ಒಂದು ಸುಂದರ ಕನಸು ...

ಒಂದು ಸುಂದರ ಕನಸು ...

ಕವನ

ತೋಟದ ಬದಿಯಲಿ ಸಪುರದ ಓಣಿ
ನೋಟಕೆ ಚ೦ದದ ಅಡಕೆಯ ಗೋಣಿ
ಮೀಟಿತು ಪಿಸಿಪಿಸಿ ಗುಸುಗುಸು ವಾಣಿ
ಪೇಟೆಯ ಕೂಸು ಊರಿನ ಮಾಣಿ

ಕೂಸಿನ ತಲೆಯೋ ಬಾಬಿನ ಕಟ್ಟು
ಕೇಸರಿ ಶರುಟು ಹೈಹೀಲ್ಡ್ ಮೆಟ್ಟು
ಮಾಸಿದ ಪ್ಯಾಂಟಲಿ  ಗರಿಗರಿನೋಟು
 ಕಿಸೆಯ ಮೊಬೈಲಲಿ ಇಂಟರ್ನೆಟ್ಟು


ಬಿಳಿಬನಿಯನ್ನು ತಲೆಗೆ ಮುಂಡಾಸು
ಗಿಳಿ ಬಣ್ಣದ್ದು ಹೆಗಲ ಬೈರಾಸು
ತಿಳಿನಗುವಿನ ಮೊಗ ಕೈಲಿ ಪಿಕ್ಕಾಸು
ಹಳ್ಳಿಯ ಮಾಣಿಯ ಸುಂದರ ಪೋಸು


 ಕೂಸಿಗೆ ಗೊತ್ತು  ಹೊಸ ಕಂಪ್ಯೂಟರ್
ಕ್ಲಾಸಿಗೆ ಹೋಗಲು ಬಣ್ಣದ ಸ್ಕೂಟರ್
ಆಸೆಯೋ ಮಾಣಿಗೆ ಪಂಪು ಮೋಟರ್
ಆಸರು ಆದರೆ ಬೆಲ್ಲಕೆ ವಾಟರ್  

 

ಉತ್ತರ ಧ್ರುವಕೆ ದಕ್ಷಿಣ ಧ್ರುವವು
ಹತ್ತಿರ ಬಂದರೆ ಎಂತ ಸೆಳೆತವು
ಗೊತ್ತಾಗಲಿ ಇಂದಿದುವೆ ವಿಶೇಷವು
ಕತ್ತಲೆ ಕಳೆದು ಹೊಸ ಮುಂಜಾವು


ಹೊಸರಾಗವ ಉಲಿಯಲಿ ಇವರಿಬ್ಬರು
ಆಸೆಯ ಪೋಷಿಸಿ ಕಟ್ಟಲಿ ಸೂರು
ಉಸಿರೊಂದಾದರೆ ಜೀವನ ಹಸಿರು
ಕೆಸರಾದರೆ ಕೈ ಬಾಯಿಗೆ ಮೊಸರು

Comments