ಒಂದೊಳ್ಳೆ ಮಾತು 3

ಒಂದೊಳ್ಳೆ ಮಾತು 3

ಉದ್ಯಮಃ ಸಾಹಸಂ ಧೈರ್ಯಂ ಬುದ್ಧಿಃ ಶಕ್ತಿಃ ಪರಾಕ್ರಮಃ/

ಷಡೇತೇ ಯತ್ರ ವರ್ತಂತೇ ತತ್ರ ದೇವಃ ಸಹಾಯಕೃತ್//

ಈ ಶ್ಲೋಕವನ್ನು ನಾವು ವಿಕ್ರಮಚರಿತದಲ್ಲಿ ಓದಬಹುದು. ಹೌದು ಸ್ನೇಹಿತರೇ, ನಮಗೆ ಕೆಲಸವಿಲ್ಲ ಎಂದು ಕೈಕಟ್ಟಿ ಕುಳಿತರೆ, ಸಮಯ ಹೋಗುವುದು, ಪ್ರಾಯವೂ ಹೆಚ್ಚಾಗುವುದು, ಏನಾದರೂ ಪ್ರಯೋಜನವಿದೆಯೇ? ಖಂಡಿತಾ ಇಲ್ಲ. ಕೆಲಸ, ಸಾಹಸ, ಧೈರ್ಯ, ಬುದ್ಧಿ, ಪರಾಕ್ರಮ, ಶಕ್ತಿ ಈ ಆರೂ ಗುಣಗಳನ್ನು ನೀಡಿದವ ಭಗವಂತ. ಅದನ್ನು ಸರಿಯಾದ ಕಾಲದಲ್ಲಿ, ಸರಿಯಾದ ಸಮಯದಲ್ಲಿ ಉಪಯೋಗಿಸುವುದು ನಮ್ಮಲ್ಲೇ ಅಡಗಿದೆ. ಆಲಸ್ಯತನ ನಮ್ಮ ದೊಡ್ಡ ಶತ್ರು. ಕೆಲವು ಜನರಿದ್ದಾರೆ, ದೇವರು ಎಲ್ಲಾ ನಡೆಸುತ್ತಾನೆ ಎಂದು ಹೇಳುವವರು, ಹಾಗೆಂದು ಸುಮ್ಮನೆ ಕುಳಿತರೆ ಆಗುವುದೇ? ಕಷ್ಟ ಬಂದರೆ ಮಾತ್ರ ದೇವರು ನೀಡಿಯಾನು ಅಲ್ಲವೇ?

ಪುರಾಣದಲ್ಲಿ  ನಾವು ಓದಿದ ಹಾಗೆ, ಸಮುದ್ರಮಥನ ಮಾಡಿದ್ದಕ್ಕೆ ತಾನೇ ಸುವಸ್ತುಗಳು ಲಭ್ಯವಾಯಿತು, ಅಮೃತ ದೊರೆಯಿತು. ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಿ ,ಕಡೆದಾಗ ಬೆಣ್ಣೆ, ಕಾಯಿಸಿದಾಗ ಅಮೃತ ಸಮಾನವಾದ ತುಪ್ಪ ಸಿಗುವುದಲ್ಲವೇ? ಹಾಗೆ ನಾವು ಕರ್ತವ್ಯ, ನಮ್ಮ ನಮ್ಮ ಕೆಲಸಗಳನ್ನು ಮಾಡಿ, ಸುಖಪಡಬೇಕು.

ನಮ್ಮ ಹಿರಿಯರು ನಮಗೊಂದು ದಾರಿಯನ್ನು ತೋರಿಸಿಕೊಟ್ಟಿದ್ದಾರೆ, ಮುಂದುವರಿಯುವುದು ನಮ್ಮ ಕರ್ತವ್ಯ. ಹಿರಿಯರ ಸಾಧನೆಗಳನ್ನು ಅವಲೋಕಿಸಬೇಕು. ಅದೇ ನಮಗೆ ಶ್ರೀರಕ್ಷೆ. ಆ ಹಾದಿಯಲ್ಲಿ ಇನ್ನಷ್ಟೂ ಮುಂದೆ ಸಾಗೋಣ.

ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೋ/

ಹಳದೆಂದು ನೀನದನು ಕಳೆಯುವೆಯಾ,ಮರುಳೆ? //

ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ? /

ಹಳೆ ಬೇರು ಹೊಸ ತಳಿರು-----ಮಂಕುತಿಮ್ಮ//

-ರತ್ನಾ ಭಟ್ ತಲಂಜೇರಿ (ಸಂಗ್ರಹ)