ಒಂದು ಸತ್ಯ ಮತ್ತು ಕಥೆ
ನಾನಾಗ ಹದಿನಾರರ ಹುಡುಗ, ಪಿ ಯು ಸಿ ಓದುತ್ತಿದ್ದೆ. ಆಗ ಜರುಗಿದ ಒಂದು ವಿಸ್ಮಯಕಾರಿ ಘಟನೆಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
ನಾವು ಹನ್ನೆರಡು ಜನ ಸ್ನೇಹಿತರು ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದೆವು. ನಾವಿಳಿಯಬೇಕಿದ್ದ ಸ್ಟೇ ಹೋಂಗೆ ತಲುಪಲು ಅದಾಗಲೇ ತುಂಬಾ ತಡವಾಗಿತ್ತು. ಸುತ್ತಲೂ ದಟ್ಟವಾದ ಕಾಡು, ತಾನು ಸಾಲ ಕೊಟ್ಟ ಬೆಳಕನ್ನೆಲ್ಲ ಒಂದು ಸಾಸಿವೆ ಕಾಳಿನಷ್ಟೂ ಬಿಡದೆ, ಪೂರ್ಣ ವಸೂಲಿ ಮಾಡಿಕೊಂಡು ಮುಳುಗುತ್ತಿರುವ ಸೂರ್ಯ, ತನ್ನ ಮರಿಗಳ ಪಾಡು ಏನಾಯಿತೋ ಎಂದು ಧಾವಂತದ ರೆಕ್ಕೆ ಬಡಿಯುತ್ತಾ, ಚಿಲಿಪಿಲಿಗುಟ್ಟುತ್ತಾ ತನ್ನ ಗೂಡಿಗೆ ಮರಳುತ್ತಿರುವ ಹಕ್ಕಿಗಳು, ಅಡವಿಯ ನಿಗೂಢತೆಯನ್ನೆಲ್ಲಾ ಕೂಗಿ ಕೂಗಿ ಹೇಳುತ್ತಿದೆಯೇನೋ ಎಂಬಂತೆ ಗಂಟಲು ಹರಿದುಕೊಂಡು ಕಿರುಚುತ್ತಿದ್ದ ಹುಳು, ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಂತೆ ಹತ್ತಿರದಲ್ಲೇ ಧುಮುಕುತ್ತಿದ್ದ ಜಲಪಾತ ಶಬ್ದದ ಪರಾಕ್ರಮ, ಈ ಪರಿಸರದ ಮಧ್ಯೆ ಇದ್ದ ನಮ್ಮ ಸ್ಟೇ ಹೋಂ ದೀಪದ ಬೆಳಕು ಕಂಡೊಡನೆಯೇ ಬೆಳಗ್ಗಿನಿಂದ ತಿರುಗಾಡಿ ದಣಿದಿದ್ದ ನಮ್ಮ ದೇಹದಿಂದ ಅನಂದದ ನಿಟ್ಟುಸಿರು ಬಂತು. ಆ ವೇಳೆಗಾಗಲೇ ನಮ್ಮ ಸುತ್ತ ಮುತ್ತ ಹಸಿರಾಗಿ ಕಾಣುತ್ತಿದ್ದ ಮರಗಿಡಗಳೆಲ್ಲ ಸೂರ್ಯನ ಮಂದ ಬೆಳಕಿನಲ್ಲಿ ಕಪ್ಪಾಗಿ ಕಾಣುತ್ತಿದ್ದವು. ಬಸ್ಸಿನವನು ಸ್ಟೇಹೋಂ ನ ಹತ್ತಿರ ನಮ್ಮನ್ನೆಲ್ಲ ಇಳಿಸಿ ಅವನ ದಾರಿ ಹಿಡಿದ. ಅದು ಮಾಘಿಯ ಚಳಿಗಾಲ. ಹಾಗಾಗಿ ಸ್ಟೇಹೋಂ ಅತಿಥಿಗಳ ಸಂಖ್ಯೆ ಕಡಿಮೆಯಿತ್ತು. ನಾಲ್ಕು ಜನಕ್ಕೆ ಒಂದು ರೂಂ ನಂತೆ ಒಟ್ಟು ಮೂರು ರೂಂ ಬಾಡಿಗೆ ತೆಗೆದುಕೊಂಡೆವು. ನನ್ನ ಸ್ನೇಹಿತರೊಂದಿಗೆ ಹಾಸ್ಯ ಮಾಡಿಕೊಂಡು ನಕ್ಕು ನಲಿಯುತ್ತಿದ್ದರೂ, ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಸ್ಥಳದ ಬಗ್ಗೆ ಅವ್ಯಕ್ತ ಆತಂಕ ಮನೆಮಾಡಿತ್ತು.
ನಾವೆಲ್ಲ ಊಟ ಮುಗಿಸಿ ಕೋಣೆಗೆ ಬಂದೆವು. ಮರುದಿನ ಬೆಳಿಗ್ಗೆ ಬೇಗ ಎದ್ದು ನೋಡಲು ತುಂಬಾ ಪ್ರೇಕ್ಷಣೀಯ ಸ್ಥಳಗಳಿದ್ದುದರಿಂದ ಹೆಚ್ಚು ಸಮಯ ಎದ್ದಿರದೇ ದಿಂಬಿಗೆ ತಲೆಯಿಟ್ಟೆವು. ಪ್ರಯಾಣದ ದಣಿವು ಬಹಳ ಬೇಗ ನಿದ್ದೆಗೆ ಜಾರಿಸಿತು. ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದ ಹಾಗೆ ನಾನು ಎಚ್ಚರಗೊಂಡೆ. ಸುತ್ತಲೂ ಕತ್ತಲೆ, ಆ ಅವ್ಯಕ್ತ ಆತಂಕ ಭಯವಾಗಿ ಪೂರ್ಣ ರೂಪ ಪಡೆದುಕೊಂಡಿತ್ತು. ಕೊರೆಯುವ ಚಳಿ ಅದರ ವ್ಯಾಕುಲತೆಯನ್ನು ದ್ವಿಗುಣಗೊಳಿಸಿತ್ತು. ಆ ಮುಚ್ಚಿದ ಕೋಣೆಯಲ್ಲಿ ನೀರವ ಮೌನ. ಅದನ್ನು ಭೇದಿಸಿಕೊಂಡು ಬರುತ್ತಿದ್ದ ತುಟುಕ್ ತುಟುಕ್ ಎಂದು ನೀರು ತೊಟ್ಟಿಕ್ಕುವ ಶಬ್ಧ. ಭಯದಿಂದಲೋ ಅಥವ ಚಳಿಯಿಂದಲೋ ಕಾಲುಗಳು ನಡುಗುತ್ತಿದ್ದವು. ಹೇಗೋ ಭಂಡಧೈರ್ಯಮಾಡಿ ಬಚ್ಚಲು ಮನೆಯ ದೀಪ ಹಾಕಿಕೊಂಡು ಹೋಗಿ ನೋಡಿದೆ. ನಲ್ಲಿಯಿಂದ ನೀರಿನ ಹನಿಗಳು ಸೋರುತ್ತಾ ಅರ್ಧ ತುಂಬಿದ ಬಕೆಟ್ ನೊಳಕ್ಕೆ ಸುರಿಯುತ್ತಿದ್ದವು. ಅದನ್ನು ನಿಲ್ಲಿಸಿ ಬಕೆಟ್ ಅನ್ನು ಪಕ್ಕಕ್ಕೆ ಸರಿಸಿ, ದೀಪ ಆರಿಸಿ ಬಂದು ಮಲಗಿದೆ.
ಸ್ವಲ್ಪ ಹೊತ್ತಿನಲ್ಲೇ ಮತ್ತೆ ಮಂಪರು, ನಿದ್ದೆಗೆ ಜಾರಿದ ಹಾಗಾಯ್ತು, ಯಾವುದೋ ಒಂದು ಅಗ್ನಾತ ಕೂಗು ನನ್ನ ಅನುಭವಕ್ಕೆ ಬಂತು. ಹೊದೆದಿದ್ದ ಹೊದಿಕೆ ಕೆಳಗೆ ಜಾರಿದ ಹಾಗೆ, ನಾನು ನಿಂತಿದ್ದ ಹಾಗೆ, ನನ್ನ ಪಾದಗಳು ಚಲಿಸುವುದಕ್ಕೆ ಶುರುವಿಟ್ಟವು. ಏನೊಂದೂ ಕಾಣಿಸುತ್ತಿರಲಿಲ್ಲ ಸುತ್ತಲೂ ಗಾಡಾಂಧಕಾರ, ಕೋಣೆಯ ಬಾಗಿಲು ತೆಗೆದೆ. ಹಾಗೆ ನಡೆದುಕೊಂಡು ಸ್ಟೇಹೋಂ ನಿಂದ ಆಚೆಗೆ ಬಂದೆ, ಪಾದಗಳು ಚಲಿಸುತ್ತಲೇ ಇವೆ, ಸುತ್ತಲಿರುವ ದೆವ್ವಗತ್ತಲೆಯನ್ನೂ ಲೆಕ್ಕಿಸದೇ, ಎಲ್ಲಿದ್ದೇನೆ ಏನು ಮಾಡುತ್ತಿದ್ದೇನೆ ಯಾವುದೂ ಅನುಛವಕ್ಕೆ ಬಾರದೆ, ಮುನ್ನಡೆಯುತ್ತಿದ್ದೆ. ಅದೊಂದು ಗುಡಿಯೋ, ಅಥವಾ ಸ್ಮಶಾಣವೋ, ನನಗರಿಯದು.ಏನೂ ಕಾಣಿಸುತ್ತಿರಲಿಲ್ಲ, ಬರೀ ಕತ್ತಲೆ. ನನ್ನ ದಾರಿಗೆ ಅಡ್ಡವಾಗಿ ಬಂಡೆಗಳು ಬಂದವು, ಅವುಗಳನ್ನೆಲ್ಲ ದಾಟಿದೆ, ಹುಲ್ಲಿನ ಮೇಲೆ ನಡೆದೆ. ಮುಂದೆ ಮರಳು ನಂತರ ಒಂದು ತೇವವಾದ ಪ್ರದೇಶ, ಹೀಗೇ ಸಾಗುತ್ತಾ ಪಾದಗಳು ಒದ್ದೆಯಾದವು, ನೀರು!! ನೀರು ಹರಿಯುತ್ತಿದೆ. ಇದ್ದಕ್ಕಿದ್ದ ಹಾಗೆ ಎಚ್ಚರಗೊಂಡೆ. ಯಾವುದೋ ನದಿಯೊಳಗೆ ನಿಂತಿದ್ದೇನೆ, ಸುತ್ತಲೂ ಏನೂ ಕಾಣುತ್ತಿಲ್ಲ. ನಾನು ನಿದ್ದೆಯಲ್ಲೆ ನಡೆದುಕೊಂಡು ಬಂದಿದ್ದೆ. ಆ ಯಮ ಭಯವನ್ನು ಜೀವನದಲ್ಲಿ ಎಂದೂ ಅನುಭವಿಸಿರಲಿಲ್ಲ.. ಅಂತಹ ದುಗುಡ. ನಾನು ಜೀವಂತವಾಗಿದ್ದೆನೋ ಅಥವ ಪಿಶಾಚಿಯಾಗಿ ಅಲೆಯುತ್ತಿದ್ದೇನೋ ಗೊತ್ತಿಲ್ಲ. ಕೊನೆಗೂ ಆ ನದಿಯ ದಂಡೆಗೆ ಬಂದು ಕುಳಿತೆ. ನನ್ನ ಕೈ ಕಾಲುಗಳೆಲ್ಲ ಆ ಹಡಿಚಳಿಯ ಪ್ರಭಾವಕ್ಕೆ ಸಿಲುಕಿ ಸೆಟೆತುಕೊಂಡಿದ್ದವು. ಹಾಗೇ ಮುದುರಿಕೊಂಡೆ. ಭಯದಲ್ಲಿ ಮೈಯೆಲ್ಲ ಕಂಪಿಸುತ್ತಿತ್ತು. ಇದ್ದಕ್ಕಿದ್ದಹಾಗೇ ನನ್ನ ಭುಜವನ್ನು ಭಿಗಿಯಾಗಿ ಹಿಡಿದು ಯಾರೋ ಅಲ್ಲಾಡಿಸಿದರು.
ಥಟ್ಟನೆ ಕಣ್ಬಿಟ್ಟೆ ಬೆಳಗಾಗಿತ್ತು. ಎದುರಿನಲ್ಲಿ ಅಮ್ಮ ನಿಂತಿದ್ದಳು. "ಕಾಫಿ ಇಟ್ಟಿದ್ದೀನಿ ಏಳು"ಎಂದಳು. ಎದ್ದು ಮುಖ ತೊಳೆದು ಕಾಫಿ ಕುದಿದೆ. :)