ಒಗಟಿಗೆ ಉತ್ತರ

ಒಗಟಿಗೆ ಉತ್ತರ

ಬರಹ

ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುದುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ವಿವರಿಸುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ರೇಬಿ ಇಲ್ ಸಯ್ಯದ್ ಅಬ್ದುಲ್ ಹಲೀಮ್ ತನ್ನ "ಒಗಟಿಗೆ ಉತ್ತರ" ಎಂಬ ಕವನದಲ್ಲಿ ಜೀವನದ ಅರ್ಥದ ಹುದುಕಾಟವೇ ಒಂದು ವ್ಯರ್ಥ ಪ್ರಯತ್ನ ಅದೊಂದು ಬಂದಂತೆ ಬಂದಹಾಗೆ ಸ್ವೀಕರಿಸಿ ಉಳಿದು ಬೆಳೆಯುವ ಪ್ರಕ್ರಿಯೆ ಎಂದು ವಿವರಿಸುತ್ತಾನೆ.

ನಾನು ಬಂದಿದ್ದೇನೆ ಈ ಜಗಕೆ ಬದುಕಲು
ಹೇಗೆ ಬಂದೆ? ಯಾಕೆ ಬಂದೆ?
ಇವುಗಳ ಗೊಡವೆ ಯಾಕೆ? 
ಬದುಕಲೆಂದೇ ಬಂದಿದ್ದೇನೆ:ಬದುಕಬೇಕು
ಕಾರಣ ಅಕಾರಣಗಳ ತಿಳಿಯುವ ಹುಚ್ಚು ಯಾಕೆ?

ಬದುಕು ರಹಸ್ಯಗಳನ್ನು ಬೇಧಿಸುವ ಆಟವಲ್ಲ
ಅಥವಾ ಸಾಕೆಂದು ಬಿಟ್ಟು ಹೊರಡುವದಲ್ಲ
ಅದೊಂದು ಉಳಿದು ಬೆಳೆಯುವ ಸಾಹಸ ಪ್ರಕ್ರಿಯೆ!
ಭೂಮಿ ಸಾಗರದ ಜೀವಿಗಳೆಲ್ಲ ಹಾಯಾಗಿ ಬದುಕುವಾಗ
ಮನುಸ್ಯರಿಗೇಕೆ ಆಗದು?
ಈ ಸೂಕ್ಷ್ಮ ಜನರಿಗೇಕೆ ಅರ್ಥವಾಗೊಲ್ಲ?
ನನಗೆ ಆಶ್ಚರ್ಯ!

ನನ್ನ ಹಾದಿ ಯಾವುದದು?
ದೂರವಿದೆಯೋ?ಹತ್ತಿರವಿದೆಯೋ?
ಇದನ್ನೆಲ್ಲ ಹುಡುಕುವ ವ್ಯರ್ಥ ಪ್ರಯತ್ನ ಯಾಕೆ?
ಇಲ್ಲಿ ಯಾವುದೇ ಸಿದ್ಧ ಹಾದಿಗಳಿಲ್ಲ
ಸುಮ್ಮನೆ ನಡೆಯುತ್ತಾ ಹೋದಂತೆ
ಹಾದಿ ತಾನೆ ತಾನಾಗಿ ಮೂಡುವದು
ಈ ಸತ್ಯ ಜನರಿಗೇಕೆ ತಿಳಿಯುವದಿಲ್ಲ?
ನನಗೆ ಆಶ್ಚ್ರರ್ಯ!

ಇದು ನನ್ನ ಬದುಕು
ನಾನು ನಾನಾಗಿ ನಡೆಯಬೇಕು
ನಾನು ನಾನೇನಾ?
ಅಥವಾ ಬೇರೇನಾ ಎನ್ನುವ ಗೊಂದಲ ಯಾಕೆ?
ನನಗೆ ನಾನೇ ಒಡೆಯ,ನನ್ನ ಆಯ್ಕೆಯಲ್ಲಿ ನಾನು ಸ್ವತಂತ್ರ.
ಸರಿಯೋ? ತಪ್ಪೋ?
ಎಲ್ಲ ನನ್ನ ಕೈಲಿದೆ.

ನನ್ನ ತಾತ ಮುತ್ತಾತರಂತೆ
ದೇವರು ನನಗೂ ಬುದ್ಧಿಯನ್ನಿಟ್ಟು ಕಳುಹಿದ್ದಾನೆ
ನಾನು ಸುಮ್ಮನೆ ದೀಪ ಹಚ್ಚುತ್ತಾ ಸಾಗಬೇಕು
ಕತ್ತಲಡಿಯಿರುವ ರಹಸ್ಯಗಳೆಲ್ಲ ತಾನೇ ತಾನಾಗಿ ಬಯಲಾಗುತ್ತವೆ.
ಸುಮ್ಮನೆ ಗುಟ್ಟು ಒಳಗುಟ್ಟುಗಳನ್ನು ಒಡೆಯುವ ಉಸಾಬರಿ ಯಾಕೆ?
ಈ ಸರಳ ಸಂಗತಿ ಜನರಿಗೇಕೆ ಅರ್ಥವಾಗೊಲ್ಲ?
ನನಗೆ ಆಶ್ಚರ್ಯ!

ಅರೇಬಿ ಮೂಲ: ರೇಬಿ ಇಲ್ ಸಯ್ಯದ್ ಅಬ್ದುಲ್ ಹಲೀಮ್
ಇಂಗ್ಲೀಷ ಭಾವಾನುವಾದ: ಐಮಾನ್ ಅಲ್ ಖತೀಬ್
ಕನ್ನಡ ರೂಪಾಂತರ: ಉದಯ ಇಟಗಿ