ಒಂದೇ ಕಡಲ ತೀರಗಳು
ಸಂಜೆಯು ಮುಳುಗಿ ಸುಮಾರು ಹೊತ್ತು ಆಗಿತ್ತು. ಸೂರ್ಯಾಸ್ತವು ಚೆಲ್ಲಿದ್ದ ರಕ್ತವರ್ಣವನ್ನೆಲ್ಲ ನಿಶೆ
ಗುಡಿಸಿ ಸ್ವಚ್ಚಮಾಡಿ, ತಾರೆಗಳ ಚುಕ್ಕೆಗಳನ್ನು ಸೇರಿಸಿ , ಚಂದಿರನ ಬೆಳದಿಂಗಳ ಬಟ್ಟಲಿಂದ ಮೊಗೆದು
ಬೆಳಕ ರಂಗೋಲಿಯನ್ನು ಇಟ್ಟಿದ್ದಳು. ಸದ್ಯ ರಾತ್ರಿಯ ಬಾನ ಈ ಘಟನಾವಳಿಗಳ ಕೆಳಗೆ, ಗೋವಾದ "ಬಾಗ"
ತೀರದ ಕಡಲು, ದಿನವೆಲ್ಲ ಸ್ಪೀಡ್ ಬೋಟುಗಳ ಭರ್ಜರಿ ಸವಾರಿಗಳನ್ನು ಹೊತ್ತು, ಸಾವಿರಾರು ಪ್ರವಾಸಿಗಳ
ಜಿಗಿತ, ಉಗಿತ, ಆಟೋಟಮಜ್ಜನಾದಿಗಳನ್ನು ಸಹಿಸಿಕೊಂಡು, ಸಂಜೆ ಮುಳುಗತ್ತಲೇ ಶಾಂತ ಭಾವವನ್ನು
ಬೀರಿ ವಿಶ್ರಮಿಸುತ್ತಿದೆ. ಅಲ್ಲೇ ತುಸುದೂರದಲ್ಲಿ ಹಗಲೆಲ್ಲಾ ಮಲಗಿದ್ದ ರಸ್ತೆಯೊಂದು ಮೈಮುರಿದು, ಆಕಳಿಸಿ,
ಎದೆಯುಬ್ಬಿಸಿ ಕಣ್ಬಿಟ್ಟಿದೆ. ಪ್ರಪಂಚದ ವಿವಿಧ ದೇಶಗಳಿಂದ ಬಂದಿರುವ ಪ್ರವಾಸಿಗಳು ತಮ್ಮೆಲ್ಲಾ
ಸಂಸ್ಕೃತಿಗಳನ್ನು ತಂದು ಇಲ್ಲಿ 'ಟೀಟೋಸ್' ರಸ್ತೆಯಲ್ಲಿ ಸುರಿದಿದ್ದಾರೆ. ಅದರಲ್ಲಿ ದೇಶೀಯ ನವ್ಯಸಂಸ್ಕೃತಿಯ
ಪ್ರತಿನಿಧಿಸುವ ಜನರ ಗುಂಪೂ ಸೇರಿದೆ. ಬೀದಿಯಲ್ಲಿ ಅಲ್ಲಲ್ಲೇ ನೆಟ್ಟ ದೀಪಕಂಬಗಳು, ಥಳಥಳಿಸುವ ಸ್ನಿಗ್ಧ
ಗಾಜು, ಕನ್ನಡಿಗಳನುಟ್ಟ ಅಂಗಡಿ ಮುಗ್ಗಟ್ಟುಗಳು, ವರ್ಣವೈವಿಧ್ಯ ದಿಪಗಳಿಂದಲಂಕೃತಗೊಂಡ ಹೋಟೆಲ್-ಗಳು,
ಪಬ್-ಗಳು, ದಿಸ್ಕೋತೆಕ್-ಗಳು ಇಪ್ಪತ್ತೊಂದನೇ ಶತಮಾನದ ಅತ್ಯಾಧುನಿಕ ಸಂಸ್ಕೃತಿಯನ್ನು ಜಗಜಗಿಸಿ
ಪ್ರಕಾಶಿಸುತ್ತಿವೆ.
ಜನಸಮೂಹವು ಯಾವುದೋ ಮಾರ್ಕೆಟ್ಟಿನ್ನೊಳಗೆ ವ್ಯಾಪಾರದಲ್ಲಿ ಕಾರ್ಯಮಗ್ನರಾಗಿರುವಂತೆ
ಅವಿಶ್ರಾಂತ ಚಿತ್ತದಲ್ಲಿ ಮುಳುಗಿದ್ದಾರೆ. ಓಪನ್ ಪಬ್-ಗಳ ಅಂಗಳದಲ್ಲಿ, ದಿಸ್ಕೊತೆಕ್-ಗಳಲ್ಲಿ, ತೆರೆದ ಹೋಟೆಲ್,
ಡಾಬಾಗಳಲ್ಲಿ, ಹೋಟೆಲ್ ರೂಮಿನ ಬೆಚ್ಚಗಿನ ಮಂಚಗಳಲ್ಲಿ, ಅಂಗಡಿಗಳಲ್ಲಿ, ರಸ್ತೆಬದಿಯ ಚಿಕ್ಕ ಚಿಕ್ಕ
ವ್ಯಾಪಾರಗಳಲ್ಲಿ ಸ್ವಚ್ಚಂದತೆಯ ವಿಮಾನವೇರಿ, ನಿರಂಕುಶಪ್ರಭುತ್ವದ ಆಡಂಬರದಲ್ಲಿ ತಮ್ಮದೇ ಲೋಕದಲ್ಲಿ
ತಲ್ಲೀನರಾಗಿದ್ದಾರೆ. ಯುವಕ ಯುವತಿಯರ ತುಂಡುಡುಗೆಗಲಿಂದ ಹೊರಚೆಲ್ಲುತ್ತಿರುವ ಮಾಧಕ ಸೌಂದರ್ಯಕ್ಕೆ,
ನೋಡುಗರ ಕಣ್ಣರಳಿ, ಸ್ಮೃತಿಗೆ ಸಿಡಿಲುಬಡಿದಂತಾಗಿ ದೃಷ್ಟಿಸುಖದ ಉದ್ದೀಪನದಲ್ಲಿ ತೇಲುತ್ತಿದ್ದಾರೆ.
ಭಕ್ಷ್ಯಭೊಜನೆಗಳ, ಪಾನವೈವಿಧ್ಯಗಳ ಸೇವನೆಯೊಡನೆ ಸರಸ ಸಲ್ಲಾಪಗಳು ಭರ್ಜರಿಯಾಗಿ ನಡೆಯುತ್ತಿದೆ.
ಡಿಸ್ಕೊತೆಕ್-ನಲ್ಲಿ ಬೃಹತ್ ಸ್ಪೀಕರ್ ಗಳಿಂದ ಹೊರಹೊಮ್ಮುತ್ತಿದ್ದ ರುದ್ರಸಂಗೀತಕ್ಕೆ ಮೇಜಿನ ಮೇಲಿದ್ದ ಮಧ್ಯ
ತುಂಬಿದ ಗಾಜಿನ ಲೋಟ, ಕಿಟಕಿಯ ಗಾಜು, ಹಾಗು ನೆರೆದಿದ್ದ ಜನರ ಎದೆ ಅದಿರುತ್ತಿದೆ. ಆ ಭೀಷಣಧ್ವನಿಯನಾಲಿಸಿ
ಜನರು ಉದ್ವೇಜನಗೊಂಡು ಉನ್ಮತ್ತತೆಯಲ್ಲಿ ಕುಣಿದು ಮೈಮರೆತಿದ್ದಾರೆ, ಬಹುಷಃ ಸ್ವಲಕಾಲ ತಮ್ಮ ಅಸ್ತಿತ್ವವನ್ನೆ
ಮರೆತಿದ್ದಾರೆ. ಲೌಕಿಕ ಜೀವನದ ಸಕಲಾನಂದಕ್ಕೆ ಅವಶ್ಯಕವಾದ ಸಕಲ ಭೊಗ್ಯಗಳೂ, ಯೋಗ್ಯಾಯೋಗ್ಯದ
ಪ್ರಮಾಣಿಕರಣದ ಹಿಡಿತಕ್ಕೊಳಪಡದೆ, ಸರಾಗಸುಲಭವಾಗಿ ಲಭ್ಯವಾಗಿದೆ. ಬಣ್ಣಬಣ್ಣದ ಬ್ಯಾಂಕ್ ಕಾರ್ಡುಗಳ,
ಗರಿಗರಿ ನೋಟುಗಳು ತುಂಬಿದ ಜೇಬುಗಳ ಸಹಾಯದಿಂದ ಇವೆಲ್ಲವೂ ಸಾಧ್ಯವಾಗಿದೆ.
ಹಿಪ್ಪಿಗಳು, ಕುಡಿತದ ಅಮಲಿನಲ್ಲಿದ್ದ ಪ್ರವಾಸಿಗಳು ಸಮುದ್ರ ತೀರದ ಮರಳನ್ನೇ ಹಾಸಿಗೆಯಾಗಿಸಿದ್ದಾರೆ.
ಇನ್ನು ಕೆಲವರು ಅಲ್ಲಲ್ಲೇ ಹಾಕಿದ್ದ ಮರದ ವಿಶ್ರಾಂತಿ ಮಂಚಗಳ ಮೇಲೆ ಊರ್ಧ್ವಮುಖ ಮಾಡಿ ವಿಶ್ರಮೈಸುತ್ತಿದ್ದಾರೆ.
ಕಡಲು ಹೆಪ್ಪುಗಟ್ಟಿದ ಕತ್ತಲೆಯಲ್ಲಿ ಕರಗಿಹೋಗಿದ್ದರೂ, ಪಿಸುಗುಡುತ್ತಿದ್ದ ಅಲೆಗಳ ಜೊತೆಗೆ ಮತ್ತಲವರು ಮಾತುಕಥೆಗೆ
ಇಳಿದಿದ್ದಾರೆ; ಅಳುವವರು, ನಗುವವರ ಜೊತೆ, ಕಡಲೊಂದಿಗೆ ವಾದಕ್ಕಿಳಿದವರೂ ಇದ್ಧಾರೆ. ಇವುಗಳನ್ನು ಬಹುಕಾಲದಿಂದ
ನೋಡುತ್ತಾ ಬಂದಿರುವ ವಿಸ್ತರ ಸಮುದ್ರ ಎಂದಿನಂತೆ ನಿರಾಳ ನಿರ್ಲಿಪ್ತ ಮೌನ ತಾಳಿದೆ.
ಅದೇ ಸಮಯಕ್ಕೆ ಗೋವಾದ ದಕ್ಷಿಣಕ್ಕೆ, ಪ್ರವಾಸಿಗರಿಂದ ಮರೆಯಾದ ತೀರವೊಂದರಲ್ಲಿ, ತೆಂಗು ಮರಗಳ
ಸಾಲಿನಾಚೆಗೆ ಚಿಕ್ಕ ಗುಡಿಸಲೊಂದರಲ್ಲಿ ಹಚ್ಚಿದ್ದ ಎಣ್ಣೆ ದೀಪ, ಆಗಸದ ನಕ್ಷತ್ರಗಳೊಂದಿಗೆ ಬೆಳಕಿನ ಪೈಪೋಟಿ
ನಡೆಸುತ್ತಿದೆ. ಗುಡಿಸಲ ಬಾಗಿಲ ಬಳಿ ನಿಂತಿದ್ದ ಆ ವ್ಯಕ್ತಿಯ ನೆರಳು ಅವನಡಿಯಿಂದ ಕಿರಿದಾಗಿ ಹುಟ್ಟಿ, ಸಾಕಷ್ಟು
ಉದ್ದವಾಗಿ ಬೆಳೆದು ಮಳಲರಾಶಿಯ ಮೇಲೆ ಮಲಗಿದೆ. ಗಾಳಿಯ ಚಂಚಲ ವೇಗಕ್ಕೆ ಅಸ್ಥಿರವಾದ ದೀಪವು, ನೆರಳನ್ನು
ತನ್ನ ಅಂಕೆಯಲ್ಲಿ ಕುಣಿಸುತ್ತಿದೆ. ತುಸುಹೊತ್ತಿನಲ್ಲೆ ಅವನು ಮನೆಯಿಂದ ಹೊರ್ಅಟುಬಿಟ್ಟ. ಅವನ ನೆರಳು ದೀಪದಿಂದ
ವಿಮುಕ್ತಗೊಂಡು ಬೆಳದಿಂಗಳಿನೊಂದಿಗೆ ಹೊಸ ಸ್ನೇಹವನ್ನು ಮಾಡಿ, ಅವನ ನಡೆಯನ್ನೇ ಅನುಸರಿಸಿದೆ. ಹೆಗಲ ಮೇಲೆ
ಬಲೆಯನ್ನು, ಒಂದು ಬಕೆಟ್ಟನ್ನು ಹಿಡಿದು ತನ್ನ ದೋಣಿಯೆಡೆಗೆ ಹೋಗುತ್ತಿದ್ದಾನೆ. ದಡದಲ್ಲಿ ಕಟ್ಟಿಹಾಕಿದ್ದ ದೋಣಿಯೊಳಗೆ
ತನ್ನ ಸಮಾನುಗಳನ್ನೆಲ್ಲಾ ಇಟ್ಟು, ಒಂದು ಪವಿತ್ರ ಕಾರ್ಯವೆಸಗುವ ಸನ್ನಾಹದಲ್ಲಿದ್ದಾನೆ. ಕಣ್ಣು ಮುಚ್ಚಿ, ಕೈಮುಗಿದು,
ಇಂದಾದರು ತನ್ನ ಬಲೆಗೆ ತಕ್ಕಮಟ್ಟಿಗೆ ಮೀನುಗಳು ಸಿಕ್ಕಿ, ಮಂಜೇಶ್ವರ್ ನಾಯಕ್ ಗೆ ಕೊಡಬೇಕಾದ ಸಾಲದಲ್ಲಿ
ಸ್ವಲ್ಲ್ಪವಾದರು ತೀರಿವಂತಾಗಲಿ ಎಂದು ಭಕ್ತಿಯಿಂದ ಕಡಲದೇವನನ್ನು ಕುರಿತು ಪ್ರಾರ್ಥಿಸುತ್ತಿದ್ದಾನೆ. ದೊಡ್ಡ
ದೊಡ್ಡ ಹಡಗುಗಳೊಂದಿಗೆ ನಡೆಸುವ ಮೀನುಗಾರಿಯಿಂದ ಇವನ ದಿನನಿತ್ಯದ ಹೊಟ್ಟೆಪಾಡಿಗೆ ಏಟು ಬಿದ್ದಂತಾಗಿದೆ.
ಆದರೂ ಕೆಲವೊಮ್ಮೆ, ಹಡಗಿನ ದೊಡ್ಡಬಲೆಗಳನ್ನು, ಕಾಲದ ಮಹಿಮೆಯಿಂದ ಮೀನುಗಳು ತಪ್ಪಿಸಿಕೊಂಡು ಇವನಿಗೆ
ಸಿಕ್ಕುತ್ತಿರುತ್ತವೆ. ಕಡಲದೇವನ ಪ್ರಾರ್ಥನೆಯಿಂದಲೇ ಇದು ಸಾಧ್ಯವೆಂಬು ಇವನ ನಂಬಿಕೆ.
ಪ್ರಾರ್ಥನೆಯಲ್ಲಿ ನಿರತನಾಗಿದ್ದ ಅವನ ಕಾಲ್ಗಳಿಗೆ ಪುನರಾವರ್ತಿಸಿ ಬಡಿದು ಮರಳುತ್ತಿದ್ದ ಫೇನಶಿರದಲೆಗಳು,
ಅವನ ಅಕುಟಿಲ ಪ್ರಾರ್ಥನೆಯನ್ನು ಕಡಲಚಿತ್ತಕ್ಕೆ ಮುಟ್ಟಿಸುತ್ತಿದೆಯೆಂದೂ, ಕಡಲು ಅವನ ಪ್ರಾರ್ಥನೆಗೆ ಮರುಗಿ
ಆಶೀರ್ವಾದಿಸುವುದೆಂದೂ, ಅವನಿಗೆ ಹೃದ್ಯವಾಗಿದೆ. ಸುವಿಶಾಲ ಗಂಭೀರ ಕಡಲ ಸಾನಿಧ್ಯದಿಂದಲೋ, ನೀರಿನಿಂದ ಬಂದ
ಶೀತಲ ಮಂದಾನಿಲದ ಸ್ಪರ್ಷದಿಂದಲೋ, ಅವನಲ್ಲಿ ಅನಿರ್ವಚನೀಯ ಅನುಭವವೊಂದನ್ನು ಮೂಡಿದೆ. ಇಂದಿನ
ಅವನ ಕಾರ್ಯದಲ್ಲಿ ಜಯವಿರುವುದೆಂಬ ಸೂಕ್ಷ್ಮ ಸಂಕೇತವನ್ನು ಅವನಂತರಂಗಕ್ಕೆ ಮುಟ್ಟಿಸಿದೆ. ಇಂದಿನ ಕಾರ್ಯ
ಸಫಲತೆಯ ಲಕ್ಷಣಗಳು, ಅವನ ಚಿತ್ತದ ಕ್ರಾಂತದೃಷ್ಟಿಯಲ್ಲಿ ಗೋಚರಿಸಿ, ಆವರೆಗೂ ಇರದ ಮನೋಸ್ಥೈರ್ಯವು
ಪುಷ್ಕಲಗೊಂಡು, ಮುಖದಲ್ಲಿ ಭಾವಕ್ರಾಂತಿಯು ಮಿನುಗಿದೆ. ಈ ಅಲೌಕಿಕ ಅನುಭವ, ವಿಶ್ವಾಸಗಳೇ ಅವನ ದಿನನಿತ್ಯ
ಕರ್ಮಗಳಿಗೆ ಆಧಾರವಾಗಿದೆ. ಪ್ರಾರ್ಥನೆಯ ನಂತರ ದೋಣಿಯನ್ನು ಹತ್ತಿ, ಮೇಲೆ ನಕ್ಷತ್ರಗಳನ್ನೊಮ್ಮೆ ನೋಡಿ ದಿಕ್ಕು
ಹಿಡಿದು ಹೊರಟೇಬಿಟ್ಟನು. ಇವನ ಪ್ರಾರ್ಥನೆಯನ್ನು ನೋಡಿದ ಸಮುದ್ರವು, ಹಿಂದೆಯೂ ಇವನ ಅನೇಕ ಪೂರ್ವಿಕರು
ಇವನಂತಯೆ ಪ್ರಾರ್ಥನೆಯನ್ನು,ಇನ್ನು ಮತ್ತಿತರ ವಿಧಿಕರ್ಮಗಳನ್ನು ಮೀನು ಹಿಡಿಯುವುದಕ್ಕೆ ಮುಂಚೆ ಮಾಡುತ್ತಿದ್ದುದ್ದನ್ನು
ನೆನಸಿಕೊಂಡಿದೆ. ಪಾರಂಪರ್ಯಾಗತವಾಗಿ ಅನೇಕ ಜನಾಂಗ ಜನಾಂಗಗಳಿಂದ ಹರಿದುಬಂದಿರುವ ಸಂಕೃತಿಯು ಇಂದು
ಈತನಲ್ಲಿ ಬಂದು ನಿಂತಿದೆ. ಮುಂದೆಯೂ ಇವನಂತೆಯೆ ಇವನ ಮುಂದಿನ ಸಂತತಿಗಳು ಇದೇ ಸಂಸ್ಕೃತಿಯನ್ನು
ತಮ್ಮಜೊತೆ ಜೀವನ ಅವಿಭಾಜ್ಯವಾಗಿ ಅನುಸರಿಸುವರೊ? ಅಥವಾ ಅತ್ತ ದಡದಲ್ಲಿ ಜನಜಂಗುಳಿಯಲ್ಲಿ ವಿಸ್ಫುಟವಾಗಿ
ತೋರುತ್ತಿದ್ದ ಆಧುನಿಕ ಸಂಸ್ಕೃತಿಯ ಪ್ರಭಾವದಿಂದ ನಶಿಸಿ ಹೋಗುವುದೊ? ಎಂಬ ಸಣ್ಣ ಯೋಚನೆ ಕಡಲ ಸ್ಮೃತಿಯಲ್ಲಿ
ಹಾದುಹೋಗಿದೆ. ಆದರೂ ಅದರಿಂದ ವಿಚಲಿತಗೊಳ್ಳದೆ ತನ್ನ ಚಿತ್ತವನ್ನುಲ್ಕ್ ಮತ್ತೆ ಮೌನದಾರಿಯಲ್ಲೇ ನಡೆಸಿದೆ.
ದೋಣಿ ಹೋದ ಸ್ವಲ ಸಮಯದಲ್ಲೇ, ಅಲ್ಲಿಂದ ಸುಮಾರು ದೂರದಲ್ಲಿ, ಬಂಡಗಳ ಎಡೆಯಲ್ಲಿ ಅಲೆಯೊಂದರಲ್ಲಿ
ಆಮೆಯೊಂದು ತೀರದ ಮರಳ ಮೇಲೆ ತೇಲಿಬಂದಿದೆ. ನಿಧಾನವಾಗಿ ಸಣ್ಣ ಸಣ್ಣ ಹೆಜ್ಜೆಯನಿಟ್ಟು ಸಾಗುತ್ತಿದ್ದ ಆ
ಕೂರ್ಮನಡಿಗೆಯನ್ನು ಬೆಂಬಲಿಸುವಂತೆ, ಮೆಲ್ಲನೆ ಬೀಸುತ್ತಿದ್ದ ಮೃದುಗಾಳಿ, ವೇಗವಿಹೀನವಾಗಿ ತೇಲುತ್ತಿದ್ದ ತಿಳಿಮೋಡಗಳ
ಗುಂಪು, ಝೇಂಕರಿಸದ ಸಾಗರದಲೆಗಳ ಸಲಿಲ ಲೀಲೆ, ತುಸುದೂರದಲ್ಲಿದ್ದ ಮರದ ಕೊಂಬೆಯ ಎಲೆಗೊಂಚಲಿನ ಮೃದುಕಂಪನ,
ಸರ್ವವೂ ಼ದ್ಫ಼್ಮಂದಮಯವಾಗಿದೆ.ಹಾಗೆಯೇ ನೀರಿನಿಂದ ದೂರ ಬಂದು ಆಮೆಯು ಮರಳನ್ನು ಅಗೆದು ತನ್ನ ಮೊಟ್ಟೆಗಳನ್ನಿಡುತ್ತಿದೆ.
ಅಪಾಯದಿಂದ ಮೊಟ್ಟೆಗಳನ್ನು ರಕ್ಷಿಸಲೆಂದೇ ಯಾವ ಪ್ರಾಣಿಗಳು ಜಾಸ್ತಿ ಬರದಿರುವ ಸ್ಥಳವನ್ನೇ ಹುಡುಕಿಕೊಂಡು
ಇಲ್ಲಿಗೆ ಬಂದಿದೆ. ಆದರೂ ತನ್ನ ಕರುಳ ಕುಡಿಗಳಿಗೆ ಎಲ್ಲಿಯಾದಾರು ಅಪಾಯವಿದೆಯೆ? ಎಂದು ಸುತ್ತಲ್ಲೂ ಕಣ್ಣಾಡಿಸಿ
ಪರಿಕ್ಷಿಸಿದೆ. ಅಂತಹ ಯಾವುದೆ ವಿಷಲಕ್ಷಣಗಳು ಕಾಣದ ಕಾರಣ, ಮತ್ತೆ ಕಡಲ ಮನೆಗೆ ಹಿಂದಿರುಗಿ ನಡೆದಿದೆ.
ಮತ್ತೆಂದೂ ಮರಳಿ ನೋಡದ, ತನ್ನ ಮರಿಗಳ ಬಗ್ಗೆ ತಾಯಿ ಆಮೆಗೆ ಇಂತಕ ಕಾಳಜಿಯೇಕೆಂದು, ಸಹಸ್ರಾರು ವರ್ಷಗಳಿಂದ
ಇದನ್ನೇ ನೋಡಿಕೊಂಡು ಬಂದ ಕಡಲಿಗೆ ಅರ್ಥವಾಗಲಿಲ್ಲ, ಅಥವಾ ಅರ್ಥಮಾಡಿಕೊಳ್ಳುವ ಗೊಡವೆಗೆ ಹೋಗಲಿಲ್ಲ.
ತನ್ನ ಒಂದೇ ತೀರದಲ್ಲಿ ನಡೆಯುತ್ತಿರುವ ವೈಚಿತ್ರ ವಿಧ್ಯಮಾನಗಳನ್ನು ಕಡಲು ಅಸ್ಖಲಿತ ನಿರ್ಲಿಪ್ತತೆಯಿಂದ
ವೀಕ್ಷಿಸುತ್ತಿದೆ. ಸ್ವಚ್ಛಂದ ಪ್ರಪಂಚದಲ್ಲಿ, ತೀವ್ರ ನಿರ್ಬಂಧಗಳಿಲ್ಲದ ಲೋಕದಲ್ಲಿ ತೇಲುತ್ತ, ಪರಂಪರಾಗತವಾಗಿ
ಬಂದ ಸಂಸ್ಕೃತಿಯನ್ನು ಪಲ್ಲಟಗೊಳಿಸುವಲ್ಲಿ ನಿರತವಾಗಿರುವ ಆಧುನಿಕ ಜನಸಮೂಹವನ್ನು, ಭಕ್ತಿಭಾವದಲ್ಲಿ ಮಿಂದು,
ಪೂರ್ವಿಕರಿಂದ ಹರಿದುಬಂದ ಸಂಸ್ಕೃತಿಯ ಕಿರು ತುಣುಕಾದ ಪ್ರಾರ್ಥನೆಯಲ್ಲಿ ನಿಮಗ್ನನಾಗಿರುವ ವ್ಯಕ್ತಿಯನ್ನು, ಕಾಲ
ಕಾಲದಿಂದಲೂ ಸಮುದ್ರಜೀವಿಯಾಗಿ ಬದುಕಳಿಯುತ್ತಿರುವ ಜಲಜೀವರಾಶಿಯ ಪಂತಕ್ಕೆ ಸೇರಿದ ಆಮೆಯು, ಲೌಕಿಕ ಜಗದ
ಸಂಸ್ಕೃತಿಯ ಸೃಷ್ಟಿ, ವಿಕಾಸಗಳ ಪರಿವೇ ಇಲ್ಲದೆ, ತನ್ನ ನೈಜ ಮಂದಗತಿಯಿಂದ ತೀರಕ್ಕೆ ಬಂದು ಮೊಟ್ಟೆಯನಿಟ್ಟು
ಮತ್ತೆಂದು ಹಿಂದಿರುಗದ ದಾರಿಹಿಡಿದ ವೃತ್ತಾಂತವನ್ನು ಸಾಗರವು ಸ್ಥಿತಪ್ರಜ್ಙೆಯಲ್ಲಿ ಅನುಭವಿಸುತ್ತಿದೆ.
ಪ್ರ್ಆಚೀನತೆಯಿಂದ ಆಧುನಿಕವಾಗುತ್ತಿರುವ ಮಾನವ ಸಂಸ್ಕೃತಿಯ ಪಲ್ಲಟಗಳು, ಆದಿಯಿಂದ ಬಂದ ಸಂಸ್ಕೃತಿಯನ್ನು
ಇನ್ನೂ ಸಲಹುತ್ತಿರುವ ಮಾನವರ ಆಚಾರ ವಿಚಾರಗಳು, ಸಂಸ್ಕೃತಿಯೇ ಕಾಣದ ಜೀವಿಯಾಗಿದ್ದು, ಇನ್ನೂ ಮೃಗತ್ವವನ್ನು
ಲೇಪಿಸಿಕೊಂಡು ಬದುಕಿ ಅಳಿಯುತ್ತಿರುವ ಆಮೆಯೂ ಮತ್ತು ಅದರಂತೆಯೇ ಇರುವ ಮತ್ತಿತರ ಮೃಗ ಖಗ ಸಮೂಹಗಳು, ತನ್ನ
ಹುಟ್ಟಿನಿಂದಲೂ ಸೃಷ್ಟಿಯ ಬೀಷಣ, ಸೌಮ್ಯ, ಸುಂದರ, ವಿಲಕ್ಷಣ ಕ್ರಿಯೆಗಳನ್ನು ಕಾಣುತ್ತಿರುವ ಕಡಲ ಧೀರ ಮೌನದ
ಮುಂದೆ ಕ್ಷುದ್ರವಾಗಿ ಕಂಡಿವೆ. ಈ ಜೀವಸಮೂಹಗಳ ಪ್ರಕೃತಿ ಅಥವಾ ಸಂಸ್ಕೃತಿಯ ಪಲ್ಲಟಗಳು ವ್ಯಷ್ಟಿರೂಪವಾಗಿ
ಕಂಡುಬಂದರೂ, ಕಡಲ ಸಮಷ್ಟಿ ಪ್ರಜ್ಙೆಯಲ್ಲಿ ಅಪ್ರಮುಖವಾಗಿದೆ. ಅದರ ಮೌನ ಈ ಪ್ರಜ್ಙೆಗೆ ಬೆಂಬಲವಾಗಿದೆ.
ಕಡಲ ಈ ಮೌನವು, ತನ್ನನ್ನು ಹೊತ್ತು ನಿಂತಿರುವ ಭೂಮಿಯು, ಭೂಮಿಯನ್ನು ಹಿಡಿದು ನಿಂತಿರುವ ಸೂರ್ಯನು, ಅವನಂತೆಯೇ
ಕಾಂತಿಪೂರ್ಣವಾಗಿ ಚಲಿಸುತ್ತಿರುವ ಅಸಂಖ್ಯ ನಕ್ಷತ್ರಗಳು, ಇವುಗಳ ರಾಶಿರಾಶಿಗಳಿಂದುದ್ಭವಿಸಿರುವ ಅಗಣಿತ
ನಕ್ಷತ್ರಕೂಟಗಳು ತಾಳಿರುವ ಮೌನದಂತೆಯೇ ಪಾರಂಪರ್ಯವಾಗಿ ಬಂದಿರುವ ದಿವ್ಯ ಮೌನ ಸಂಸ್ಕೃತಿ!!!