾದಿರಿ?
ನಾನೇಕೆ ಏಕಾಂಗಿಯಾದೆನಿಲ್ಲಿ?
ಎಲ್ಲೆಲ್ಲೂ ಹಸಿರಾಗಿ ಮೆರೆದಿದ್ದೆವಲ್ಲ
ನಮ್ಮಲ್ಲೆ ಮನೆಮಾಡಿ ಉಲಿದ ಪಕ್ಷಿಗಳೆ
ನೀವೆಲ್ಲಿ ಕಣ್ಮರೆಯಾದಿರೋ ಕಾಣೆನಲ್ಲ
ಅಯ್ಯೋ! ನಾನೇಕೆ ಏಕಾಂಗಿಯಾದೆನಿಲ್ಲಿ?
ಚಿಲಿಪಿಲಿ ಎನ್ನುತ ನಲಿದವು ಹಕ್ಕಿಗಳಂದು-ಆ
ಇನಿದನಿಯಲಿ ಮರುಳಾದೆವು ನಾವಂದು
ಮನದಲಿ ಮುದವಿತ್ತು ಅವುಗಳಿಗಾಸರೆ ನಾವೆಂದು
ಆದರಿಂದು…. ನಾನೇಕೆ ಏಕಾಂಗಿಯಾದೆನಿಲ್ಲಿ?
ಎಲೆ ಎಲೆಯು ಗಾಳಿಯೊಡನೆ ಸರಸವಾಡಿ
ಕಲಕಲ ನಗುತಲಿ ಕಳೆದ ಮಧುರ ದಿನಗಳೆಲ್ಲಿ?
ಬಟ್ಟ ಬಯಲಾಗಿ ಅಲ್ಲೊಂದು ಇಲ್ಲೊಂದು ಎಂಬಂತೆ
ನಿಟ್ಟುಸಿರಿಡುತ ನಾನೇಕೆ ಏಕಾಂಗಿಯಾದೆನಿಲ್ಲಿ?
ಮಳೆ ಬಂದರೇನು ಮಂದಮಾರುತವೇ ಬೀಸಿದರೇನು?
ನನ್ನವರೆನ್ನುವರಾರೂ ಇಲ್ಲದೇ ಕಂಬನಿ ಮಿಡಿಯುತ
ಕೊಂಬೆ ರೆಂಬೆಗಳೆಲ್ಲಾ ಶೋಕದಿ ಪಿಸುಗುಟ್ಟುತಿವೆ
ಓಹ್ ಮಾನವಾ! ನಾನೇಕೆ ಏಕಾಂಗಿಯಾದೆನಿಲ್ಲಿ?