ಒಂದು ಸುವರ್ಣಾವಕಾಶ...!

ಒಂದು ಸುವರ್ಣಾವಕಾಶ...!

ಕರ್ನಾಟಕದ ಜನರ ಜೀವನವನ್ನು ಮುಂದಿನ  5 ವರ್ಷಗಳ ಕಾಲ ನಿರ್ಧರಿಸುವ ಆಡಳಿತಗಾರರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮತ್ತೊಮ್ಮೆ ಮತದಾರನ ಕೈಗೆ ಬರುತ್ತಲಿದೆ. ಎಂತಹ ಅದ್ಬುತವಾದ ಬಹುದೊಡ್ಡ ಅಧಿಕಾರ ಜನ ಸಾಮಾನ್ಯರಿಗೆ ಲಭ್ಯವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಆಯ್ಕೆಗಾಗಿ ಇರುವ ಸಾಧ್ಯತೆಗಳನ್ನು ಒಂದಷ್ಟು ಕುತೂಹಲದಿಂದ ಮುಕ್ತ ಮನಸ್ಸಿನಿಂದ ಪರಿಶೀಲಿಸೋಣ.

ವೀರಶೈವ ಲಿಂಗಾಯಿತರೆಂದು ಕರೆಯಲ್ಪಡುವ ಒಂದು ಜಾತಿಯವರನ್ನೇ  ಹೆಚ್ಚಾಗಿ ನಂಬಿ ವ್ಯಾಪಾರ - ಉದ್ದಿಮೆದಾರರನ್ನು ಮೇಲ್ನೋಟಕ್ಕೆ ಮೆಚ್ಚಿಸಿ, ಜಾತಿಯ ಮೇಲ್ವರ್ಗದ ಜನರಲ್ಲಿ ಮತ್ತೊಮ್ಮೆ ಸುಂದರ  ಕನಸುಗಳನ್ನು ಬಿತ್ತಿ, ಧರ್ಮದ ಆಧಾರದಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆದು  ಅಧಿಕಾರದಲ್ಲಿ ಮುಂದುವರಿಯಲು ಹೊರಟಿರುವ ಭಾರತೀಯ ಜನತಾ ಪಕ್ಷ.

ಅಹಿಂದ ಎಂದು ಕರೆಯಲ್ಪಡುವ  ಸಮುದಾಯಗಳನ್ನೇ ಹೆಚ್ಚಾಗಿ ನಂಬಿ ಬಡವರು ಎಂಬ ಜನಸಮೂಹವನ್ನು ಭಾಗ್ಯಗಳ ಮುಖಾಂತರ ಮೆಚ್ಚಿಸಿ ಜಾತಿಗಳ ಆಧಾರದ ಮೇಲೆ ಮತ್ತೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್.

ಒಕ್ಕಲಿಗರೆಂದು ಕರೆಯಲ್ಪಡುವ ರೈತ ಸಮುದಾಯದ ಜಾತಿಯವರನ್ನೇ ಹೆಚ್ಚಾಗಿ ನಂಬಿ ರೈತರ ಸಮಸ್ಯೆಗಳನ್ನೇ ಗುರಾಣಿಯಾಗಿ ಹಿಡಿದು ಅವರಲ್ಲಿ ಮತ್ತೆ ಮತ್ತೆ ಸಾಲ ಮನ್ನಾ ಆಶ್ವಾಸನೆಗಳನ್ನು ಬಿತ್ತಿ ಅಧಿಕಾರಕ್ಕೇರುವ ಅಥವಾ ಸಂಖ್ಯೆಗಳ ಗೊಂದಲದಲ್ಲಿ ಅದರ ಲಾಭ ಪಡೆಯವ ಉತ್ಸಾಹದಲ್ಲಿರುವ ಜಾತ್ಯಾತೀತ ಜನತಾದಳ.

ಜೊತೆಗೆ, ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಮುಂತಾದ ಕ್ಷೇತ್ರಗಳಲ್ಲಿ ಬಡ ಮತ್ತು ಮಧ್ಯಮವರ್ಗದ  ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೌಕರ್ಯ ಒದಗಿಸುವ ಆಶ್ವಾಸನೆಯೊಂದಿಗೆ ಅಧಿಕಾರದ ಕನಸು ಕಾಣುತ್ತಿರುವ ಆಮ್ ಆದ್ಮಿ ಪಕ್ಷ. ಭ್ರಷ್ಟಾಚಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಿ ಸ್ವಚ್ಛ ಆಡಳಿತದ ಭರವಸೆಯೊಂದಿಗೆ ಜನರಲ್ಲಿ ನಂಬಿಕೆ ಗಳಿಸಿ ಅಧಿಕಾರ ಗಳಿಸುವ ಯೋಜನೆಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ. ಬಹುಜನರನ್ನು ಒಳಗೊಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಆಧಾರದಲ್ಲಿ ಅಧಿಕಾರ ವಹಿಸಿಕೊಳ್ಳುವ ಕನಸಿನ ಬಹುಜನ ಸಮಾಜ ಪಾರ್ಟಿ. ರಾಜಕೀಯದಲ್ಲಿ ಪ್ರಜಾ ಕೇಂದ್ರಿತ ಆಡಳಿತದ ಮೂಲಕ ಕ್ರಾಂತಿಕಾರಿ ಬದಲಾವಣೆಯ ಭರವಸೆಯೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯುವ ಯೋಚನೆಯ ಪ್ರಜಾಕೀಯ. ಶೋಷಿತರ ನಿರಂತರ ಧ್ವನಿಯಾಗಿದ್ದ ಈಗ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಕಮ್ಯುನಿಸ್ಟ್ ಪಕ್ಷಗಳು. ಜನಾರ್ಧನ ರೆಡ್ಡಿ ಎಂಬ ಮಾಜಿ ಸಚಿವರ ಹೊಸ ಪಕ್ಷ.

ಹಳೆಯ ಸಮಾಜವಾದಿ ಹಿನ್ನೆಲೆಯ ಚಿಂತನೆಗಳೊಂದಿಗೆ ರಾಜಕೀಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡು ಆಡಳಿತದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿರುವ ಜನತಾ ಪಕ್ಷ, ಸಂಯುಕ್ತ ಜನತಾದಳ, ಸರ್ವೋದಯ ಪಕ್ಷ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಜಯಪ್ರಕಾಶ್ ನಾರಾಯಣ್ ಪಕ್ಷ ಹಾಗು ಈಗ ನೆನಪಾಗದ ಆದರೆ ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಪ್ರಚಾರ ಮಾಡುವ ಇತರ ಪಕ್ಷಗಳು, ಬಹುದೊಡ್ಡ ವಿಸ್ತೀರ್ಣದ, ಸುಮಾರು 7 ಕೋಟಿ ಜನಸಂಖ್ಯೆ ಹೊಂದಿರುವ 5 ಕೋಟಿಗೂ ಹೆಚ್ಚು ಮತದಾರರಿರುವ, ಸುಮಾರು 3 ಲಕ್ಷ ಕೋಟಿ ಸಮೀಪದ ಬಜೆಟ್ ಹೊಂದಿರುವ, ಅಪಾರ ಪ್ರಾಕೃತಿಕ ಸಂಪನ್ಮೂಲಗಳ ಒಂದು ಬೃಹತ್ ರಾಜ್ಯವನ್ನು ಮುನ್ನಡೆಸಲು ಸ್ಪರ್ಧೆಯಲ್ಲಿರುವ ಪಕ್ಷಗಳು ಇವು. ಈಗ ಯೋಚಿಸುವ ಸರದಿ ಮತದಾರರದು.

ನಿಮ್ಮ ಆತ್ಮವನ್ನೊಮ್ಮೆ ಬಗೆದು ಸಂಪೂರ್ಣ ಅವಲೋಕಿಸಿ ಹೇಳಿ. ನೀವು ಈಗಿರುವ ಸ್ಥಿತಿಯಲ್ಲಿ ನೆಮ್ಮದಿಯಾಗಿ ಇರುವಿರಾ?  ನೀವು ಉಸಿರಾಡುತ್ತಿರುವ ಗಾಳಿ ಶುಧ್ಧವಾಗಿದೆಯೇ ? ನಿಮಗೆ ಕುಡಿಯಲು ಸಾಕಷ್ಟು ಒಳ್ಳೆಯ ನೀರು ಸಿಗುತ್ತಿದೆಯೇ ? ನಿಮಗೆ ತಿನ್ನಲು ನೀವು ಬಯಸಿದಷ್ಟು ಗುಣಮಟ್ಟದ ಆಹಾರ ಸಿಗುತ್ತಿದೆಯೇ ? ನೀವು ಇಷ್ಟಪಟ್ಟ ಬಟ್ಟೆ ತೊಡಲು ಸಾಧ್ಯವಾಗುತ್ತಿದೆಯೇ ? ವಾಸಿಸಲು ಕನಿಷ್ಠವಾದರೂ ಸೌಕರ್ಯವಿರುವ ಮನೆ ನಿಮಗಿದೆಯೇ ?  ನಿಮ್ಮ ಆರೋಗ್ಯ ರಕ್ಷಣೆಗೆ ವೈದ್ಯಕೀಯ ಸೌಲಭ್ಯಗಳು ಉತ್ತಮ ಮತ್ತು ಕೈಗೆಟುಕುವ ಬೆಲೆಯ ಮಟ್ಟದಲ್ಲಿವೆಯೇ ? ನಿಮ್ಮ ಮಕ್ಕಳಿಗೆ ನಿಮ್ಮ ಇಷ್ಟದಂತೆ ಶಿಕ್ಷಣ ದೊರಕುತ್ತಿದೆಯೇ ?  ನಿಮ್ಮ ಬದುಕು ನಿರಾತಂಕವಾಗಿ - ನೆಮ್ಮದಿಯಾಗಿ ಸಾಗುತ್ತಿದೆಯೇ ? ನೀವು ಸ್ವತಂತ್ರವಾಗಿ ಜೀವಿಸುವ ಮತ್ತು ಅಭಿವ್ಯಕ್ತಿಸುವ ಸ್ವಾತಂತ್ರ್ಯ ನಿಮಗಿದೆಯೇ ? ಈ ಮೂಲಭೂತ ಅವಶ್ಯಕತೆಗಳು ನಿಮಗೆ ಇದ್ದದ್ದೇ ಆದರೆ ನೀವು ಯಾರಿಗೆ ಬೇಕಾದರೂ ಮತ ಹಾಕಿ. ನಿಮಗೆ ನೆಮ್ಮದಿ ಇದೆ. ನೀವು ಅದೃಷ್ಟವಂತರೆಂದೇ ಪರಿಗಣಿಸಿ. 

ಆದರೆ… ಈ ಯಾವ ಸೌಕರ್ಯಗಳೂ ನಮಗೆ ಇಲ್ಲ. ನಮ್ಮ ಬದುಕು ಈಗಲೂ ಆತಂಕಕಾರಿಯಾಗಿಯೇ ಇದೆ‌. ನೆಮ್ಮದಿಯ ಜೀವನ ಕನಸಾಗಿಯೇ ಇದೆ ಎನ್ನುವುದಾದರೆ, ಕನಿಷ್ಠ ತೃಪ್ತಿಯ ಬದುಕಿನ ಹುಡುಕಾಟದಲ್ಲಿ ನೀವು ಇರುವುದಾದರೆ ಈಗ ದೊರಕಿರುವ ಮತದಾನವೆಂಬ ಪರಮಾಧಿಕಾರವನ್ನು ಯೋಚಿಸಿ ನಿರ್ಧರಿಸಬೇಕಿದೆ. ಮೇಲಿನ ಮೂರು ಆಯ್ಕೆಗಳಲ್ಲಿ , ಸಾಂಪ್ರದಾಯಿಕ ಪಕ್ಷಗಳಲ್ಲಿ  ಒಂದು ನಿಮಗೆ ಅನಿವಾರ್ಯ ಆಗಿದ್ದೇ ಆದರೆ ನಿಮ್ಮ ಯಾವ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಅತ್ಯಂತ ಕಡಿಮೆ ಮತ್ತು ಅವು ಮತ್ತಷ್ಟು ಜಟಿಲವಾಗಿ ಇನ್ನೂ ಮುಂದೂಡಲ್ಪಡುತ್ತವೆ. ಮೂಲಭೂತವಾಗಿ ಈ ಪಕ್ಷಗಳಿಗೂ ನಾಯಕರಿಗೂ ಜನರನ್ನು ತನ್ನವರೆಂದು ಪ್ರೀತಿಸುವ ಸ್ವಾಭಾವಿಕ ಗುಣವೇ ಇಲ್ಲ. ಅದನ್ನು ಅರಿಯುವ ಸೂಕ್ಷ್ಮತೆಯೂ ಇಲ್ಲ. 

ಕೇವಲ ಮತಗಳಿಸುವ ಆ ಮುಖಾಂತರ ಅಧಿಕಾರಕ್ಕೇರುವ ಮತ್ತು ಅದನ್ನು ತನ್ನಿಷ್ಟದಂತೆ ಚಲಾಯಿಸಿ ಮತ್ತೊಮ್ಮೆ ಅಧಿಕಾರ ಗಳಿಸಿಕೊಳ್ಳಲು ಹುನ್ನಾರ ಬಿಟ್ಟರೆ ಜನರಲ್ಲಿ ನೆಮ್ಮದಿ ಮೂಡಿಸುವ ಯಾವ ನೈಜ ಆಲೋಚನೆಗಳೂ ಇವರಲ್ಲಿ ಇಲ್ಲ. ಇಡೀ ವ್ಯವಸ್ಥೆ ಅದಕ್ಕೆ ಪೂರಕವಾಗಿ ರೂಪಗೊಂಡಿರುವುದರಿಂದ ಅವರಿಗೆ ಭಿನ್ನದಾರಿ ತುಳಿಯುವ ಮನಸ್ಸೂ ಇಲ್ಲ - ಸಾಧ್ಯತೆಯೂ ಇಲ್ಲ. ಬೀದರಿನ ಯಾವುದೋ ಹಳ್ಳಿಯ ಒಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಇಲ್ಲವೆಂದರೆ ಅದನ್ನು ಸರಿಪಡಿಸಲು ಬಹಳಷ್ಟು ಸಮಯವಿಡಿಯುತ್ತದೆ. ಕಲಬುರ್ಗಿಯ ಒಂದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರ ಒದಗಿಸಬೇಕಾದವರು ಕಾಣೆಯಾಗಿರುತ್ತಾರೆ.  ವಿಜಯಪುರದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ಸೂಚನೆ ಸಿಕ್ಕರೂ ಅದನ್ನು ತಡೆಯುವವರು ನಿರ್ಲಕ್ಷಿಸುತ್ತಾರೆ. 

ಚಿಕ್ಕಬಳ್ಳಾಪುರದಲ್ಲಿ ಕ್ಲೋರೈಡ್ ಮಿಶ್ರಿತ ನೀರಿನಿಂದ ಜನ ತೊಂದರೆ ಅನುಭವಿಸುತ್ತಿದ್ದರೂ ಅದನ್ನು ನಿವಾರಿಸಲು ಪ್ರಯತ್ನಿಸುವುದಿಲ್ಲ. ಕೋಲಾರದ ಸರ್ಕಾರಿ ಹಾಸ್ಟಲ್ ನ ಊಟದಲ್ಲಿ ಹುಳುಗಳು ಇರುವ ವಿಷಯ ತಿಳಿದರೂ ಅದು ತಕ್ಷಣಕ್ಕೆ ಪರಿಹಾರ ಕಾಣುವುದಿಲ್ಲ. ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ಸಾರ್ವಜನಿಕರ ಎದುರು ಕೊಲೆ ನಡೆದರೂ ಅದು ಒಂದು ಸಾಮಾನ್ಯ ಸುದ್ದಿಯಾಗುತ್ತದೆ. ಕೊಡಗಿನಲ್ಲಿ ಕಾಡುಗಳ್ಳರಿಂದ ಅತ್ಯಮೂಲ್ಯ ಮರಗಳು ಕಳ್ಳ ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇರುತ್ತದೆ.  ಮೈಸೂರಿನಲ್ಲಿ ಮರಳು ದಂಧೆ ತಡೆಯುವವರೇ ಇಲ್ಲ.  ದಕ್ಷಿಣ ಕನ್ನಡದಲ್ಲಿ ಅನಾಗರಿಕ ಕೋಮು ಗಲಭೆಗಳಿಂದ ಅಮೂಲ್ಯ ಜೀವಗಳನ್ನು ಉಳಿಸಲು ಆಗುತ್ತಿಲ್ಲ. 

ಬಳ್ಳಾರಿಯ ಗಣಿ ಮಾಫಿಯಾ ರಾಜ್ಯದ ಅಧಿಕಾರವನ್ನು ನಿಯಂತ್ರಿಸುವಷ್ಟು ಪ್ರಬಲವಾಗಿರುತ್ತದೆ.  ರಾಯಚೂರಿನಲ್ಲಿ ಈ ಕ್ಷಣಕ್ಕೂ ಎಷ್ಟೋ ಬೋರ್ ವೆಲ್ ನ ಕೊಳವೆಗಳು ಮಕ್ಕಳನ್ನು ಬಲಿತೆಗೆದುಕೊಳ್ಳಲು ಬಾಯ್ತೆರೆದು ಕುಳಿತಿವೆ. ಗದಗಿನಲ್ಲಿ ವಿಷಪೂರಿತ ಬಿಸಿಯೂಟ ಸೇವಿಸಿ ಶಾಲಾ ವಿಧ್ಯಾರ್ಥಿಗಳು ಅಸ್ವಸ್ಥರಾಗುವುದು ನಡೆಯುತ್ತಲೇ ಇದೆ. 

ಕೊಪ್ಪಳದಲ್ಲಿ ಬಾಲ್ಯವಿವಾಹಗಳು ಕದ್ದುಮುಚ್ಚಿ ನಡೆಯುವುದನ್ನು ತಡೆಯಲಾಗುತ್ತಿಲ್ಲ. ಬೆಳಗಾವಿಯಲ್ಲಿ ಗೂಂಡಾಗಳ ಜೂಜುಕೋರರ ಹಾವಳಿ ನಿಯಂತ್ರಿಸಲಾಗುತ್ತಿಲ್ಲ. ತುಮಕೂರಿನ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳಿಲ್ಲದ ದಿನಗಳೇ ಇಲ್ಲ. ಹುಬ್ಬಳ್ಳಿ - ಧಾರವಾಡದ  ಆಸ್ಪತ್ರೆಗಳಲ್ಲಿ ಒಂದೇ ಗಾಲಿ ಕುರ್ಚಿಯ ಮೇಲೆ 2/3 ರೋಗಿಗಳನ್ನು ಒಟ್ಟಿಗೆ ಸಾಗಿಸುವುದು ಸುದ್ದಿಯಾಗುತ್ತದೆಯೇ ವಿನಹ ಪರಿಹಾರವಾಗುವುದಿಲ್ಲ. ರಾಮನಗರದಲ್ಲಿ ಮ್ಯಾನ್ ಹೋಲ್ ಗೆ ಇಳಿದ ಕೂಲಿ ಕಾರ್ಮಿಕರು ಸತ್ತರೆ ಅದಕ್ಕೆ ಹಣದ ಪರಿಹಾರ ಸಿಗುತ್ತದೆಯೇ ಹೊರತು ಅದನ್ನು ಶಾಶ್ವತವಾಗಿ ತಡೆಯುವ ಕ್ರಮ ಕೈಗೊಳ್ಳುವುದಿಲ್ಲ. ಮಂಡ್ಯದ ರೈತರ ಆತ್ಮಹತ್ಯೆ ಸರ್ಕಾರದ ಮನಕ್ಕೆ ತಾಗುವುದೇ ಇಲ್ಲ. 

ಉತ್ತರ ಕನ್ನಡದ ಸಮುದ್ರ ಮಾರ್ಗದಲ್ಲಿ ನಡೆಯುವ ಸ್ಮಗ್ಲಿಂಗ್ ಅನ್ನು ಸರ್ಕಾರ ಕಣ್ಣಂಚಿನಲ್ಲೇ ನಿರ್ಲಕ್ಷಿಸುತ್ತದೆ. ದಾವಣಗೆರೆಯಲ್ಲಿ ನಡೆಯುವ ಶಿಕ್ಷಣದ ಕಾಳದಂಧೆಯಲ್ಲಿ ಸರ್ಕಾರವೇ ಭಾಗವಹಿಸುವ ಅನುಮಾನವಿದೆ. ಹಾವೇರಿಯಲ್ಲಿ ನಡೆಯುವ ಮೌಡ್ಯಾಚರಣೆಗಳು, ಬೆಂಗಳೂರು ಗ್ರಾಮಾಂತರದ ಜಮೀನು ದಂಧೆಯ ಅಕ್ರಮಗಳು, ಬಾಗಲಕೋಟೆಯ ಬಡತನ, ಚಿತ್ರದುರ್ಗದ ತಾಂಡಾಗಳ ವೇದನೆ, ಯಾದಗಿರಿಯ ಕೂಲಿ ಕಾರ್ಮಿಕರ ವಲಸೆಗಳು, ಶಿವಮೊಗ್ಗಾದ ರೌಡಿ - ರಾಜಕೀಯ ಕೊಲೆಗಳು, ಚಾಮರಾಜನಗರದ ಮಾಟ ಮಂತ್ರ ಆರೋಗ್ಯದ ಸಮಸ್ಯೆಗಳು, ಚಿಕ್ಕಮಗಳೂರಿನ ಪರಿಸರ ನಾಶದ ಯೋಜನೆಗಳು, ಉಡುಪಿಯ ಮೀನುಗಾರರ ಕುಂದುಕೊರತೆಗಳು, ಹಾಸನದ ಜಾತಿ ರಾಜಕೀಯದ ಹೊಡೆದಾಟಗಳು.

ಒಂದೇ ಎರಡೇ...ಇದು ಸಾಂಕೇತಿಕ ಮಾತ್ರ. ಎಲ್ಲಾ ಕಡೆಯೂ ಭಿನ್ನ ಭಿನ್ನ ಸಮಸ್ಯೆಗಳು ಬೇರೆ ಬೇರೆ ರೂಪದಲ್ಲಿ ಕಿತ್ತು ತಿನ್ನುತ್ತಿವೆ. ಏಕಾಏಕಿ ಕಲ್ಪನೆಯ ಇಡೀ ಸ್ವರ್ಗವೇ ಭೂಮಿಗಿಳಿದು ಬರಲು ಸಾಧ್ಯವಿಲ್ಲದಿದ್ದರೂ ಕನಿಷ್ಠ ಜೀವನ ಭದ್ರತೆಯ ನೆಮ್ಮದಿಯ ಬದುಕನ್ನಾದರೂ ಮತದಾರರು ನಿರೀಕ್ಷಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಅನಾಗರಿಕ - ಅರಾಜಕ ವ್ಯವಸ್ಥೆಯಲ್ಲಿ ಕೇವಲ ಹಣ ಜಾತಿ ಪ್ರಭಾವಿ ಚಾಣಾಕ್ಷ ದುಷ್ಟ ಭ್ರಷ್ಟ ಭಂಡ ಜನಗಳು ವಿಜೃಂಭಣೆಯಿಂದ ಇದ್ದರೆ, ಬಡವರು  ಅಸಹಾಯಕರು, ನಿರ್ಗತಿಕರು, ಯಾವುದೇ ಪ್ರಭಾವ ಹೊಂದಿಲ್ಲದವರು , ನಿಜವಾದ ಪ್ರತಿಭಾವಂತರು, ಶೋಷಿತರು ಅಪಾರ ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಅನುಭವಿಸುತ್ತಿದ್ದಾರೆ.

ಇಂತಹ ಸಂಧರ್ಭದಲ್ಲಿ  ವ್ಯವಸ್ಥೆಯ ಇದೇ ಸಾಂಪ್ರದಾಯಿಕ ಶೈಲಿಯ ಈ ಪಕ್ಷಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ದುರ್ಗತಿ ನಮಗಿದೆ. ಇದನ್ನು ನಮ್ಮ ಮುಂದಿನ ಪೀಳಿಗೆಯ ದೃಷ್ಟಿಯಿಂದ ಮೀರಲೇ ಬೇಕಿದೆ. ಆದಷ್ಟೂ ಸಾಮಾಜಿಕ ಕಳಕಳಿಯ , ಪ್ರಾಮಾಣಿಕ, ದಕ್ಷ ಎಲ್ಲಕ್ಕಿಂತ ಮುಖ್ಯವಾಗಿ ಜನರನ್ನು ಪ್ರೀತಿಸುವ - ಪ್ರಜೆಗಳನ್ನು ನಮ್ಮವರೆಂದು ಭಾವಿಸುವ ವ್ಯಕ್ತಿಗಳನ್ನು ಸಾರ್ವಜನಿಕ ಸೇವೆಗೆ ರಾಜಕೀಯದ ಮುಖಾಂತರ ಪ್ರವೇಶಿಸುವ ವ್ಯವಸ್ಥೆ ರೂಪಿಸಬೇಕಿದೆ.

ಒಂದು ಒಳ್ಳೆಯ ಪರ್ಯಾಯ ಸೃಷ್ಟಿಯಾದರೆ ಪ್ರಜಾಪ್ರಭುತ್ವದಲ್ಲಿ ಮತದಾರನೇ ಸಾರ್ವಭೌಮ ಎಂಬ ಮಾತಿಗೆ ಅರ್ಥ ಬರುತ್ತದೆ ಮತ್ತು ಜನರ ಜೀವನ ಮಟ್ಟ ಸುಧಾರಿಸುತ್ತದೆ. ಅಲ್ಲಿಯವರೆಗೂ ನಮ್ಮ ಹೋರಾಟ ಕೂಗಾಟ ವೇದನೆ ರೋದನೆ ನಿರಂತರ.. ಮುಂದಿನ ದಿನಗಳಲ್ಲಿ ರಾಜಕೀಯ ವ್ಯವಸ್ಥೆಯ ಪರ್ಯಾಯದ ಹುಡುಕಾಟದಲ್ಲಿ ನಿಮ್ಮೊಂದಿಗೆ ನಾವು....

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ ಎಲ್ಲಾ ಜನಗಳಲ್ಲಿ ಪ್ರಬುದ್ದತೆಯ ಚಿಂತನೆ ರೂಪಿಸುವ ಆಶಾ ಭಾವನೆಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸಬೇಕಿದೆ. ಮನಸ್ಸುಗಳನ್ನು ಹದಗೊಳಿಸಬೇಕಿದೆ. ಇದಕ್ಕಾಗಿ ನಿಮ್ಮೊಂದಿಗೆ ಸದಾ ಸಂಪರ್ಕದಲ್ಲಿ ನಾವು.

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ