ಒಡಲು ಉರಿದಾಗ

ಒಡಲು ಉರಿದಾಗ

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಶಂಕರ ಕಡದಿನ್ನಿ
ಪ್ರಕಾಶಕರು
ತಾಯಿ ಪ್ರಕಾಶನ, ಕಡದಿನ್ನಿ, ಮಾನ್ವಿ, ರಾಯಚೂರು
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೩

"ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್

ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾದ ಗಜಲ್ ಗಳನ್ನು ಒಟ್ಟುಗೂಡಿಸಿ ‘ಒಡಲು ಉರಿದಾಗ' ಎಂಬ ಸಂಕಲನವಾಗಿ ಹೊರತಂದಿದ್ದಾರೆ. ಈ ೮೪ ಪುಟಗಳ ಪುಟ್ಟ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಮಲ್ಲಿನಾಥ ಎಸ್ ತಳವಾರ ಇವರು. ಅವರ ಮುನ್ನುಡಿಯಲ್ಲಿ ವ್ಯಕ್ತವಾದ ಭಾವಗಳು ಹೀಗಿವೆ...

ಒಡಲು ತಂಪಾಗಿರಲಿ...!! "ಈ ವೈಭವ, ಈ ಮರ್ಯಾದೆ, ಈ ವರ್ತನೆಯನ್ನು ಕಾಪಾಡಿಕೊಂಡಿರುವ ನಿಮ್ಮ ಆಸೆಗಳಿಂದ ಹೃದಯದಲ್ಲಿರುವ ಸಂತನನ್ನು ಕಾಪಾಡಿಕೊಂಡಿರು"

ಬದುಕು ಹಲವು ಆಕಸ್ಮಿಕ ಘಟನೆಗಳ ತವರೂರು. 'ಆಕಸ್ಮಿಕ'ವು 'ಆಸಕ್ತಿ'ಯಾಗಿ ಪರಿವರ್ತನೆಯಾದಾಗ ಬಾಳು ಹಲವು 'ತಿರುವು'ಗಳನ್ನು ಪಡೆಯುತ್ತಾ ಸಾಗುತ್ತದೆ. ಆ 'ತಿರುವು'ಗಳನ್ನು ನಿರ್ಭಯವಾಗಿ ಎದುರಿಸುತ್ತ ನಡೆದರೆ ಜೀವನಕ್ಕೊಂದು ಅರ್ಥ ಬರುತ್ತದೆ. ಇದು ಬಾಳ ಪಯಣದ ಎಲ್ಲ ನಿಲ್ದಾಣಗಳಿಗೂ ಅನ್ವಯಿಸುತ್ತದೆ. ಆಕಸ್ಮಿಕವಾಗಿ ದಕ್ಕಿದ 'ಗೆಲುವು' ಪುನರಾವರ್ತನೆ ಆಗಬೇಕಾದರೆ ಆ ಕಾರ್ಯದಲ್ಲಿ ಪ್ಯಾಶನ್ ಬೇಕು, ಶ್ರದ್ಧೆ, ಭಕ್ತಿ, ಬದ್ದತೆ, ಪಾಗಲಪನ್ ಬೇಕು. ಇವು ಯಾವವು ಇಲ್ಲದೆ ಹೋದರೆ ಒಂದು ಕ್ಷೇತ್ರದಲ್ಲಿ ತಳವೂರೊದು, ಲಂಬಿ ರೇಸ್ ಕಾ ಗೋಡಾ ಆಗೋದು ಮರಿಚೀಕೆಯ ಮಾತೇ ಸರಿ.

ಬರವಣಿಗೆ ಎನ್ನುವುದು ಮೋಜು, ಮಸ್ತಿಯ ಅಲಂಕಾರಿಕ ವಸ್ತುವಲ್ಲ, ನಿರಂತರ ತಪಸ್ಸನ್ನು ಬಯಸುವ ಭಾವದುಂಗುರ!! ಈ ಕಾರಣಕ್ಕಾಗಿಯೇ ಸಾರಸ್ವತ ಬಿರಾದರಿಯಲ್ಲಿ ಬರೆದವರೆಲ್ಲರೂ ಬರಹಗಾರರಾಗಿ ಉಳಿದಿಲ್ಲ, ಉಳಿಯುವುದೂ ಇಲ್ಲ!! ಸಾವಿರ ಸಂವತ್ಸರಗಳಿಗಿಂತಲೂ ಅಧಿಕವಾದ ಗೌರವಯುತವಾದ ವಿರಾಸತ್ ಹೊಂದಿರುವ 'ಗಜಲ್' ಕನ್ನಡದಲ್ಲಿ ಐವತ್ತು ವರ್ಷಗಳ ಪರಂಪರೆಯನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ಕರುನಾಡಿನಾದ್ಯಂತ 'ಗಜಲ್' ಕೃಷಿಯ ಸುಗ್ಗಿಯೆ ನಡೆದಿದೆ. ಆ ಸುಗ್ಗಿಯಲ್ಲಿ ಹಲವು ಬರಹಗಾರರು ಆಕಸ್ಮಿಕವಾಗಿ 'ಗಜಲ್' ಕನ್ಯೆಗೆ ಮನಸೋತು ಬರೆದವರಿದ್ದಾರೆ. ಆ ಆಕಸ್ಮಿಕವನ್ನೆ ತಲೆಗೆ ಹಚ್ಚಿಕೊಂಡು 'ಗಜಲ್' ಅನ್ನು ಪ್ರೀತಿಸುತ್ತ, 'ಗಜಲ್' ಪ್ರೇಮಿಗಳಾಗಿ ಅದರ ಸ್ವರೂಪ, ಲಕ್ಷಣಗಳೊಂದಿಗೆ ಪರಂಪರೆಯ ಭಾಗವಾದವರಿದ್ದಾರೆ. ಇನ್ನೂ ಕೆಲವರು 'ಗಜಲ್' ನ ಮೋಹಕ್ಕೆ ಒಳಗಾಗಿ ಆಕಸ್ಮಿಕವಾಗಿ ಬಂದು ಅದೇ ವೇಗದಲ್ಲಿ ಹಿಂತಿರುಗಿ ಹೋದವರೂ ಇದ್ದಾರೆ. ಒಮ್ಮೆ 'ಗಜಲ್' ಪರಂಪರೆಯನ್ನು ಅವಲೋಕನ ಮಾಡಿದರೆ ಸಾವಿರಕ್ಕೂ ಹೆಚ್ಚು ಗಜಲ್ ಗೋ ಅವರು ನಮಗೆ ಸಿಗುತ್ತಾರೆ. ಆದರೆ ಪ್ರಶ್ನೆ ಮೂಡುವುದು ಅದರಲ್ಲಿ ಎಷ್ಟು ಜನರು 'ಗಜಲ್' ಅನ್ನು ಪ್ರೇಮಿಸಿದ್ದಾರೆ, ಪ್ರೇಮಿಸುತಿದ್ದಾರೆ ಎಂಬುದು!! 'ಗಜಲ್' ಮೇಹಫಿಲ್ ರಂಗೇರಲು ಆಕಸ್ಮಿಕ ಸುಖನವರ್ ಗಿಂತಲೂ 'ಗಜಲ್' ದೀವಾನಾ ಅತ್ಯವಶ್ಯಕ.

ಸಾಹಿತ್ಯ ಪರಂಪರೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ಮತ್ತು ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವ, ಬರುತ್ತಿರುವ ಸಾಹಿತ್ಯ ಪ್ರಕಾರವೆಂದರೆ 'ಗಜಲ್', ಅದೂ ತನ್ನ ವಿಶಿಷ್ಟ ಮಾದರಿಯ ಛಂದಸ್ಸಿನೊಂದಿಗೆ ಎಂಬುದು ಮತ್ತೊಂದು ಹೆಗ್ಗಳಿಕೆ!! 'ಗಜಲ್‌'ಗಳು ಮುಷೈರಾಗಳ ಮೂಲಕ ಮಾತ್ರವಲ್ಲದೆ ಗೀತೆಗಳ ಮೂಲಕವೂ ಸದಾ ಬಾಹರ್ ಆಗಿ ಜೀವಂತವಾಗಿವೆ. ಅರೇಬಿಕ್, ಪರ್ಷಿಯನ್, ಉರ್ದು ಭಾಷೆಗಳ ಮೂಲಕ 'ಗಜಲ್' ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ತನ್ನ ಅಮಲನ್ನು ಪಸರಿಸಿದೆ. ಹಿಂದಿ, ಓಡಿಯಾ, ಮರಾಠಿ, ಪಂಜಾಬಿ, ಗುಜರಾತಿ, ತೆಲುಗು, ತಮಿಳು, ಮಲೆಯಾಳಂ, ಕನ್ನಡ .... ಹೀಗೆ ಎಲ್ಲದರಲ್ಲೂ ಇಂದು 'ಗಜಲ್' ಬರೆಯಲಾಗುತ್ತಿದೆ. ಇಂಥಹ 'ಗಜಲ್' ಸುದೀರ್ಘವಾದ ಹಾಗೂ ಭವ್ಯವಾದ ಪರಂಪರೆಯನ್ನು ಹೊಂದಿದೆ. ಮೊದಲಿನಿಂದಲೂ ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮವಾಗಿದ್ದ 'ಗಜಲ್' ಕಾಲದ ಸೆಳುವಿನಲ್ಲಿ, ಅಂದಂದಿನ ವಾತಾವರಣಕ್ಕೆ ತಕ್ಕಂತೆ ಹಲವು ಬದಲಾವಣೆಗಳಿಗೆ ಮುಖಾಮುಖಿಯಾಗುತ್ತ ಕಾಲ ಮತ್ತು ಪರಿಸರಕ್ಕೆ ಅನುಗುಣವಾಗಿ ಬದಲಾಗುತ್ತ ಬಂದಿದೆ. ಒಂದು ಕಾಲದಲ್ಲಿ ಶರಾಬ್, ಶಬಾಬ್ ಮತ್ತು ಕಬಾಬ್ ಕುರಿತು ಗುನುಗುತ್ತಿದ್ದ 'ಗಜಲ್' ಇಂದು ಬದಲಾದ ದಿನಗಳೊಂದಿಗೆ ಹೆಜ್ಜೆ ಹಾಕುತ್ತ, ಕೇವಲ ರಾಜಕೀಯದತ್ತ ಮುಖ ಮಾಡದೆ, ಸಮಾಜದ ಪ್ರತಿಯೊಂದು ಅಂಶವನ್ನು ತನ್ನ ಅಶಅರ್ ನಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ವಿಷಯವಸ್ತುವಿನ ನೆಲೆಯಲ್ಲಿ 'ಗಜಲ್' ಬದಲಾಗುತ್ತ ಬಂದಿದೆಯೆ ಹೊರತು ಛಂದಸ್ಸಿನಿಂದಲ್ಲ ಎಂಬುದು ಅಂಡರ್ಲೈನ್ ಮಾಡುವ ವಿಚಾರವಾಗಿದೆ. ಲಕ್ಷಣ-ಸ್ವರೂಪಗಳ ತಾಕಲಾಟದಲ್ಲಿ, ಸಾಂಸ್ಕೃತಿಕ ರಾಜಕೀಯದ ಬಲೆಯಲ್ಲಿ 'ಗಜಲ್' ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕದ ನಡುವೆ ಅಂತರಾಷ್ಟ್ರೀಯ ಖ್ಯಾತಿಯ ಗಜಲ್ ಗೋ ವಾಸಿಂ ಬರೇಲ್ವಿ ಅವರ "ಗಜಲ್ ನ ಜನಪ್ರಿಯತೆ ಎಂದಿಗೂ ಕಡಿಮೆಯಾಗಿಲ್ಲ ಮತ್ತು ಅದು ಎಂದಿಗೂ ಕಡಿಮೆಯಾಗುವುದಿಲ್ಲ" ಎಂಬ ಮಾತು ನನ್ನಂತಹ ಗಜಲ್ ಪಾಗಲ್ ಗಳಿಗೆ ಸಂಜೀವಿನಿಯಾಗಿದೆ. ಹಿಂದಿಯ ಖ್ಯಾತ ಸುಖನವರ್ ಕುಂವರ್ ಬೇಚೈನ್ ರವರು ಕೂಡ 'ಗಜಲ್' ನ ಜನಪ್ರಿಯತೆ ಇಳಿಮುಖವಾಗುತ್ತಿರುವುದನ್ನು ಅಲ್ಲಗಳೆದಿದ್ದಾರೆ. ಇಂದಿಗೂ 'ಗಜಲ್' ಗಳ ಜನಪ್ರಿಯತೆ ಮೊದಲಿನಂತೆಯೇ ಇದೆ. ಸಾಮಾಜಿಕ ಜಾಲತಾಣವಂತೂ 'ಗಜಲ್' ನ ಜನ್ನತ್ತೇ ಆಗಿದೆ. ಈ ಹಿನ್ನೆಲೆಯಲ್ಲಿ ಉರ್ದುವಿನ ಪ್ರಸಿದ್ಧ ಚಿಂತಕರಾದ ರಶೀದ್ ಅಹ್ಮದ್ ಸಿದ್ದಿಕಿಯವರು 'ಗಜಲ್' ಅನ್ನು 'ಆಬ್ರು-ಎ-ಶಾಯರಿ' ಎಂದರೆ, ಫಿರಾಕ್ ಗೋರಖಪುರಿ ಅವರು 'ಕಂಠದಿಂದ ಹೊರಡುವ ನೋವಿನ ನಿಟ್ಟುಸಿರು' ಎಂದು ಹೇಳಿರುವುದು 'ಗಜಲ್' ನ ಅಸ್ಮಿತೆಯನ್ನು ಸಾರುತ್ತದೆ!! ಇದುವೆ 'ಗಜಲ್' ನ ಪಾವಿತ್ರ್ಯದ ಗುಟ್ಟು ಕೂಡ ಹೌದು.

ಯಾರಾದರೂ ಹೃದಯವನ್ನು ನೋಯಿಸಿದಾಗ 'ಗಜಲ್' ಜೀವಂತವಾಗುತ್ತದೆ ಎನ್ನಲಾಗುತ್ತದೆ.‌ ಎಲ್ಲರ ಜೀವನದ ಸ್ಥಾಯಿ ಭಾವವಾದ ನೋವೆ 'ಗಜಲ್' ಚಾಂದನಿಯ ಗುಂಗಟ್ ಆಗಿದೆ. ಇದಕ್ಕೊಂದು ಪೂರಕವಾದ ಷೇರ್ ಅನ್ನು ಇಲ್ಲಿ ಗಮನಿಸಬಹುದು.‌

"ಮಾರಾಟ ಮಾಡಲು ಏನಿತ್ತು

ನನ್ನ ಕನಸುಗಳನ್ನು ಮಾರಿದೆ"

-ಜೌನ್ ಎಲಿಯಾ

ಈ ಕಾರಣಕ್ಕಾಗಿಯೇ ಯಾವುದಾದರೂ ಒಂದು ಪದ ನಮ್ಮ ಜೀವನದ ಭಾರ ಮತ್ತು ನೋವುಗಳಿಂದ ನಮ್ಮನ್ನು ಮುಕ್ತಗೊಳಿಸುತ್ತದೆ ಎನ್ನುವುದಾದರೆ ಅದು 'ಪ್ರೀತಿ' ಮಾತ್ರ ಎನ್ನಲಾಗುತ್ತದೆ. ಈ ನೆಲೆಯಲ್ಲಿ "Pleasure of love lasts but a moment. Pain of love lasts a lifetime.” ಎನ್ನುವ ಅಮೇರಿಕಾದ ಚಿತ್ರನಟಿ ಬೆಟ್ಟೆ ಡೇವಿಸ್ ರವರ ಹೇಳಿಕೆಯನ್ನು 'ಗಜಲ್' ಗಳ ಉದ್ದಕ್ಕೂ ಕಾಣಬಹುದು. ಹೃದಯವು ಎಷ್ಟು ಘಾಸಿಗೊಂಡಿದೆ ಎಂಬುದನ್ನು ಹೇಳಲು, ವಿವರಿಸಲು ಮಾತುಗಳು ತಡವರಿಸಿದಾಗ ಕಣ್ಣೀರು ಮಾತನಾಡುತ್ತದೆ. ಕಂಬನಿಯೆ ಕಂಬನಿಯನ್ನು ಒರೆಸಲು ಸಾಧ್ಯ ಎನ್ನುವಂತೆ ಈ 'ಗಜಲ್' ಕಾರವಾನ್ ನನಗೆ ಅಸಂಖ್ಯಾತ 'ಗಜಲ್' ಪ್ರೇಮಿಗಳನ್ನು ಪರಿಚಯಿಸಿದೆ.‌ ಅವರುಗಳಲ್ಲಿ ರಾಯಚೂರು ನಿವಾಸಿ ಯುವ ಗಜಲ್ ಗೋ ಶಿವಶಂಕರ ಕಡದಿನ್ನಿ ಅವರೂ ಒಬ್ಬರು. ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿರುವ ಶ್ರೀಯುತರು ಸದ್ಯ ಹಾಸನದ ಸಕಲೇಶಪುರದಲ್ಲಿ ಬಿ.ಇಡಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. 'ಮಳೆಬಿಲ್ಲು' , 'ನಸುಕು', ಹೈಕು ಸಂಕಲನಗಳೊಂದಿಗೆ ರಾಜ್ಯ ಮಟ್ಟದ ಪ್ರಾತಿನಿಧಿಕ ಹೈಕು ಸಂಕಲನವನ್ನು ಪ್ರಕಟಿಸಿ ಹೈಕು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಕಳೆದ ೪-೫ ವರ್ಷಗಳಲ್ಲಿ ತಾವು ಬರೆದ 'ಗಜಲ್' ಗಳನ್ನು ಸಂಕಲಿಸಿ "ಒಡಲುರಿದಾಗ" ಎಂಬ 'ಗಜಲ್ ಸಂಕಲನ'ವನ್ನು ಪ್ರಕಟಿಸಲು ಮುಂದಾಗಿರುವುದು ; ನಮ್ಮ ಗಜಲ್ ಗುಲ್ಜಾರ್ ನಲ್ಲಿ ಮತ್ತೊಂದು ಹೂವು ಅರಳುತ್ತಿರುವುದು ತುಂಬಾ ಖುಷಿಯ ಸಂಗತಿಯಾಗಿದೆ. 'ಹೊಟ್ಟೆ' ಹಸಿವಿನ ಸಂಕೇತವಾಗಿದೆ. ಪ್ರಪಂಚದ ಎಲ್ಲ ತಾಯಂದಿರಿಗೆ ಜನನವಾಗುವ ಮಗು ಅಳುತ್ತದೆ, ಭೂಮಿಗೆ ಬಂದ ಕಂದನ ಮೊದಲ ಅಳುವಿನಿಂದಲೇ ಶುರುವಾಗುವುದು ಹಸಿವಿನ ಹೊಯ್ದಾಟ. ಎಲ್ಲ ಜೀವರಾಶಿಗಳಿಗೂ ಹಸಿವು ಸರ್ವೇ ಸಾಮಾನ್ಯ. ಆದರೆ ಬುದ್ದಿಜೀವಿಯಾದ ಮಾನವ ತನಗೆ ಹಸಿವಾಗುವುದನ್ನು ಹೇಳಿಕೊಳ್ಳುತ್ತಾನೆ. ಮನುಷ್ಯನು ಪ್ರಾಣಿಗಳನ್ನು ಭೇಟೆಯಾಡಿ ಹಸಿ ಮಾಂಸವನ್ನು ಭಕ್ಷಿಸುತ್ತಿದ್ದಾಗ ಇಲ್ಲದ, ಅರಿವಿಗೆ ಬಾರದ ಹಸಿವಿನ ತಳಮಳ ಮಾನವ ಆಧುನಿಕವಾಗಿ ಬದಲಾಗುತ್ತಾ ಹೊಸ ಹೊಸ ಆಲೋಚನೆಗಳಿಂದ ಬದುಕನ್ನು ಕಟ್ಟಿಕೊಳ್ಳಲು ಆರಂಭಿಸಿದಾಗಲೆ ಅನುಭವ ಆಗುತ್ತ ಬಂತು!! ಈ 'ಹಸಿವು' ಎನ್ನುವುದು ಭಯಂಕರ, ಭೀಭತ್ಸವೂ ಹೌದು. ಆರ್ಥಿಕ ಅಸಮಾನತೆಯಿಂದಾಗಿ ಜಗತ್ತಿನಲ್ಲಿ ಬಡತನದ ಛಾಯೆ ದಿನೇ ದಿನೇ ಹೆಚ್ಚಾಗುತ್ತಿದೆ. ತುತ್ತು ಅನ್ನಕ್ಕಾಗಿ ಬಡಿದಾಡುವ ಸನ್ನಿವೇಶಗಳನ್ನು

ಬಂಡವಾಳಶಾಹಿ ವ್ಯವಸ್ಥೆ ಸದ್ದು ಗದ್ದಲವಿಲ್ಲದೆ ರೂಪಿಸುತ್ತ ಬಂದಿದೆ, ಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಅಗುಳಿಗಾಗಿ ಕೊಲ್ಲುವ, ವ್ಯಭಿಚಾರಕ್ಕಿಳಿಯುವ ಅಸಹನೀಯ ವಾತಾವರಣ ಆವರಿಸುತ್ತಿರುವುದು ಶೋಚನೀಯ ಸಂಗತಿ. ಪ್ರೀತಿ, ಪ್ರೇಮದೊಂದಿಗೆ ಸಮಾಜದ ಕರಾಳತೆಯನ್ನು ಮುನ್ನೆಲೆಗೆ ತರುತ್ತಿರುವ 'ಗಜಲ್' ಗಳಲ್ಲಿ ಹಸಿವಿನ ಹಾಹಾಕಾರವು ಓದುಗರ ಕಂಗಳನ್ನು ತೇವಗೊಳಿಸುತ್ತಿವೆ! ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅದಮ್ ಗೊಂಡವಿ ಯವರ ಈ ಕೆಳಗಿನ ಷೇರ್..

"ಹಸಿವಿನ ಅನುಭವವನ್ನು ಗಜಲ್ ಗಳ ತನಕ ಕರೆದೊಯ್ಯಿರಿ

ಸಾಹಿತ್ಯ ಲೋಕವನ್ನು ಬಡವರ ಓಣಿಗಳ ತನಕ ಕರೆದೊಯ್ಯಿರಿ"

ಈ ಷೇರ್ ಬದಲಾದ ಕಾಲಘಟ್ಟದಲ್ಲಿ 'ಗಜಲ್' ಇಟ್ಟ ಹೆಜ್ಜೆ, ತೊಟ್ಟ ರೂಪವನ್ನು ಪ್ರತಿನಿಧಿಸುತ್ತಿದೆ.‌ ಈ ದಿಸೆಯಲ್ಲಿ ಗಮನಿಸಿದಾಗ ಮಿತ್ರ ಶಿವಶಂಕರ ಕಡದಿನ್ನಿಯವರಿಗೆ 'ಹಸಿವು' ತುಂಬಾನೇ ಕಾಡಿದಂತಿದೆ. ಅದು ಎಷ್ಟರಮಟ್ಟಿಗೆ ಕಾಡಿದೆಯೆಂದರೆ "ಒಡಲುರಿದಾಗ" ಗಜಲ್ ಸಂಕಲನದ ೩೦ ಗಜಲ್ ಗಳಲ್ಲಿ 20ಕ್ಕೂ ಹೆಚ್ಚು ಗಜಲ್ ಗಳಲ್ಲಿ ಹಸಿವು, ಬಡತನದ ಬೇಗೆ ಓದುಗರನ್ನೂ ಸಹ ತಟ್ಟುವಂತಿದೆ!! ಇವುಗಳೊಂದಿಗೆ ಅಲ್ಲಲ್ಲಿ ಪ್ರೀತಿ, ಪ್ರೇಮ, ಪ್ರಣಯದ ತುಂತುರು ಹನಿಗಳೂ ಇವೆ, ಸಾಮಾಜಿಕ ವ್ಯವಸ್ಥೆಯ ಚಿತ್ರಣ, ಸಮಾಜದ ಅಸಮಾನತೆ, ವಿಕೃತ ಮನಸುಗಳ ಚೀತ್ಕಾರವೂ ಇದೆ. ಇಲ್ಲಿನ ಹೆಚ್ಚಿನ 'ಗಜಲ್' ಗಳು ಮುರದ್ದಫ್ ಗಜಲ್‌ಗಳಾಗಿದ್ದು, ಕೆಲವು 'ಗಜಲ್' ಗಳು ಗೈರ್ ಮುರದ್ದಪ್ ಹಾಗೂ ಹುಸ್ನ್-ಎ-ಮತ್ಲಾ 'ಗಜಲ್' ಗಳಾಗಿವೆ. ಬೇಹರ್, ಮೀಟರ್ ಗಮನಿಸಿದಾಗ ಇಲ್ಲಿ ಆಜಾದಿ ಗಜಲ್ ಗಳ ಸಂಖ್ಯೆಯೆ ಅಧಿಕವಾಗಿವೆ. ಕವಾಫಿಯಲ್ಲಿ 'ಏಕ ಅಲಾಮತ್' ರದೀಫ್ ಗಳಲ್ಲಿ 'ಛೋಟಿ', 'ಮಜಲುನ್', ಪ್ರಕಾರದ ರದೀಫ್ ಇವೆ.‌ ಕೆಲ ಅಶಅರ್ ನಲ್ಲಿಯ ದಾವಾ-ದಲೀಲ್ ಗಳಿಂದ ಆ 'ಗಜಲ್' ಗಳು ಮುಖಮ್ಮಲ್ ಆಗಿವೆ. 'ಗಜಲ್ ವಿಶೇಷವಾಗಿ ನನ್ನ ಗಮನ ಸೆಳೆದ ಒಂದು ಅಂಶವೆಂದರೆ ಗಜಲ್ ಗೋ ಅವರು ಬಳಸಿದ ರದೀಫ್.. ಇಲ್ಲಿ ಯಾವ ರದೀಫ್ ಕೂಡ ಪುನರಾವರ್ತನೆ ಆಗಿಲ್ಲ, ಯಾವುದೂ ಸಹ ಅನಾವಶ್ಯಕವಾಗಿ ಬಳಕೆಯಾಗಿಲ್ಲ. ಎಲ್ಲವೂ ಸಹ ಔಚಿತ್ಯಪೂರ್ಣವಾಗಿ, ಅರ್ಥಗರ್ಭಿತವಾಗಿ ಬಳಸಲ್ಪಟ್ಟಿವೆ. ಆರಿಸಲು ಬನ್ನಿ, ಯಾರೆಂದು ಹೇಳಲಿ, ಯಾರಿಗೇನು ಗೊತ್ತು, ಈಗ ಸಮಯ ಬಂದಿದೆ, ಎಷ್ಟಂತ ತಡಿಯಲಿ, ನೆನಪಿಲ್ಲ ನನಗೆ, ನನ್ನದೊಂದು ಗಜಲ್ ನಾಚಿತು, ನನ್ನ ತಪ್ಪಾ, ತಿಳಿಯಲಿಲ್ಲ ನನಗೆ, ಬ್ಯಾನೆ ಬರುವುದನ್ನು ನಾನು ನೋಡಬೇಕು, ಹೇಗೆ ತಾಳಲಿ, ಈ ಮೊದಲೇ ಹೇಳಿದ್ದೆ, ತುಂಬಿದ ತಿಂಗಳಲ್ಲಿ, ಮೆಲುಕು ಹಾಕುತ್ತವೆ ಅವಾಗ ಅವಾಗ, ಎಷ್ಟಂತ ಸಹಿಸಲಿ, ಹೇಗೆ ಒಮ್ಮೆ ಹೇಳಿ, ಯಾರೂ ಬರಲಿಲ್ಲ, ಸಹಿಸಿಕೋ ನೋವು.... ಮುಂತಾದವುಗಳು ಇಡೀ ಮಿಸರೈನ್ ನ ಅರ್ಥವನ್ನು ಉಸುರುವಂತಿವೆ.‌ ಆ ವಿಷಯಕ್ಕೆ ಬಂದರೆ ಹೆಚ್ಚಿನವು 5 ಅಂಶಗಳನ್ನು ಹೊಂದಿವೆ. ಕೆಲವೊಂದು 3-4 ಅಶಅರ್ ಸಹ ಹೊಂದಿದ ಗಜಲ್ ಗಳಿವೆ. 'ಗಜಲ್' ಒಂದರಲ್ಲಿ ಬಳಕೆಯಾದ 'ಕರಿ ಇಲ್ಲಣ', 'ಸರಕಣ್ಣಿ', ಎಂಬ ಪ್ರಾದೇಶಿಕ ಪದಗಳು ಮನಕೆ ಮುದ ನೀಡುತ್ತವೆ. ಇಲ್ಲಿಯ ಹಲವು 'ಗಜಲ್' ಗಳು ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮನವನ್ನು ತಣಿಸಿವೆ.

"ಹೂ ಅರಳಿವೆ ಕಿತ್ತಾಡುವ ಕೈಗಳು ಕಾದು ಕುಳಿತಿವೆ ದೇಹ ಸುಟ್ಟರೂ ರಕ್ತ ಹೆಪ್ಪುಗಟ್ಟಿದೆ ಎಷ್ಟಂತ ತಡಿಯಲಿ"

"ಪುಟ್ಟ ಗುಡಿಸಲಲ್ಲಿ ಹಣತೆಯೊಂದು ಹಚ್ಚಿ ಇಡಬೇಕಾಗಿದೆ ತೈಲ ಹಾಕುವುದಾದರೆ ಹಾಕು ಆದರೆ ನೀರು ಹಾಕಬೇಡ"

"ಒಡಲುರಿದಾಗ" ಗಜಲ್ ಸಂಕಲನವು ಹಲವಾರು ಸಮಾಜಮುಖಿ ಚಿಂತನೆಯ, ಹಸಿವಿನ ವಿಷಪ್ರಾಶನ, ಅನ್ನದ ಮಹತ್ವ, ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಸಾರುತ್ತ ಸಹೃದಯ ಓದುಗರ ಮನವನ್ನು ತಣಿಸುತ್ತದೆ ಎಂಬ ವಿಶ್ವಾಸ ನನಗಿದೆ. "Laugh and the world laughs with you ; but if you weep nobody will weep with you" ಎಂಬ ಅಮೇರಿಕಾದ ಕವಯಿತ್ರಿ ಎಲ್ಲಾ ವೀಲರ್ ವಿಲ್ ಕಾಕ್ಸ್ ರವರ ಹೇಳಿಕೆಯೆ ಈ ಸಂಕಲನದ ಸಂದೇಶವಾಗಿದೆ. ಇಂದು ಜಾಗತಿಕ ಸಾರಸ್ವತ ಜಾತ್ರೆಯಲ್ಲಿ 'ಗಜಲ್' ಎಲ್ಲ ವಯೋಮಾನದ ಸಹೃದಯಿಗಳನ್ನು ಆಕರ್ಷಿಸುತ್ತಿದೆ. ಆ 'ಗಜಲ್' ರಚನೆಯಲ್ಲಿ 'ಕವಾಫಿ' ಪಾತ್ರ ಅನನ್ಯ ಮತ್ತು ಅನುಪಮ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಅವರ 'ಕವಾಫಿ' ಆಯ್ಕೆಯೆ 'ಗಜಲ್' ಮೆಹಕ್ ಅನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಗಜಲ್ ಗೋ ಕವಾಫಿ ಪಾಲನೆಯಲ್ಲಿ 'ರವಿ' ಗೆ ಅಂಟಿಕೊಳ್ಳದೆ ರವೀಶ್, ಕೈದ್, ರೌಫ್, ತಶೀಶ್ ಕಡೆಗೆ ಗಮನ ಕೊಡುವ ಅವಶ್ಯಕತೆ ಇದೆ.‌ ಪ್ರತಿ ಅಶಅರ್ ನ ಮಿಸರೈನ್ ಸ್ವತಂತ್ರವಾಗಿರಬೇಕು, ಅಂದಾಗ ಮಾತ್ರ ಅದು ಷೇರ್ ಎನಿಸಿಕೊಳ್ಳಲು ಸಾಧ್ಯ! 'ಶಂಕರ' ಎಂಬ ತಖಲ್ಲುಸ್ ನಾಮದಿಂದ 'ಗಜಲ್' ಬರೆದಿರುವ ಗಜಲ್ ಗೋ ಶಿವಶಂಕರ ಕಡದಿನ್ನಿಯವರು ಕೆಲವು 'ಬೇಮಕ್ತಾ' 'ಗಜಲ್' ಗಳನ್ನೂ ಬರೆದಿದ್ದಾರೆ. ಆದರೆ 'ತಖಲ್ಲುಸ್ ನಾಮ'ದ ಬಳಕೆಯಾದರೆ ಮಾತ್ರ ಆ ಷೇರ್ 'ಮಕ್ತಾ' ಎನಿಸಿಕೊಳ್ಳುತ್ತದೆ. ಪ್ರತಿ ಕಾವ್ಯವು ನವನವೀನ ಪದಗಳ ಬಳಕೆಯನ್ನು ನಿರೀಕ್ಷಿಸುತ್ತದೆ. ಆ ಬಳಕೆಯಿಂದ ಕಾವ್ಯ ಹಚ್ಚ ಹಸಿರಾಗಿರುತ್ತದೆ. ಪ್ರತಿಮೆಗಳ ಕುರಿತು ಇನ್ನೂ ಹೆಚ್ಚಿನ ಆಸ್ಥೆ ವಹಿಸಿದ್ದರೆ 'ಗಜಲ್' ಗಳಿಗೆ ಮತ್ತಷ್ಟು ಮೆರುಗು ಬರುತಿತ್ತು. ಈ ದಿಸೆಯಲ್ಲಿ ಯುವ ಮಿತ್ರ, ಗಜಲ್ ಗೋ ಶಿವಶಂಕರ ಕಡದಿನ್ನಿಯವರು ಕಾರ್ಯಪ್ರವೃತ್ತರಾಗಲಿ, ಅವರಿಂದ ಗಜಲ್ ಪರಪಂಚ ಇನ್ನಷ್ಟು ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ. ಎಂದಿದ್ದಾರೆ ಮಲ್ಲಿನಾಥ ತಳವಾರ ಇವರು.