ಒಟ್ಟಾರೆ ಕಥೆಗಳು

ಒಟ್ಟಾರೆ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೭೦.೦೦, ಮುದ್ರಣ : ಡಿಸೆಂಬರ್ ೨೦೨೦

ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ ರವಿ ಬೆಳಗೆರೆಯವರ ಸಮಗ್ರ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದರೆ ರವಿ ಬೆಳಗೆರೆಯವರ ಎಲ್ಲಾ ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದಂತೆ ಆಗುತ್ತದೆ. ಬೆಳಗೆರೆಯವರ ಕಥೆಗೆಗಳಿಗೆ ತಮ್ಮದೇ ಆದ ಶೈಲಿ ಇದೆ. ಪತ್ರಿಕೋದ್ಯಮದ ಗಿರಣಿಗೆ ಬಿದ್ದ ಇವರು ನಂತರ ಕಥೆ ಬರೆದದ್ದು ಕಮ್ಮಿಯೇ. ಆದುದರಿಂದ ಈ ಪುಸ್ತಕದಲ್ಲಿರುವ ೨೩ ಕಥೆಗಳು ಮಹತ್ವಪೂರ್ಣವಾಗಿವೆ.  

ತಮ್ಮ ಬೆನ್ನುಡಿಯಲ್ಲಿ ರವಿ ಬೆಳಗೆರೆಯವರೇ ಬರೆದುಕೊಂಡಂತೆ " ಯಾವುದೋ ಪತ್ರಿಕೆಯಲ್ಲಿ ನಮ್ಮದೊಂದು ಕಥೆ ಪ್ರಿಂಟಾಗಿ, ಅದಕ್ಕೆ ಯಾರೋ ಚಿತ್ರ ಬರೆದು, ಕಥೆಯ ಹೊಟ್ಟೆಯ ಮಧ್ಯೆ ನಮ್ಮ ಹೆಸರು ಪ್ರಿಂಟಾಗಿ, ದಾರಿಯಲ್ಲೆಲ್ಲೋ ಸಿಕ್ಕವರು ‘ಏಯ್, ನಿನ್ನ ಕಥೆ ಓದಿದೆ. ತುಂಬಾ ಚೆನ್ನಾಗಿದೆ.’ ಅಂದಾಗಿನ ಸಂತೋಷವಿದೆಯಲ್ಲ? ಅದು ಅದ್ಭುತ. 

ತನ್ನದೊಂದು ಚಿತ್ರ ಯಾರದೋ ಕನ್ನಡಿಯಲ್ಲಿ ಮೂಡುವುದನ್ನು ಕತೆಗಾರ ತುಂಬ ಇಷ್ಟ ಪಡುತ್ತಾನೆ. ಕಥೆಯೊಂದು ಪತ್ರಿಕೆಯಲ್ಲಿ ಪ್ರಿಂಟಾಗಿ ಬಂದ ಮರುದಿನವೇ ಅವನಲ್ಲಿ ಹೊಸ ಕಥೆಯ ಕೂಸು ಕದಲತೊಡಗುತ್ತದೆ.”

ರವಿ ಬೆಳಗೆರೆಯವರ ‘ಪಾ.ವೆಂ. ಹೇಳಿದ ಕಥೆ' ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಆ ಪುಸ್ತಕಕ್ಕೆ ಕತೆಗಾರ ಕೆ.ಸತ್ಯನಾರಾಯಣ ಮುನ್ನುಡಿ ಬರೆದಿದ್ದರು. ಅದನ್ನೇ ಒಟ್ಟಾರೆ ಕಥೆಯಲ್ಲೂ ಬಳಸಿಕೊಳ್ಲಲಾಗಿದೆ. ಹಾಗೆಯೇ ‘ರುಜುವಾತು' ಪತ್ರಿಕೆಯಲ್ಲಿ ಜಿ.ರಾಜಶೇಖರ ಬರೆದ ವಿಮರ್ಶಾತ್ಮಕ ಬರಹವನ್ನು ಇಲ್ಲಿ ಮರು ಪ್ರಕಟಿಸಲಾಗಿದೆ. ಇವೆರಡು ಬರಹಗಳನ್ನು ಓದಿದಾಗ ನಿಮಗೆ ಈ ಪುಸ್ತಕದ ಸ್ವಷ್ಟ ಕಲ್ಪನೆ ಸಿಗುತ್ತದೆ. ನಂತರ ನೀವು ಪುಸ್ತಕವನ್ನು ಓದದೇ ಇರಲಾರಿರಿ.

ಕೆ. ಸತ್ಯನಾರಾಯಣ ಅವರು ತಮ್ಮ ಮುನ್ನುಡಿ ‘ಪ್ರವೇಶ' ದಲ್ಲಿ ಬರೆಯುತ್ತಾರೆ. “ ೧೯೮೦ರ ಅವಧಿಯಲ್ಲಿ ಬರೆದ ‘ಶಾಲಿನಿ' ಕಥೆಯನ್ನು ಇಲ್ಲಿರುವ ‘ಮಿನಾರುಗಳ ಊರಿನಲ್ಲಿ ಅವರು’ ಕಥೆಯೊಡನೆ ಹೋಲಿಸಿದರೆ ಲೇಖಕನ ಮನೋಧರ್ಮದಲ್ಲಾಗುವ ಬೆಳವಣಿಗೆ/ ಬದಲಾವಣೆಯ ಸ್ವರೂಪ ತಿಳಿಯುತ್ತದೆ. ಎರಡು ಕಥೆಗಳ ವಸ್ತುವೂ ದಾಂಪತ್ಯ ಹೊಡೆಸುವ ಸುಸ್ತೇ. ನಮ್ಮ ಜೀವನ ನಮ್ಮೆದುರಿಗೆ ಸೋರಿ ಹೋಗುವುದರ ಬಗ್ಗೆ ಇರುವ ಭಯವೇ. ನೋಡುತ್ತಿರುವ ದೃಷ್ಟಿ ಕೋನ ಬೇರೆ ಅಷ್ಟೇ. ಮೊದಲ ಕಥೆಯಲ್ಲಿ ಎಲ್ಲ ಬೆಳವಣಿಗೆಯನ್ನು ‘ಗಂಡ/ಗಂಡಸು' ದೃಷ್ಟಿಯಿಂದ ನೋಡಲಾಗಿದೆ. ಓದುಗರಿಗೆ ಪ್ರಿಯವಾದ ದಂಪತಿಗಳ ಪುನರ್ ಮಿಲನವೂ ಇದೆ. ಈಚಿನ ಕಥೆಯಲ್ಲಿ ದಾಂಪತ್ಯದ ಸುಸ್ತನ್ನು ಗಂಡು -ಹೆಣ್ಣು ಇಬ್ಬರ ದೃಷ್ಟಿಯಿಂದಲೂ, ಎಲ್ಲ ದಂಪತಿಗಳ ಜೀವನದಲ್ಲೂ ಕಾಲಕ್ರಮೇಣ ತಲೆ ಹಾಕುವ ಅನಿವಾರ್ಯ ಬೆಳವಣಿಗೆಯನ್ನಾಗಿ ನೋಡಲಾಗಿದೆ.”

ಕೆ. ಸತ್ಯನಾರಾಯಣ ಇವರು ಈ ಪುಸ್ತಕದ ಪ್ರತಿಯೊಂದು ಕಥೆಯ ಅರ್ಥವತ್ತಾದ ವಿಮರ್ಶೆ, ಪರಿಚಯ ಮಾಡುತ್ತಾ ಹೋಗಿದ್ದಾರೆ. ಇವೆಲ್ಲದುದರ ಸೊಗಸಾದ ವಿಮರ್ಶೆ ಬರೆದವರು ಜಿ.ರಾಜಶೇಖರ್ ಇವರು. ‘ರುಜುವಾತು'ಪತ್ರಿಕೆಯಲ್ಲಿ ಇವರು ಬಹಳ ವಸ್ತು ನಿಷ್ಟವಾಗಿ ಕಥಾ ಸಂಕಲನದ ವಿಮರ್ಶೆ ಮಾಡಿದ್ದಾರೆ. ‘ರವಿಯ ಕಥೆಯ ಬಗ್ಗೆ' ಎಂಬ ತಮ್ಮ ವಿಮರ್ಶಾತ್ಮಕ ಬರಹದಲ್ಲಿ ಬರೆಯುತ್ತಾರೆ “ಈ ಸಂಕಲನದ ಕಥೆಗಳಿಗೆ ಕೂಡ ಮುಖ್ಯ ವಸ್ತು ಪ್ರತಿದಿನದ ಬದುಕು ಮತ್ತು ಅದರ ಒಡಲಲ್ಲಿ ಇರುವ ಹಿಂಸೆ. ಸಂಕಲನದ ಶೀರ್ಷಿಕೆಯ ಕಥೆಯಲ್ಲಿ ರವಿಯ ಬರವಣಿಗೆಯ ಎಲ್ಲ ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು. ಪಾ ವೆಂ ಹೇಳಿದ ಕಥೆಯ ಮುಖ್ಯ ಪಾತ್ರ ಅಂಬುಜ ಬಡವರ ಮನೆಯ ಹುಡುಗಿ; ಮದುವೆಯಲ್ಲಿ ಮೋಸ ಹೋಗಿರುವವಳು. ಸ್ವತಃ ಲೇಖಕನಿಗೆ , ತಾನು ಹೇಳುತ್ತಿರುವುದು, ಎಲ್ಲರೂ ಹೇಳಿದ ಕಥೆಯನ್ನೇ ಎಂಬುದು ಗೊತ್ತಿದೆ. ತನ್ನ ಮುರಿದ ಮದುವೆಯ ಕಥೆಯನ್ನೂ ಅದಕ್ಕೆ ಸಂವಾದಿಯಾಗಿರುವ ಪಾ.ವೆಂ.ಕಥೆಯನ್ನೂ ನಿರೂಪಿಸುವ ಅಂಬುಜ ಹೇಳುತ್ತಾಳೆ, ‘ಆ ಕಥೆ ನನಗೆ ಸಿಕ್ಕಿದ್ದಾದರೂ ಎಲ್ಲಿ? ಯಾವುದೋ ರದ್ದಿಯ ಮಧ್ಯೆ. ದೀಪಾವಳಿಯ ವಿಶೇಷಾಂಕವೊಂದರ ಪುಟಗಳಲ್ಲಿ. ಈ ಅಂಬುಜ ಕಾಲೇಜು ಮುಗಿಸಿದವಳು..."ಹೀಗೆ ಅಂಬುಜ ತನ್ನ ಕಥೆಯನ್ನು ಬೇರೊಬ್ಬಳ ಕಥೆ ಎಂಬಂತೆ ಹೇಳಿಕೊಳ್ಳುತ್ತಾಳೆ.

ಸುಮಾರು ೨೭೦ ಪುಟಗಳ ಸಮೃದ್ಧ ಕಥಾ ಓದು. ರವಿ ಬೆಳಗೆರೆಯವರು ಈ ಪುಸ್ತಕವನ್ನು ತನ್ನ ಮಗಳಾದ ಭಾವನಾಳಿಗೆ ಅರ್ಪಿಸಿದ್ದಾರೆ. ಕಲಾವಿದ ಟಿ.ಎಫ್.ಹಾದಿಮನಿಯವರ ಮುಖಪುಟ ಪುಸ್ತಕಕ್ಕಿದೆ.