ಒಂದು ಯಂತ್ರ, ಹತ್ತು ಕೆಲಸ

ಒಂದು ಯಂತ್ರ, ಹತ್ತು ಕೆಲಸ

ಒರಿಸ್ಸಾದ ಸುಂದರಗರ್ ಜಿಲ್ಲೆಯ ಗುರುಚರಣ್ ಸಿಂಗ್ ಪ್ರಧಾನ್ ಮೂವತ್ತೇಳು ವರುಷ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಚರಿತ್ರೆಯ ಪಾಠ ಮಾಡಿದರು. ನಿವೃತ್ತರಾದ ನಂತರ ಅವರು ತೊಡಗಿದ್ದು ಕೃಷಿಯಲ್ಲಿ - ತಮ್ಮ ತಂದೆಯ ಕಾಯಕ ಮುಂದುವರಿಸಲಿಕ್ಕಾಗಿ.

ಬಹು ಬೇಗನೇ ಗುರುಚರಣರಿಗೆ ಕೃಷಿಯ ದೊಡ್ಡ ಸಮಸ್ಯೆಯ ಅರಿವು. ತಂದೆಯ ಕಾಲದಲ್ಲಿ ಸಾಕಷ್ಟು ಕೃಷಿ ಕಾರ್ಮಿಕರಿದ್ದರು. ಆದರೆ ಈಗ ಹಂಗಾಮಿನಿಂದ ಹಂಗಾಮಿಗೆ ಕೃಷಿ ಕಾರ್ಮಿಕರ ಸಂಖ್ಯೆಯಲ್ಲಿ ಇಳಿಕೆ. ಇದಕ್ಕೇನು ಪರಿಹಾರ? ಎಂಬ ಚಿಂತನೆ. ಹಲವು ಕೃಷಿ ಕೆಲಸಗಳಿಗೆ ಒಂದೇ ಯಂತ್ರ ಬಳಸಿದರೆ ಹೇಗೆ? ಇದರಿಂದ ಹಣ ಉಳಿತಾಯ ಮತ್ತು ಕಾರ್ಯಕ್ಷಮತೆ ಹೆಚ್ಚಳ ಎಂಬ ಯೋಚನೆ. ಅವರು ತಡ ಮಾಡಲಿಲ್ಲ.

ತನ್ನ ಯೋಚನೆಗೆ ರೂಪರೇಷೆ ನೀಡಿ, ಕಾರ್ಯರೂಪಕ್ಕೆ ತಂದರು ಗುರುಚರಣ್. ಆರಂಭದಲ್ಲಿ ಮೇವಿನ ಹುಲ್ಲು ಕತ್ತರಿಸುವ ಮತ್ತು ತೆನೆಯಿಂದ ಭತ್ತ ಬೇರ್ಪಡಿಸುವ ಕೆಲಸಕ್ಕೆ ಯಂತ್ರದ ಬಳಕೆ. ಈ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಅಭ್ಯಾಸವಾದ ನಂತರ ಇತರ ಕೆಲಸಗಳಿಗೂ ಅದೇ ಯಂತ್ರದ ಬಳಕೆಯ ಪ್ರಯೋಗಗಳ ಪ್ರಾರಂಭ.

ಹಲವಾರು ಸುಧಾರಣೆಗಳನ್ನು ಮಾಡುತ್ತಾ ಅಭಿವೃದ್ಧಿ ಪಡಿಸಿದ ಯಂತ್ರಕ್ಕೆ “ನವರತ್ನ ಯಂತ್ರ" ಎಂದು ಹೆಸರಿಟ್ಟರು ಗುರುಚರಣ್. ಅದೀಗ ಹತ್ತು ಬೇರೆಬೇರೆ ಕೆಲಸಗಳನ್ನು ಮಾಡುತ್ತಿದೆ: ನೀರೆತ್ತುವುದು, ಮೇವಿನ ಹುಲ್ಲು ಕತ್ತರಿಸುವುದು, ವಿದ್ಯುತ್ ಉತ್ಪಾದನೆ, ಸಾಧನಗಳನ್ನು ಹರಿತ ಮಾಡುವುದು, ಮರದ ತುಂಡು ತುಂಡರಿಸುವುದು, ತೆನೆಯಿಂದ ಭತ್ತ ಬೇರ್ಪಡಿಸುವುದು ಇತ್ಯಾದಿ. ಸೈಕಲಿನಷ್ಟೇ ಎತ್ತರವಿರುವ, ಕೈ ಅಥವಾ ಕಾಲಿನಿಂದ ಚಲಾಯಿಸ ಬಹುದಾದ ನವರತ್ನ ಯಂತ್ರ ಮಾಡುವ ವಿಭಿನ್ನ ಕೆಲಸಗಳ ವಿವರ ಹೀಗಿದೆ:
೧)ನೀರೆತ್ತುವುದು: ಮನೆ ಬಳಕೆಗೆ ಮತ್ತು ಕೈತೋಟಕ್ಕೆ ಹಾಯಿಸಲು ನೆಲದಾಳದ ಟ್ಯಾಂಕಿನಿಂದ ಈ ಯಂತ್ರ ನೀರೆತ್ತುತ್ತದೆ. ನೀರೆಳೆಯುವ ಮತ್ತು ನೀರೆತ್ತುವ ಆಳ / ಎತ್ತರ ತಲಾ ೫ ಮೀಟರ್. ಗಂಟೆಗೆ ೨೫೦ ಲೀಟರ್ ನೀರೆತ್ತಬಲ್ಲದು. ಕೆಲಸಗಾರನೊಬ್ಬ ಇದನ್ನು ಸತತವಾಗಿ ಮೂರು ತಾಸು ಚಲಾಯಿಸಿದರೂ ಆತನಿಗೆ ದಣಿವಾಗುವುದಿಲ್ಲ.

೨)ಮೇವು ಕತ್ತರಿಸುವುದು: ಜಾನುವಾರುಗಳಿಗಾಗಿ ಒಣ ಮತ್ತು ಹಸುರು ಮೇವು ಕತ್ತರಿಸುತ್ತದೆ. ಇದಕ್ಕಾಗಿ ಹರಿತ ಅಲಗಿನ ಬಳಕೆ. ಮೇವು ಕತ್ತರಿಸುವ ಯಂತ್ರಕ್ಕಿಂತ ಈ ಯಂತ್ರ ಹಗುರ ಮತ್ತು ಇದನ್ನು ಸ್ಥಳಾಂತರಿಸುವುದು ಸುಲಭ. ಇದರಿಂದ ಮೇವು ಕತ್ತರಿಸುವುದೂ ಸುಲಭ. ಒಂದು ಗಂಟೆಗೆ ೫೦ - ೬೦ ಕಿಗ್ರಾ ಮೇವು ಕತ್ತರಿಸಬಲ್ಲದು.

೩)ವಿದ್ಯುತ್ ಉತ್ಪಾದನೆ: ಇದರ ಔಟ್-ಪುಟ್ ಷಾಫ್ಟಿಗೆ ೬ ವೋಲ್ಟಿನ ಡೈನಮೋ ತಗಲಿಸಿ ವಿದ್ಯುತ್ ಉತ್ಪಾದಿಸಬಹುದು. ಈ ವಿದ್ಯುತನ್ನು ಬ್ಯಾಟರಿ ಚಾರ್ಜ್ ಮಾಡಲು ಅಥವಾ ಬಲ್ಬುಗಳನ್ನು ಬೆಳಗಿಸಲು ಬಳಸ ಬಹುದು.

೪)ಸಾಧನಗಳನ್ನು ಹರಿತ ಮಾಡುವುದು: ಈ ಯಂತ್ರಕ್ಕೆ ಗ್ರೈಂಡಿಂಗ್ ಪ್ಲೇಟ್ ಅಳವಡಿಸಿದರೆ, ಚೂರಿ, ಕತ್ತಿ ಇತ್ಯಾದಿ ಸಾಧನಗಳನ್ನು ಹರಿತ ಮಾಡಲು ಸಾಧ್ಯ.

೫)ಮರದ ತುಂಡು ಕತ್ತರಿಸುವುದು: ತೆಳುವಾದ ಗ್ರೈಂಡಿಂಗ್ ಪ್ಲೇಟನ್ನು ಯಂತ್ರದ ಔಟ್-ಪುಟ್ ಷಾಫ್ಟಿಗೆ ಜೋಡಿಸಿ, ಮರದ ತುಂಡುಗಳನ್ನು ಕತ್ತರಿಸಬಹುದು.

೬)ತೆಂಗಿನಕಾಯಿ ಸಿಪ್ಪೆ ಸುಲಿಯುವುದು: ಯಂತ್ರಕ್ಕೆ ತಿರುಗುವ ಕತ್ತಿ ಅಳವಡಿಸಿ ಗಂಟೆಗೆ ಮೂವತ್ತು ತೆಂಗಿನಕಾಯಿಗಳ ಸಿಪ್ಪೆ ಸುಲಿಯಬಹುದು.

೭)ಧಾನ್ಯ ಗಾಳಿಗೆ ತೂರುವುದು: ಇದರ ಔಟ್-ಪುಟ್ ಷಾಫ್ಟಿಗೆ ಫ್ಯಾನಿನ ಬ್ಲೇಡುಗಳನ್ನು ತಗಲಿಸಿದರೆ ಧಾನ್ಯ ಗಾಳಿಗೆ ತೂರುವ ಯಂತ್ರದಂತೆ ಕೆಲಸ ಮಾಡುತ್ತದೆ. ಗಂಟೆಗೆ ಎರಡು ಕ್ವಿಂಟಾಲ್ ಭತ್ತ ಗಾಳಿಗೆ ತೂರಬಹುದು.

೮)ತೆನೆಯಿಂದ ಭತ್ತ ಬೇರ್ಪಡಿಸುವುದು: ಥ್ರೆಷರುಗಳಲ್ಲಿ ಇರುವಂತಹ ವಯರ್ ಲೂಪನ್ನು ಈ ಯಂತ್ರಕ್ಕೂ ಅಳವಡಿಸಬಹುದು. ಆಗ ಗಂಟೆಗೆ ಎರಡು ಕ್ವಿಂಟಾಲ್ ಭತ್ತವನ್ನು ತೆನೆಯಿಂದ ಬೇರ್ಪಡಿಸುತ್ತದೆ.

೯)ಗಿಡದಿಂದ ನೆಲಗಡಲೆ ಬೇರ್ಪಡಿಸುವುದು: ಯಂತ್ರಕ್ಕೆ ಮುಳ್ಳುಗಳಿರುವ ಡ್ರಮ್ ಜೋಡಿಸಿ ಚಲಾಯಿಸಿದರೆ, ಗಿಡಗಳಿಂದ ನೆಲಗಡಲೆ ಕೋಡುಗಳನ್ನು ಬೇರ್ಪಡಿಸುತ್ತದೆ.

೧೦)ಹಸುರು ಹುಲ್ಲು ಕತ್ತರಿಸುವುದು: ಜಾನುವಾರುಗಳ ಮೇವಿಗಾಗಿ ಯಂತ್ರವು ಹಸುರು ಹುಲ್ಲು ಕತ್ತರಿಸುತ್ತದೆ.

ಈ ಯಂತ್ರದ ಫ್ರೇಮಿನಲ್ಲಿವೆ: ಹ್ಯಾಂಡ್ ಕ್ರಾಂಕ್, ಚೈನ್ ಮತ್ತು ಸ್ಪಾಕೆಟ್ ಹಾಗು ಬೆಲ್ಟ್ ಮತ್ತು ಲಾಟೆ. ಇದರ ಪವರ್ ಚೈನನ್ನು ತ್ರಾಸವಿಲ್ಲದೆ ಚಲಾಯಿಸಿ, ಕೊನೆಯ ಲಾಟೆಯನ್ನು ೯೦೦ ಆಪ್‌ಪಿಎಮ್ ವೇಗದಲ್ಲಿ ಗುರುಚರಣ್ ತಿರುಗಿಸಬಲ್ಲರು. ಕೊನೆಯ ಲಾಟೆಯ ಷಾಫ್ಟಿಗೆ, ನಟ್ ಮತ್ತು ಬೋಲ್ಟ್ ಮೂಲಕ ವಿವಿಧ ಸಾಧನಗಳನ್ನು ಜೋಡಿಸಿ, ಈ ಮೇಲಿನ ಹತ್ತು ಕೆಲಸಗಳನ್ನು ಮಾಡಬಹುದು. ಗುಜರಿ ಸಾಮಾನು ಬಳಸಿ, ಸ್ವಂತ ಬಳಕೆಗಾಗಿ ಗುರುಚರಣ್ ವಿವಿಧೋದ್ದೇಶ ಯಂತ್ರ ರಚಿಸಿದ್ದು.

ಗುರುಚರಣ್ ಈಗ ನಿರ್ಮಿಸುವ ಯಂತ್ರಗಳಿಗೆ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಅಹ್ಮದಾಬಾದಿನ ರಾಷ್ಟ್ರೀಯ ಅನುಶೋಧನ ಫೌಂಡೇಷನ್ ನೆರವು ನೀಡುತ್ತಿದೆ. ಸುಧಾರಿತ ಯಂತ್ರದ ವೆಚ್ಚ ರೂ.೧೫,೦೦೦.

ಈಗಿನ ಯಂತ್ರದ ಮಾದರಿ ಅಭಿವೃದ್ಧಿ ಪಡಿಸಲು ಗುರುಚರಣರಿಗೆ ತಗಲಿದ ಅವಧಿ ಐದು ವರುಷಗಳು. ಆಯಾ ಕೆಲಸದ ಅಗತ್ಯ ಬಿದ್ದಾಗ, ಅದಕ್ಕೆ ಬೇಕಾದ ಸಾಧನ ಅಥವಾ ಜೋಡಣೆಯನ್ನು ರೂಪಿಸಿದರು. ಪ್ರತಿಯೊಂದು ಮಾರ್ಪಾಡು ಅಥವಾ ಸುಧಾರಣೆ ಮಾಡಲು ಅವರಿಗೆ ತಗಲಿದ ಸಮಯ ಎರಡರಿಂದ ಮೂರು ತಿಂಗಳು. ಇದಕ್ಕಾಗಿ ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದ ಗುರುಚರಣರಿಗೆ ಪತ್ನಿಯಿದ ಸಂಪೂರ್ಣ ಬೆಂಬಲ. ವೈದ್ಯನಾಗಿರುವ ಮಗನಿಂದಲೂ ಅವರಿಗೆ ತುಂಬು ನೆರವು.

ಕಲಾಶಾಸ್ತ್ರದಲ್ಲಿ ಇಂಟರ್-ಮೀಡಿಯಟ್ ಕಲಿತು, ಅನಂತರ ಶಿಕ್ಷಕ ತರಬೇತಿ ಪಡೆದು, ಶಿಕ್ಷಕ ವೃತ್ತಿಯಲ್ಲಿ ತೊಡಗಿದವರು ಗುರುಚರಣ್ ಸಿಂಗ್ ಪ್ರಧಾನ್. ಆವಿಷ್ಕಾರಗಳಿಗೆ ಯಾವುದೂ ಅಡ್ದಿಯಾಗಲಾರದು ಎಂಬುದಕ್ಕೆ ಪುರಾವೆ ಅವರ ನವರತ್ನ ಯಂತ್ರ. ತಲೆಯೊಳಗೆ ಮಿಂಚಿದ ಚಿಂತನೆಗಳ ಬೆಂಬತ್ತಿದರೆ ಜನಸಾಮಾನ್ಯಾರೂ ಅನುಶೋಧಕರಾಗ ಬಲ್ಲರು ಎಂಬುದಕ್ಕೆ ಮಗದೊಂದು ನಿದರ್ಶನ ಚರಿತ್ರೆಯ ಮೇಸ್ಟ್ರು ಗುರುಚರಣ್. ಅವರ ವಿಳಾಸ: ಅಂಚೆ ತಲಿತ, (ವಯಾ) ಬೊನೈಗರ್, ಸುಂದರಗರ್, ಒರಿಸ್ಸಾ.