ಒಂದು ವಿಶೇಷ ದಿನದ ಸಂದರ್ಭದಲ್ಲಿ...
ಗುರು ಪೂರ್ಣಿಮಾ ಅಥವಾ ಕೃಷ್ಣ ದ್ವೈಪಾಯನರೆಂಬ ವೇದ ವ್ಯಾಸ ಪೂರ್ಣಿಮಾ ಅಥವಾ ವೇದಗಳ ಉಗಮ (ವಿಭಜನೆಯ) ದಿನ. ಗೌತಮ ಬುದ್ಧರು ತಮ್ಮ ಪ್ರಥಮ ಪ್ರವಚನ ನೀಡಿದ ಐತಿಹಾಸಿಕ ಆಷಾಢ ಹುಣ್ಣಿಮೆಯ ದಿನ. ಗುರುವಿನ (ಕಲಿಕೆಯ) ಅರ್ಥವನ್ನು ಭಾರತೀಯ ಜೀವನಶೈಲಿಯಲ್ಲಿ ಹುಡುಕುತ್ತಾ...
ಅರಿವೇ ಗುರು, ಪ್ರಕೃತಿಯೇ ಗುರು ಎಂಬಲ್ಲಿಂದ ಕಲಿಕೆಯ ಪ್ರತಿ ಹಂತವನ್ನು ಗುರು ಎಂದೇ ಪರಿಗಣಿಸಲಾಗುತ್ತದೆ. ಆದರೆ ವಿಶಾಲ ಅರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ, ನಿಯಂತ್ರಿಸುವ, ನಮ್ಮ ಆಲೋಚನೆಯನ್ನು ಸಂಪೂರ್ಣ ಆಕ್ರಮಿಸುವ, ನಮ್ಮ ವ್ಯಾವಹಾರಿಕ ಜಗತ್ತನ್ನು ನಿರ್ಧರಿಸುವ, ನಮ್ಮ ಬದುಕಿನ ಗುರಿಯನ್ನು, ಸಾರ್ಥಕತೆಯನ್ನು ಕೊನೆಯವರೆಗೂ ಮುನ್ನಡೆಸುವ ಶಕ್ತಿಯನ್ನು ಗುರು ಎಂದು ಪರಿಗಣಿಸಬಹುದು.
ಬಹುಶಃ ನಾವು ವಾಸಿಸುವ ಪ್ರದೇಶದ ಧರ್ಮ (ಮತ) ನಮ್ಮೆಲ್ಲರ ನಿಜವಾದ ಗುರು. ಪ್ರಕೃತಿ ನೈಸರ್ಗಿಕ ಗುರುವಾದರೆ ಧರ್ಮ ಹುಟ್ಟಿನಿಂದ ಸಾವಿನವರೆಗೆ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ನಮ್ಮನ್ನು ಸಂಪೂರ್ಣ ನಿಯಂತ್ರಿಸುವ ಗುರು. ಪರ ವಿರೋಧಗಳು ಏನೇ ಇದ್ದರೂ ಧರ್ಮವನ್ನು ( ಮಾನವ ಧರ್ಮವೂ ಸೇರಿ ) ಹೊರತುಪಡಿಸಿದ ಸಮಾಜಕ್ಕೆ ಅಸ್ತಿತ್ವವೇ ಇರುವುದಿಲ್ಲ. ನಮ್ಮ ತಂದೆ ತಾಯಿಗಳು, ಹಿರಿಯರು, ಹಿತೈಷಿಗಳು, ಗುರುಗಳು, ಸಂಗಾತಿಗಳು, ಆಡಳಿತಗಾರರು ಎಲ್ಲರೂ ಧರ್ಮ ಕಲಿಸಿದ ಆಧಾರದ ಮೇಲೆಯೇ ಬದುಕನ್ನು ರೂಪಿಸಿಕೊಂಡವರು ಮತ್ತು ಅವರ ನೆರಳಿನಲ್ಲಿ ಬೆಳೆಯುವ ನಮಗೂ ಧರ್ಮವೇ ನಿಜವಾದ ಗುರು. ಅದು ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಬೆಳೆದು ಬಂದಿದೆ.
ಹಾಗಾದರೆ ಧರ್ಮ ನಮ್ಮ ನಿಜವಾದ ಗುರು ಎಂದಾದರೆ ಆ ಧರ್ಮ ನಮಗೆ ಕಲಿಸುತ್ತಿರುವುದಾದರೂ ಏನು ? ಧರ್ಮದಿಂದ ಕಲಿತು ದೊಡ್ಡವರಾದ ನಮ್ಮ ಸಮಾಜ ಮತ್ತು ನಾವು ಇಂದು ನೆಮ್ಮದಿಯ ಹುಡುಕಾಟ ಮಾಡುತ್ತಿರುವುದಾದರೂ ಏತಕ್ಕೆ ? ಧರ್ಮ ವಿಫಲವಾಗಿದೆಯೇ ಅಥವಾ ಸಫಲವಾಗಿದೆಯೇ ? ಹಾದಿ ತಪ್ಪಿರುವುದು ಧರ್ಮವೇ ಅಥವಾ ವ್ಯಕ್ತಿಗಳೇ ? ಧರ್ಮವನ್ನು ನಾವು ಸರಿಯಾಗಿ ಅರ್ಥಮಾಡಿಕೊಲ್ಲವೇ ?
ಮೋಸ, ವಂಚನೆ, ಹಿಂಸೆ, ದ್ವೇಷ, ಭ್ರಷ್ಟಾಚಾರ ನಮ್ಮ ಸಮಾಜದ ಮತ್ತು ಬದುಕಿನ ಒಂದು ಭಾಗವೇ ಆಗಿರುವುದಕ್ಕೆ ಧರ್ಮ ಜವಾಬ್ದಾರಿ ಹೊರಬೇಕಲ್ಲವೇ ? ಧರ್ಮಕ್ಕೆ ಪರ್ಯಾಯವಾಗಿ ಸಮಾಜವನ್ನು ನಿಯಂತ್ರಿಸುವ ಮಾರ್ಗವಾಗಿ ಸೃಷ್ಟಿಯಾದ ಸಂವಿಧಾನವನ್ನು ಯಾವ ರೀತಿ ಅರ್ಥೈಸುವುದು ?
ಧರ್ಮದಲ್ಲಿ ಎಲ್ಲಕ್ಕೂ ಉತ್ತರವಿದೆಯೆಂದಾದರೆ ಸಮಸ್ಯೆಗಳ ಮೂಲ ಯಾವುದು ? ಜ್ಞಾನಿಗಳಿಗೆ ಮಾತ್ರ ಧರ್ಮ ಎಂದಾದರೆ ಅನಕ್ಷರಸ್ಥರೇ ತುಂಬಿದ್ದ ಸಮಯದಲ್ಲಿ ಧರ್ಮ ಏನು ಮಾಡುತಿತ್ತು ? ಪ್ರಾಯೋಗಿಕವಾಗಿ ಧರ್ಮ ಜೀವನದ ದಿನನಿತ್ಯದ ಚಟುವಟಿಕೆಗಳಿಗೆ ಎಷ್ಟು ಅವಶ್ಯಕ ?
ಭಾರತದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸನಾತನ ಧರ್ಮ ಆಚರಣೆಲ್ಲಿ ಬೆಳೆದು ಬಂದಿದೆ. ಅದು ಈಗಲೂ ಪ್ರಸ್ತುತವೇ ? ಸನಾತನ ಧರ್ಮದ ಆಶಯಗಳನ್ನು ಮತ್ತೆ ಮುನ್ನಲೆಗೆ ತರಬೇಕೆ ? ಧರ್ಮಭೋದನೆಯನ್ನು ಪ್ರೋತ್ಸಾಹಿಸಬೇಕೆ ಅಥವಾ ಆಧುನಿಕ ಶಿಕ್ಷಣವನ್ನು ಬೆಳೆಸಬೇಕೆ ? ಶಿಕ್ಷಣದಲ್ಲಿ ಧರ್ಮವನ್ನು ಕಲಿಸಬೇಕೇ ? ಸನಾತನ ಹಿಂದು ಧರ್ಮ ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆಯನ್ನು ಸ್ಥಾಪಿಸಿದೆಯೇ ? ಹಾಗಾದರೆ ಅಸ್ಪೃಶ್ಯರು ಯಾರು ? ಅವರನ್ನು ಊರ ಹೊರಗೆ ಏಕೆ ಇಡಲಾಗಿತ್ತು ? ಸಂವಿಧಾನದಲ್ಲಿ ಅವರಿಗೆ ಮೀಸಲಾತಿ ಕಲ್ಪಸಿದ್ದು ಏಕೆ ? ಹಿಂದುಳಿದ ವರ್ಗಗಳು ಎಂದರೆ ಯಾರು ? ಮಹಿಳೆಯರ ಅಮಾನುಷ ಶೋಷಣೆಗೆ ಧರ್ಮ ಎಷ್ಟರ ಮಟ್ಟಿಗೆ ಕಾರಣ ?
ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ವೇದ, ಉಪನಿಷತ್ತು, ಮನುಸ್ಮೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವವರು ಇದಕ್ಕೆ ಸ್ಪಷ್ಟ ಉತ್ತರಗಳನ್ನು ಕೊಡುತ್ತಾರೆ. ಧರ್ಮದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಮರ್ಥಿಸುತ್ತಾರೆ. ಧರ್ಮ ಸಮಾನತೆಯನ್ನು ಭೋದಿಸುತ್ತದೆ ಎಂದು ಹೇಳುತ್ತಾರೆ. ಆದರೆ ವಾಸ್ತವ ?
ಮನುಸ್ಮೃತಿ - ಭಗವದ್ಗೀತೆ ಪ್ರತಿಪಾದಿಸಿದ ಧರ್ಮ, ಬುದ್ಧ ಮಹಾವೀರರು ಭೋದಿಸಿದ ಚಿಂತನೆಗಳು, ಭಕ್ತಿಪಂಥ - ದಾಸ ಪಂಥದ ವಿಚಾರಗಳು, ಆಚಾರ್ಯ ತ್ರಯರು ಎತ್ತಿಹಿಡಿದ ಧಾರ್ಮಿಕ ತತ್ವಗಳು, ಬಸವಣ್ಣ ಅಲ್ಲಮರ ಸಮಾನತೆಯ ವಚನ ಸಾಹಿತ್ಯ ಚಳವಳಿ, ರಾಮಕೃಷ್ಣ ಪರಮಹಂಸರಿಂದ ಪ್ರೇರಿತರಾಗಿ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಸಾರಿದ ಭಾರತೀಯ ಸಾಂಸ್ಕೃತಿಕ ವೈಶಿಷ್ಟ್ಯಗಳು, ಮಹಾತ್ಮ ಗಾಂಧಿ ನಂಬಿದ ಧಾರ್ಮಿಕ ಮೌಲ್ಯಗಳು, ಅರಬಿಂದೊ ಘೋಷ್, ವೀರ ಸಾರ್ವರ್ಕರ್ ಬಿತ್ತಿದ ಧರ್ಮದ ಬೀಜಗಳು, ಡಾಕ್ಟರ್ ಅಂಬೇಡ್ಕರ್ ವ್ಯಾಖ್ಯಾನಿಸಿದ ಧರ್ಮದ ಅರ್ಥ ಮತ್ತು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಧರ್ಮವನ್ನು ಸಮಾಜದಲ್ಲಿ ಗಾಢವಾಗಿ ಉಳಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಪರಿವಾರ, ಕುವೆಂಪು ಅವರ ವಿಶ್ವ ಮಾನವ ಪ್ರಜ್ಞೆಯ ನಿಲುವು, ಸಂಘ ಪರಿವಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪರ್ಯಾಯ ರಾಷ್ಟ್ರೀಯತೆ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಸಮಾಜವಾದಿ ಆಂದೋಲನ..
ಈ ಎಲ್ಲದರ ಗೊಂದಲದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಕರಣಗೊಂಡ ಪರಿಸ್ಥಿತಿಯಲ್ಲಿ ತಪ್ಪು ಹೆಜ್ಜೆ ಇಡುತ್ತಿರುವ ಯುವ ಸಮೂಹ, ಅವರನ್ನು ಎಚ್ಚರಿಸುವ ಜವಾಬ್ದಾರಿ ನಿರ್ವಹಿಸಲು ವಿಫಲವಾಗುತ್ತಿರುವ ಹಿರಿಯ ಮಾರ್ಗದರ್ಶಕ ವರ್ಗ ಎಲ್ಲಕ್ಕೂ ಒಂದು ಸ್ಪಷ್ಟ ಮಾಹಿತಿ ಬೇಕಾಗಿದೆ.
ಭಾರತದ ಇಂದಿನ ಪರಿಸ್ಥಿತಿಗೆ ಬೇಕಾಗಿರುವುದು ಸನಾತನ ಹಿಂದೂ ಧರ್ಮವೇ ? ಬುದ್ಧ ಮಹಾವೀರ ಚಿಂತನೆಗಳೇ ? ಆಚಾರ್ಯತ್ರಯರ ಆಚರಣೆಗಳೇ ? ಭಕ್ತಿ ದಾಸ ಪಂಥದ ನಂಬಿಕಗಳೇ ? ಬಸವಣ್ಣನವರ ಸಮಾನತೆಯೇ ? ವಿವೇಕಾನಂದರ ವಿಚಾರಗಳೇ ? ಗಾಂಧಿ ತತ್ವಗಳೇ ? ಅಂಬೇಡ್ಕರ್ ಸಂವಿಧಾನವೇ ? ಆರೆಸ್ಸೆಸ್ ಸಿದ್ದಾಂತವೇ ? ಕುವೆಂಪು - ಲೋಹಿಯ ವಾದವೇ ?
ಈ ಬಗ್ಗೆ ಯೋಚಿಸುತ್ತಾ, ಹುಡುಕಾಡುತ್ತಾ ಅಲೆದಾಡಿದಾಗ ಹೊಳೆದ ವಿಚಾರ ಸರಣಿ......
ನಾಗರಿಕತೆಯ ಉಗಮ, ಧರ್ಮದ ಸೃಷ್ಟಿ, ಅದರ ಬೆಳವಣಿಗೆ, ಅನುಯಾಯಿಗಳ ವರ್ತನೆ, ರಾಜಕೀಯ ಪರಿಣಾಮ, ಆಧುನಿಕತೆ ಮತ್ತು ತಂತ್ರಜ್ಞಾನದ ಕ್ರಾಂತಿ, ಜನರ ಮಾನಸಿಕ ಸ್ಥಿತಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದಾಗ....
ಭಾರತದ ನೆಲದಲ್ಲಿ ನಿಜವಾದ ಮಾನವ ಧರ್ಮ ಅರಳುವುದು 12 ನೇ ಶತಮಾನದ ಅಲ್ಲಮ ಬಸವಣ್ಣ ಮುಂತಾದವರ ವಚನ ಚಳವಳಿಯಲ್ಲಿಯೇ. ಅದಕ್ಕೆ ಮೊದಲಿನ ಎಲ್ಲವೂ ಅಂದಿನ ಸಾಮಾಜಿಕ ವ್ಯವಸ್ಥೆಯ ಮತ್ತು ವ್ಯಕ್ತಿಗತ ಅರಿವಿನ ಆಧಾರದಲ್ಲಿಯೇ ಅನುಭವದಿಂದ ಕಂಡುಕೊಂಡ ಚಿಂತನೆಗಳಾಗಿದ್ದವು. ವೈಯಕ್ತಿಕ ಬದುಕಿನ ಸಾರ್ಥಕತೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದವು. ಸನಾತನ ಧರ್ಮ ಭಕ್ತಿ, ಭಯ, ನಂಬಿಕೆ, ಮೌಡ್ಯದ ಆಧಾರದಲ್ಲಿ ರೂಪಗೊಂಡಿತು. ಮನುಷ್ಯರಲ್ಲಿ, ಲಿಂಗದಲ್ಲಿ ಅಸಮಾನತೆಯನ್ನು ಪ್ರತಿಪಾದಿಸಿತು. ಬುದ್ಧ ಮಹಾವೀರರ ಚಿಂತನೆಗಳು ಅದಕ್ಕೆ ಬಂಡಾಯ ಎಂಬಂತೆ ಗೋಚರಿಸಿದರು ಅದು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಆಗಿನ ಕಾಲದಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ.
ವಚನ ಚಳವಳಿಯ ಅನುಭವ ಮಂಟಪ ಇಡೀ ಮನುಕುಲ ಅಥವಾ ಮಾನವ ಜನಾಂಗ ಒಂದೇ, ಆತ ಚಮ್ಮಾರನಿರಲಿ, ಕಮ್ಮಾರನಿರಲಿ, ಆಕೆ ವೇಶ್ಯೆಯಾಗಿರಲಿ, ಸಾಧ್ವಿಯಾಗಿರಲಿ, ಆಡುಭಾಷೆಯ ಪತಿವ್ರತೆಯಾಗಿರಲಿ ಎಲ್ಲರೂ ಸಮಾನರು ಎಂದು ಹೇಳಿದ ಅದ್ಬುತ ಚಿಂತನೆ ಆ ಸಮಯದಲ್ಲಿಯೇ ಟಿಸಿಲೊಡೆಯಿತು. ಸನಾತನ ಧರ್ಮದಲ್ಲಿ ಇದೇ ಅರ್ಥದ ಶ್ಲೋಕಗಳು ಇರಬಹುದಾದರೂ ಅದು ಕೇವಲ ಶಾಸ್ತ್ರವಾಗಿತ್ತು.ಆಚರಣೆಯಲ್ಲಿ ತರುವ ಯಾವ ಉಮೇದು ಇರಲಿಲ್ಲ. ಅದಕ್ಕೆ ಉದಾಹರಣೆ ಜಾತೀಯತೆ. ಆದರೆ ವಚನ ಚಳವಳಿ ಭಾರತದಾದ್ಯಂತ ವ್ಯಾಪಿಸಲಿಲ್ಲ. ಉತ್ತರದಲ್ಲಿ ಇತರ ಚಳವಳಿಗಳು ಪ್ರಭಾವ ಹೊಂದಿದ್ದವು.
ತದನಂತರ ಭಾರತೀಯ ಜೀವನಶೈಲಿಯ ಧರ್ಮವನ್ನು ಅತ್ಯಂತ ಅರ್ಥಗರ್ಭಿತ ಮತ್ತು ವಾಸ್ತವ ನೆಲೆಯಲ್ಲಿ ಅರ್ಥೈಸಿದವರು ಸ್ವಾಮಿ ವಿವೇಕಾನಂದರು. ಭಾರತದ ನಿಜವಾದ ಸಾಂಸ್ಕೃತಿಕ ರಾಯಭಾರಿ ಎಂದು ಪರಿಗಣಿಸಬಹುದಾದವರು ವಿವೇಕಾನಂದರು. ಧರ್ಮದ ತಿರುಳನ್ನು ವಾಸ್ತವ ಮತ್ತು ಪ್ರಾಯೋಗಿಕವಾಗಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಪ್ರಚುರಪಡಿಸಿದವರು ವಿವೇಕಾನಂದರು. ಸಾಂಪ್ರದಾಯಿಕ ಆಚರಣೆಗಳಲ್ಲಿ ಮೌಢ್ಯ ಮತ್ತು ವೈಚಾರಿಕ ಪ್ರಜ್ಞೆಯನ್ನು ಪ್ರತ್ಯೇಕಿಸಿದವರು ವಿವೇಕಾನಂದರು. ಪುರೋಹಿತ ಶಾಹಿಯ ಅಸಮಾನತೆ ಬಗ್ಗೆ ಭಾರತೀಯರೆ ಮತ್ತು ಹಿಂದುಗಳೇ ನಾವೆಲ್ಲರೂ ಒಂದೇ ಎಂದು ಸಮಾನತೆಯ ಪ್ರಜ್ಞೆಗೆ ನಾಂದಿ ಹಾಡಿದವರು ವಿವೇಕಾನಂದರು.
ಈ ಎಲ್ಲಕ್ಕೂ ಮುಕುಟಪ್ರಾಯದಂತೆ ಸನಾತನ ಧರ್ಮ ಮತ್ತು ಅದರ ಆಚರಣೆಗಳ ಜೊತೆಗೆ ನಾಗರಿಕ ಪ್ರಜ್ಞೆಯ ಸಮ್ಮಿಲನದಂತೆ ಭಾರತದ ಸಂವಿಧಾನಕ್ಕೆ ಮುನ್ನುಡಿ ಬರೆದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಎಲ್ಲಿಯೂ ಸನಾತನ ಧರ್ಮದ ನಂಬಿಕೆಗಳಿಗೆ ಅಪಚಾರವಾಗದಂತೆ ಆದರೆ ಅದರಲ್ಲಿನ ಹುಳುಕುಗಳಿಗೆ ಜಾಗವಿಲ್ಲದಂತೆ, ಪಾಶ್ಚಾತ್ಯ ಸಂಸ್ಕೃತಿಯ ಅಂಶಗಳನ್ನು ಒಳಗೊಂಡ ಸಂವಿಧಾನ ರಚನೆಗೆ ಶ್ರಮಿಸಿದರು. ಧರ್ಮ ಒಂದು ರೀತಿಯಲ್ಲಿ ಬಾಹ್ಯವಾಗಿ ಸಂವಿಧಾನದ ನೀತಿ ನಿಯಮಗಳಾಗಿ ಪರಿವರ್ತನೆ ಹೊಂದಿತು.
ಅದರ ನಂತರವೂ ಕರ್ನಾಟಕದಲ್ಲಿ ಕುವೆಂಪು ಅವರು ಮೌಡ್ಯಗಳನ್ನು ಅಲ್ಲಗಳೆಯುವ, ವಿಶ್ವಮಾನವ ಪ್ರಜ್ಞೆ ಬೆಳೆಸುವ ಸಾಹಿತ್ಯ ಜಾಗೃತಿಯ ಪ್ರಯತ್ನಗಳು ಇಲ್ಲಿ ನಡೆದವು. ರಾಷ್ಟ್ರ ಮಟ್ಟದಲ್ಲಿ ಸಮಾಜವಾದಿ ಲೋಹಿಯಾರವರು ಭಾರತೀಯ ಜೀವನಶೈಲಿಯ ವಾಸ್ತವವನ್ನು, ಧರ್ಮದ ಹುಳುಕುಗಳನ್ನು ತುಂಬಾ ಕಠಿಣವಾಗಿಯೇ ವ್ಯಾಖ್ಯಾನಿಸಿದರು.
ಧರ್ಮ - ಸಂವಿಧಾನ - ಆಧುನಿಕ ಶಿಕ್ಷಣ ಇದರಲ್ಲಿ ಯಾವುದು ಗುರುವಾಗಬೇಕು ಎಂಬ ಪ್ರಶ್ನೆಯೂ ನಮ್ಮನ್ನು ಕಾಡುತ್ತದೆ. ಮೂಲಭೂತವಾಗಿ ಎಲ್ಲಾ ಧರ್ಮಗಳು ನಮ್ಮ ಸ್ವತಂತ್ರ ಚಿಂತನಾ ಶೈಲಿಯನ್ನು ಹತ್ತಿಕ್ಕಿ ಎಲ್ಲವೂ ಪೂರ್ವ ನಿಶ್ಚಿತ ಅದನ್ನು ಅನುಸರಿಸಿ ಎಂದೇ ಒತ್ತಡ ಹೇರುತ್ತದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಅಪವಾದ ಎಂಬಂತೆ ಸ್ವತಂತ್ರ ಚಿಂತನೆಗೆ ಅವಕಾಶ ಇದ್ದರೂ ಅದು ಕೇವಲ ಶಾಸ್ತ್ರಕ್ಕೆ ಮತ್ತು ಮಿತಿಗೆ ಒಳಪಡುತ್ತದೆ. ಅಸಮಾನತೆ ಆಚರಣೆಯಲ್ಲಿ ಪ್ರಬಲವಾಗಿದೆ. ಅದನ್ನು ಗುರುವಾಗಿ ಸ್ವೀಕರಿಸಿದರೆ ಅಸಮಾನತೆ ಜಾತೀಯತೆ ಮೌಡ್ಯ ಅಮಾನವೀಯತೆಯನ್ನು ಒಪ್ಪಿದಂತೆ ಆಗುತ್ತದೆ.
ಅದಕ್ಕೆ ಪರ್ಯಾಯವಾಗಿ ರಚಿತವಾದ ಸಂವಿಧಾನ ತಕ್ಕ ಮಟ್ಟಿಗೆ ಗುರುವಿನ ಸ್ಥಾನದಲ್ಲಿ ನಿಂತರು ಸಹ ಅದು ಸಾಕಷ್ಟು ವಿಫಲವಾಗಿರುವುದನ್ನು ಪ್ರತಿನಿತ್ಯ ಗಮನಿಸುತ್ತಲೇ ಇದ್ದೇವೆ. ಉಳ್ಳವರ ಪಾಲಾದ ರೀತಿಯನ್ನು, ಅಪರಾಧಿಗಳ ರಕ್ಷಣೆಗೆ ಅನುಕೂಲಕರವಾಗಿ ಪರಿಣಮಿಸಿದ ನ್ಯಾಯಾಂಗ ವ್ಯವಸ್ಥೆಯನ್ನು, ಭ್ರಷ್ಟಗೊಂಡ ಮತ್ತು ಬಲಾಡ್ಯರ ಪರವಾದ ಆಡಳಿತ ಕ್ರಮವನ್ನು ನೋಡುತ್ತಲೇ ಬೆಳೆಯುತ್ತಿದ್ದೇವೆ. ಜನಜಾಗೃತಿ ಮೂಡುವವರೆಗೂ ಅದನ್ನು ಗುರುವಿನ ಸ್ಥಾನದಲ್ಲಿ ನಿಲ್ಲಿಸುವುದು ಕಷ್ಟ.
ಕೊನೆಯದಾಗಿ,
ಆಧುನಿಕ ಶಿಕ್ಷಣವನ್ನು ಭಾರತೀಕರಣಗೊಳಿಸಿ, ಈ ನೆಲದಲ್ಲಿ ಬೆಳೆದು ಬಂದ ಮತ್ತು ನಮ್ಮ ಅನುಭವದ ಆಧಾರದ ಮೇಲೆ ನಾವು ಕಂಡುಕೊಂಡ ಸತ್ಯಗಳನ್ನು ಒಳಗೊಂಡ, ಸಂವಿಧಾನದ ಮೂಲ ಆಶಯಗಳಿಗೆ ಪೂರಕವಾದ, ವಿಶ್ವ ಮಾನವ ಪ್ರಜ್ಞೆಗೆ ಹತ್ತಿರವಾದ, ಸಂಸ್ಕೃತಿಯನ್ನು ಶಿಕ್ಷಣ ಕ್ರಮವಾಗಿ ರೂಪಿಸಿ ಹೊಸ ನಾಗರಿಕ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಅದನ್ನೇ ಗುರುವಿನ ( ಕಲಿಕೆಯ ) ಸ್ಥಾನದಲ್ಲಿ ನಿಲ್ಲಿಸಬೇಕಿದೆ. ಧರ್ಮ ಮತ್ತು ಸಂವಿಧಾನ ಎರಡೂ ಇದರಲ್ಲಿ ಐಕ್ಯವಾಗಿರುತ್ತದೆ.
ಧರ್ಮ ಹೊರತುಪಡಿಸಿದ ಸಂವಿಧಾನವಿಲ್ಲ, ಸಂವಿಧಾನ ಹೊರತುಪಡಿಸಿದ ಶಿಕ್ಷಣವಿಲ್ಲ. ಶಿಕ್ಷಣವಿಲ್ಲದ ( ಸಂಸ್ಕಾರ - ಅರಿವು - ಬದುಕಿನ ಮಾರ್ಗದರ್ಶನ ) ನಾಗರಿಕ ಸಮಾಜ ಇರುವುದು ಸಾಧ್ಯವೇ ಇಲ್ಲ. ಕೇವಲ ಸಾಂಸ್ಕೃತಿಕ ಮುಖವಾಡದ ನಮ್ಮಂತ ಟೊಳ್ಳು ವ್ಯಕ್ತಿತ್ವದ ಅಡಿಪಾಯ ಸರಿಯಿಲ್ಲದ ಸಮಾಜ ಮಾತ್ರ ಅಸ್ತಿತ್ವವನ್ನು ಉಳಿಸಿಕೊಂಡು ಸದಾ ಅತೃಪ್ತ ಆತ್ಮದಂತೆ ಗೊಣಗುತ್ತಿರುತ್ತದೆ.
ಒಣ ವೈಚಾರಿಕತೆ ಅಥವಾ ಕುರುಡು ನಂಬಿಕೆಯ ಧರ್ಮ ಎರಡೂ ಅಪಾಯಕಾರಿ. ನಮ್ಮ ಸಂಪ್ರದಾಯ ಸಾಂಸ್ಕೃತಿಕ ಮೌಲ್ಯಗಳನ್ನು ನಾಗರಿಕ ಪ್ರಜ್ಞೆ ಮತ್ತು ವೈಚಾರಿಕತೆಯೊಂದಿಗೆ ಬೆಸೆದ ಶಿಕ್ಷಣ ಕ್ರಮವೇ ನಮ್ಮ ಧರ್ಮವಾಗಬೇಕು ಮತ್ತು ಅದು ಕಾಲದ ಜೊತೆ ಹೆಜ್ಜೆ ಹಾಕುತ್ತಾ ನಮ್ಮ ಸ್ವತಂತ್ರ ಚಿಂತನೆಯನ್ನು, ವ್ಯಕ್ತಿ ಸ್ವಾತಂತ್ರ್ಯವನ್ನು ಬೆಳೆಸಬೇಕು. ಅದೇ ನಮ್ಮ ಗುರುವಾಗಬೇಕು.
ಗುರು ಪೂರ್ಣಿಮೆಯ ಸಂದರ್ಭದಲ್ಲಿ ನಮ್ಮ ಸಮಾಜದ ಗುರುವನ್ನು ಹುಡುಕಲು ಅಲೆದಾಡುತ್ತಿರುವಾಗ ಮೂಡಿದ ಭಾವನೆಗಳ ಅಕ್ಷರ ರೂಪ...
ಇದು ಸಾಕಷ್ಟು ಚರ್ಚೆಗೆ, ಇನ್ನಷ್ಟು ಆಳಕ್ಕೆ, ಮತ್ತಷ್ಟು ಪ್ರಶ್ನೆಗಳಿಗೆ ತೆರೆದು ಕೊಳ್ಳುವ ವಿಷಯ. ಇದು ಕೇವಲ ಒಂದು ಸಂಕ್ಷಿಪ್ತ ನೋಟ ಮಾತ್ರ.
- ಜ್ಞಾನ ಭಿಕ್ಷಾ ಪಾದಯಾತ್ರೆಯ 266 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಗ್ರಾಮದಿಂದ ಸುಮಾರು 45 ಕಿಲೋಮೀಟರ್ ದೂರದ ನಾವುಂದ ಗ್ರಾಮ ತಲುಪಿತು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ