ಒಂದು ಹೀನ ವೃತ್ತಿಯ ಸುತ್ತ…
ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ. ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ವೇಶ್ಯಾ ವೃತ್ತಿಯನ್ನು ಅತ್ಯಂತ ಕೆಟ್ಟ, ಕೀಳು ವೃತ್ತಿ ಅಥವಾ ದಂಧೆ ಎಂದು ಭಾವಿಸಲಾಗುತ್ತದೆ. ( ವಾಸ್ತವದಲ್ಲಿ ಮತ್ತು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡರೆ ಅದು ನಿಜವಲ್ಲ. ಅದು ಬೇರೆ ವಿಷಯ ) ಆದರೆ ಅದಕ್ಕಿಂತಲೂ ಅತ್ಯಂತ ನೀಚ ವೃತ್ತಿಯೊಂದಿದೆ. ಇದು ಮಾನವೀಯ ಸಂಬಂಧಗಳ ಎಲ್ಲಾ ಮಿತಿಯನ್ನು ದಾಟಿ ಲೆಕ್ಕಕ್ಕೆ ಸಿಗುವುದಿಲ್ಲ. ಅಸಹ್ಯ ಎಂದು ಕರೆಯಬಹುದಾದ ವೃತ್ತಿ ಇದು.
ಆಳ್ಕಟಿಗಳು ಅಥವಾ ಪಿಂಪಗಳು ಅಥವಾ ತಡೆಹಿಡುಕರು ಅಥವಾ ಮಾಮಾಗಳು ಎಂದು ಲೋಕಾಭಿರಾಮವಾಗಿ ಕರೆಯಲಾಗುವ ಜನರು ಮಾಡುವ ವೃತ್ತಿಯೇ ಇದು. ಮನುಷ್ಯರನ್ನು, ಅವರ ದೇಹವನ್ನು, ಅವರ ಭಾವನೆಗಳನ್ನು, ಅವರ ನಂಬಿಕೆಗಳನ್ನು, ಅವರ ಸಂಬಂಧಗಳನ್ನು, ಸಮಾಜದ ಮೌಲ್ಯಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವುದೇ ಇವರ ವೃತ್ತಿ.
ಆಶ್ಚರ್ಯ ಪಡಬೇಡಿ, ಇದು ಸಮಾಜದ ಯಾವುದೋ ಒಂದು ನಿರ್ಧಿಷ್ಟ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲಾ ಕ್ಷೇತ್ರಗಳನ್ನು ಆಕ್ರಮಿಸಿದೆ. ಆದರೆ ಅತಿಹೆಚ್ಚು ಪ್ರಮಾಣದಲ್ಲಿ ಬಹಿರಂಗವಾಗಿ ಕಾಣಸಿಗುವುದು ವೇಶ್ಯಾವಾಟಿಕೆ, ರೌಡಿಸಂ, ರಾಜಕೀಯ, ಕಳ್ಖಭಟ್ಟಿ, ಜೂಜು ಅಡ್ಡೆಗಳು ಮುಂತಾದ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆ ಇರುವ ಕಡೆಗಳಲ್ಲಿ...
ಇಲ್ಲಿ ಬಹುತೇಕ ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆಗಳಿಗೆ ಹೆಚ್ಚಿನ ಜಾಗವಿಲ್ಲ. ತನ್ನ ಸ್ವಂತ ಲಾಭವೇ ಎಲ್ಲವೂ ಆಗಿರುತ್ತದೆ. ದುಡ್ಡಿಗಾಗಿ ಏನು ಮಾಡಲು ಸಿದ್ದರಿರುವ ಮತ್ತು ಸಿದ್ದರಾಗಬೇಕಿರುವ ವೃತ್ತಿಪರತೆ ಇಲ್ಲಿರುತ್ತದೆ. ಬಹುಶಃ ಈ ವೃತ್ತಿಯಲ್ಲಿರುವ ಯಾರೂ ಎಂದಿಗೂ ತಮ್ಮ ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. ಹಾಗೇನಾದರೂ ಮಾಡಿಕೊಂಡರೆ ಅವರಿಗೆ ತಮ್ಮ ಬಗ್ಗೆಯೇ ಜಿಗುಪ್ಸೆ ಉಂಟಾಗುತ್ತದೆ ಅಥವಾ ಆತ್ಮಹತ್ಯೆಗೆ ಯತ್ನಿಸಬಹುದು. ಅಷ್ಟೊಂದು ಹೀನ ವೃತ್ತಿಯದು.
ಬದುಕಿನ ಅನಿವಾರ್ಯತೆಗೋ, ಅವಕಾಶದಿಂದಲೋ, ಸಹವಾಸದಿಂದಲೋ, ಸುಖಲೋಲುಪತೆಯಾ ದುರಾಸೆಯಿಂದಲೋ, ದುಶ್ಚಟಗಳ ದಾಸರಾಗಿಯೋ, ಅಸಹಾಯಕತೆಯಿಂದಲೋ ಈ ವೃತ್ತಿಯನ್ನು ಮಾಡುತ್ತಿರುತ್ತಾರೆಯೇ ಹೊರತು ಇಷ್ಟ ಪಟ್ಟು ಯಾರೂ ಇದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಆಗಿರುವ ಸಾಧ್ಯತೆಯೂ ಇದೆ. ಪ್ರಜಾಪ್ರಭುತ್ವದ ದೇವಾಲಯ ಎಂದು ಪರಿಗಣಿಸಲಾದ ವಿಧಾನಸೌದದಿಂದ ಬಸ್ ನಿಲ್ದಾಣದವರೆಗೆ, ದೊಡ್ಡ ದೊಡ್ಡ ಸ್ಟಾರ್ ಹೋಟೆಲುಗಳಿಂದ ಗುಡಿಸಲಿನವರೆಗೆ, ಸಾಹಿತ್ಯ ಕ್ಷೇತ್ರದಿಂದ ಕೂಲಿ ಕೆಲಸದವರೆಗೆ, ಪದವಿದರರಿಂದ ಅನಕ್ಷರಸ್ಥರವರೆಗೆ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಈ ವೃತ್ತಿಯಲ್ಲಿ ಕೆಲವರು ಕಾಣಿಸಿಕೊಂಡಿದ್ದಾರೆ.
ಈ ವೃತ್ತಿಯಿಂದ ಸಾಕಷ್ಟು ಶ್ರೀಮಂತರಾದವರು ಇದ್ದಾರೆ ಹಾಗೆಯೇ ಇಡೀ ಬದುಕನ್ನು ಹೊಟ್ಟೆ ಪಾಡಿಗಾಗಿ ನಿರ್ವಹಿಸುತ್ತಲೇ ಕಳೆದವರು ಇದ್ದಾರೆ. ಇದರ ಸುಳಿಗೆ ಸಿಲುಕಿ ಪಾರಾದವರು ಇದ್ದಾರೆ. ನಾಶವಾದವರು ಇದ್ದಾರೆ. ಎಷ್ಟೋ ಹಣ ಅಧಿಕಾರ ಹೊಂದಿದ, ಸಮಾಜದ ಮುಂದೆ ಸಭ್ಯತೆಯ ಮುಖವಾಡ ಧರಿಸಿಕೊಂಡಿರುವ ಜನರಿಗೆ ತಮ್ಮ ತೆವಲುಗಳನ್ನು ನೇರವಾಗಿ ಪೂರೈಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಅಥವಾ ಅವರಿಗೆ ಅದರ ಸುಲಭ ಮಾರ್ಗ ತಿಳಿದಿರುವುದಿಲ್ಲ. ಅಂತಹವರಿಗೆ ಯಾವುದೋ ರೀತಿಯಲ್ಲಿ ನೆರವಾಗುವವರು ಈ ತಲೆಹಿಡುಕರು…
ವಿಚಿತ್ರವೆಂದರೆ, ನೇರವಾಗಿ ಇಲ್ಲಿ ಯಾವುದೇ ಕಾನೂನಿನ ಉಲ್ಲಂಘನೆಯಾಗುವುದಿಲ್ಲ. ಎಲ್ಲವೂ ತೆರೆಮರೆಯಲ್ಲಿ ಒಪ್ಪಿತ ಕೆಲಸಗಳೇ ಆಗಿರುತ್ತವೆ. ದುಡ್ಡು ಮಾತ್ರವೇ ಇಲ್ಲಿ ಮುಖ್ಯ. ಅನೈತಿಕ ವ್ಯವಹಾರವಾದ್ದರಿಂದ ಏನೇ ದೋಖಾ ಅಥವಾ ವಂಚನೆಯಾದರೂ ಬಹಿರಂಗವಾಗುವುದು ಅಪರೂಪ. ಬ್ಲಾಕ್ ಮೇಲ್, ಹನಿ ಟ್ರ್ಯಾಪ್, ಹಿಡನ್ ಕ್ಯಾಮರಾದಲ್ಲಿ ಕದ್ದು ದೃಶ್ಯ ಸೆರೆಹಿಡಿಯುವುದು, ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಮಾನ ಕಳೆಯುವ ಬೆದರಿಕೆ, ಸಂಸಾರ ಒಡೆಯುವ, ಸುಳ್ಳು ಸುದ್ದಿಯ ಸೃಷ್ಟಿ, ನಂಬಿಸಿ ಕತ್ತು ಕೊಯ್ಯುವ ನೀಚತನ ಎಲ್ಲವೂ ಈ ವೃತ್ತಿಯ ಭಾಗಗಳು...
ಇದರ ಬಗ್ಗೆ ಪೋಲಿಸ್ ಇಲಾಖೆಯವರು, ರಾಜಕಾರಣಿಗಳು, ರೌಡಿಗಳು, ಮಾಧ್ಯಮದವರು ಸಾಕಷ್ಟು ಮಾತನಾಡಿಕೊಳ್ಳುತ್ತಾರೆ. ಅವರಲ್ಲಿಯೇ ಕೆಲವರು ಈ ಮುಖವಾಡವನ್ನು ಹೊಂದಿದ್ದಾರೆ. ಇದು ಹೊಸ ವೃತ್ತಿಯೇನು ಅಲ್ಲ. ನಾಗರಿಕ ಸಮಾಜದ ಉಗಮದಿಂದಲೂ ಪರೋಕ್ಷವಾಗಿ ಅಸ್ತಿತ್ವದಲ್ಲಿದೆ. ಇದರ ಬಗ್ಗೆ ಇನ್ನೂ ಸಾಕಷ್ಟು ಬಹಿರಂಗಪಡಿಸಲಾಗದ ವಿಷಯಗಳಿವೆ.
ಏನೇ ಆಗಲಿ, ಮನುಷ್ಯನೊಬ್ಬ ಮಾಡಬಹುದಾದ ಅತ್ಯಂತ ನೀಚತನದ ಮಾನವೀಯತೆಗೆ ಕಪ್ಪುಚುಕ್ಕೆಯಾದ ಇದರ ಸುಳಿಗೆ ಯಾರೂ ಸಿಲುಕುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಬಾರದು. ಅದು ವ್ಯವಸ್ಥೆಯ ಜವಾಬ್ದಾರಿ. ನಮ್ಮ ಆತ್ಮಾವಲೋಕನ, ಜವಾಬ್ದಾರಿ ಮತ್ತು ಎಚ್ಚರಿಕೆಯ ಸಲುವಾಗಿ ಈ ಕೆಲವು ಕವಿ ಸಾಲುಗಳು...
ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ, ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ.
ನಿದ್ದೆಗೊಮ್ಮೆ ನಿತ್ಯ ಮರಣ,
ಎದ್ದ ಸಲ ನವೀನ ಜನನ…
-ವಿವೇಕಾನಂದ. ಎಚ್.ಕೆ. ಬೆಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ