ಒಕ್ಕಣ್ಣಾದರೆ ರಕ್ಷಣೆ ಇಕ್ಕಣ್ಣಾದರೆ ಬೇಟೆ

ಎರಡು ಕಣ್ಣುಗಳಿರುವ ಕಾಗೆ ಒಕ್ಕಣ್ಣನಾಗುವುದಾದರೂ ಹೇಗೆ? ಕಾಗೆಗಳ ಕಣ್ಣು ಮತ್ತು ಮನುಷ್ಯರ ಕಣ್ಣಿನ ನಡುವಿರುವ ಮೂಲಭೂತ ವ್ಯತ್ಯಾಸವನ್ನು ಗಮನಿಸಿ. ಮನುಷ್ಯರ ಕಣ್ಣುಗಳು ಮುಖದ ಮುಂಭಾಗದಲ್ಲಿದ್ದರೆ ಕಾಗೆಯ ಕಣ್ಣುಗಳು ತಲೆ ಬುರುಡೆಯ ಇಕ್ಕೆಲಗಳಲ್ಲಿವೆ. ಆದ್ದರಿಂದ ಬಹುಪಾಲು ತನ್ನ ಸುತ್ತಲಿನ ವಸ್ತುಗಳನ್ನು ಗಮನಿಸುವಾಗ ಕಾಗೆ ಒಂದು ಬಾರಿಗೆ ಒಂದೇ ಕಣ್ಣನ್ನು ಬಳಸುತ್ತದೆ. ಅದರ ಒಂದು ಕಣ್ಣು 110° ಕೋನವನ್ನು ಗಮನಿಸುತ್ತದೆ. ಆದರೆ ಮನುಷ್ಯನಿಗೆ ಇದು ಕೇವಲ 60° ಗಳಷ್ಟೇ. ಪ್ರತಿ ಕಣ್ಣಿನಿಂದ 110° ಗಳೆಂದರೆ ಕಾಗೆ ತನ್ನ ಕತ್ತು ಹೊರಳಿಸದೇ 150° ನೋಡಬಲ್ಲುದು. ಲೆಕ್ಕ ತಪ್ಪಿದೆ ಎಂದು ಅನ್ನಿಸುತ್ತದೆಯೇ? ಇಲ್ಲ. ಕಾಗೆ ವಿಶಾಲವಾದ ದೃಷ್ಟಿ ಕ್ಷೇತ್ರವನ್ನು (Field Of Vision: FOV) ಯನ್ನು ಹೊಂದಿದೆ. ಇದರಿಂದಾಗಿ ಕತ್ತು ಹೊರಳಿಸದೆ ಅಥವಾ ಕಡಿಮೆ ಹೊರಳಿಸಿ ತನ್ನ ಸುತ್ತಲೂ ನೋಡಬಲ್ಲುದು. ಅಷ್ಟೇ ಅಲ್ಲ ನೀವು ನಿಮ್ಮ ಮಗುವಿನ ಕೈಯಲ್ಲಿ ದೋಸೆಯ ತುಂಡನ್ನು ಕೊಟ್ಟರೆ ಕಾಗೆ ನಿಖರವಾಗಿ ಅದರ ಮೇಲೆ ಎರಗಿ ದೋಸೆಯ ತುಣುಕನ್ನು ಹಾರಿಸಬಲ್ಲುದು. ಹೀಗೆ ಬೇಟೆಯಾಡಬೇಕಾದರೆ ದ್ವಿ ಅಕ್ಷಿ ದೃಷ್ಟಿ ಬೇಕು. ಕಾಗೆಯ ದ್ವಿ ಅಕ್ಷಿ ವಿಸ್ತಾರ 60°. ಅಂದರೆ ಪ್ರತಿ ಕಣ್ಣಿನ ದೃಷ್ಟಿಯಲ್ಲಿ 60° ಯಷ್ಟು ಒಂದರ ಮೇಲೊಂದು ಚಾಚಿಕೊಳ್ಳುತ್ತವೆ. ಆದ್ದರಿಂದ ಅದನ್ನು 150° ಎಂದು ಹೇಳಿದೆ. ನೀವು ಓತಿಕ್ಯಾತಗಳನ್ನು ಎಂದಾದರೂ ಹಿಡಿದಿದ್ದೀರಾ? ಬಹಳ ಕಷ್ಟ. ಏಕೆಂದರೆ ಅವುಗಳ FOV 270° ಪಾರಿವಾಳಗಳನ್ನು ಗಮನಿಸಿದ್ದೀರಾ? ಕತ್ತು ಹೊರಳಿಸದೆ ಕತ್ತು ಕೊಂಕಿಸುತ್ತಾ ನಿಮ್ಮನ್ನು ಮುದಗೊಳಿಸಿ ನಿಮ್ಮ ಸಣ್ಣ ಚಲನೆಗೂ ಹಾರಿ ಹೋಗಿ ಬಿಡುತ್ತವೆ. ಏಕೆಂದರೆ ಪಾರಿವಾಳಗಳ FOV 340°. ನೀವು ಕೇಳುತ್ತೀರಲ್ಲ ನಮಗೇನು ಬೆನ್ನಿಗೆ ಕಣ್ಣಿದೆಯೇ ಎಂದು ಪಾರಿವಾಳಗಳಿಗೆ ಬೆನ್ನಿಗೂ ಕಣ್ಣಿವೆ. ಅಷ್ಟೇ ಅಲ್ಲ ಪಾರಿವಾಳಗಳ ಲಂಬ ದೃಷ್ಟಿ (vertical vision) ನ FOV 114°. ಅಂದರೆ ಅವು ತಲೆಯ ಮೇಲಿರುವ ಅಪಾಯವನ್ನೂ ಆರಾಮವಾಗಿ ಗುರುತಿಸಬಲ್ಲವು. ಆದರೆ ಪಾರಿವಾಳಗಳು ಗುರಿಗೆ ನಿಖರವಾಗಿ ಎರಗಲಾರವು. ಏಕೆಂದರೆ ಅವುಗಳ ದ್ವಿ ಅಕ್ಷಿ (binocular FOV) ಕೇವಲ 34°.
ಈ ವಿಶಾಲವಾದ FOV ಕಾರಣದಿಂದ ಪಾರಿವಾಳಗಳು, ಕಾಗೆಗಳು ಜನಜಂಗುಳಿಯ ಮಧ್ಯೆ ಆರಾಮವಾಗಿ ತಪ್ಪಿಸಿಕೊಂಡು ಬದುಕುತ್ತವೆ. ಅದೇ ಗಿಡುಗಗಳು ನೆಲದ ಮೇಲೆ ಓಡುವ ಸಣ್ಣ ಇಲಿಯನ್ನು 2 ಮೈಲಿ ದೂರದಿಂದ ಗುರುತಿಸಬಲ್ಲುದು. ಅದನ್ನು ದ್ವಿ ಅಕ್ಷಿ ನೋಟಕ್ಕೆ ತರಿಸಿ ಅದರ ವೇಗ ಲೆಕ್ಕಾಚಾರ ಮಾಡಿ ಹಾಗೆಯೇ ಅದನ್ನು ಎತ್ತಿಕೊಂಡು ಹೋಗುತ್ತವೆ. ಈ ಒಕ್ಕಣ್ಣ ಮತ್ತು ಇಕ್ಕಣ್ಣ ದೃಷ್ಟಿ ಹೊಂದಾಣಿಕೆಯಿಂದಾಗಿ ಈ ಜೀವಿಗಳು ಮಾನವ ದಾಳಿಯ ಹೊರತಾಗಿಯೂ ಪರಿಸರದಲ್ಲಿ ಬದುಕುಳಿದಿವೆ. ಅದಕ್ಕೆ ನಾನು ಹೇಳುವುದು ಪ್ರಕೃತಿ ಒಬ್ಬ ಅಸಾಮಾನ್ಯ ತಂತ್ರಜ್ಞ ಮತ್ತು ವಿನ್ಯಾಸಕಾರ ಎಂದು. ಹಾಗೆ ಹೋಲಿಸಿದರೆ ಮನುಷ್ಯ ಬಹಳ ದುರ್ಬಲ.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ