ಒಂದು ಸುಂದರ ಸಂದೇಶ ಪ್ರೀತಿಸುವ ಮನಸ್ಸುಗಳಿಗಾಗಿ...
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಎಸೆತದಲ್ಲಿ, ನೀರಜ್ ಚೋಪ್ರಾ - ಭಾರತ - ಚಿನ್ನ… ಅರ್ಷದ್ ನದೀಮ್ - ಪಾಕಿಸ್ತಾನ - ಬೆಳ್ಳಿ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನದ ನದೀಮ್ ಗೆ ತನ್ನ ರಾಷ್ಟ್ರಧ್ವಜ ಆ ಕ್ಷಣದಲ್ಲಿ ದೊರೆಯದ ಕಾರಣ ಚೋಪ್ರಾ ಅವರ ಪ್ರೀತಿಯ ಆಹ್ವಾನದ ಮೇರೆಗೆ ಭಾರತದ ಧ್ವಜದ ಅಡಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಚೋಪ್ರಾ ಪ್ರಶಸ್ತಿ ಗೆದ್ದ ನಂತರ ಮೈದಾನದ ಸುತ್ತ ಓಡುವಾಗ ಮರೆಯದೆ ಬೆಳ್ಳಿ ಪ್ರಶಸ್ತಿ ಪಡೆದ ಪಾಕಿಸ್ತಾನದ ನದೀಮ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋದರು. ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪಾಕಿಸ್ತಾನದ ಪರ ಮೊದಲ ಪ್ರಶಸ್ತಿ ಪಡೆದ ಕ್ರೀಡಾಪಟು ನದೀಮ್.
" ನನ್ನ ಮತ್ತು ಚೋಪ್ರಾ ನಡುವೆ ಆರೋಗ್ಯಕರ ಸ್ಪರ್ಧೆ ಇದೆ. ಅದಕ್ಕಿಂತ ಮುಖ್ಯವಾಗಿ ಜರ್ಮನ್ ಮತ್ತು ಯೂರೋಪಿನ ಪ್ರಾಬಲ್ಯವನ್ನು ಜಾವೆಲಿನ್ ಎಸೆತದಲ್ಲಿ ಭಾರತ ಮತ್ತು ಪಾಕಿಸ್ತಾನ ಮುರಿದಿದ್ದಕ್ಕೆ ಹೆಮ್ಮೆ ಇದೆ " ನದೀಮ್. ಮತ್ತಷ್ಟು ಸುಂದರ ಸುದ್ದಿ ಇದೆ ಓದಿ..
ಪತ್ರಕರ್ತರೊಬ್ಬರು ಚೋಪ್ರಾ ಅವರ ತಾಯಿಯನ್ನು ಕೇಳಿದ ಪ್ರಶ್ನೆ " ನಿಮ್ಮ ಮಗ ಪಾಕಿಸ್ತಾನದ ಎದುರಾಳಿಯನ್ನು ಸೋಲಿಸಿ ಪ್ರಶಸ್ತಿ ಗಳಿಸಿರುವುದಕ್ಕೆ ನಿಮಗೆ ಎಷ್ಟು ಹೆಮ್ಮೆ ಎಂದು ಕೇಳಿದ್ದಕ್ಕೆ ಆ ತಾಯಿ ನೀಡಿದ ಉತ್ತರ " 'ನೋಡಿ, ಎಲ್ಲರೂ ಮೈದಾನದಲ್ಲಿ ಆಡಲು ಬಂದಿದ್ದಾರೆ. ಒಬ್ಬರು ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗಾಗಿ ಪಾಕಿಸ್ತಾನ ಅಥವಾ ಹರಿಯಾಣದವರು ಎಂಬ ಪ್ರಶ್ನೆಯೇ ಇಲ್ಲ. ನೀರಜ್ ಗೆದ್ದಿರುವುದು ಬಹಳ ಸಂತೋಷವಿದೆ. ಪಾಕಿಸ್ಥಾನಿ ಆಟಗಾರ ಗೆದ್ದಿದ್ದರೂ ಕೂಡ ಅಷ್ಟೇ ಸಂತೋಷ ಇರುತ್ತಿತ್ತು,'
ದ್ವೇಷದ ಬೆಂಕಿ ಹಚ್ಚಲು ಕಾಯುತ್ತಿದ್ದ ಆ ಪತ್ರಕರ್ತರಿಗೆ ಕಪಾಳವೋಕ್ಷದಂತ ಉತ್ತರ. ಭಾರತ ಪಾಕಿಸ್ತಾನದ ಮತಾಂಧ ಶಕ್ತಿಗಳ ವಿರುದ್ಧ, ಭಯೋತ್ಪಾದಕರ ವಿರುದ್ಧ, ದುಷ್ಟ ರಾಜಕಾರಣಿಗಳ ವಿರುದ್ಧ, ವಂಚಕ ಧರ್ಮಾಧಿಕಾರಿಗಳ ವಿರುದ್ಧ ಮಾನವೀಯ ಮನಸ್ಸುಗಳ ಸುಂದರ ಪ್ರೀತಿಯ ಸಂದೇಶವಿದು. ಮನುಷ್ಯರು ಯೋಚಿಸಬೇಕಾದ ರೀತಿಯೇ ಹೀಗಿರಬೇಕು. ದುರಾದೃಷ್ಟವಶಾತ್ ಮತಾಂಧ ಶಕ್ತಿಗಳು ಇಡೀ ಸಮಾಜದ ಮನಸ್ಸುಗಳಿಗೆ ವಿಷ ಬೆರೆಸಿ ಅವರು ಪ್ರತಿ ವಿಷಯದಲ್ಲೂ ದ್ವೇಷವನ್ನೇ ಹರಡುತ್ತಾರೆ. ದುರಂತವದರೆ ಅದೇ ದ್ವೇಷ ಇಬ್ಬರನ್ನೂ ಸುಡುತ್ತಿದೆ. ಅದರ ಅರಿವು ಮಾತ್ರ ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ ಎಂಬುದೇ ದೊಡ್ಡ ಚಿಂತೆ.
ಒಂದು ಹುಚ್ಚು ಕಲ್ಪನೆ. ಭಾರತದ ಜನಸಂಖ್ಯೆ ಸುಮಾರು 140 ಕೋಟಿ, ಪಾಕಿಸ್ತಾನದ ಜನಸಂಖ್ಯೆ ಸುಮಾರು 25 ಕೋಟಿ. ಬಾಂಗ್ಲಾದೇಶದ ಜನಸಂಖ್ಯೆ ಸುಮಾರು 18 ಕೋಟಿ, ಶ್ರೀಲಂಕಾದ ಜನಸಂಖ್ಯೆ ಸುಮಾರು 3 ಕೋಟಿ, ನೇಪಾಳದ ಜನಸಂಖ್ಯೆ ಸುಮಾರು 3 ಕೋಟಿ. ಈ ಅಖಂಡ ಪ್ರದೇಶದ ಒಟ್ಟು ಜನಸಂಖ್ಯೆ ಸುಮಾರು 190 ಕೋಟಿ. ವಿಶ್ವದ ಒಟ್ಟು ಜನಸಂಖ್ಯೆಯ (ಸುಮಾರು 790 ಕೋಟಿ) ಕಾಲು ಭಾಗ.
ಒಂದು ವೇಳೆ ಈ ದೇಶಗಳು ನಡುವೆ ಎಲ್ಲಾ ರೀತಿಯ ಸಹೋದರತೆಯ ಸೌಹಾರ್ದ ಏರ್ಪಟ್ಟರೆ ಈ ಎಲ್ಲಾ ದೇಶಗಳ ಜನರ ಜೀವನಮಟ್ಟ ಹೇಗೆ ಉತ್ತಮವಾಗಬಹುದು ಯೋಚಿಸಿ. ಏಕೆಂದರೆ ಈ ಐದು ದೇಶಗಳ ಜನರ ದೈಹಿಕ ಮತ್ತು ಜೀವನಶೈಲಿಯಲ್ಲಿ ಬಹುತೇಕ ಹೋಲಿಕೆ ಇದೆ. ಆದರೆ ಏನು ಮಾಡುವುದು ಒಬ್ಬರಿಗೊಬ್ಬರ ಮೇಲೆ ಅಪನಂಬಿಕೆ ಇದೆ. ಅದರ ಪರಿಣಾಮ ಇತರ ಜಾಗತಿಕ ಬಾಹ್ಯ ಶಕ್ತಿಗಳು ತಮ್ಮ ಮೂಗು ತೂರಿಸಿ ಅವರ ಹಿತಾಸಕ್ತಿಗಾಗಿ ನಮ್ಮ ನಡುವಿನ ಸಹಕಾರವನ್ನು ನಾಶ ಮಾಡಿ ದ್ವೇಷವನ್ನು ಹೆಚ್ಚಿಸುತ್ತಿವೆ. ನಾವು ಬಲಿಪಶುಗಳು.
ಮುಖ್ಯವಾಗಿ ಕೃಷಿ ಕೈಗಾರಿಕೆ ಹೈನುಗಾರಿಕೆ ವ್ಯಾಪಾರ ಶಿಕ್ಷಣ ಹಣಕಾಸು ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಬೃಹತ್ ಒಕ್ಕೂಟ ಉತ್ತಮ ಸಹಕಾರದೊಂದಿಗೆ ಕೆಲಸ ಮಾಡಿದರೆ ಯೂರೋಪಿಯನ್ ಒಕ್ಕೂಟದ ದೇಶಗಳನ್ನು ಮೀರಿಸುವ ಅಭಿವೃದ್ಧಿ ಸಾಧಿಸಬಹುದು. ಬಲಾಢ್ಯ ಸೈನಿಕ ಶಕ್ತಿ ರೂಪಿಸಿಕೊಳ್ಳಬಹುದು.
ಒಂದು ಜಾವೆಲಿನ್ ಎಸೆತದಲ್ಲಿ ಎಷ್ಟೊಂದು ಪ್ರೀತಿಯ ಸಂದೇಶಗಳನ್ನು ನೀರಜ್ ನಮಗೆ ನೀಡಿದ್ದಾರೆ ನೋಡಿ. ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಹಿಟ್ಲರ್ ನೀಡಿದ ಸೈನ್ಯಾಧಿಕಾರಿಯ ಆಹ್ವಾನವನ್ನು ತಿರಸ್ಕರಿಸಿ ದೇಶಭಕ್ತಿಯ ಸಂದೇಶ ಸಾರಿದ ನೆನಪು ಈ ಸಂದರ್ಭದಲ್ಲಿ ಆಗುತ್ತಿದೆ. ಸರಿ ಸುಮಾರು ಒಂದು ಶತಮಾನದ ನಂತರವೂ ಧ್ಯಾನ್ ಚಂದ್ ನೀಡಿದ ಸಂದೇಶ ನೆನಪಾಗುವುದಾದರೆ ಪ್ರೀತಿ ಮತ್ತು ದೇಶ ಪ್ರೇಮದ ಶಕ್ತಿ ಎಷ್ಟಿರಬಹುದು.
ಗೆಳೆಯರೇ, ದ್ವೇಷ ಅಸೂಯೆಯ ಜಾಗದಲ್ಲಿ ಪ್ರೀತಿ ದೇಶ ಪ್ರೇಮ ಬೆಳೆಸಿಕೊಳ್ಳಿ. ಆಗ ನಿಮ್ಮ ಜೀವನದ ಗುಣಮಟ್ಟದಲ್ಲಿ ಆಗುವ ಉತ್ತಮ ಬದಲಾವಣೆಗಳನ್ನು ಗಮನಿಸಿ. ನಿಜಕ್ಕೂ ಅದ್ಭುತ ಪರಿಣಾಮ ಬೀರುತ್ತದೆ. ಆದರೆ ಅದು ಕಪಟವಾಗಿರಬಾರದು ಸಹಜವಾಗಿರಬೇಕು.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
Comments
ಜನಸಂಖ್ಯೆ ಆಧಾರದ ಮೇಲೆಯೇ ಈ…
ಜನಸಂಖ್ಯೆ ಆಧಾರದ ಮೇಲೆಯೇ ಈ ಒಡೆಯುವಿಕೆ ಆದದ್ದು. ಅದೇ ಲೆಕ್ಕಾಚಾರ ಪ್ರಕಾರ ಭೂಮಿ ಹಂಚಿಕೆ ಮಾಡಲಾಗಿದೆ. ಆದರೆ ಏಕಾಏಕಿ ನಾವು ಆಚೆ ಹೋಗಲ್ಲ. ನಾವು ಇಲ್ಲೇ ಇದ್ದು ಸಹಬಾಳ್ವೆ ನಡೆಸುವೆವು ಎಂದಾಗ ತತ್ಕಾಲೀನ ನೆಹರೂ ಸರ್ಕಾರ ಗಡಿಗುಂಟ ಸುಮಾರು 600ಕಿ.ಮೀ ಯಷ್ಟು ಪಾಕಿಸ್ತಾನದ ಜಾಗ ವಾಪಸ್ ಪಡೆಯಬೇಕಿತ್ತು. ಅಧಿಕಾರ ದಾಹದ ಮುಂದೆ ಇದೆಲ್ಲ ಬೇಕಾಗಿರಲಿಲ್ಲ.