ಒಂದು ಲಘು ಪ್ರಸಂಗ - ಸೀರೆ ಪುರಾಣ!

ಒಂದು ಲಘು ಪ್ರಸಂಗ - ಸೀರೆ ಪುರಾಣ!

ನಿಯತಕಾಲಿಕೆಗಳಲ್ಲಿ, ದೂರದರ್ಶನದಲ್ಲಿ ಬರುವ ಉಚಿತ ಕೊಡುಗೆಗಳ ಮಹಾಪೂರಗಳ ನೋಡಿ ಮರುಳಾದೆ. ಮನಸ್ಯಾಕೊ ಅಂಗಡಿಗಳು, ಮಹಲುಗಳತ್ತ ಸೆಳೆಯುತ್ತಿತ್ತು. ನನ್ನವರನ್ನು ಕೇಳಿ ಕೇಳಿ ಸಾಕಾಗಿಹೋಯಿತು. ಬನ್ನಿ ಮಹರಾಯ್ರೆ, ಒಮ್ಮೆ ಕರೆದುಕೊಂಡು ಹೋಗಿ ಎಂದು ಪೀಡಿಸತೊಡಗಿದೆ. ಮಕ್ಕಳಂತೂ 'ಈ ಅಮ್ಮನಿಗೆ ಒಮ್ಮೆ ಬುದ್ಧಿಬರಲೆಂದು' ಗುಸಗುಸ ಪಿಸಪಿಸ ಮಾತನಾಡುವುದು ಆಗೊಮ್ಮೆ ಈಗೊಮ್ಮೆ ಕಿವಿಗೆ ಕೇಳಿಸುತ್ತಿತ್ತು. ಮೌನವಹಿಸಿದೆ. ಯಾಕೆಂದರೆ ಕನಸಿನಲ್ಲಿಯೂ ಬಣ್ಣಬಣ್ಣ ಥಕತೈ ಕುಣಿಯುತ್ತಿತ್ತು.

ಅಂತು ನನ್ನ ಉಪದ್ರ, ಗೊಣಗಾಟ ಸಹಿಸದ ಪತಿರಾಯರು 'ಹೊರಡು' ಎಂದಾಗ ಸ್ವರ್ಗಕ್ಕೆ ಮೂರೇ ಗೇಣು ನನಗೆ. ಸಡಗರ, ಸಂಭ್ರಮದಲ್ಲಿ ಸೀರೆಯುಟ್ಟು ಜಿಂಕೆ ಮರಿಯಂತೆ (ವಯಸ್ಸು ೬೦ ಆದರೂ) ಅವರ ಹಿಂದೆ ಹೊರಟೆ.' ಅಮ್ಮನ ಸಡಗರ ನೋಡು' ಮಗಳು ಹೇಳುವುದು ಕೇಳಿಸಿತು.

೧೦ ಮೈಲುಗಳ ಕಾರಿನ ಪ್ರಯಾಣ. ಅಂಗಡಿಯೆದುರು ನೇತು ಹಾಕಿದ ವೈವಿಧ್ಯಮಯ ಸೀರೆಗಳನ್ನು ನೋಡಿ ಮೂರ್ಛೆ ಹೋಗುವುದೊಂದು ಬಾಕಿ. ಸೀದಾ ಒಳಹೊಕ್ಕಾಗ, ಮೇಡಂ, 'ಕೈಚೀಲ ಈಚೆ ಕೊಡಿ, ಪುನಃ ಹೋಗುವಾಗ ಕೊಡ್ತೇವೆ' ಎಂದ. ಹಣಕಾಸಿನ ವ್ಯವಹಾರವೆಲ್ಲ ನನ್ನವರಲ್ಲಿ, ಮತ್ತೆ ಈ ಚೀಲ ಯಾಕೆ? ಎಲ್ಲಾ ಓಕೆ ಆದರೆ ಸಾಕೆಂದು ಮನದಲ್ಲೇ ಮಂಡಿಗೆ ತಿಂದೆ. ಮಳಿಗೆಯೊಳಗೆ ಬಂದರೆ, ಅಯ್ಯೋ ಜನಜಂಗುಳಿಯೇ, ಇವರೆಡೆಯಲ್ಲಿ ಹೇಗಪ್ಪ ಆಯ್ಕೆ ಮಾಡಲಿ? ಎಂದು ಗ್ರಹಿಸಿದೆ. ಇವರಂತೂ ಜಪ್ಪಯ್ಯ ಅಂದರೂ ಕೂತಲ್ಲಿಂದ ಏಳಲಿಲ್ಲ. 'ಎಲ್ಲಾ ನೀನೇ ಆರಿಸು' ಎಂದು ಸ್ಟೂಲಿನಡಿ ಗಮ್ ಟೇಪ್ ಹಾಕಿದ ಹಾಗೆ ಕೂತುಬಿಟ್ಟರು. ೫೦ ರೂಪಾಯಿ ಸೀರೆ, ಅಬ್ಬಬ್ಬಾ ೫೦ ದಿನ ಉಟ್ಟರೂ ಲಾಭವೇ ಎಂದು ಒಂದೆರಡು ತೆಕ್ಕೊಂಡೆ. ೧೦೦, ೧೫೦ ರೂಗಳದ್ದೂ ಆಯ್ಕೆ ಮಾಡಿ, ಹೇಗೋ ಬಿಲ್ ಪಾವತಿಸಿ ಹೊರಗೆ ಬಂದೆವು. ಮಿಕ್ಷಿ ತೆಗೆದುಕೊಳ್ಳೋಣ, ಉಚಿತ ಕೊಡುಗೆಯಿದೆಯೆಂದು ಅಲ್ಲಿಗೂ ಹೋಗಿ ಖರೀದಿಸಿದೆವು. ಗಂಡನ ಪಿರಿಪಿರಿ ಕೇಳಿಸಲೇ ಇಲ್ಲ. ಕೇವಲ ಉಚಿತ ಕೊಡುಗೆಯೊಂದೇ ಕಣ್ಣೆದುರಿತ್ತು.

ಮನೆ, ಮಕ್ಕಳಿಗೆ ಕೆಲವು ಪುಸ್ತಕಗಳನ್ನು ತೆಗೆದುಕೊಂಡು ಕಾರಲ್ಲಿ ಬಂದು ಕುಳಿತೆವು. ಕಾರಿನಲ್ಲಿ ಹರಟಿದ್ದೇ ಹರಟಿದ್ದು .'ಮಗ ಆರೇಳು ಸಾವಿರ ಕೊಟ್ಟು ಮಿಕ್ಷಿ ತಂದಿದ್ದಾನೆ, ನೋಡಿ ಎಷ್ಟು ಕಡಿಮೆ, ಸಾಲದ್ದಕ್ಕೆ ಉಚಿತ ಕೊಡುಗೆಯಿದೆ, ಸೀರೆ ನೋಡಿ ಎಷ್ಟು ಚೆನ್ನಾಗಿದೆ' ಎಂದು ನನ್ನವರ ಕಿವಿ ತೂತಾಗುವಷ್ಟು ಹರಟಿ ಹೆಮ್ಮೆಯಿಂದ ಬೀಗಿದೆ.

ಮನೆಗೆ ಬಂದಾಗ ಎಲ್ಲಾ ಸ್ವಚ್ಛ ಮಾಡಿಯೇ ಬಳಸಬೇಕು, ಸೊಸೆ, ಮಗಳ ಆಜ್ಞೆಯಾಯಿತು. ಅವರಿಗೆಲ್ಲ ತೋರಿಸಿ ಹರ್ಷಪಟ್ಟೆ. ಅವರೆಲ್ಲರ ಮುಸಿಮುಸಿ ನಗು ಗಮನಿಸದೆ ಇರಲಿಲ್ಲ. 

ಮಿಕ್ಷಿ ತೊಳೆದು, 'ತಂಬುಳಿ ಮಾಡ್ತೇನೆ ಅತ್ತೆ 'ಎಂದಳು ಸೊಸೆ, 'ಓಕೆ ‘ ಅಂದೆ. ಇನ್ನೇನು ಸ್ವಿಚ್ ಹಾಕಿದ್ದಾಳಷ್ಟೆ ‘ಕರಕರ ಗರಗರ’ ಶಬ್ಧದಲ್ಲಿ ಕಿವಿತಮಟೆ ತೂತಾಗದ್ದು ಪುಣ್ಯ. ಮತ್ತೆ ತಿರುಗದೆ ಸ್ಟ್ರೈಕ್ ಮಾಡಿತು. ಜಪ್ಪಯ್ಯ ಅಂದರೂ ಪ್ರಯೋಜನವಿಲ್ಲ. 'ಅಮ್ಮನ ಉಚಿತ ಕೊಡುಗೆ ಢಮಾರ್' ಎಂದು ನಗೆಯಾಡಲು ಸುರು ಹಚ್ಚಿಕೊಂಡರು.

ಇನ್ನು ಸೀರೆ ಕಥೆ ಏನಾಗಿದೆಯೋ ಎಂದು ಯೋಚಿಸಿದೆ. ಯಾವುದರಲ್ಲಿಯೋ ಓದಿದ ನೆನಪು ‘ಹೊಸ ವಸ್ತ್ರ ನೀರಿಗೆ ಹಾಕುವಾಗ ಸ್ವಲ್ಪ ಉಪ್ಪು ಸೇರಿಸಿ’ ಎಂದು. ಹಾಗೆ ಮಾಡಿದೆ. ಮಕ್ಕಳಿಗೆಲ್ಲ ಕುತೂಹಲ, ಅಮ್ಮನ ಸೀರೆ ಕಥೆ ನೋಡಲು. ಒಂದು ಸಲ ಅದ್ದಿ ತೆಗೆದಾಗ ೫೦ ರೂ ಸೀರೆ ೫ ದಿನ ಸಹ ಉಡಲು ಸಾಧ್ಯವಿಲ್ಲದ ಹಾಗಾಯಿತು. ಉಳಿದ ಸೀರೆಗಳು ಕೆಲವು ಬಣ್ಣವೇ ಇಲ್ಲ, ಅಲ್ಲಲ್ಲಿ ಹರಿಯಿತು. ನನ್ನ ಉತ್ಸಾಹವೆಲ್ಲ ಜರ್ರನೆ ಇಳಿದು, ಮುಖ ಸುಟ್ಟ ಬದನೆಕಾಯಿ ಆಯಿತು. ಮಗ ಸೊಸೆ ಹತ್ರ ಹೇಳುವುದು ಕೇಳಿಸಿತು ‘ಇಂದು ಊಟಕ್ಕೆ ಸುಟ್ಟ ಬದನೆಕಾಯಿ ಗೊಜ್ಜಿ ಮಾಡು ಆತಾ’ ಎಲ್ಲರೂ ನಗುವವರೇ. ನನ್ನವರು ಬಂದವರೇ, 'ಯಾಕೆ ಅಮ್ಮನನ್ನು ಗೋಳು ಹೊಯ್ಕೊಳ್ತೀರಿ. ನನಗೆ ಮೊದಲೇ ಗೊತ್ತಿತ್ತು ಇದೆಲ್ಲ ‘ಗುಣಮಟ್ಟದ’ ವಸ್ತುಗಳಲ್ಲವೆಂದು. ‘ಬೆಲ್ಲ ಹಾಕಿದಷ್ಟೇ ಪಾಯಸ ಸಿಹಿ’ ಅಲ್ಲವೇ? ಜನರನ್ನು ಹುಚ್ಚುಗಟ್ಟಿಸಿ ವ್ಯಾಪಾರ ಮಾಡುವುದು ಅವರ ಕಲೆ, ನಮಗೆ ಬುದ್ಧಿ ಕಡಿಮೆಯಾದ್ದಕ್ಕೆ ಯಾರು ಹೊಣೆ? ಅಮ್ಮನಿಗೆ ಗೊತ್ತಾಗಲಿ ಎಂದೇ ನಾನು ಕಿಸೆಗೆ ಕತ್ತರಿ ಬಿದ್ದರೆ ಬೀಳಲಿ ಎಂದು ಮಾತನಾಡಿಲ್ಲ' ಎಂದರು. ನಾನಂತೂ ಭೂಮಿಗಿಳಿದು ಹೋದೆ, ಎಲ್ಲರೆದುರು ಹಿರಿಯಳಾಗಿ ಆಲೋಚಿಸದೆ ಮಾನ ಹೋಯಿತೆಂದು ಚಡಪಡಿಸಿದೆ. 'ಬಾರೆ ಇಲ್ಲಿ, ಬೇಸರಿಸ್ಬೇಡ, ಈ ದಿನ ಈ ಲೆಕ್ಕದಲ್ಲಿ ಕ್ಷೀರ ಮಾಡು, ಎಲ್ಲರೂ ಒಟ್ಟಿಗೆ ತಿನ್ನೋಣ ಎಂದರು. ಆದರೂ ಮಕ್ಕಳು ಯಾವಾಗಲೂ ‘ಅಮ್ಮನ ಮಿಕ್ಷಿ, ಸೀರೆ ಪುರಾಣ’ ಎಲ್ಲರ ಹತ್ತಿರವೂ ಹೇಳಿ ನಗುತ್ತಿದ್ದರು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ