ಒಂದೊಳ್ಳೆ ಮಾತು ಭಾಗ 2

ಒಂದೊಳ್ಳೆ ಮಾತು ಭಾಗ 2

ಪುಸ್ತಕದ ಲೇಖಕ/ಕವಿಯ ಹೆಸರು
ರೂಪಾ ಗುರುರಾಜ್
ಪ್ರಕಾಶಕರು
ವಿಶ್ವವಾಣಿ ಪುಸ್ತಕ, ರಾಜರಾಜೇಶ್ವರಿನಗರ, ಬೆಂಗಳೂರು-೫೬೦೦೯೮
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

‘ವಿಶ್ವವಾಣಿ’ ಓದುಗರಿಗೆ ರೂಪಾ ಗುರುರಾಜ್ ಹೆಸರು ಚಿರಪರಿಚಿತ. ಅವರು ಪ್ರತೀ ದಿನ ಬರೆಯುವ ‘ಒಂದೊಳ್ಳೆ ಮಾತು’ ಅಂಕಣ ಬಹಳಷ್ಟು ಜನರ ಮನಗೆದ್ದಿದೆ. ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ನಡೆಯುವ ಚರ್ಚೆಗಳನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುವ ಇವರ ಅಂಕಣಗಳ ಸಂಗ್ರಹದ ಮೊದಲ ಭಾಗ ‘ಒಂದೊಳ್ಳೆ ಮಾತು ಭಾಗ 1’ ಈಗಾಗಲೇ ಕಳೆದ ವರ್ಷ ಬಿಡುಗಡೆಯಾಗಿದೆ. ಈಗ ಬಿಡುಗಡೆಯಾಗಿರುವುದು ಅದೇ ಪುಸ್ತಕದ ಎರಡನೇ ಭಾಗ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ‘ಥಟ್ ಅಂತ ಹೇಳಿ...' ಎಂಬ ದೂರದರ್ಶನ ಚಂದನದ ಕಾರ್ಯಕ್ರಮ ನಿರೂಪಕ, ಅಂಕಣಗಾರ, ವೈದ್ಯರಾದ ಡಾ. ನಾ ಸೋಮೇಶ್ವರ ಇವರು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಸಾಲುಗಳು ಇಲ್ಲಿವೆ...  

“ನಮ್ಮ ಪೂರ್ವಜರಲ್ಲಿ ಮೂರು ಗುಣಗಳು ಜನ್ಮದತ್ತವಾಗಿ ಮೂಡಿದ್ದವು. ಮೊದಲನೆಯದು ಪ್ರಶ್ನಿಸುವ ಗುಣ. ತನ್ನ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಕಾಣುವ ಎಲ್ಲ ವಿಚಾರಗಳ ಬಗ್ಗೆ ಕುತೂಹಲವನ್ನು ತೋರಿದ. ಅವುಗಳ ಬಗ್ಗೆ ತನಗೆ ತಾನೇ ಪ್ರಶ್ನೆಗಳನ್ನು ಕೇಳಿಕೊಂಡ. ಅವುಗಳ ಬಗ್ಗೆ ಹೆಚ್ಚು ಹೆಚ್ಚು ಸಮರ್ಪಕ ಉತ್ತರವನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ. ಅಷ್ಟು ಮಾತ್ರವಲ್ಲ, ತನ್ನ ಬಗ್ಗೆಯೂ ತಾನು ಪ್ರಶ್ನಿಸಿಕೊಳ್ಳಲಾರಂಭಿಸಿದ. ಅವುಗಳಿಗೆ ಯಥಾಮತಿ ಉತ್ತರಗಳನ್ನು ಕಂಡುಕೊಂಡ. ಎರಡನೆಯದು ಅನ್ವೇಷಿಸುವ ಗುಣ. ಮನುಷ್ಯನು ಒಂದು ಕಡೆ ಕುಳಿತಿರಲಾರ. ಅವನಿಗೆ ಸದಾ ತನ್ನ ಸುತ್ತಮುತ್ತಲೂ ಏನೇನಿದೆ ಎನ್ನುವುದನ್ನು ತಿಳಿಯುವ ಕುತೂಹಲ. ಹಾಗಾಗಿ ಇಂದು ಭೂಮಿಯ ಪ್ರತಿಯೊಂದು ಮೂಲೆಯನ್ನು ಅವನ ಹೆಜ್ಜೆಯನ್ನು ನೋಡಬಹುದು.

ನಮ್ಮ ಪೂರ್ವಜರು ತಮ್ಮ ಅನುಭವವನ್ನು ದಾಖಲಿಸಲು ಕಥಾಮಾಧ್ಯಮವನ್ನು ಪ್ರಧಾನವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಂಡರು. ಅದರಲ್ಲೂ ಪ್ರಾಣಿ, ಪಶು, ಪಕ್ಷಿಗಳ ಮೂಲಕ ಕಥೆಯನ್ನು ಹೇಳುವ ಪದ್ಧತಿಯು ಬಹು ಜನಪ್ರಿಯವಾಯಿತು. ಬಹುಶಃ ಇಂತಹ ಕಥೆಗಳಲ್ಲಿ ’ಪಂಚತಂತ್ರ’ವು ಪ್ರಮುಖವಾದದ್ದು. ಕ್ರಿ.ಪೂ.200 ರಚನೆಯಾಗಿರಬಹುದಾದ ಈ ಕಥೆಯು ಇಂದು ಜಗತ್ತಿನ 50 ಪ್ರಮುಖ ಭಾಷೆಗಳಲ್ಲಿ 200ಕ್ಕೂ ರೂಪಾಂತರಗಳನ್ನು ಕಂಡಿದೆ. ಇಂದಿಗೂ ಕಾಣುತ್ತಿದೆ. ಇಲ್ಲಿ ಎಲ್ಲಿಯೂ ನೀತಿಯನ್ನು ನೇರವಾಗಿ ಹೇಳುವುದಿಲ್ಲ. ಬದಲಿಗೆ ಕಥೆಯ ತಿರುಳನ್ನು ಅರ್ಥ ಮಾಡಿಕೊಂಡರೆ, ಅಲ್ಲಿರುವ ಅನುಕರಣೀಯ ಮಾರ್ಗದರ್ಶನ ನಮಗೆ ಹೊಳೆಯುತ್ತದೆ.

ರೂಪಾ ಗುರುರಾಜ್ ಅವರು ವಿಶ್ವವಾಣಿ ಪತ್ರಿಕೆಯಲ್ಲಿ ’ಒಂದೊಳ್ಳೆ ಮಾತು’ ಎನ್ನುವ ಅಂಕಣವನ್ನು ಬರೆಯುತ್ತಿದ್ದಾರೆ. ಸುಮಾರು 325-350 ಪದಮಿತಿಯಲ್ಲಿ ಅವರು, ಗುಣಮಟ್ಟದಲ್ಲಿ ಮುಕ್ತಕಗಳನ್ನು ಹೋಲುವ ಆದರೆ ಸ್ವರೂಪದಲ್ಲಿ ಪಂಚತಂತ್ರದಂತಹ ಪುಟ್ಟ ಕಥೆಗಳನ್ನು ನೆನಪಿಸುವ ಕಥೆ/ಘಟನೆಗಳನ್ನು ಗದ್ಯದಲ್ಲಿ ಬರೆದಿದ್ದಾರೆ. ಈ ಒಂದೊಳ್ಳೆ ಮಾತಿನ ವಿಶೇಷವೆಂದರೆ, ಇದು ದ್ರಾಕ್ಷಾಪಾಕದಂತೆ ಇದೆ! ಪಂಡಿತರು ಕಾವ್ಯವನ್ನು ಮೂರು ರೀತಿಯಲ್ಲಿ ಬರೆಯಬಲ್ಲರು. ಅದನ್ನು ಸೂಚ್ಯವಾಗಿ ನಾರಿಕೇಳಪಾಕ, ಇಕ್ಷುಪಾಕ ಹಾಗೂ ದ್ರಾಕ್ಷಾಪಾಕ ಎಂದು ಕರೆಯುವುದುಂಟು. ತೆಂಗಿನಕಾಯಿಯ ತಿರುಳನ್ನು ಆಸ್ವಾದಿಸಬೇಕಾದರೆ ಅದರ ನಾರನ್ನು ತೆಗೆಯಬೇಕು. ಕರಟವನ್ನು ಒಡೆಯಬೇಕು. ಆನಂತರ ತಿರುಳನ್ನು ಕರಟದಿಂದ ಬೇರ್ಪಡಿಸಿ ತಿನ್ನಬೇಕು. ಅಂದರೆ ತಿರುಳನ್ನು ತಿನ್ನಲು ಕಷ್ಟಪಡಬೇಕಾಗುತ್ತದೆ. ಇಕ್ಷುಪಾಕ ಎಂದರೆ ಕಬ್ಬಿನ ರಸವನ್ನು ಆಸ್ವಾದಿಸುವುದು. ಕಬ್ಬಿನ ಜಲ್ಲೆಯನ್ನು ಸಣ್ಣ ಸಣ್ಣ ತುಂಡುಗಳನ್ನು ಕತ್ತರಿಸಬೇಕು. ಮೇಲಿನ ಸಿಪ್ಪೆಯನ್ನು ಹಲ್ಲಿನಿಂದ ಸಿಗಿದು ಬೇರ್ಪಡಿಸಬೇಕು ಹಾಗೂ ಸಿಪ್ಪೆಯಿಲ್ಲದ ಕಬ್ಬನ್ನು ಹಲ್ಲಿನಿಂದ ತುಂಡರಿಸಿ ಜಗಿಯಬೇಕು. ಆಗ ಕಬ್ಬಿನ ರುಚಿಯನ್ನು ನಾವು ಸವಿಯಬಹುದು. ಹಾಗಾಗಿ ಕಬ್ಬಿನ ರಸವನ್ನು ಸವಿಯಲು, ತೆಂಗಿನಷ್ಟು ಅಲ್ಲದಿದ್ದರೂ ಸ್ವಲ್ಪ ಕಷ್ಟಪಡಲೇಬೇಕಾಗುತ್ತದೆ. ಆದರೆ ದ್ರಾಕ್ಷಿ ಪಾಕ ಹಾಗಲ್ಲ. ದ್ರಾಕ್ಷಿಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಜಗಿದು ಅದರ ರುಚಿಯನ್ನು ನೋಡಿ ಆನಂದಿಸಬಹುದು. ರೂಪಾ ಅವರ ಬರಹ ದ್ರಾಕ್ಷಾ ಪಾಕವಿದ್ದ ಹಾಗೆ. ಒಂದು ಪುಟ್ಟ ಕಥೆಯನ್ನೋ ಅಥವ ಪ್ರಸಂಗವನ್ನೋ ಹೇಳಿ, ಅದರ ಅರ್ಥವನ್ನು ಅತ್ಯಂತ ತಿಳಿಗನ್ನಡದಲ್ಲಿ ಸವಿಸ್ತಾರವಾಗಿ ವರ್ಣಿಸುತ್ತಾರೆ.

ಇಂತಹ ಶೈಲಿಯು ಹಿರಿಯರಿಗೆ ಮಾತ್ರವಲ್ಲ, ಶಾಲಾ ಮಕ್ಕಳಿಗೂ ಹೆಚ್ಚು ಉಪಯುಕ್ತವಾಗಿದೆ. ಜಗತ್ತಿನ ನೀತಿಕಥೆಗಳ ಅಥವ ಮುಕ್ತಕಗಳ ವಿಶಾಲ ಜಗತ್ತನ್ನು ಪ್ರವೇಶಿಸುವ ಮೊದಲು ’ಒಂದೊಳ್ಳೆ ಮಾತು’ ಉತ್ತಮ ಪ್ರವೇಶಿಕೆಯನ್ನು ಒದಗಿಸುತ್ತದೆ.

ರೂಪಾರವರು ತಮ್ಮ ದ್ರಾಕ್ಷಾಪಾಕವನ್ನು ಉಣಿಸುವಾಗ ಸಮಕಾಲೀನ ಜಗತ್ತಿನ ಆಗುಹೋಗುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ನಾವು ನೋಡಬಹುದು. ಒಂದು ಉದಾಹರಣೆಯನ್ನು ನೋಡೋಣ. ’ಎಲ್ಲ ಗೊತ್ತು ಎಂಬ ಗತ್ತು’ ಎಂಬ ಪ್ರಸಂಗವನ್ನು ಗಮನಿಸೋಣ. ಮನುಕುಲ ಕಂಡ ಮಹಾನ್ ಪ್ರತಿಭೆಗಳಲ್ಲಿ ವ್ಯಾಸರು ಸರ್ವಶ್ರೇಷ್ಠರು ಎನ್ನುವುದು ನಮ್ಮ ನಂಬಿಕೆ. ಇಂತಹ ವ್ಯಾಸ ಮಹರ್ಷಿಗಳಿಂದ ಹೊಗಳಿಸಿಕೊಂಡವರು ಶಂಕರ ಭಗವತ್ಪಾದರು. ಅಂತಹವರ ಬಗ್ಗೆ ಶಿಷ್ಯನೊಬ್ಬ ’ನಿಮ್ಮ ಜ್ಞಾನವು ಈ ಅಲಕಾನದಿಯ ಹಾಗೆ’ ಎಂದಾಗ, ಶಂಕರಾಚಾರ್ಯರು ತಮ್ಮ ಬ್ರಹ್ಮದಂಡವನ್ನು ಅಲಕೆಯಲ್ಲಿ ಮುಳುಗಿಸಿ ಎತ್ತುತ್ತಾರೆ. ಅದಕ್ಕೆ ಅಲಕೆಯ ಒಂದು ಬಿಂದು ಮಾತ್ರ ಅಂಟಿಕೊಂಡಿರುತ್ತದೆ. ಅದನ್ನು ತೋರಿಸುತ್ತಾ ’ನನ್ನ ಜ್ಞಾನವು ಈ ಬಿಂದುವಿನಷ್ಟು ಮಾತ್ರ’ ಎನ್ನುತ್ತಾರೆ.

ಈ ಪ್ರಸಂಗವು ಅಲಕಾನಂದ ನದಿಯ ಭೋರ್ಗರೆವ ಪ್ರವಾಹದ ಅಗಾಧತೆಯನ್ನು, ಅಂದರೆ ಜ್ಞಾನದ ಅಗಾಧತೆಯ ಕಲ್ಪನೆಯನ್ನು ನಮಗೆ ಕೊಡುತ್ತದೆ. ಶಂಕರಾಚಾರ್ಯರಂತಹ ಮಹಾನುಭಾವರೇ ನನ್ನ ಜ್ಞಾನ ಒಂದು ಬಿಂದುವಿಗೆ ಸಮ ಎಂದಾಗ ನಮ್ಮ ಹುಲುಮಾನವರ ಜ್ಞಾನವನ್ನು ಯಾವುದಕ್ಕೆ ಹೋಲಿಸಬೇಕು ಎನ್ನುವುದು ಹೊಳೆಯುವುದೇ ಇಲ್ಲ. ರೂಪಾರವರು ಇದೇ ಪ್ರಸಂಗದ ಹಿನ್ನೆಲೆಯಲ್ಲಿ, ಕೇವಲ ಅಂತರ್ಜಾಲದಲ್ಲಿ ಹಸಿ-ಬಿಸಿ ಸುದ್ಧಿಗಳನ್ನು ಓದಿ ’ನನಗೆಲ್ಲ ಗೊತ್ತು’ ಎಂಬ ಹಮ್ಮಿನಿಂದ ಬೀಗುತ್ತಾ, ವೈದ್ಯಕೀಯವನ್ನು ಹತ್ತು ವರ್ಷಗಳ ಕಾಲ ಓದಿ, 10-20 ವರ್ಷಗಳ ಅನುಭವವನ್ನು ಪಡೆದ ವೈದ್ಯರ ಮುಂದೆ ಬಂದು, ತಮ್ಮ ಅಂತರ್ಜಾಲ ಜ್ಞಾನದ ಹಮ್ಮಿನಿಂದ ’ಈ ಔಷಧವನ್ನೇಕೆ ಬರೆದಿರಿ, ಆ ಔಷಧವು ಹೆಚ್ಚು ಸೂಕ್ತವಲ್ಲವೇ’ ಎಂದು ವಾದಿಸುವವರು ಸಾಕಷ್ಟಿದ್ದಾರೆ. ಇದು ನನ್ನ ಸ್ವಂತ ಅನುಭವವೂ ಕೂಡ. ಅದಕ್ಕಾಗಿಯೇ ಕೆಲವು ವೈದ್ಯರು ’ಚಿಕಿತ್ಸೆಯ ಶುಲ್ಕ ಒಂದು ಸಾವಿರ; ಅಂತರ್ಜಾಲ ಇಲ್ಲವೇ ಚಾಟ್ ಜಿಪಿಟಿ ರೋಗನಿದಾನ ಚಿಕಿತ್ಸೆಯ ಶುಲ್ಕ ಮೂರು ಸಾವಿರ’ ಎಂದು ಮೊದಲೇ ಸೂಚನೆಯನ್ನು ಹಾಕುತ್ತಾರೆ.

ರೂಪಾರವರು ಇಂತಹ ಹಲವು ಸಮಕಾಲೀನ ಉದಾಹರಣೆಗಳನ್ನು ನೀಡುವುದರ ಮೂಲಕ ಓದುಗರ ಮನಸ್ಸನ್ನು ತಿದ್ದಿ ತೀಡಿ ಹರಿತಗೊಳಿಸುತ್ತಾರೆ. ವಾಸ್ತವದಲ್ಲಿ ಇದು ಥ್ಯಾಂಕ್ ಲೆಸ್ ಜಾಬ್! ’ಉಪಾಧ್ಯಾಯಾಃ ವೈದ್ಯಾಶ್ಚ ಕಾರ್ಯಾಂತೆ ನಿಷ್ಪ್ರಯೋಜಕಾಃ’ ಎಂಬ ಮಾತಿದೆ. ರೂಪಾರವರು ಯಾವ ಉಪಾಧ್ಯಾಯರಿಗೂ ಕಡಿಮೆಯಿಲ್ಲದಂತೆ ತಮ್ಮ ಕರ್ತವ್ಯವನ್ನು ಸೊಗಸಾಗಿ ನಿರ್ವಹಿಸುತ್ತಿದ್ದಾರೆ. ನಮ್ಮ ಓದುಗರು ರೂಪಾರವನ್ನು ಮರೆತರೂ ಚಿಂತೆಯಿಲ್ಲ. ಆದರೆ ಅವರ ಹಿತವಾದ ಕಿವಿಮಾತನ್ನು ಆಲಿಸಿ, ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ಅಲ್ಲಿಗೆ ಲೇಖಕಿಯ, ಮುದ್ರಕರ, ಪ್ರಕಾಶಕರ ಶ್ರಮವು ಸಾರ್ಥಕವಾಗುತ್ತದೆ. ಈ ಪುಸ್ತಕವನ್ನು ಕೊಂಡು ಓದುವ ಹಾಗೂ ಈ ಪುಸ್ತಕವನ್ನು ಪುಸ್ತಕ ಬಾಗಿನ ರೂಪದಲ್ಲಿ ಕೊಡಲಿರುವ ಎಲ್ಲ ಕನ್ನಡ ಹೃದಯಗಳಿಗೆ ಈಗಲೇ ನನ್ನ ನಮೋನ್ನಮಃ! ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟ ಶ್ರೀಮತಿ ರೂಪಾ ಗುರುರಾಜ್ ಅವರಿಗೆ ಧನ್ಯವಾದಗಳು.”

ಸುಮಾರು ೨೨೦ ಪುಟಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಎಲ್ಲಿಂದ ಬೇಕಾದರೂ ಓದಲು ಪ್ರಾರಂಭಿಸಬಹುದಾಗಿದೆ. ಪುಟ್ಟ ಪುಟ್ಟ ದೃಷ್ಟಾಂತ ಕಥೆಗಳು, ಸೊಗಸಾದ ಮನಮುಟ್ಟುವಂಥ ನಿರೂಪಣೆ ರೂಪ ಗುರುರಾಜ್ ರವರ ಬರಹದ ವೈಶಿಷ್ಟ್ಯ ಎಂದರೆ ತಪ್ಪಾಗದು.