ಒಂದೊಳ್ಳೆಯ ನುಡಿ-2

ಒಂದೊಳ್ಳೆಯ ನುಡಿ-2

ನಮ್ಮ ಜೀವನ ಎನ್ನುವುದು ವರ್ತಮಾನ ಪತ್ರಿಕೆ ಇದ್ದಂತೆ. ಅದನ್ನು ಜಾಗೃತೆಯಿಂದ ಬಿಡಿಸಿ ಅಥವಾ ತೆರೆದು ಓದಬೇಕು. ಹೆಚ್ಚಾಗಿ ಅದರಲ್ಲಿ ಮೊದಲು ನಮ್ಮ ಕಣ್ಣಿಗೆ ಬೀಳುವುದು ದಪ್ಪಕ್ಷರಗಳಲ್ಲಿರುವ ಶೀರ್ಷಿಕೆಗಳು. ನಮ್ಮ ಅಭಿರುಚಿಗೆ ತಕ್ಕಂತೆ ನಾವು ಓದಬೇಕು. ಅನಗತ್ಯ ವಿಷಯಗಳನ್ನು ಓದಿ, ತಲೆಯಲ್ಲಿ ತುಂಬಿಕೊಂಡರೆ, ಅದೇ  ವಿಷಯ ಕೊರೆಯುತ್ತಿರುತ್ತದೆ. ನಾಳೆಗೆ ಅದು ಹಳೆಯ ಪತ್ರಿಕೆಯಾಗುತ್ತದೆ. ಹಾಗೆಯೇ ಓದಿ ಮರೆತು ಬಿಡಬೇಕು.

ಜೀವನದಲ್ಲೂ ಅಷ್ಟೆ, ಬೇಕಾದ್ದನ್ನು ತೆಗೆದುಕೊಳ್ಳೋಣ, ಬೇಡವಾದ್ದನ್ನು ಬಿಟ್ಟು ಮುಂದೆ ಹೋಗೋಣ.

ನಮಗೆಷ್ಟೋ ಆಸೆ ಕನಸುಗಳಿರುತ್ತವೆ. ಅದೆಲ್ಲವನ್ನೂ ಸಾಕಾರಗೊಳಿಸಲು ಸಾಧ್ಯವಿಲ್ಲ. ನಮ್ಮ ನಮ್ಮ ಕೈಯಲ್ಲಿ ಎಷ್ಟು ಆಗುವುದೋ, ಅಷ್ಟನ್ನು ಮಾತ್ರ ಪಡೆದು ಸಂತೃಪ್ತ ಬದುಕು ನಡೆಸೋಣ.

ಜೀವನದಲ್ಲಿ ಹಣ ಸಂಪಾದನೆ ಸರಿಯಾದ ರೀತಿಯಲ್ಲಿ ಮಾಡಿದವರಿಗೆ ಆತ್ಮ ಸಂತೋಷವಿರುತ್ತದೆ. ಅನ್ಯಾಯ, ಅಕ್ರಮ ಗಳಿಕೆ, ನಮ್ಮ ನಿದ್ದೆ, ಆಹಾರ, ವ್ಯವಹಾರ, ನಮ್ಮತನ, ನೆಮ್ಮದಿಯನ್ನು ಕಸಿಯುತ್ತದೆ. ಒಮ್ಮೆ ಹಣವಂತನು ವಿಜೃಂಭಿಸಿದರೂ, ಸಿಕ್ಕಿ ಬಿದ್ದಾಗ ಅಧೋಗತಿ ಹಂತಕ್ಕೆ ತಲುಪುತ್ತಾನೆ. ಒಬ್ಬ ಗುಣವಂತನಿಗೆ ಎಲ್ಲರೂ ಕಷ್ಟಕಾಲಕ್ಕೆ ಒದಗಿಬಂದಾರು. ಆದರೆ ಅಕ್ರಮ ಸಂಪತ್ತಿನವನನ್ನು ಯಾರೂ ತಿರುಗಿಸಹ ನೋಡಲಾರರು.

ಹಾಗಾಗಿ ನಾವು ಆಕಾಶಕ್ಕೆ ಏಣಿ ಹಾಕದೆ ನಮ್ಮ ಬದುಕನ್ನು ನಿರಾಳವಾಗಿ ನಡೆಸಲು ಎಷ್ಟು ಬೇಕೋ ಅಷ್ಟರಲ್ಲೇ ತೃಪ್ತಿ ಪಟ್ಟುಕೊಳ್ಳೋಣ. ನಾವೆಷ್ಟೋ ಪತ್ರಿಕೆಗಳಲ್ಲಿ ಓದಿದ್ದುಂಟು 'ಒಂದಂಕಿ ಲಾಟರಿ, ಚೀಟಿ ವ್ಯವಹಾರದಲ್ಲಿ ಗೋಲ್ ಮಾಲ್, ಮೋಸ'ಎಂಬುದಾಗಿ,ಹಣ ಗಳಿಕೆಯ ಉದ್ದೇಶವೇನೋ ಒಳ್ಳೆಯದೇ, ಆದರೆ ರಲ್ಲಿ ದಾರಿ ಸುಗಮವಾಗಿದೆಯೇ ಎಂದು ವಿಚಾರಿಸಿ ಮುಂದಡಿಯಿಡಬೇಕು. ಆಕಾಶಕ್ಕೆ ಏಣಿ ಹಾಕದೆ ಇದ್ದುದರಲ್ಲೇ ನೆಮ್ಮದಿ ಕಾಣೋಣ. ಪತ್ರಿಕೆಗಳಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಓದುವ ಹಾಗೆ, ಬದುಕಿನ ಹಾದಿಯಲ್ಲೂ ಬೇಕಾದ್ದನ್ನು ಮಾತ್ರ ಆರಿಸಿಕೊಳ್ಳೋಣ. ಕೈಗೆಟುಕದ ಗಗನ ಕುಸುಮಕ್ಕಾಗಿ ಹಾತೊರೆಯದೆ, ನಮ್ಮ ಸಾಮರ್ಥ್ಯವನ್ನರಿತು ವ್ಯವಹರಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ.

-ರತ್ನಾ ಭಟ್ ತಲಂಜೇರಿ