ಒಗೆತ

ಒಗೆತ

ಬರಹ

ಒಗೆತ

ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ-

ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ

ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು

ಮೀಯುತ್ತಲೇ ಮಾಯೆಯರಿಯುವ ತಂತ್ರ;

 

ಸಿದ್ಧಿಸದೇ ಒದ್ದೆ ಮೈಯಲ್ಲಿ ಬಟ್ಟೆ ತೊಳೆಯುವ ಹಾಗಲ್ಲ-

ಪ್ರತಿ ಒಗೆತಕ್ಕೂ ಬಣ್ಣ ಮಾಸಲಾಗುವ ಅರಿವೆ

ಕೊಳೆ ಕಲ್ಲಿಗೂ ಅಂಟಿ ನೀರು ಮಲಿನವಾಗುವ ಸತ್ಯ

ಬಗೆ ಬಗೆಯ ಬಟ್ಟೆಗಳಿಗೂ ಮತ್ತದೇ ಸೋಪ ಬುರುಜು;

 

ಜಾಲಿಸಿ, ಹಿಂಡಿ, ಬಂಡೆಯ ಮೇಲೆಲ್ಲ ಹರಡಿದಂತಲ್ಲ-

ಸಣ್ಣ ಗಾಳಿಗೇ ಹಾರಿ ಮತ್ತೆ ಕೊಚ್ಚೆಗೆ ಬೀಳುವ ಆಟ

ನೀಗುವುದಕ್ಕೆ ಬಟ್ಟೆಯ ಮೇಲೊಂದು ಪುಟ್ಟ ಕಲ್ಲಿನ ಭಾರ

ಹಿಮ್ಮಡಿ ಉಜ್ಜಿ ತೊಳೆದೇಳುವಷ್ಟರಲ್ಲಿ ಒಣಗಿ ಗಾರಾದ ಬಟ್ಟೆ;

 

ಕೊಳೆ ತೆಗೆದು ಮಡಿ ಮಾಡಿ ಮಾಟವಾಗಿ ಮಡಿಚಿಟ್ಟಂತಲ್ಲ-

ನದಿಯ ದಡದುದ್ದಕ್ಕೂ ಏಗಿ ಆಟ ಕಟ್ಟುವ ಸದ್ದು

ಹೊಳೆಗೇ ಹುಚ್ಚು ಹಿಡಿಸುವಂತೆ ಜಡಿದು ಸುರಿವ ಮಳೆಯೊಮ್ಮೆ

ತೇವವಷ್ಟನ್ನೂ ತಾನೇ ಕುಡಿದು ಢರ್ರನೆ ತೇಗುವ ಕ್ಷಾಮ ಮತ್ತೊಮ್ಮೆ;

 

ಮಿಂದು, ಮಡಿಯುಟ್ಟು, ಮಾದರಿಯಾಗುವುದುಂಟಲ್ಲ-

ಅದೆಂದರೆ ಹೊಳೆ ಮಧ್ಯದ ಬಂಡೆ ಸವೆತದ ಹಾಗೆ

ಬಟ್ಟೆ, ಬಟ್ಟೆ ತೊಳೆದವರು, ಈಜಿ ಸುಸ್ತಾಗಿ ವಿಶ್ರಮಿಸಿದವರು

ಬಂಡೆಯ ನುಣುಪಿಗೆ ಕಾರಣ ಧ್ಯಾನಿಸಿದವರು ಯಾರು, ಯಾರು?