ಒಡಹುಟ್ಟಿದವರು

ಒಡಹುಟ್ಟಿದವರು

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಂಗಿಗೆ ಅಣ್ಣನಿಂದ ಫೋನ್ ಬಂದಿತು. ಪುಟ್ಟಿ, ನಾನು ಮತ್ತು ನಿನ್ನ ಅತ್ತಿಗೆ ನಿಮ್ಮ ಮನೆಗೆ ಬಂದು ಸ್ವಲ್ಪ ಹೊತ್ತು ಇದ್ದು ಹೊರಡುತ್ತೇವೆ ಎಂದು ಹೇಳಿದ. ಅಣ್ಣ ಬರುತ್ತಾನೆ ಎಂದು ತಂಗಿಗೆ ಬಹಳ ಖುಷಿಯಾಯಿತು. ಆದರೆ ಆ ಸಂತೋಷ ಕ್ಷಣದಲ್ಲಿ ಬೆಲೂನು ಒಡೆದಂತೆ ಟುಸ್ ಎಂದಿತು. ಏಕೆಂದರೆ ಅಣ್ಣ ಅತ್ತಿಗೆ ಬಂದರೆ ಅವರಿಗೆ ತಿನ್ನಲು- ಕುಡಿಯಲು ಕೊಡಲು ಏನೂ ಇಲ್ಲ. ಒಳಗೆ ಬಂದು ನೋಡಿದಳು. ಸ್ವಲ್ಪ ಸಕ್ಕರೆ, ಸ್ವಲ್ಪ ಒಣಗಿದ ಒಂದು ನಿಂಬೆ ಹಣ್ಣು ಇತ್ತು. ಅದನ್ನೇ ಬೆರೆಸಿ ಪಾನಕ ಮಾಡಿಟ್ಟು ಹೊರಗೆ ಬಂದು ಅಣ್ಣ ಅತ್ತಿಗೆ ಬರುವುದನ್ನು ಕಾಯುತ್ತಿದ್ದಳು. 

ಅಣ್ಣ, ಅತ್ತಿಗೆ ಬಂದರು ನೋಡಿದಳು ಬಹಳ ಹೆದರಿಕೆಯಾಯಿತು. ಏಕೆಂದರೆ ಅವಳು ಅಣ್ಣ ಅತ್ತಿಗೆಗೆ ತಕ್ಕಷ್ಟು ಪಾನಕ ಮಾಡಿದ್ದಳು. ಅತ್ತಿಗೆಯ ತಾಯಿಯು ಜೊತೆಯಲ್ಲಿ ಬಂದಿದ್ದರು. ಕೊನೆಗೆ ಅವಳು ಒಂದು ಉಪಾಯ ಮಾಡಿದಳು. ಎರಡು ಲೋಟದಲ್ಲಿದ್ದ ಪಾನಕವನ್ನು ಅತ್ತಿಗೆಗೆ ಅವರ ತಾಯಿಗೆ ಕೊಟ್ಟಳು. ಅಣ್ಣನಿಗೆ ಬರೀ ನೀರು ಕೊಟ್ಟು ಅಣ್ಣ ನಿನಗೆ ನಿಂಬೆಹಣ್ಣಿನ ಪಾನಕ ಇಷ್ಟ ಇಲ್ಲ ಎಂದು ಅಂಗಡಿಯಿಂದ ಮಕ್ಕಳಿಗೆ ತಂದ ಸಿಹಿ ಸೋಡಾ ಇತ್ತು ತಗೋ ಎಂದು ಅಣ್ಣನಿಗೆ ಲೋಟದಲ್ಲಿ ಬರೀ ನೀರು ಕೊಟ್ಟಳು. ಅಣ್ಣನಿಗೆ ತಂಗಿ ಪರಿಸ್ಥಿತಿ ಅರ್ಥವಾಗುತ್ತದೆ. ನೀರನ್ನು ಕುಡಿದು ಓಹೋ ಈ ಸೋಡಾ ನನಗೆ ಬಹಳ ಇಷ್ಟ ಚೆನ್ನಾಗಿದೆ ಎಂದನು. ಇದನ್ನು ಕೇಳಿದ ಅತ್ತಿಗೆ ತಾಯಿಗೆ ಆಸೆಯಾಯಿತು ಸೋಡಾ ನನಗೂ ಸ್ವಲ್ಪ ಕೊಡು ಎಂದರು. 

ಅತ್ತಿಗೆ ತಾಯಿಯ ಮುಂದೆ ತನ್ನ ಮರ್ಯಾದೆ ಹೋಯಿತು ಎಂದುಕೊಂಡಿದ್ದಳು. ಆದರೆ ಅಷ್ಟರೊಳಗೆ ಅಣ್ಣ ಅಡಿಗೆ ಮನೆಗೆ ಬಂದು ಸ್ಟೀಲ್ ಲೋಟವನ್ನು ಕೆಳಗೆ ಬೀಳಿಸಿ ಅಯ್ಯೋ ತಂಗಿ ನೀನು ಇಟ್ಟಿದ್ದ ಸೋಡಾ ಎಲ್ಲಾ ಚೆಲ್ಲಿ ಹೋಯಿತು ಹೊರಗಡೆ ಹೋಗಿ ನಾನೇ ತರುತ್ತೇನೆ ಎಂದು ಹೇಳಿದನು ಆಗ ಅವಳ ಅತ್ತೆ ಮತ್ತು ಪತ್ನಿ ಈಗ ಬೇಡ ಮತ್ತೊಮ್ಮೆ ಕುಡಿದರಾಯಿತು ಎಂದರು. 

ತಂಗಿಗೆ ಅಣ್ಣನ ಒಳ್ಳೆಯತನ ಜಾಣತನ ಕಂಡು ಅಣ್ಣನ ಮೇಲಿನ ಪ್ರೀತಿ ಹೆಚ್ಚಿತು. ತನ್ನ ಪರಿಸ್ಥಿತಿಯನ್ನು ಅರಿತ ಅಣ್ಣ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ನಿಭಾಯಿಸಿದ ಎಂದು. ಅವರು ಹೊರಡುವಾಗ ಕಣ್ತುಂಬಿ ಬಂದು ಅಣ್ಣನನ್ನೇ ನೋಡುತ್ತಿದ್ದಳು. ಹೆಂಡತಿ ಮತ್ತು ಅತ್ತೆ ಸ್ವಲ್ಪ ದೂರ ಹೋದಾಗ  ತಂಗಿಗೆ ಲೇ ತಂಗ್ಯಮ್ಮಾ, ಒಳಗೆ ಹೋಗು ಸೋಡಾ ಎಲ್ಲಾ ಚೆಲ್ಲಿದೆ  ಅದರ ಮೇಲೆ  ಇರುವೆ ಬರುತ್ತದೆ. ಕ್ಲೀನ್ ಮಾಡಬೇಕು ಹೋಗು ಎಂದು ಓಡಿ ಬಂದು ಅವಳ ಕೈಯಲ್ಲಿ  ಒಂದಷ್ಟು ಹಣ ಕೊಟ್ಟು ಅಂಗಡಿಗೆ ಹೋಗಿ ಅಗತ್ಯದ ಸಾಮಾನು ತೆಗೆದುಕೊಂಡು ಬಾ ಎಂದು ಹೇಳಿ ತಂಗಿಯ ಕೆನ್ನೆ ತಟ್ಟಿ ಓಡಿದ. ಕಣ್ಣಲ್ಲಿ ನೀರು ಬಂದ ತಂಗಿಗೆ ಇದ್ದರೆ ನನ್ನಂಥ ಅಣ್ಣ ಇರಬೇಕು ಎನಿಸಿತು. 

ಇದು ಸ್ವಂತ ಅಣ್ಣ ತಂಗಿ ವಿಚಾರ. ಆದರೆ ಎಷ್ಟು ಜನ ಹೀಗೆ ಇರುತ್ತಾರೊ ಗೊತ್ತಿಲ್ಲ. ಆದರೆ ನಮ್ಮ ನೆರೆಹೊರೆಯವರು ಆತ್ಮೀಯರನ್ನು ಅಣ್ಣ ತಮ್ಮ ಅಕ್ಕ ತಂಗಿ ಅಂತ ಬಾಯಲ್ಲಿ ಹೇಳುತ್ತೇವೆ. ಅಂಥವರಿಗೂ ನಮ್ಮ ಕಣ್ಣೆದುರಿಗೆ ಕೆಟ್ಟ ಪರಿಸ್ಥಿತಿ ಎದುರಾದಾಗ ಆಗ ಸಂದರ್ಭದಲ್ಲಿ ಸಹಾಯ ಮಾಡುವುದು ನಮ್ಮ ಧರ್ಮ ಆಗಿರುತ್ತದೆ.  ಕಂಡರೂ ಕಾಣದಂತೆ, ತಿಳಿದೂ ತಿಳಿಯದಂತೆ ಇರುವುದಕ್ಕಿಂತ ಕೈಲಾದ ಸಹಾಯ ಮಾಡುವುದು ಮಾನವೀಯತೆಯಾಗಿರುತ್ತದೆ.

-ವಿಶ್ವನಾಥ್ ಪಾತ್ಕರ್

ಚಿತ್ರ ಕೃಪೆ: ಇಂಟರ್ನೆಟ್ ತಾಣ