ಒಂದೆಕ್ರೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಬಾಳೆ ಸಸಿಗಳು !

ಒಂದೆಕ್ರೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಬಾಳೆ ಸಸಿಗಳು !

ಬಾಳೆ ಬೆಳೆಸುವವರು ಅಧಿಕ ಸಾಂದ್ರ ಬೇಸಾಯದಲ್ಲಿ ಬೆಳೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯ. ಬಾಳೆ ಬೇಸಾಯ ವಿಧಾನದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಹಲವಾರು ಬೆಳೆ ತಾಂತ್ರಿಕತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ರೈತರೂ ಇದನ್ನು ಅಳವಡಿಸಿ ಯಶಸ್ವಿಯಾಗುತಿದ್ದಾರೆ. ಅದರಲ್ಲಿ ಒಂದು ಅಧಿಕ ಸಾಂದ್ರ ಬೇಸಾಯ. ಈ ವಿಧಾನದಲ್ಲಿ ಎಕ್ರೆಗೆ ೧೨೩೦ ರಿಂದ ೨೦೦೦ ಗಿಡಗಳ ತನಕ ಹಿಡಿಸುವ ತಾಂತ್ರಿಕತೆ ಚಾಲ್ತಿಯಲ್ಲಿದೆ. ಇದರಲ್ಲಿ ಎಕ್ರೆಗೆ ೪೫ ಟನ್ ನಿಂದ ೭೦ ಟನ್ ತನಕವೂ ಇಳುವರಿ ಪಡೆಯಲು ಸಾಧ್ಯ.

ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಗಿಡದಿಂದ ಗಿಡಕ್ಕೆ, ಸಾಲಿನಿಂದ ಸಾಲಿಗೆ ೬ ಅಡಿ ಅಂತರವನ್ನು ಪಾಲಿಸಲಾಗುತ್ತದೆ. ಈ ಅಂತರದಲ್ಲಿ ಎಕ್ರೆಗೆ ಹಿಡಿಯುವ ಗಿಡಗಳ ಪ್ರಮಾಣ ಸುಮಾರು ೯೦೦ರಷ್ಟು ಮಾತ್ರ. ಒಂದು ಬಾಳೆ ಸರಾಸರಿ ೩೦ ಕಿಲೋ ಇಳುವರಿ ಕೊಟ್ಟರೂ ಸಹ ಒಟ್ಟಾರೆ ಇಳುವರಿ ೨೭-೩೦ ಟನ್ ತನಕ ಮಾತ್ರ. ಇದರಿಂದ ಬೆಳೆಯುವವರಿಗೆ ಅಂತಹ ಲಾಭ ಏನೂ ಅಗುವುದಿಲ್ಲ. ಇದಕ್ಕಾಗಿ ಬಾಳೆ ಬೇಸಾಯದಲ್ಲಿ ಮಣ್ಣು, ನೀರು ಪೋಷಕಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಧಿಕ ಇಳುವರಿ ಪಡೆಯಲು ಬೇರೆ ಬೇರೆ ಅಂತರಗಳಲ್ಲಿ  ಪ್ರಯೋಗ ಮಾಡಿ ನೋಡಿ ಯಶಸ್ಸು ಕಾಣಲಾಗಿದೆ.

ಈ ಪ್ರಯೋಗಗಳು ಎಲ್ಲೆಲ್ಲಿ ಹೇಗೆ ನಡೆದಿದೆ?: ಭುವನೇಶ್ವರದ ಒರಿಸ್ಸಾ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ ಇವರು  ಪರಸ್ಪರ ೧.೨ X ೧.೨ ಮೀ. ಅಂತರದಲ್ಲಿ  ಮತ್ತು ೧.೮ X ೧.೮ ಮೀ. ಅಂತರದಲ್ಲಿ ಬಾಳೆ ಬೆಳೆಸಿ  ಸಾಂಪ್ರಾದಾಯಿಕ ವಿಧಾನದಲ್ಲಿ ಪಡೆಯುತ್ತಿದ್ದ, ಇಳುವರಿಗಿಂತ ದುಪ್ಪಟ್ಟು ಇಳುವರಿ ಪಡೆಯಬಹುದು ಎಂದು ಕಂಡುಕೊಂಡಿದ್ದಾರೆ. ಇವರು ಹೆಕ್ಟೇರಿಗೆ ೬೮.೯೮ ಟನ್ ಇಳುವರಿ ಪಡೆದಿದ್ದಾರೆ.

ತಮಿಳುನಾಡಿನ ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೊಧನಾ ಸಂಸ್ಥೆಯಲ್ಲಿ  ೧.೮ X ೧.೮ ಮೀ. ಅಂತರದಲ್ಲಿ ಒಂದು ಹೊಂಡದಲ್ಲಿ ಎರಡೆರಡು ಸಸಿಯನ್ನು ನಾಟಿ ಮಾಡಿ, ಹೆಕ್ಟೇರಿಗೆ ೬೧೭೨ ಸಸಿಗಳನ್ನು ಹಿಡಿಸಿ, ಒಟ್ಟು ೯೦ ಟನ್ ಇಳುವರಿ ಪಡೆದಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಅತ್ಯಧಿಕ ಸಾಂದ್ರ ಬಾಳೆ ಬೇಸಾಯವನ್ನು ಮಾಡಿ ಹೆಕ್ಟೇರಿಗೆ ೩೬೦೦ ತನಕ ಗಿಡಗಳನ್ನು ಹಿಡಿಸಿ ೧೦೦ ಟನ್ ನಷ್ಟು ಇಳುವರಿ ಪಡೆದಿದ್ದಾರೆ.

ಕೇರಳದ ತ್ರಿಶೂರಿನಲ್ಲಿರುವ ಕನ್ನಾರದಲ್ಲಿರುವ ಬಾಳೆ ಸಂಶೊಧನಾ ಕೇಂದ್ರದಲ್ಲಿ ಬೇರೆ ಬೇರೆ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ೧.೮ x ೧.೮ ಮೀ. (ಗಿಡದಿಂದ ಗಿಡಕ್ಕೆ + ಸಾಲಿನಿಂದ ಸಾಲಿಗೆ) ಅಡಿ ಅಂತರದಲ್ಲಿ ೧೨೩೪ ಗಿಡಗಳನ್ನು, ೧.೫ x ೧.೫ ಮೀ. ಅಂತರದಲ್ಲಿ ಎಕ್ರೆಗೆ ೧೭೭೭ ಗಿಡಗಳನ್ನು, ೧.೨ x ೧.೮ ಮೀ. ಅಂತರದಲ್ಲಿ ಎಕ್ರೆಗೆ ೧೮೫೦ ಗಿಡವನ್ನು , ೧.೨ x ೧.೫ ಮೀ. ಅಂತರದಲ್ಲಿ ೨೨೨೨ ಗಿಡಗಳನ್ನು ಹಿಡಿಸಿದ್ದಾರೆ. ಪ್ರತೀ ಬಾಳೆಗೆ ಸರಾಸರಿ ೩೦ ಕಿಲೋ ಇಳುವರಿ ಪಡೆದಿದ್ದಾರೆ. ಇನ್ನೂ ಮುಂದುವರಿದು ೧.೨ x ೧.೨ ಗಿಡದಿಂದ ಗಿಡಕ್ಕೆ, ಸಾಲಿನಿಂದ ಸಾಲಿಗೆ ೨ ಮೀ. ಅಂತರದಲ್ಲಿ ಎಕ್ರೆಗೆ ೨೦೧೧ ಗಿಡಗಳನ್ನು ಹಿಡಿಸಿ ಪ್ರತೀ ಬಾಳೆಗೆ ಸರಾಸರಿ ೨೫ ಕಿಲೋ ಇಳುವರಿ ಪೆಡೆದಿದ್ದಾರೆ.

ಅಂತರ ಹೆಚ್ಚಾದಂತೆ ಒಟ್ಟಾರೆ ಇಳುವರಿ ಹೆಚ್ಚಳ ಕಂಡುಬಂದಿದೆ. ಬೆಳೆಯಲ್ಲಿ ಲಾಭವೂ ಹೆಚ್ಚಾಗಿದೆ. ಉತ್ಪಾದನಾ ವೆಚ್ಚವೂ ಕಡಿಮೆಯಾಗಿದೆ. ಇದು ಬಾಳೆ ಬೆಳೆಸುವವರಿಗೆ ಕಡಿಮೆ ಸ್ಥಳದಲ್ಲಿ ಅಧಿಕ ಖರ್ಚು ಇಲ್ಲದೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಇದಲ್ಲದೆ ಸೊರಬ, ಬನವಾಸಿಯ ಕೆಲವು ರೈತರು, ಮಹಾರಾಷ್ಟ್ರದ ಕೆಲವು ರೈತರು  ರೈತರು ಗಿಡದಿಂದ ಗಿಡಕ್ಕೆ ೪ ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ ೯ ಅಡಿ ಅಂತರದಲ್ಲಿ ನಾಟಿ ಮಾಡಿ ಎಕ್ರೆಗೆ ೧೬೭೫ ಗಿಡ ಹಿಡಿಸಿ ಗಿಡಕ್ಕೆ ಸರಾಸರಿ ೩೫ ಕಿಲೋ ಇಳುವರಿಯ ಗೊನೆ ಪಡೆದವರಿದ್ದಾರೆ. ಇದಲ್ಲದೆ ಬಾಳೆಯಿಂದ ಬಾಳೆಗೆ ೩ ಅಡಿ ಅಂತರ ಮತ್ತು ಪ್ರತೀ ಸಾಲಿನ ಮಧ್ಯೆ ೭ ಅಡಿ ಅಂತರವನ್ನು ಇಟ್ಟು ಬಾಳೆ ಬೆಳೆಸಿ  ಎಕ್ರೆಗೆ ೨೨೦೦ ಗಿಡಗಳ ತನಕ ಇಳುವರಿ ಪಡೆದವರೂ ಇದ್ದಾರೆ.

ಅನುಕೂಲತೆ ಏನು?: ಈ ವಿಧಾನದಲ್ಲಿ ಬಾಳೆ ಬೆಳೆದಾಗ ಕಡಿಮೆ ಸ್ಥಳದಲ್ಲಿ ಹೆಚ್ಚು ಸಸ್ಯಗಳು ಇರುವ ಕಾರಣ  ನೀರು, ಗೊಬ್ಬರದ ಉಪಯೋಗ ಸಮರ್ಪಕವಾಗಿರುತ್ತದೆ. ಎಲ್ಲಾ ಬಾಳೆಗಳೂ ಸ್ಪರ್ಧೆಯಲ್ಲಿ ಬೆಳೆಯುತ್ತವೆ. ಗಾಳಿ ಬೆಳಕಿನ ಕೊರತೆ ಉಂಟಾಗುವುದೇ ಇಲ್ಲ.  ಬಾಳೆಗಳೇ ಬಾಳೆಗೆ ಗಾಳಿ ತಡೆ ಒದಗಿಸುತ್ತವೆ.

ಬಾಳೆಯಿಂದ ಬಾಳೆಗೆ ಅಂತರ ಕಡಿಮೆ ಇದ್ದುದು ಬಾಳೆ ಬೆಳೆದು ಗೊನೆ ಹಾಕುವ ಹಂತದಲ್ಲಿ ಬದಲಾಗಿ ಬಾಳೆಗಳು ಸಾಲಿನ ಬದಿಗೆ ವಾಲಿ ಕೊಳ್ಳುತ್ತವೆ. ಆಗ ಗೊನೆಗೆ ಆಂಶಿಕ ನೆರಳು ದೊರೆತು ಗೊನೆ ಪುಷ್ಟಿಯಾಗುತ್ತದೆ..

ಪುಟ್ಟು ಬಾಳೆಯನ್ನು ನೆಡುವಾಗ ಮಾತ್ರ ಬಾಳೆಯಿಂದ ಬಾಳೆಗೆ ೩.೫ ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ ೮ ಅಡಿ ಅಂತರ ಉತ್ತಮ ಪದ್ದತಿಯಾಗಿದೆ. ಈ ಅಂತರದಲ್ಲಿ ಬಾಳೆ ನಾಟಿ ಮಾಡಿದಾಗ ಗಾಳಿಯ ಹೊಡೆತಕ್ಕೆ ಸಿಕ್ಕಿ ಬಾಳೆಗಳು ಬೀಳುವುದು ಕಡಿಮೆ. ಬಾಳೆಗಳನ್ನು ಆಧರಿಸಲು ಕಂಬಗಳು ಬೇಡ. ಪರಸ್ಪರ ಬಾಳೆಗೆ ಬಾಳೆಯಿಂದಲೇ ಕಟ್ಟಿ ಆಧರಿಸಬಹುದು. ಪ್ಯಾಕಿಂಗ್ ರೋಪ್ ಬಳಸಬಹುದು.

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ