ಒಗ್ಗಟ್ಟಿನಲ್ಲಿದ್ದರೆ ಬೆಲೆಯಿದೆ !

ಒಗ್ಗಟ್ಟಿನಲ್ಲಿದ್ದರೆ ಬೆಲೆಯಿದೆ !

ದ್ರಾಕ್ಷಿ ಹಣ್ಣಿನ ಸೀಸನ್ ಮತ್ತೆ ಬಂದಿದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ದ್ರಾಕ್ಷಿಗಳು ಬಂದಿವೆ. ಬೀಜ ಇರುವ, ಇಲ್ಲದಿರುವ (ಸೀಡ್ ಲೆಸ್) ನೇರಳೆ, ಹಸಿರು, ಕೆಂಪು ಬಣ್ಣದ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ದ್ರಾಕ್ಷಿಗಳನ್ನು ಓರ್ವ ತನ್ನ ತಳ್ಳು ಗಾಡಿಯಲ್ಲಿ ಪೇರಿಸಿ ದೂಡಿಕೊಂಡು ಹೋಗುತ್ತಾ ಮಾರುತ್ತಿದ್ದ. ಅದನ್ನು ಗಮನಿಸಿದ ನಾನು ಆತನನ್ನು ಕರೆದು ದ್ರಾಕ್ಷಿಯ ಬೆಲೆ ಕೇಳಿದ.

ಆತ ಹೇಳಿದ ‘ಕಿಲೋಗೆ ನೂರು ರೂಪಾಯಿ ಸರ್'. 

‘ಒಂದು ಕಿಲೋ ಕೊಡಪ್ಪಾ ಹಾಗೆಯೇ ಸಿಹಿಯಾಗಿರುವುದನ್ನು ಮಾತ್ರ ಕೊಡು’ ಅಂದೆ. ಗಾಡಿಯಾತ ದ್ರಾಕ್ಷಿಯನ್ನು ತೂಕ ಮಾಡುವುದರಲ್ಲಿ ತೊಡಗಿದ್ದಾಗ ನನ್ನ ಗಮನ ದ್ರಾಕ್ಷಿ ಗೊಂಚಲಿನಿಂದ ಉದುರಿದ್ದ ಬಿಡಿ ದ್ರಾಕ್ಷಿಗಳತ್ತ ಹೋಯಿತು. ನಾನು ಕೇಳಿದೆ ‘ಅಲ್ಲಪ್ಪಾ, ಈ ಉದುರಿದ ಬಿಡಿ ದ್ರಾಕ್ಷಿಗಳನ್ನು ಮಾರುತ್ತೀಯಾ? ಏನು ರೇಟು?’ ಎಂದ.

‘ಖಂಡಿತಾ ಮಾರುತ್ತೇನೆ ಸರ್, ಆದರೆ ಅದಕ್ಕೆ ನಾನು ಕಿಲೋಗೆ ಐವತ್ತು ರೂಪಾಯಿ ಮಾತ್ರ ತೆಗೆದುಕೊಳ್ಳುವುದು' ಎಂದ.

ನನಗೆ ಅಚ್ಚರಿಯಾಯಿತು. ನಾನು ಉದುರಿದ ದ್ರಾಕ್ಷಿಗಳಲ್ಲಿ ಒಂದನ್ನು ಬಾಯಿಗೆ ಹಾಕಿ ರುಚಿ ನೋಡಿದೆ. ಬಹಳ ಚೆನ್ನಾಗಿತ್ತು. ಆಗ ನನಗೆ ಒಂದು ವಿಷಯ ಮನದಟ್ಟಾಯಿತು. ಗುಂಪಿನಲ್ಲಿ ಮತ್ತು ಒಗ್ಗಟ್ಟಾಗಿದ್ದರೆ ಮಾತ್ರ ಬೆಲೆ ಇರುವುದು. ಹಣ್ಣುಗಳಲ್ಲಿ ಹೇಗೋ ಹಾಗೆಯೇ ಮನುಷ್ಯರಲ್ಲೂ. ಒಗ್ಗಟ್ಟಾಗಿರುವ ಮನುಷ್ಯ ಬಲಿಷ್ಟವಾಗಿರುತ್ತಾನೆ. ಗುಂಪಿನಿಂದ ಬೇರ್ಪಟ್ಟರೆ ಒಂಟಿಯಾಗಿ ಬಿಡುತ್ತಾನೆ. ಇದೇ ವಿಷಯವನ್ನು ಬಿಂಬಿಸುವ ಒಂದು ಪುಟ್ಟ ಕಥೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿತ್ತು. ಆ ಅಜ್ಞಾತ ಬರಹಗಾರನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಅದನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಸೂರಿ ಒಂದು ಸಾಫ್ಟ್ ವೇರ್ ಕಂಪೆನಿ ಉದ್ಯೋಗಿ. ಆತ ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ತಂಡವೊಂದರ (ಟೀಂ) ಪ್ರಮುಖ ಸದಸ್ಯನಾಗಿದ್ದ. ಆತನ ಪಾಲಿಗೆ ಬರುವ ಯಾವುದೇ ಕೆಲಸವಾಗಿದ್ದರೂ ಆತ ಆಸಕ್ತಿಭರಿತ ಬದ್ಧತೆಯೊಂದಿಗೆ ಮಾಡಿ ಮುಗಿಸುತ್ತಿದ್ದ. ಸಮಯ ಪಾಲನೆಯಲ್ಲೂ ಆತ ಎತ್ತಿದ ಕೈ. ಈ ಕಾರಣದಿಂದ ಆತ ತಂಡದ ಎಲ್ಲಾ ಸದಸ್ಯರ ಅಚ್ಚು ಮೆಚ್ಚಿನ ವ್ಯಕ್ತಿಯಾಗಿದ್ದ. ಹೀಗಿರುವಾಗ ಒಂದು ದಿನ ಆತ ಹಠಾತ್ತನೇ ತಂಡ ನಡೆಸುತ್ತಿದ್ದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ಬಿಟ್ಟ. ಕೆಲಸಕ್ಕೆ ರಾಜೀನಾಮೆಯನ್ನೂ ಸಹ ಕೊಡದೇ ಯಾರಿಗೂ ಸಿಗದೇ ಇದ್ದುಬಿಟ್ಟ. ಇದು ಎಲ್ಲರಲ್ಲೂ ಆಶ್ಚರ್ಯ ಮತ್ತು ಕಳವಳವನ್ನುಂಟು ಮಾಡಿತು. ಕೆಲಸ ಬಿಡುತ್ತಿದ್ದರೆ ಬೇರೆ ಮಾತಿತ್ತು, ಅದೂ ಇಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದರೆ ಏನು ಅರ್ಥ? ಕೊನೆಗೆ ಆ ತಂಡದ ಟೀಂ ಲೀಡರ್ ಆತನನ್ನು ಮುಖತಃ ಭೇಟಿಯಾಗುವ ದೃಷ್ಟಿಯಿಂದ ಮನೆಗೆ ಹೋದ. ಅದು ಭೀಕರ ಚಳಿಗಾಲದ ಸಮಯ. ಸೂರಿ ಮನೆಯಲ್ಲೇ ಇದ್ದ. ಆತ ಮನೆಯಲ್ಲೇ ಐದಾರು ಕಟ್ಟಿಗೆಗಳನ್ನು ಪೇರಿಸಿ ಅದಕ್ಕೆ ಬೆಂಕಿ ನೀಡಿ ಚಳಿ ಕಾಯಿಸುತ್ತಾ ಕುಳಿತಿದ್ದ. ಟೀಂ ಲೀಡರ್ ಅನ್ನು ನೋಡಿ ಸೂರಿ ಒಂದೇ ಒಂದು ಮಾತನಾಡದೇ ಸ್ವಾಗತಿಸಿದ. ಇಡೀ ಮನೆಯಲ್ಲಿ ಅವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.

ಸ್ವಲ್ಪ ಸಮಯ ಅವರ ನಡುವೆ ಮೌನ ಕವಿದಿತ್ತು. ಇಬ್ಬರಿಗೂ ಮಾತನಾಡಲು ಬಹಳ ಇತ್ತಾದರೂ ಎಲ್ಲಿಂದ ಪ್ರಾರಂಭಿಸಬೇಕು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಕಡೆಗೆ ಟೀಂ ಲೀಡರ್ ಉರಿಯುತ್ತಿದ್ದ ಬೆಂಕಿಯ ಕಡೆಗೆ ಹೋಗಿ ಅಲ್ಲಿದ್ದ ಐದಾರು ಕಟ್ಟಿಗೆಗಳಿಂದ ಒಂದು ಕಟ್ಟಿಗೆಯನ್ನು ಹೊರತೆಗೆದ. ಅದು ಪ್ರಖರವಾಗಿ ಉರಿಯುತ್ತಿತ್ತು. ನಂತರ ಅದನ್ನು ಇಕ್ಕಳವೊಂದಕ್ಕೆ ಸಿಕ್ಕಿಸಿ ಅದನ್ನೇ ತದೇಕ ಚಿತ್ತದಿಂದ ನೋಡಲು ಪ್ರಾರಂಭಿಸಿದ. ಸೂರಿಯೂ ಆತನ ವರ್ತನೆಯನ್ನೇ ಗಮನಿಸುತ್ತಿದ್ದ. ಸ್ವಲ್ಪವೇ ಹೊತ್ತಿನಲ್ಲಿ ಟೀಂ ಲೀಡರ್ ಹೊರ ತೆಗೆದಿದ್ದ ಕೊಳ್ಳಿಯ ಜ್ವಾಲೆಯು ಕ್ಷೀಣವಾಗುತ್ತಾ ಹೋಗಿ ಕಡೆಗೊಮ್ಮೆ ನಂದಿಯೇ ಹೋಯಿತು. ಆದರೆ ಉಳಿದ ಕಟ್ಟಿಗೆಗಳು ಉರಿಯುತ್ತಲೇ ಇದ್ದವು. ಕಪ್ಪು ಕರಿಯಾಗಿದ್ದ ಆ ಕಟ್ಟಿಗೆಯನ್ನು ಮತ್ತೆ ಉಳಿದ ಕಟ್ಟಿಗೆಗಳ ಜೊತೆಗೆ ಸೇರಿಸಿದ ಟೀಂ ಲೀಡರ್ ಬಾಗಿಲು ತೆರೆದು ಒಂದೂ ಮಾತನಾಡದೇ ಹೊರಟು ಹೋದ. 

ಸೂರಿ ನೋಡ ನೋಡುತ್ತಿದ್ದಂತೆ ಆ ಕಟ್ಟಿಗೆ ಮತ್ತೆ ಬೆಂಕಿ ಹಿಡಿದು ಮೊದಲಿನಂತೇ ಉರಿಯಲಾರಂಭಿಸಿತು. ತಕ್ಷಣ ಸೂರಿಯ ಮನಸ್ಸಿನಲ್ಲಿ ಮಿಂಚೊಂದು ಮೂಡಿತು. ಆತ ತಕ್ಷಣ ಹೊರಗೆ ಓಡಿದ. ಇನ್ನೇನು ಕಾರಿನಲ್ಲಿ ಕುಳಿತುಕೊಳ್ಳಬೇಕೆಂದು ಇದ್ದ ಆತನ ಟೀಂ ಲೀಡರ್ ನ ಕೈ ಹಿಡಿದು ಹೇಳಿದ ‘ಸರ್, ನನ್ನನ್ನು ಕ್ಷಮಿಸಿ. ನನ್ನ ಮನೆಗೆ ಬಂದು ಒಂದೇ ಒಂದು ಮಾತನ್ನಾಡದೇ ಹೋದರೂ ಜೀವನದಲ್ಲಿ ನಾನು ಮರೆಯಲಾಗದ ಪಾಠ ಮಾಡಿ ಹೋಗುತ್ತಿರುವಿರಿ. ನಾನು ನಾಳೆಯಿಂದಲೇ ಟೀಂ ಸೇರಿಕೊಳ್ಳುವೆ' ಎಂದ. ಟೀಂ ಲೀಡರ್ ಮುಗುಳ್ನಗುತ್ತಾ ಆತನ ಬೆನ್ನು ತಟ್ಟಿ ಕಾರ್ ನಲ್ಲಿ ಹೊರಟು ಹೋದರು. 

ಸೂರಿಗೆ ಅರ್ಥವಾದ ವಿಷಯ ಏನೆಂದರೆ ಇಷ್ಟು ದಿನ ತನ್ನಿಂದಲೇ ಟೀಂ ನಡೆಯುತ್ತಿತ್ತು, ತಾನಿಲ್ಲದಿದ್ದರೆ ಅವರ ಕಾರ್ಯಗಳೆಲ್ಲಾ ಹಾಳಾಗುತ್ತಿತ್ತು ಎಂಬ ಅಹಂಕಾರ ತನ್ನಲ್ಲಿ ಮೂಡಿತ್ತು ಎಂದು. ಆದರೆ ಗುಂಪಿನಲ್ಲಿ ಉರಿಯುತ್ತಿದ್ದ ಕಟ್ಟಿಗೆಯೊಂದು ಹೊರಬಂದಾಗ ಅದು ಹೆಚ್ಚು ಕಾಲ ಉರಿಯದೇ ಆರಿ ಹೋಯಿತು. ತಾನಿಲ್ಲದೇ ಇದ್ದರೆ ಬೆಂಕಿ ಉರಿಯಲಾರದು ಎಂದು ಭಾವಿಸಿದ ಕಟ್ಟಿಗೆ ಹೊರ ಬಂದಾಗ ನಂದಿ ಹೋದ ಕೊಳ್ಳಿ ಆಗಿ ಹೋಯಿತು. ಮುಂದೊಂದು ದಿನ ತನ್ನ ಪರಿಸ್ಥಿತಿಯೂ ಹಾಗೆಯೇ ಆಗುತ್ತದೆ ಎಂದು ಸೂರಿಗೆ ಮನದಟ್ಟಾಯಿತು. ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯನೂ ಮುಖ್ಯ. ತನ್ನಿಂದಲೇ ಎಲ್ಲಾ ನಡೆಯುತ್ತದೆ ಎಂದು ಹೊರ ಬಂದರೆ ಕೆಲವೇ ದಿನಗಳಲ್ಲಿ ಆರಿ ಹೋದ ಕೊಳ್ಳಿಯ ರೀತಿ ನಿರುಪಯುಕ್ತರಾಗಿ ಬಿಡುತ್ತೇವೆ. ಒಗ್ಗಟ್ಟು ಮಾತ್ರ ತನ್ನನ್ನು ಜೀವನದಲ್ಲಿ ಮುಂದೆ ತರುತ್ತದೆ ಎನ್ನುವ ಸತ್ಯ ಸೂರಿಗೆ ಅರ್ಥವಾಯಿತು.

ತಂಡದಲ್ಲಿರುವಾಗ ಟೀಕೆ, ಭಿನ್ನಾಭಿಪ್ರಾಯ, ತರಲೆಗಳು ಎಲ್ಲಾ ಇರುತ್ತವೆ. ಅವುಗಳನ್ನು ಮೆಟ್ಟಿ ನಿಲ್ಲಲು ಕಲಿಯಬೇಕು. ತಂಡದ ಸದಸ್ಯರ ಜೊತೆ ಹಾಡಿ ನಲಿದ, ಕೂಡಿ ಬಾಳಿದ ಘಟನಾವಳಿಗಳನ್ನು ಮತ್ತೊಮ್ಮೆ ಮೆಲುಕು ಹಾಕಬೇಕು. ಇಲ್ಲದೇ ಹೋದರೆ ಬೆಂಕಿಯ ಅಗ್ಗಷ್ಟಿಕೆಯಿಂದ ಹೊರಬಂದ ಕೊಳ್ಳಿಯ ಹಾಗೆ ಬೇಗನೇ ನಂದಿ ಹೋಗುತ್ತೇವೆ. ಅದಕ್ಕೇ ಹಿರಿಯರು ಹೇಳುವುದು ‘ಒಗ್ಗಟ್ಟಿನಲ್ಲಿ ಬಲವಿದೆ' ಎಂದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ