ಒಣ ಮರದ ಗಿಳಿಗಳು

ಒಣ ಮರದ ಗಿಳಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್.ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಪುಸ್ತಕದ ಬೆಲೆ
ರೂ.25/-

ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು ಸಾಹಿತಿಯಾಗಿ ಬೆಳೆದವರು. ಕನ್ನಡದ ಮೇರುಕೃತಿಗಳ ಆ ಮಾಲೆಗೆ ಇದು ಆಯ್ಕೆಯಾದದ್ದು ಅವರ ಪ್ರತಿಭೆಯ ದ್ಯೋತಕ.

ಕನ್ನಡದ ಪ್ರಸಿದ್ಧ ವಿಮರ್ಶಕರಾದ ಕೀರ್ತಿನಾಥ ಕುರ್ತುಕೋಟಿ ಅವರು ಇದರ ಮುನ್ನುಡಿಯಲ್ಲಿ ಬರೆದಿರುವ ಮಾತುಗಳು: “.... “ಇಂಡಿಯಾದ ನಿಬಿಡಾರಣ್ಯಗಳಲ್ಲಿ” ಎಂಬ ಇವರ ಒಂದು ಕವಿತೆಯನ್ನು ಈ ಮೊದಲೇ ಪತ್ರಿಕೆಯೊಂದರಲ್ಲಿ ಓದಿದ್ದೆ.
ತಂಗೊಳಕ್ಕೆ ಹುಣ್ಣಿಮೆ ರಾತ್ರಿ ಕೊಡ
ಕೊಡ ಹಾಲು ಸುರಿವ ಗಳಿಗೆ ಹುಲಿ ಚಿರತೆ
ಕರಡಿ ಆನೆ ಜಿಂಕೆ ಹಾಲು ಮೊಲಗಳ
ನಿಬ್ಬೆರಗು ನೆಳಲು, ನಿಂತ ನೀರಲ್ಲಿ …..

ಇಂಥ ಸಾಲುಗಳಲ್ಲಿಯ ವರ್ಣನೆ ನಿರ್ಮಿಸುವ ಮಾಯೆಯ ಜಗತ್ತನ್ನು ಕಂಡು ಬೆರಗಾಗಿದ್ದೆ. ಇಂಥ ಜಗತ್ತಿನಲ್ಲಿ ನೆರಳು ನೀರಾಗುತ್ತದೆ; ಬಿಸಿಲು ಮೀನಾಗುತ್ತದೆ; ಹೆಬ್ಬುಲಿ ಬಂಡೆಯಂತೆ ಹೊಳೆಯ ನಡುವೆ ಎದ್ದು ನಿಲ್ಲುತ್ತದೆ; ಬೆಳದಿಂಗಳು ಹಾಲಾಗುತ್ತದೆ. ಪ್ರಕೃತಿಯ ಪಂಚಭೂತಗಳು ಒಂದರೊಡನೊಂದು ಸೇರಿಕೊಂಡು ಇನ್ನೊಂದಾಗುತ್ತವೆ. ಜೀವಶಕ್ತಿ ಪಡೆಯುವ ನೂರಾರು ರೂಪಗಳು ಪ್ರಕೃತಿಯಲ್ಲಿ ಮಿಂಚತೊಡಗುತ್ತವೆ. ಕಣ್ಣಿಗೆ, ಕಿವಿಗೆ ಸ್ಪಷ್ಟವಾಗಿ ಕಾಣಿಸುವ, ಕೇಳಿಸುವ ಈ ಜಗತ್ತು ಅನಿರೀಕ್ಷಿತವಾದ ಸತ್ಯವನ್ನು ಪ್ರಕಟಿಸುವ ಹೊಂಚಾಗುತ್ತದೆ. ವಸ್ತುಗಳು ವರ್ಣಪ್ರಾಧಾನ್ಯವನ್ನಷ್ಟೇ ಉಳಿಸಿಕೊಂಡು ಪ್ರತೀಕಗಳಾಗುವುದು ಈ ಬಗೆಯ ಕಾವ್ಯದ ವರ್ಣನೆಯ ಗುಟ್ಟಾಗಿದೆ. ವಸ್ತು ಮತ್ತು ಪ್ರತೀಕ ಇವುಗಳ ಸಂಬಂಧವನ್ನು ಮತ್ತು ನ್ಯಾಯವನ್ನು ಈ ಕಾವ್ಯ ಚೆನ್ನಾಗಿ ಬಲ್ಲದು. ….. ಶಬ್ದಗಳು ಈ ಕವಿಗೆ "ನಾನು ಕರೆಯುವ ಮುನ್ನ ಸೊರವೊಡೆವ ಆವಾಗಿ ತಾವಾಗಿ ಒದಗಿ" ಬರುತ್ತವೆ. ಹಿಂದಿನ ಕಾಲದ ಯಜ್ನದಂತೆ ಇಂಥ ಕಾವ್ಯಕ್ಕೆ ಭಾಷೆ ಬೇಕಾದ ಪ್ರಯೋಜನಕ್ಕೆ ಒದಗಿ ಬರುವ ಕಾಮಧೇನುವಾಗುತ್ತದೆ.”

ಮುನ್ನುಡಿಯ ಮುಕ್ತಾಯದಲ್ಲಿ ಕೀರ್ತಿನಾಥ ಕುರ್ತುಕೋಟಿಯವರು ಕವಿಯನ್ನು ಹೀಗೆಂದು ಅಭಿನಂದಿಸುತ್ತಾರೆ: “ವೆಂಕಟೇಶಮೂರ್ತಿಯವರ ಕವಿತೆಗಳು ಎತ್ತಿಕೊಂಡಿರುವ ಪ್ರಶ್ನೆ ದೊಡ್ಡದು. ಆಶಯ ದೊಡ್ಡದು. ಅಭಿವ್ಯಕ್ತಿ ಎಲ್ಲಕ್ಕಿಂತ ದೊಡ್ಡದು. ಕಾವ್ಯವೆಂದರೆ ಏನು ಎಂದು ಮತ್ತೆ ಆಲೋಚಿಸಲು ಹಚ್ಚುವ ಕಾವ್ಯ ನಿಜವಾಗಿಯೂ ದೊಡ್ಡ ಕಾವ್ಯವೆಂದು ನಾನು ತಿಳಿದಿದ್ದೇನೆ. ಅಂಥ ಕವಿತೆಯನ್ನು ನಿರ್ಮಿಸಿದ್ದಕ್ಕಾಗಿ ವೆಂಕಟೇಶಮೂರ್ತಿಯವರನ್ನು ಅಭಿನಂದಿಸುತ್ತೇನೆ.”

ಈ ಸಂಕಲನದ ಮೂರು ಪುಟ್ಟ ಕವಿತೆಗಳು ಇಲ್ಲಿವೆ:
ಹುಡುಕಿಕೊಂಡು ಹೋದವರು

ಬೆಳಕು ಹುಡುಕಿಕೊಂಡು ಹೋದ ಮಂದಿ
ಖುದ್ದು ತಾವೇ ನಕ್ಷತ್ರಗಳಾಗಿ ಹೋದರು

ಕತ್ತಲನ್ನು ಶೋಧಿಸ ಹೊರಟ ಸಾಹಸಿಗಳು
ಕಾಳಗರ್ಭದಲ್ಲಿ ಮಿಡಿಯುವ ಅವೇ
ನಕ್ಷತ್ರ ಬೀಜಗಳ ಕಂಡರು.

ವ್ಯತ್ಯಾಸ
ನೆನ್ನೆಯಂತೆಯೆ ಇಂದೂ ಸೂರ್ಯ ಮೂಡಿದ್ದು
ಬಣ್ಣದೋಕುಳಿ ಚೆಲ್ಲಿ
ಬಗೆ ಬಗೆಯ ಹೂ ತುಂಬ ಬೆಳಕ ತುಂಬಿದ್ದು

ನೆನ್ನೆಯಂತೆಯೆ ಇಂದು ಇಂದಿನಂತೆಯೆ ನಾಳೆ
ನೆನ್ನೆಗೂ ಇಂದಿಗೂ ಏನಂಥ ಅಂತರ
ಎನ್ನದಿರು ಪ್ರಿಯ ಗೆಳೆಯ

ನೆನ್ನೆ ಇಂದಿನ ಎರಡು ಸೂರ್ಯೋದಯದ ನಡುವೆ
ದಟ್ಟ ಕತ್ತಲ ಮಹಾಪೂರ ಉಬ್ಬರಿಸಿದ್ದ
ಮರೆತು ಬಿಟ್ಟೆಯ ನೀನು ಇಷ್ಟು ಬೇಗ?

ನೋವು
ನಿನ್ನ ಗಾಯಗಳನ್ನು
ಪಡೆಯುವವರೆಗೂ
ನಿನ್ನ ನೋವುಗಳನ್ನು
ಪಡೆಯಲಾರೆ

ಸಂಕಲನದಲ್ಲಿರುವ ಇಂತಹ ಪುಟ್ಟ ಕವನಗಳು ಕೆಲವೇ ಕೆಲವು. ಇನ್ನುಳಿದ 35 ಕವನಗಳಲ್ಲಿ ದೀರ್ಘ ಕವನಗಳೂ ಇವೆ. ಪ್ರತಿಯೊಂದನ್ನು ಓದಿದಾಗಲೂ ಚಿಂತನೆಗೆ ಹಚ್ಚುತ್ತದೆ. ಇಲ್ಲಿನ ಕವನಗಳನ್ನು ಓದಿದಾಗೆಲ್ಲ ಹೊಸ ಅರ್ಥಗಳು ಹೊಳೆಯುತ್ತವೆ. ನಮಗೆ ಅರ್ಥವಾದದ್ದು ನಿಧಾನವಾಗಿ ನಮ್ಮೊಳಗೆ ಇಳಿಯುತ್ತದೆ. ಪ್ರತಿಭಾವಂತ ಕವಿಯೊಬ್ಬ ಓದುಗರೊಂದಿಗೆ ಸಂವಹನ ನಡೆಸುವ ಪರಿ ಇದೇ, ಅಲ್ಲವೇ?