ಒಂದು ಮಾವಿನ ಮರದ ಕತೆ

ಒಂದು ಮಾವಿನ ಮರದ ಕತೆ

     ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು

 ಶಾಂತಪ್ಪನವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾರ್ಖಾನೆಯೊಂದರ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಯಾಂತ್ರಿಕ ಕಾರ್ಯಭಾರದ ಒತ್ತಡದಿಂದ ಬೇಸರಗೊಂಡಿದ್ದವರು ಕಾರ್ಖಾನೆಗೆ ರಜ ಹಾಕಿ ಒಂದು ದಿನ ನೆಮ್ಮದಿಯಿಂದ ತಮ್ಮ ವೃದ್ಧ ತಂದೆ-ತಾಯಿಯವರ ಜೊತೆ ಕಾಲ ಕಳೆಯುವ ಸಲುವಾಗಿ ಸ್ವಂತ ಗ್ರಾಮಕ್ಕೆ ಒಬ್ಬರೇ ಕಾರನ್ನು ಚಾಲನೆ ಮಾಡಿಕೊಂಡು ಹೊರಟರು. ತಮ್ಮ ಗ್ರಾಮ ತಲುಪುವ ಮುನ್ನ ಸಿಕ್ಕಿದ ಪಟ್ಟಣದ ಮೂಲಕ ಹಾದುಹೋಗುವಾಗ ರಸ್ತೆಯಲ್ಲಿ ತಾವು  ಓದಿದ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಕಂಡು ಯಾಕೋ ಏನೋ ಒಂದು ಬಾರಿ ಒಳಗೆ ಹೋಗೋಣವೆನ್ನಿಸಿ ಕಾಂಪೌಂಡಿನ ಬದಿಯಲ್ಲಿ ಕಾರು ನಿಲ್ಲಿಸಿದರು. ತಾವು ಈ ಕಾಲೇಜಿನಲ್ಲಿ ಓದು ಮುಗಿಸಿ ಆಗಲೇ ಮೂವತ್ತು ವರ್ಷಗಳಾಗಿಹೋಯಿತಲ್ಲ ಎಂಬ ನೆನಪು ಮೂಡಿ ಕಾಲ ಎಷ್ಟೊಂದು ವೇಗವಾಗಿ ಸಾಗಿಬಿಡುತ್ತದಲ್ಲ ಎಂದು ಅಚ್ಚರಿಯಾಯಿತು. ಹಾಗೆಯೇ ಕಾರಿನಿಂದಿಳಿದು ಒಮ್ಮೆ ಕಾಲೇಜನ್ನು ಮೇಲಿನಿಂದ ಕೆಳಕ್ಕೆ ದಿಟ್ಟಿಸಿ ನೋಡಿದವರಿಗೆ ಸಂತೋಷವಾಯಿತು. ತಾವು ಓದುತ್ತಿದ್ದಾಗ ಆಗ ತಾನೇ ಪ್ರಾರಂಭವಾಗಿದ್ದ ಕಾಲೇಜಿನಲ್ಲಿ ನಾಲ್ಕೈದು ರೂಮುಗಳಿದ್ದವು. ಈಗ ಅದು  ಎರಡಂತಸ್ತಿನ ಕಟ್ಟಡವಾಗಿ ಸುತ್ತಲ ಸ್ಥಳವನ್ನೆಲ್ಲಾ ಆವರಿಸಿಕೊಂಡಿತ್ತು. ಗೇಟಿನ ಮುಂದೆ ಬಂದು ನಿಂತವರಿಗೆ ಕಾಲೇಜಿನ ಮುಂದಿದ್ದ ಕೈತೋಟವನ್ನು ಕಂಡು ಮನಸ್ಸಿಗೆ ಉಲ್ಲಾಸವಾಯಿತು. ನನ್ನಂತಹ ಎಷ್ಟೊಂದು ಮಂದಿಗೆ ಜೀವನದ ದಾರಿ ತೋರಿಸಿದ ಕರ್ಮಭೂಮಿಯಿದು ಎಂದು ಮನಸ್ಸಿನಲ್ಲಿಯೇ ವಂದಿಸಿ ಒಳಗೆ ಹೋಗುವಾಗ ನನ್ನನ್ನು ಯಾರಾದರೂ ಗುರುತು ಹಿಡಿಯುತ್ತಾರೋ ಇಲ್ಲವೋ ಎಂಬ ಸಂದೇಹ ಮೂಡಿ ನಾನೇ ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ ಎಂದು ಪರಿಚಯ ಮಾಡಿಕೊಂಡರಾಯಿತು ಎನಿಸಿ ಒಳಗೆ ತೆರಳಿದರು.

                                 *********

  ಅವನೊಬ್ಬ ಹಳ್ಳಿಯ ಹುಡುಗ. ಹೆಸರಿನಂತೆಯೇ ತುಂಬಾ ಶಾಂತ ಸ್ವಭಾವದವನು. ತಂದೆ-ತಾಯಿ ಕೂಲಿ-ನಾಲಿ ಮಾಡಿ ಕಷ್ಟಪಟ್ಟು ಮಗನನ್ನು ಓದಿಸುತ್ತಿದ್ದರು. ಅವನೇನೂ ಅತೀವ ಮೇಧಾವಿಯಾಗಿರಲಿಲ್ಲ. ಆದರೆ ಶ್ರಮಪಟ್ಟು ಓದುತ್ತಿದ್ದ. ತಮ್ಮ ಗ್ರಾಮದಲ್ಲಿಯೇ ಇದ್ದ ಪ್ರೌಢಶಾಲೆಯಲ್ಲಿ  ಎರಡನೇ ದರ್ಜೆಯಲ್ಲಿ ಎಸ್‍ಎಸ್‍ಎಲ್‍ಸಿ ಪಾಸು ಮಾಡಿದ. ಇಂಗ್ಲೀಷಿನಲ್ಲಿ ಕೇವಲ ಮೂವತ್ತೈದು ಅಂಕಗಳನ್ನು ಪಡೆದಿದ್ದ. ತಮ್ಮ ಗ್ರಾಮದಿಂದ ಏಳೆಂಟು ಕಿಲೋಮೀಟರ್ ದೂರದ ಪಟ್ಟಣದಲ್ಲಿ ಆಗ ತಾನೆ ಪ್ರಾರಂಭವಾಗಿದ್ದ ಪದವಿಪೂರ್ವ ಕಾಲೇಜಿಗೆ ಸೇರುವಾಗ ಇಂಗ್ಲೀಷಿನ ಭೀತಿ ಶುರುವಾಗಿ ವಿಜ್ಞಾನ ವಿಷಯವನ್ನು ಬಿಟ್ಟು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡ.

  ದಿನವೂ ಕಾಲೇಜಿಗೆ ಸೈಕಲ್ಲಿನಲ್ಲಿಯೇ ಬಂದು ಹೋಗುತ್ತಿದ್ದವನು ಮಧ್ಯಾಹ್ನದ ಹೊತ್ತು ತನ್ನ ತಾಯಿ ಅಲ್ಯೂಮಿನಿಯಮ್ ಡಬ್ಬಿಯಲ್ಲಿ ಹಾಕಿಕೊಡುತ್ತಿದ್ದ ರೊಟ್ಟಿಯನ್ನೋ ಮೊಸರನ್ನವನ್ನೋ ಕಾಲೇಜಿನ ಆವರಣದಲ್ಲಿ ಒಂದು ಕಡೆ ಕುಳಿತು ತಿನ್ನುತ್ತಿದ್ದ. ಹೊಸದಾಗಿ ಪ್ರಾರಂಭವಾಗಿದ್ದ ಕಾಲೇಜಿನಲ್ಲಿ ಐದಾರು ರೂಮುಗಳು ಮಾತ್ರವೇ ಇದ್ದವು. ಸುತ್ತಲೂ ಕಾಂಪೌಂಡಿನಿಂದ ಅವೃತವಾಗಿದ್ದರೂ ಯಾವುದೇ ಮರಗಿಡಗಳಿಲ್ಲದೇ ಕಾಲೇಜು ಬೋಳುಬೋಳಾಗಿ ಕಾಣಿಸುತ್ತಿತ್ತು. ಇದನ್ನು ಕಂಡ ಶಾಂತಪ್ಪನಿಗೆ ಮನದಲ್ಲಿ ಆಲೋಚನೆಯೊಂದು ಮೂಡಿ ತಮ್ಮ ಮನೆಯ ಹಿತ್ತಿಲಲ್ಲಿ ತಿಪ್ಪೆಗುಂಡಿಯ ಬಳಿ ಬೆಳೆದಿದ್ದ ಮಾವಿನ ಸಸಿಯ ನೆನಪಾಯಿತು. ಅದನ್ನು ತಂದು ಕಾಲೇಜಿನ ಆವರಣದಲ್ಲಿ ಎಲ್ಲಿಯಾದರೂ ನೆಡೋಣವೇ ಎನಿಸಿತು. ತಕ್ಷಣವೇ ಅದಕ್ಕೆ ಕಾಲೇಜಿನ ಪ್ರಾಂಶುಪಾಲರ ಅಥವಾ ಇನ್ಯಾರದ್ದೋ ಅನುಮತಿ ಪಡೆಯಬೇಕೇನೋ ಎನಿಸಿ ತುಸು ಅಳುಕು ಉಂಟಾಯಿತು. ಮೊದಲೇ ಸಂಕೋಚ ಮತ್ತು ಹಿಂಜರಿಕೆಯ ಸ್ವಭಾವದವನಾಗಿದ್ದ ಶಾಂತಪ್ಪನಿಗೆ ಯಾರ ಬಳಿಯಲ್ಲಾದರೂ ಮಾತನಾಡಬೇಕೆಂದರೆ ಮನಸ್ಸಿನಲ್ಲಿಯೇ ಹೆದರಿಕೆಯಾಗುತ್ತಿತ್ತು.

  ಆದರೂ ಒಂದು ದಿನ ಧೈರ್ಯ ಮಾಡಿ ಎಲ್ಲಾ ವಿದ್ಯಾರ್ಥಿಗಳ ಬಳಿ ಮುಕ್ತವಾಗಿ ಮಾತನಾಡಿಕೊಂಡು ಸ್ನೇಹಿತರಂತಿದ್ದ ಕನ್ನಡ ಉಪನ್ಯಾಸಕರಾದ ರಾಮಯ್ಯನವರ ಬಳಿ ತನ್ನ ಆಶಯವನ್ನು ವ್ಯಕ್ತಪಡಿಸಿದ. ರಾಮಯ್ಯನವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದುದಲ್ಲದೇ ಅವರೇ ನಿಂತು ಕಾಲೇಜಿನ ಮೂಲೆಯೊಂದರಲ್ಲಿ ಸ್ಥಳ ಗುರುತಿಸಿದರು.  ಶಾಂತಪ್ಪ ಆ ಸ್ಥಳದಲ್ಲಿ ತಾನೇ ನಿಂತು ಗುಂಡಿ ತೆಗೆದು ಜೋಪಾನವಾಗಿ ತಂದಿದ್ದ ಮಾವಿನ ಸಸಿಯನ್ನು ನೆಟ್ಟು ಅದನ್ನು ಆರೈಕೆ ಮಾಡÀತೊಡಗಿದ. ಮಳೆಗಾಲವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ತಾನು ಮನೆಗೆ ಹೋಗುವ ಮುನ್ನ ದಿನವೂ ಕಾಲೇಜಿನಲ್ಲಿದ್ದ ಕೈಪಂಪಿನ ನಲ್ಲಿಯಿಂದ ಬಿಂದಿಗೆಯಲ್ಲಿ ನೀರು ಹಿಡಿದು ತಂದು ಹಾಕುತ್ತಿದ್ದ. ಕಾಲೇಜಿನಲ್ಲಿದ್ದ ಇವನ ಸಹಪಾಠಿಗಳಲ್ಲಿ ಕೆಲವರು ಇದನ್ನು ಕಂಡು ‘ಇವನೊಬ್ಬ ತಿಕ್ಕಲು ನನ್ ಮಗ ಕಣ್ರೋ.. ಕಾಲೇಜಲ್ಲಿ ತೋಟ ಮಾಡಕ್ಕೆ ಹೊಂಟವ್ನೆ.. ಓದಿ ಪಾಸಾಗದೇ ಇದ್ರೆ ಮುಂದೇನೂ  ಇದೇ ಕೆಲ್ಸ ಮಾಡ್ಕಂಡಿರ್ಬೇಕಾಯ್ತದೆ’ ಎಂದು ನಕ್ಕು ಹೀಯಾಳಿಸುತ್ತಿದ್ದರು. ಇವನು ಆಗಾಗ ತಮ್ಮ ಮನೆಯ ಹಿಂದಿದ್ದ ತಿಪ್ಪೆಯಿಂದ ಕೈಚೀಲದಲ್ಲಿ ಗೊಬ್ಬರ ತಂದು ಯಾರಿಗೂ ಕಾಣದಂತೆ ಎಚ್ಚರ ವಹಿಸಿ ಮಾವಿನ ಸಸಿಯ ಬುಡದಲ್ಲಿ ಸುರಿಯುತ್ತಿದ್ದ. ಯಾರೋ ಹುಡುಗರು ಇದನ್ನು ಪತ್ತೆ ಹಚ್ಚಿ ಇವನಿಗೆ ಗೊಬ್ಬರದ ಶಾಂತಪ್ಪ ಎಂದು ಅಡ್ಡ ಹೆಸರಿಟ್ಟರು. ಕಾಲೇಜಿನಲ್ಲಿ ಇವನಿಗೆ ಅದೇ ಹೆಸರು ಪ್ರಚಲಿತವಾಯಿತು. ಶಾಂತಪ್ಪ ಇಂತಹ ಅಣಕ ಕುಹಕಗಳಿಗೆ ಕಿವಿಗೊಡಲಿಲ್ಲ. ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಮಾವಿನ ಸಸಿಯನ್ನು ಆರೈಕೆ ಮಾಡುತ್ತಾ ಕಷ್ಟಪಟ್ಟು ಓದಿ ಪದವಿಪೂರ್ವ ಶಿಕ್ಷಣವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ತನಗಿಂತಲೂ ಎತ್ತರ ಬೆಳೆದಿದ್ದ ಮಾವಿನ ಗಿಡವನ್ನು ನೋಡಿ ಕಣ್ಣುತುಂಬಿಕೊಂಡು ಬಿಕಾಂ ಪದವಿಗಾಗಿ ಬೇರೊಂದು ಪಟ್ಟಣದಲ್ಲಿ ಕಾಲೇಜು ಸೇರಿದ. ಕ್ರಮೇಣ ಮಾವಿನ ಗಿಡ ಅವನ ನೆನಪಿನಿಂದ ಮರೆಯಾಯಿತು.

  ಬಿಕಾಂ ಪದವಿಗೆ ಸೇರಿದ ಮೇಲೆ ಚುರುಕಾದ ಶಾಂತಪ್ಪ ತನ್ನ ದೌರ್ಬಲ್ಯಗಳನ್ನು ಗುರುತಿಸಿಕೊಂಡು ಸಂಕೋಚ ಮತ್ತು ಹಿಂಜರಿಕೆಗಳನ್ನು ತೊರೆದು ಆತ್ಮವಿಶ್ವಾಸ ಬೆಳೆಸಿಕೊಂಡ. ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆ ಎಂದುಕೊಂಡಿದ್ದವನು ಕಾಲೇಜು ಮುಗಿದ ನಂತರ ಪ್ರತಿದಿನ ಹತ್ತಿರದಲ್ಲಿದ್ದ ಲೈಬ್ರರಿಗೆ ಹೋಗಿ ಇಂಗ್ಲೀಷಿನ ದಿನಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಓದಿ ನಿರಂತರ ಪ್ರಯತ್ನದಿಂದ ಇಂಗ್ಲೀಷ್ ಮಾಧ್ಯಮದ ಹುಡುಗರನ್ನೂ ಮೀರಿಸುವಷ್ಟು ಪ್ರಭುತ್ವ ಸಾದಿಸಿದ. ಹೀಗೆ ಪ್ರತಿ ಹಂತದಲ್ಲಿಯೂ ಯಶಸ್ಸಿನ ಕೀಲಿಕೈಗಳನ್ನು ಸಂಪಾದಿಕೊಂಡು ಬಿಕಾಂ ನಂತರ ಎಂಕಾಂ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಮೊದಲಿಗನಾಗಿ ಚಿನ್ನದ ಪದಕ ಪಡೆದು ತೇರ್ಗಡೆ ಹೊಂದಿ ಪ್ರತಿಷ್ಠಿತ ಖಾಸಗಿ ಕಾರ್ಖಾನೆಯಲ್ಲಿ ಅಕೌಂಟ್ಸ್ ಆಫೀಸರನಾಗಿ ಕೆಲಸಕ್ಕೆ ಸೇರಿದ. ಅಲ್ಲಿಯೂ ತನ್ನ ವೃತ್ತಿಗೆ ಅನುಕೂಲವಾಗಲೆಂದು ದೂರಶಿಕ್ಷಣದಲ್ಲಿ ಐಸಿಡಬ್ಲ್ಯೂಎ ಮತ್ತು ಎಂಬಿಎ ಮಾಡಿ ಶೀಘ್ರವಾಗಿ ಪದೋನ್ನತಿ ಪಡೆದು ತನ್ನ ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಉತ್ತಮ ಹೆಸರು ಪಡೆದು ದೇಶವಿದೇಶಗಳನ್ನು ತಿರುಗಿದ ಹಳ್ಳಿಯ ಹುಡುಗ ಶಾಂತಪ್ಪ ಕಾರ್ಪೋರೇಟ್ ವಲಯದಲ್ಲಿ ‘ಅಕೌಂಟ್ಸ್ ಗುರು ಶಾಂತಪ್ಪನವರು’ ಎಂದು ಖ್ಯಾತಿ ಗಳಿಸಿದ. ತದನಂತರ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನಗಳು ಶಾಂತಪ್ಪನವರನ್ನು ಹುಡುಕಿಕೊಂಡು ಬಂದಿದ್ದವು. ಅವರಂತೆಯೇ ಶಾಂತ ಸ್ವಭಾವದ ಪತ್ನಿ ಮತ್ತು ಬುಸಿನೆಸ್ ಮ್ಯಾನೇಜಮೆಂಟಿನಲ್ಲಿ ಪದವಿ ಓದುತ್ತಿದ್ದ ಸದ್ಗುಣವಂತ ಮಗಳು ಮತ್ತು ಮಗನಿಂದ ಕೌಟುಂಬಿಕ ನೆಮ್ಮದಿಯೂ ಶಾಂತಪ್ಪನವರಿಗೆ ಒಲಿದು ಬಂದಿತ್ತು.                                

                                      *********

  ಕಾಲೇಜನ್ನು ಪ್ರವೇಶಿಸಿದ ಶಾಂತಪ್ಪನವರಿಗೆ ಹೊಸ ಅನುಭವವಾಯಿತು. ಕಾಲೇಜಿನ ಆವರಣದಲ್ಲಿ ಹೂವಿನ ಗಿಡಗಳು ನಳನಳಿಸುತ್ತಿದ್ದವು. ಕಾರಿಡಾರನ್ನು ಹಾದು ಸೀದಾ ಪ್ರಾಂಶುಪಾಲರ ಕೊಠಡಿಗೆ ತೆರಳಿದ ಶಾಂತಪ್ಪನವರಿಗೆ ಕಾಕತಾಳೀಯವೆಂಬಂತೆ ಪ್ರಾಂಶುಪಾಲರ ಸೀಟಿನಲ್ಲಿ ತಮ್ಮ ಕನ್ನಡದ ಉಪನ್ಯಾಸಕರಾಗಿದ್ದ ರಾಮಯ್ಯನವರನ್ನು ಕಂಡು ಆನಂದವಾಯಿತು. ‘ನಮಸ್ಕಾರ ಸಾರ್.. ನನ್ನ ಗುರುತು ಸಿಗಲಿಲ್ಲವೇ’ ಎಂದು ಕೇಳಿದವರನ್ನು ತಲೆ ಎತ್ತಿ ದಿಟ್ಟಿಸಿ ನೋಡಿದ ರಾಮಯ್ಯನವರು ‘ಮುಖ ಪರಿಚಯವಿದೆ.. ಹೆಸರು ಏನೋ ಗೊತ್ತಾಗಲಿಲ್ಲವಲ್ಲ’ ಎಂದರು. ‘ನಾನು ಶಾಂತಪ್ಪ ಅಂತ ನಿಮ್ಮ ವಿದ್ಯಾರ್ಥಿ ಸಾರ್.. ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ನೀವು ಗುರುಗಳಾಗಿದ್ದೀರಿ.. ಎಲ್ಲರ ಹೆಸರು ನೆನಪಿಟ್ಟುಕೊಳ್ಳುವುದು ಸಾಧ್ಯವಿಲ್ಲದ ಮಾತು..’ ಎಂದ ಶಾಂತಪ್ಪನವರನ್ನು ‘ಮೊದಲು ಕುಳಿತುಕೊಳ್ಳಿ’ ಎಂದು ಹೇಳಿ ‘ಏನೋ ನಿಮ್ಮಂತಹ ವಿದ್ಯಾರ್ಥಿಗಳಿಂದಲೇ ನಾವು ಗುರುಗಳಾಗಿರುವುದು..ನೀವೇ ಇಲ್ಲದಿದ್ದರೆ ನಾವು ದೇವರಿಲ್ಲದ ಗುಡಿಯಲ್ಲಿ ಪೂಜಾರಿಗಳಂತೆ’ ಎಂದು ಹೇಳಿದಾಗ ತನ್ನ ಗುರುಗಳ ವಿಶಾಲಹೃದಯ ಕಂಡು ಶಾಂತಪ್ಪನವರಿಗೆ ಗಂಟಲುಬ್ಬಿ ಬಂದಿತು. ರಾಮಯ್ಯನವರು ಬೇಡವೆಂದರೂ ಕೇಳದೆ ತಮ್ಮ ಸಹಾಯಕನಿಂದ ಕಾಫಿ ತರಿಸಿ ಕೊಟ್ಟರು. ಕಾಫಿ ಕುಡಿಯುತ್ತಾ ತಮ್ಮ ಶಿಷ್ಯನ ವೃತ್ತಿ ಮತ್ತು ಕೌಟುಂಬಿಕ ವಿಚಾರಗಳನ್ನು ಕೇಳಿತಿಳಿದು ತುಂಬಾ ಸಂತೋಷಗೊಂಡು ‘ನೋಡಪ್ಪಾ, ಇತರರಿಗೆ ತೊಂದರೆ ಕೊಡದೆ ನಿಮ್ಮಂತೆ ಪ್ರಾಮಾಣಿಕತೆ ಮತ್ತು ಪರಿಶ್ರಮದ ಹಾದಿಯಲ್ಲಿ ನಡೆದು ಸಮಾಜದಲ್ಲಿ ಸಭ್ಯ ಪ್ರಜೆಗಳಾಗಿ ಬಾಳುವುದೇ ಒಬ್ಬ ಶಿಷ್ಯ ತನ್ನ ಗುರುವಿಗೆ ನೀಡಬಹುದಾದ ಗುರುದಕ್ಷಿಣೆ’ ಎಂದು ಹೇಳಿ ಶಾಂತಪ್ಪನವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.        

  ತುಸು ಹೊತ್ತಿನ ನಂತರ ಏನನ್ನೋ  ನೆನಪಿಸಿಕೊಂಡು ‘ನೀವು ಹಳೇಪಾಳ್ಯದ ಶಾಂತಪ್ಪನಾ...’ಎಂದು ಅನುಮಾನದಿಂದ ಕೇಳಿದರು. ‘ಹೌದು ಸಾರ್..’ ಎಂದು ಹೇಳಿದ ಶಾಂತಪ್ಪನವರನ್ನು ಕಂಡು ಅತೀವ ಸಂತೋಷದಿಂದ ರಾಮಯ್ಯನವರು ‘ಮೊದಲೇ ಹೇಳಬಾರದಿತ್ತೇನಯ್ಯಾ..ನನಗಂತೂ ಇತ್ತೀಚೆಗೆ ತುಂಬಾ ಮರೆವು, ನೀನು ಮೂಡಿಸಿರುವ ಹೆಜ್ಜೆ ಗುರುತನ್ನು ಈ ಕಾಲೇಜಿನಲ್ಲಿ ಯಾರೂ ಮರೆಯುವಂತಿಲ್ಲ, ನೀನೇ ಅಲ್ವೇನಯ್ಯಾ ಅಲ್ಲಿ ಮಾವಿನ ಸಸಿ ನೆಟ್ಟು ನೀರೆರೆದು ಸಲಹಿದ್ದು..’ ಎಂದು ಕೇಳಿದರು. ಶಾಂತಪ್ಪನವರಿಗೆ ಎಂದೋ ನೆನಪಿನ ಭಿತ್ತಿಯಿಂದ ಮಾಯವಾಗಿದ್ದ ಮಾವಿನ ಸಸಿಯ ಚಿತ್ರ ಕಣ್ಮುಂದೆ ಮೂಡಿದಂತಾಗಿ  ‘ಇನ್ನೂ ಇದೆಯಾ ಸಾರ್ ಆ ಗಿಡ....’ ಎಂದರು. ‘ಇದೇನಯ್ಯಾ ಹೀಗಂತೀಯ, ಅದು ಗಿಡವಲ್ಲ ಹೆಮ್ಮರ.. ಹೆಮ್ಮರ ಕಣಯ್ಯ..ಈಗಲೂ ಇದೆ, ಇನ್ನೂ ನೂರು ವರ್ಷ ಇರುತ್ತೆ.. ಬಾರಯ್ಯಾ ನೀನೆ ನೋಡುವಿಯಂತೆ’ ಎಂದು ರಾಮಯ್ಯನವರು ಸಂತಸದಿಂದ ತಮ್ಮ ಶಿಷ್ಯನನ್ನು ಮೂಲೆಯಲ್ಲಿದ್ದ ಮಾವಿನ ಮರದ ಬಳಿ ಕರೆದೊಯ್ದರು. ಎತ್ತರಕ್ಕೆ ಬೆಳೆದು ನಿಂತಿದ್ದ ಮಾವಿನ ಮರದ ರೆಂಬೆಕೊಂಬೆಗಳು ವಿಶಾಲವಾಗಿ ಹರಡಿಕೊಂಡು ಇಡೀ ಮರವೇ ಹಚ್ಚಹಸಿರಾಗಿದ್ದು ಕಂಡು ಶಾಂತಪ್ಪನವರ ಮನಸ್ಸು ಯಾವುದೋ ಭಾವಲೋಕದೆಡೆಗೆ ತೆರಳಿ ಮೈಮನವೆಲ್ಲಾ ಆನಂದದಿಂದ ಪುಳಕಿತವಾಯಿತು. ಬಾಲ್ಯದಲ್ಲಿ ಎಷ್ಟೋ ಮಾವಿನ ಮರಗಳನ್ನು ನೋಡಿದ್ದರೂ ಕೂಡ ತನ್ನ ಕೈಯಿಂದ ನೆಟ್ಟ ಸಸಿಯೊಂದು ಹೆಮ್ಮರವಾಗಿರುವುದು ಕಂಡು ತಾನು ಕಣ್ಣಾರೆ ನೋಡುತ್ತಿರುವುದು ಕನಸೋ ನಿಜವೋ ಎನಿಸಿ ಮೂಕವಿಸ್ಮಿತರಾದರು.

  ‘ನೋಡಯ್ಯಾ ಮಧ್ಯಾಹ್ನದ ಹೊತ್ತು ಈ ಮರದ ನೆರಳಿನಲ್ಲಿ ನಮ್ಮ ಎಷ್ಟೋ ವಿದ್ಯಾರ್ಥಿಗಳು ದಿನವೂ ಕುಳಿತು ಊಟ ಮಾಡುತ್ತಾರೆ, ನೂರಾರು ಪಕ್ಷಿ-ಪ್ರಾಣಿಗಳಿಗೆ ಇದು ಅಸರೆಯಾಗಿರುವುದಲ್ಲದೇ ಫಸಲು ಬಿಟ್ಟಾಗ ಅವುಗಳಿಗೆ ಆಹಾರವನ್ನೂ ನೀಡುತ್ತದೆ. ಸುತ್ತಮುತ್ತಲಿನವರಿಗೆ ಶುದ್ಧ ಗಾಳಿಯನ್ನು ನೀಡಿ ನಾವು ವಾಸಿಸುವ ಪರಿಸರವನ್ನು ಸ್ವಚ್ಛಗೊಳಿಸುತ್ತದೆ.. ನಾವು ಮಾಡಿದ ಒಳ್ಳೆಯ ಕೆಲಸಗಳು ತತ್‍ಕ್ಷಣಕ್ಕೆ ಫಲ ನೀಡದಿದ್ದರೂ ಬಹಳ ವರ್ಷದ ನಂತರವಾದರೂ ನಮಗಲ್ಲದಿದ್ದರೂ ಎಲ್ಲೋ ಯಾರಿಗೋ ಫಲ ನೀಡುತ್ತಿರುತ್ತವೆ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ.. ನಾವು ಪ್ರಾರಂಭಿಸಿದ ಒಳ್ಳೆಯ ಕೆಲಸಗಳನ್ನು ಮೆಚ್ಚುವ ಪೋಷಿಸುವ ಸಹೃದಯವಂತರು ಸಮಾಜದಲ್ಲಿ ಯಾವಾಗಲೂ ಇದ್ದೇ ಇರುತ್ತಾರೆ..’ ರಾಮಯ್ಯನವರು ಹೇಳುತ್ತಲೇ ಇದ್ದರು. ತನ್ನ ಗುರುಗಳು ಹೇಳುತ್ತಿದ್ದುದನ್ನು ಕೇಳಿ ಶಾಂತಪ್ಪನವರಿಗೆ ತಾನು ನೆಟ್ಟು ನೀರೆದಿದ್ದ ಸಸಿಯೊಂದು ಹೆಮ್ಮರವಾಗಿ ಬೆಳೆದು ಫಲ ನೀಡುತ್ತಿದ್ದ ಭೌತಿಕ ಸತ್ಯದ ಎದಿರು ತಾನು ಗಳಿಸಿದ ಕಾಲ್ಪನಿಕ ಸತ್ಯಗಳಾದ ಕೀರ್ತಿ, ಅಂತಸ್ತು, ಸಾಮಾಜಿಕ ಸ್ಥಾನಮಾನ ಎಲ್ಲವೂ ನಿಕೃಷ್ಟವಾಗಿ ಕಾಣಿಸಿ ಮನಸಿನಲ್ಲಿ ಅವ್ಯಕ್ತ ಆತ್ಮತೃಪ್ತಿಯೊಂದು ಮೂಡಿ ಅವರು ಆನಂದಪರವಶರಾಗಿ ಮರವನ್ನೇ ನೋಡುತ್ತಾ ನಿಂತುಬಿಟ್ಟರು.