ಒತ್ತಿನಣೆ ಮತ್ತು ಚಾಪ್ಲಿನ್‍ನ ಅಂಡು

ಒತ್ತಿನಣೆ ಮತ್ತು ಚಾಪ್ಲಿನ್‍ನ ಅಂಡು

ಬರಹ

ಒತ್ತಿನಣೆ ಮತ್ತು ಚಾಪ್ಲಿನ್‍ನ ಅಂಡು

ಕಡುಗೆಂಪು ಕುಂಕುಮವೇ ಬೆವರಲ್ಲಿ ಕಪ್ಪಾಗಿ ಹರಡಿಕೊಂಡಂತೆ ಉದ್ದೋವುದ್ದ ಮಲಗಿದ ಕರಿನೀರತೆರೆ
ಮುರದ ವಿಸ್ತಾರ: ಅದು ಭೂದೇವಿಯ ಹಣೆ - ಒತ್ತಿನಣೆ. ಪೂರ್ವದಲ್ಲಿ ಹಸಿರು ಹೆಪ್ಪುಗಟ್ಟಿ ಕಪ್ಪಾದಂತೆ ನೀಲಾಕಾಶಕ್ಕೆ
ಜೋತುಬಿದ್ದ ಸಹ್ಯಾದ್ರಿಯಲ್ಲಿ ಕೋಸಳ್ಳಿ, ಚಕತ್ಕಲ್ ಇತ್ಯಾದಿ ಜಲಪಾತಗಳ ಬಿಳಿಬಿಳಲುಗಳು: ಅದು ನಡುವಯಸ್ಸಿನ
ಭೂದೇವಿಯ ಮುಡಿ. ಪಶ್ಚಿಮದ ಪಾತಾಳದಲ್ಲಿ ಕಾಲ್ತೊಳೆಯುತ್ತಾ ಆಗಸದ ಬೋಗುಣಿಗೆ ದಿಗಂತದಲ್ಲಿ ಅಪ್ಪಳಿಸುವ
ಸಮುದ್ರ; ದಿಗಂತದಲ್ಲಿ ಸಮುದ್ರದಿಂದ ನೀರೆತ್ತಿ ‘ಧೋ’ ಎಂದು ಹುಯ್ಯುವ ಮುಸಲಧಾರೆ - ಇದು ಕರೆನಾಡಿನಲ್ಲಿ
ಭೂದೇವಿಯ ಜಳಕದ ಮನೆ - ಒತ್ತಿನಣೆ.

ರುದ್ರರಮಣೀಯ ಸೌಂದರ್ಯವೇ ಕಾರಣವಾಗಿ ಕರಾವಳಿಯ ಜನಪದ ಸಾಹಿತ್ಯದಲ್ಲಿ ಒತ್ತಿನಣೆ
ಉಲ್ಲೇಖಗೊಂಡಷ್ಟು ಇನ್ಯಾವ ಸ್ಥಳವೂ ಉಲ್ಲೇಖಗೊಂಡಿಲ್ಲ. ತೆಂಕತುಳುನಾಡಿನ ದೈವಗಳೆಲ್ಲ ಭಾಗಮಂಡಲ,
ಸುಬ್ರಹ್ಮಣ್ಯ, ಶಿರಾಡಿ, ಶಿಶಿಲ, ಚಾರ್ಮಾಡಿ, ನಾವೂರು ಮುಂತಾದ ಘಾಟಿಗಳನ್ನಿಳಿದು ಕರೆನಾಡಿಗೆ ಬಂದರೆ
ಬಡಗಕುಂದನಾಡಿನ ದೈವಗಳೆಲ್ಲ ಒತ್ತಿನಣೆಯ ಮೂಲಕ ಇಳಿದವರು, ಅಲ್ಲಿ ನೆಲೆಯಾದವರು ಅಥವಾ ಅಲ್ಲಿಗೆ
ಭೇಟಿಕೊಟ್ಟೇ ಮುಂದುವರಿದವರು. ಪಾಣಾರಾಟದ ಬಹುತೇಕ ಎಲ್ಲ ಕಥಾನಕಗಳಲ್ಲಿ ಒತ್ತಿನಣೆ ಪ್ರಸ್ತಾಪಗೊಂಡಿದೆ.
ಭತ್ತ ತೊಳುವ ಹಾಡುಗಳಲ್ಲಿ, ಲೇಗಿಣಿಹಾಡುಗಳಲ್ಲಿ, ಮದುವೆಯ ಹಾಡುಗಳಲ್ಲಿ, ಬಲೆಯೆಳೆಯುವ ಹಾಡುಗಳಲ್ಲಿ
ಒತ್ತಿನಣೆಯನ್ನು ಕುಂದನಾಡಿನ ಜನರು ಮತ್ತೆಮತ್ತೆ ಏರುತ್ತಾರೆ. ಅಷ್ಟಾಗಿ, ೧೫-೨೦ ಚದರ ಕಿಲೋಮೀಟರ್ ವಿಸ್ತಾರದ
ಒತ್ತಿನಣೆಯ ಮೇಲೆ ಯಾವ ದೈವಕ್ಕೂ ಗುಡಿಯಿಲ್ಲ. ಅಂಚುಗಳಲ್ಲಿರುವ ಕೊರಕಲು-ಬಿರುಕುಗಳಲ್ಲಿ, ಕಣಿವೆಗಳಲ್ಲಿ,
ಕಣಿವೆಗಳ ಕೊನೆಯಲ್ಲಿ ಮತ್ತು ಅವುಗಳಿಗೂ ಆಚೆ ಇರುವ ಪಡುವರಿ, ದೊಂಬೆ, ಸಳ್ಳೆಕುಳಿ, ನೀರ್ಗದ್ದೆ, ತೊಂಡ್ಲೆ,
ನಾಗರ್ಮಕ್ಕಿ, ಕಡ್ಕೆ, ಕೊರಾಡಿ, ಮದ್ದೋಡಿ, ಕಲ್ಲೆಣ್ಕಿ, ಶಾಮನಕೊಡ್ಲು, ಹೇಣ್ಬೇರ್* ಇತ್ಯಾದಿ ಚಿಕ್ಕಪುಟ್ಟ ಹಳ್ಳಿಕೇರಿಗಳಲ್ಲಿ
ನಾಯಿಸಂಪಿಗೆ, ಕಮ್ಟೆ ಇತ್ಯಾದಿ ಮರಗಳಡಿಯಲ್ಲಿ ಚೇಣು ತಾಗದ ತುಂಡುಕಲ್ಲುಗಳಲ್ಲೇ ನೆಲೆಯಾದವರು ಈ ದೈವಗಳು. ಅವರೆಲ್ಲ ರಾತ್ರಿ ಸಂಚಾರಹೊರಡುವುದು ಒತ್ತಿನಣೆಯ ವಿಸ್ಮಯ ವಿಸ್ತಾರದಲ್ಲಿ. ಒಬ್ಬರೇ ಇಬ್ಬರೇ?! ಜಟ್ಟಿಗ, ಕಾಡಿಸೋಮ, ಮಾಸ್ತಿಯಮ್ಮ, ಮಾರಿ, ನಾಗ, ರಕ್ತೇಶ್ವರಿ, ಹಾಯ್ಗುಳಿ, ಬೀರ, ಚಂಡಿ, ಯಕ್ಷಿ, ಬಂಟಪಂಜುರ್ಲಿ...

ಕರೆನಾಡಿನಲ್ಲಿ ಸರಿಸುಮಾರು ೬೦ ಡಿಗ್ರಿ ಸಮತ್ರಿಕೋನದಲ್ಲಿ ಮೂರು ಸೋಮೇಶ್ವರಗಳಿವೆ. ಒತ್ತಿನಣೆ
ಸೋಮೇಶ್ವರ ಮತ್ತು ಉಳಹಾಳ (ಉಳ್ಳಾಲ) ಸೋಮೇಶ್ವರಗಳು ಸಮುದ್ರದೊಳಕ್ಕೆ ಚಾಚಿಕೊಂಡ ಕೋಡ್ಗಲ್ಲುಗಳ ಮೇಲೆ ನಿಂತಿದ್ದರೆ ನಾಡ್ಪಾಲು ಸೋಮೇಶ್ವರ ಸೀತಾನದಿಯ ಒಂದು ಕವಲಾದ ಒನಕೆಅಬ್ಬಿಯ ಕೋಡ್ಗಲ್ಲುಗಳ ಕೆಳಗೆ ನಿಂತಿದೆ. (ಅವು ಮೂರೂ ವೈದಿಕ ಪರಂಪರೆಗೆ ಸೇರಿಹೋದ ಸ್ಥಳೀಯ ದೈವಸಾನಗಳಾಗಿದ್ದಿರಬೇಕು.*) ದೈವಗಳೇನು?! ನಾಥಪಂಥದ ಜೋಗಿಗಳು ಹೊಸಂಗಡಿ, ಕದಿರೆಗಳಿಗಾಗಿ ಇಳಿದುಬರುತ್ತಿದ್ದ ದಾರಿಯೂ ಒತ್ತಿನಣೆಯೇ ಆಗಿತ್ತು. ಮಾಸ್ತಿಯಮ್ಮನ ಗುಡಿಯ ಬಳಿಯ ಚಿಲುಮೆಯ ಆಸುಪಾಸಿನಲ್ಲಿ ಜೋಗಿಗಳ ಆಶ್ರಮಧರ್ಮಛತ್ರಗಳ ಅವಶೇಷಗಳು ಇನ್ನೂ ಇವೆ.*

ಹಾಗೆ ‘ಹಸ್ತಕ್ಷೇಪ’ವಿಲ್ಲದೆ ಕಂಡುಕೊಂಡ ದೈವದ ‘ಪ್ರತಿಮೆ’ ಅಥವಾ ‘ಬಿಂಬ’ ರೂಪಪಡೆಯುವುದು ಭಕ್ತನ
ಮೇಲೆ. ದೈವದ ‘ರೂಪ’ವನ್ನು ಕಟ್ಟಿಕೊಳ್ಳುವುದು, ಮೆತ್ತಿಕೊಳ್ಳುವುದು, ಆವಾಹಿಸಿಕೊಳ್ಳುವುದು ತನ್ನ ಮೈಮೇಲೆಯೇ! ನಮ್ಮ ಜನಪದರು ಪರಿಭಾವಿಸಿದ ಆ ದೈವತ್ವದ ಕಲ್ಪನೆ ಅದು ಹೇಗೆ ಬರಬೇಕು ನಮ್ಮ ಒಸಿಮಾಂಡಿಯಸ್‍ಗಳಿಗೆ!? ಕಲ್ಲನ್ನು ಕಡಿದು ಕೆತ್ತಿ ದೇವಾಲಯಗಳನ್ನು ನಿರ್ಮಿಸಿದ್ದು ದೈವತ್ವವನ್ನು ಕಂಡುಕೊಳ್ಳುವ ಬುದ್ಧಿಭಾವಗಳಲ್ಲ. ಬದಲಾಗಿ, ನಮ್ಮ ಅಹಂಕಾರದ ತೃಪ್ತಿಯಲ್ಲಿ ದೈವತ್ವವನ್ನು ಕಟ್ಟಿಕೊಳ್ಳುವ ಲೋಲುಪತೆ. ಪಡುವರಿಯ ರುದ್ರರಮಣೀಯ ಬಂಡೆಯ ಮೇಲೆ ಅಕರಾಳ-ವಿಕರಾಳ ಕಟ್ಟಡದೊಳಗೆ ಸೋಮೇಶ್ವರ ಬಂಧಿ. ಆಗಾಗ ಸಂತರ್ಪಣೆ. ಸುತ್ತಲ ಜಾಗ, ಕೆಳಗಿನ ಕಿನಾರೆಯೆಲ್ಲಾ ದುರ್ಗಂಧಮಯ ಗೊಚ್ಚೆಗುಂಡಿ. ಚೇಣಿನಿಂದ ಮೈಲಿಗೆಯಾಗದ ಬಂಡೆತುಂಡೊಂದು ದೊಂಬೆಯ ಹೆಬ್ಬಾಗಿಲಲ್ಲಿ ಜಟ್ಟಿಗನ ನೆಲೆಯಾಗಿತ್ತು. ಈಗ ಕಟ್ಟಡವಾಗಿ ‘ತ್ರಿಶೂಲ ಜಟ್ಟಿಗೇಶ್ವರ’ನಾಗಿದ್ದಾನೆ. ಉಲ್ಕೆಗಳು ಆಕಾಶದಲ್ಲಿ ಬೆಳಕಿನ ಹಾದಿಯನ್ನು ಕೊರೆಯುವುದನ್ನು ನೋಡುತ್ತಾ, ನಕ್ಷತ್ರಗಳನ್ನು ಲೆಕ್ಕಹಾಕುತ್ತಾ ನಾವು ಅಂಗಾತಮಲಗುತ್ತಿದ್ದ ಜಾಗದಲ್ಲಿ ಈಗ ರಾಘವೇಂದ್ರಸ್ವಾಮಿಯ ಗುಡಿಯೆಂಬ ಗೋಡೌನು; ಟ್ಯಾಂಟ್ರಕ್ಕಿ-ಜುಟ್ಟಕ್ಕಿ-ಎಕ್ಡಕ್ಕಿ-ನತ್ತಿಂಗ-ನವಿಲುಗಳ ಜಾಡರಸಿ ಅಲೆಯುತ್ತಿದ್ದಲ್ಲಿ ಗಣಿಧೂಳು ತುಂಬಿದ ಲಾರಿಗಳು, ವೇಬ್ರಿಡ್ಜ್‍ಗಳು; ಒಂದು ಮೂಲೆಯಲ್ಲಿ ಅರಣ್ಯ ಇಲಾಖೆಯ ವೀಕ್ಷಣಾಗೋಪುರ, ‘ನಿತ್ಯಹರಿದ್ವರ್ಣ’ ಅಕೇಸಿಯಾವನ ಮತ್ತು ಇನ್ನೊಂದು ಮೂಲೆಯಲ್ಲಿ
ನೇಸರಧಾಮ ಶಿಬಿರ; ಅಡಿಯಿಂದ ಗುಡುಗುಡಿಸಿ ಮೊಳಗುವ ರೈಲ್ವೆ ಸುರಂಗ. ಬಡಗನಾಡಿನ ದೈವಗಳೆಲ್ಲ ಸಂಚಾರಹೊರಡುತ್ತಿದ್ದ ಕಗ್ಗತ್ತಲ ವಿಸ್ತಾರ ನೀರವದಲ್ಲಿ ಅದಿರುಲಾರಿಗಳ ಅಬ್ಬರ, ಜೋಪಡಿ ಹೋಟೆಲ್-ಗರಾಜುಗಳ ಗಲಾಟೆ, ರಾಘವೇಂದ್ರಸ್ವಾಮಿಯ ಗುಡಿಯ ನಿರಂತರ ಭಜನೆ, ಗಂಟಾನಾದ; ಗುಡಿಯ ಪೂರ್ವದಲ್ಲಿ ಒಂದಾನೊಂದು ಕಾಲದ ಮ್ಯಾಂಗನೀಸ್(?) ಗಣಿಗಾರಿಕೆಯ ಅವಶೇಷಗಳು,* ಪಶ್ಚಿಮದಲ್ಲಿ ವರ್ತಮಾನದ ಗಣಿಗಾರಿಕೆಯ ಕೊರೆತ-ಮೊರೆತ. ಬಾಕಿಯಿದ್ದದ್ದು ಎಂಬತ್ತು ಅಡಿ ಎತ್ತರದ ಕಾಂಕ್ರೀಟ್ ಚಾಪ್ಲಿನ್.

ಇದು ಈ ಶತಮಾನದ ಅತ್ಯಂತ ದೊಡ್ಡ ಆಭಾಸವಾಗಬಲ್ಲದು. ಶಿವರಾಮ ಕಾರಂತ, ಜಿಡ್ಡು ಕೃಷ್ಣಮೂರ್ತಿ, ಬರ್ಟ್ರಾಂಡ್ ರಸೆಲ್, ಖಲೀಲ್ ಗಿಬ್ರಾನ್, ಚಾರ್ಲಿ ಚಾಪ್ಲಿನ್ ಮೊದಲಾದವರು ಕಳೆದ ಶತಮಾನ ಕಂಡ ಮಹಾನ್ ಮೂರ್ತಿಭಂಜಕರು. (ಒಂದು ಹನಿ ರಕ್ತ, ಒಂದು ಹನಿ ಕಣ್ಣೀರು ಹರಿಸಲಿಲ್ಲ.) ಅಹಂಕಾರವೇ ಮೂರ್ತಿವೆತ್ತ ಎಂತೆಂತಹ ಸಾಮ್ರಾಜ್ಯಗಳಿಗೆ ತನ್ನ ಅಂಡನ್ನು ‘ಢೀ’ಕೊಟ್ಟು ಠುಸ್ ಎನ್ನಿಸಿದ ವಿಕಟ ವಿನೋದಿ ಚಾಪ್ಲಿನ್. ಸಾಮ್ರಾಜ್ಯಶಾಹಿತ್ವ, ಮತಪಂಥಗಳು, ತಂತ್ರಜ್ಞಾನ, ಸಂಪತ್ತು, ಜ್ಞಾನ ಇತ್ಯಾದಿ ಕಟ್ಟಿದ ಅಹಂಕಾರದ ಮೂರ್ತಿಗಳನ್ನೆಲ್ಲ ಪುಡಿಗಟ್ಟಿ ‘ಲೊಳಲೊಟ್ಟೆ’ ಎಂದು ಕಿಚಾಯಿಸಿದ ದಾರ್ಶನಿಕ ಆತ. ಮೊಲೆಯ ಮೇಲಿರ್ಪ ಯೋಗಿ, ಅಲೆಮಾರಿ ಆತ. ಅಲೆಮಾರಿ! ಗೊತ್ತಿದ್ದರೆ ಬಡಗನಾಡಿನ ದೈವಗಳೊಂದಿಗೆ ಒತ್ತಿನಣೆಯಲ್ಲಿ ಅಲೆದಾಡುತ್ತಿದ್ದನೇನೋ?! ಸಿಮೆಂಟುಜಲ್ಲಿಗಳ ತನ್ನ ಬೃಹತ್ ಮೂರ್ತಿಯನ್ನು ತಿಕಕೊಟ್ಟು ದೂಡಿ ಪುಡಿಮಾಡುತ್ತಿದ್ದನೇನೋ?! ಇದಕ್ಕಿಂತ ದೊಡ್ಡ ಚಾಪ್ಲಿನ್ ಉಂಟೇ!? ಆತನಿಗೇ ಒಂದು ಸಿಮೆಂಟಿನ ದೂಪೆ ಕಟ್ಟಲು ಹೊರಟಿದ್ದಾರೆ ಸಿನೆಮಾ ಮೇಸ್ತ್ರಿಗಳು!

ಚಾಪ್ಲಿನ್ನೇ ಇಷ್ಟು ಅರ್ಥವಾಗದ ನಮ್ಮ ಸಿನೆಮಾ ಮಂದಿಗೆ ಇನ್ನು ನಮ್ಮ ಜನಪದರ ಅನುಪಮ ಬುದ್ಧಿಭಾವಗಳ
ಸಂವೇದನಾಶೀಲತೆ ಕಂಡುಕೊಂಡ ‘ಪ್ರತಿಮೆ’ ಹೇಗೆ ಅರ್ಥವಾಗಬೇಕು?! ಈ ಸಿಮೆಂಟು, ಪ್ಲಾಸ್ಟರು ಮೇಸ್ತ್ರಿಗಳನ್ನು ನೋಡುವಾಗ ಕನ್ನಡ ಸಿನೆಮಾದ ಅಭಿವ್ಯಕ್ತಿಯಲ್ಲಿ ‘ಪ್ರತಿಮಾಶಕ್ತಿ’ ಕಳೆದುಹೋದ ದುರಂತ ಕಾಣಿಸುತ್ತದೆ. (ಎಂದಾದರೂ ಇತ್ತೆ?) (ಸರಿಸುಮಾರು ಸಾವಿರಮೀಟರ್ ಎತ್ತರದ, ಸಾವಿರಾರು ಮೀಟರ್ ಸುತ್ತಳತೆಯ ಗಡಾಯಿಕಲ್ಲು ನಡಗ್ರಾಮದ ಜೈನಮನೆತನವೊಂದರ ಮನೆದೇವರು! ಅದನ್ನೇ ಕಡಿದು, ತರಿದು, ಸ್ಫೋಟಿಸಿ ಕೋಟೆಕೊತ್ತಲ ಕಟ್ಟಿ, ಫಿರಂಗಿ ಏರಿಸಿ ಹಾರಿಸಿದವರು ಯಾರೂ ಉಳಿಯಲಿಲ್ಲ. ಅವರ್‍ಯಾರೆಂದು ಯಾರಿಗೂ ತಿಳಿದಿಲ್ಲ! ಆದರೆ ಗಡಾಯಿಕಲ್ಲನ್ನೇ ಮನೆದೇವರನ್ನಾಗಿ ಪೂಜಿಸುವ ಜೈನಮನೆತನ ಇನ್ನೂ ಉಳಿದಿದೆ; ಗಡಾಯಿಕರಿಯಮಲ್ಲೆ ದೈವವನ್ನು ಗಾನ-ಶಬ್ದ-ಬಣ್ಣಗಳಲ್ಲಿ ಮೈಮೇಲೆ ಆವಾಹಿಸಿಕೊಂಡು ನರ್ತಿಸುವ ಶ್ರೀ ಕುಂಡ ಪರ್‍ಅವ ಮತ್ತು ಶ್ರೀಮತಿ ಅಪ್ಪಿಯವರು
ನಮ್ಮೊಂದಿಗಿದ್ದಾರೆ! ಕೋತಗಿರಿಯ ಆ ಇಡಿಗೆ ಇಡೀ ಕೋಡ್ಗಲ್ಲೇ ರಂಗನಾಥ!)

‘ಭಜರಂಗಿಗಳಿಗೆ ಬಯ್ಯಲು ಅವಕಾಶ ಸಿಕ್ಕಿತಲ್ಲಾ’ ಎಂಬ ಏಕೈಕ ಕಾರಣಕ್ಕೆ ಹಿರಿಹಿರಿಹಿಗ್ಗುತ್ತಾ ಕನ್ನಡ ಬುದ್ಧಿಜೀವಿಗಳು ಈ ಹೊಯ್ಗೆಸಿಮೆಂಟ್ ಮಿಕ್ಸರ್‌ಗಳ* ಹಿಂದೆ ಬಿದ್ದಿದ್ದಾರೆ. ವೇದಿಕೆಗಳ ಮೇಲಿಂದ "ಹೂಹಣ್ಣು ಚಂದಿರಾ/ಬಯಲುಬೆಟ್ಟ ಸಾಗರಾ/ಚಿಕ್ಕಚೊಕ್ಕ ಪರಿಸರಾ..." ಎಂದು ಹಾಡುವ ಕನ್ನಡದ ಕವಿ-ವಿಚಾರವಾದಿ-ನಿರ್ದೇಶಕರೆಲ್ಲ ಒತ್ತಿನಣೆಯನ್ನು ತಮ್ಮ ಮನೆ ಮುಂದಿನ ಮಲಗದ್ದೆ ಎಂಬಂತೆ ‘ಚಾಪ್ಲಿನ್ ಕಟ್ಟಿಕೊಳ್ಳಿ’, ‘ಮೋರಿ ಕಟ್ಟಿಕೊಳ್ಳಿ’ ಎಂದು ಕರೆಕೊಡುತ್ತಿದ್ದಾರೆ. ಒಂದು ಮಳೆಗೆ ಬಣ್ಣ ಚರಂಡಿ ಪಾಲು; ಎರಡು ಮಳೆಗೆ ಗಾರೆ
ಕಿತ್ತು ಪುಡಿಪುಡಿ ಬೀಭತ್ಸ; ಮೂರು ಮಳೆಗೆ ಪ್ಲಾಸ್ಟರ್ ಚಾಪ್ಲಿನ್ ಮಣ್ಣುಪಾಲು. ಒತ್ತಿನಣೆಯ ಸೌಂದರ್ಯಕ್ಕೆ ಏನು ಕಡಿಮೆಯಾಗಿದೆ ಎಂದು ಈ ಕಾಂಕ್ರೀಟ್ ರದ್ದಿಪುಡಿಯನ್ನು ತಂದು ಸುರಿಯುತ್ತೀರಿ?

****** ****** *******

ಸ್ಪಷ್ಟೀಕರಣ:
೧. ಹೇಣ್ಬೇರು ಒಂದು ಅಸಾಧ್ಯ ಸಾಹಸದ ಕತೆ. ಒತ್ತಿನಣೆಯ ನೆತ್ತಿಯನ್ನೇ ಕೆತ್ತಿ ಕೃಷಿಭೂಮಿಯನ್ನಾಗಿ ಪರಿವರ್ತಿಸಿಕೊಂಡ ಹುಚ್ಚುಸಾಹಸ. ಈಗಿನ ಗಣಿಗಾರಿಕೆಯಂತೆಯೇ ಇರಬಹುದು! ಉಳಿದೆಲ್ಲ ಗ್ರಾಮಗಳು ಒತ್ತಿನಣೆಯ ಕಣಿವೆಗಳಲ್ಲಿ ಮತ್ತು ಅಂಚುಗಳಲ್ಲಿದ್ದರೆ ಹೇಣ್ಬೇರು ಒತ್ತಿನಣೆಯ ಹಣೆಯ ಮೇಲೆಯೇ ಇದೆ.

೨. ಸೋಮೇಶ್ವರ ದೇವಾಲಯದ ಉತ್ತರದ ಬಾಗಿಲಾಚೆ ಕೆಳಗೆ ಕಲ್ಲಿನ ಬಿರುಕಿನಿಂದ ಜಿನುಗಿ ನೇರ ಸಮುದ್ರಕ್ಕೆ ನೀರು ಹಾರುವಲ್ಲಿ ಇರುವವ ನಾಗ. ಸೋಮೇಶ್ವರನ ನೆತ್ತಿಯ ಮೇಲಿರುವವರು ಹಾಯ್ಗುಳಿ, ಯಕ್ಷಿ, ಬೊಬ್ಬರ್ಯ, ಕಲ್ಕುಟ್ಕ (ಕಲ್ಕುಡ) ಮುಂತಾದವರು. ಸೋಮೇಶ್ವರನ ಎದುರಿಗೆ ಕ್ಷೇತ್ರಪಾಲ. ಸೋಮೇಶ್ವರನೂ ಲಿಂಗವಲ್ಲ. ಕ್ಷೇತ್ರಪಾಲ, ಹಾಯ್ಗುಳಿ ಮುಂತಾದವರಿಗೆ ಇರುವಂತದೇ ಚೇಣು ತಾಕದ ಕಲ್ಲು. ಬೈಂದೂರಿನ ಸುತ್ತಮುತ್ತ ಕನಿಷ್ಠ ಇಪ್ಪತ್ತು ಸೋಮನಮನೆ(ಗುಡಿ)ಗಳಿವೆ. ಅಲ್ಲಿಂದ ನೇರ ಬಡಗುದಿಕ್ಕಿನಲ್ಲಿ ಒಂದು ಕಿಲೋಮೀಟರ್ ಸಾಗಿದರೆ ಕಾಡಿಕಾಂಬಾ
ಅಥವಾ ಕಾಡಿಸ್ವಾಮಿಯಮ್ಮ ಅಥವಾ ಕಾಡಿಸೋಮನಮನೆ. ಶಾಮನಕೊಡ್ಲಿನಲ್ಲಿ ಜಟ್ಟಿಗನ ಜತೆಯಲ್ಲಿ ನಿಂತಿರುವವನು ಸೋಮ.

೩. ಒತ್ತಿನಣೆಯನ್ನು ಬಡಗುದಿಕ್ಕಿನಲ್ಲಿ ಇಳಿಯುವಾಗ ಇರುವುದು ನೀರ್ಗದ್ದೆ ಚಿಲುಮೆ. ಆ ಚಿಲುಮೆ ಗುಪ್ತಗಾಮಿನಿಯಾಗಿ ಹರಿದು ದಕ್ಷಿಣದ ಮಾವಿನಗುಂಡಿ ಅಂದರೆ ಬೈಂದೂರು ಮಾಸ್ತಿಯಮ್ಮನಗುಡಿಯ ಬಳಿಯ ಚಿಲುಮೆಯಲ್ಲಿ ತುಂಬುತ್ತದೆ ಎಂಬ ಒಂದು ಅಭಿಪ್ರಾಯವಿದೆ. ಆದರೆ ಅದು ನಿಜವಲ್ಲ. ನೀರ್ಗದ್ದೆ ಚಿಲುಮೆ ಶಿರೂರು ಬಯಲಿಗಿಳಿಯುತ್ತದೆ. ನೀರ್ಗದ್ದೆ ಚಿಲುಮೆಯ ಬಳಿಯಿರುವ ಅವಶೇಷಗಳು ಪುರಾತನ ಕೂಡಾ ಅಲ್ಲ. ಕಳೆದ ಶತಮಾನದ ಆದಿಯಲ್ಲಿ ಕೇರಳಮೂಲದ ಓರ್ವ ಸನ್ಯಾಸಿ ಅದನ್ನು ಸ್ಥಾಪಿಸಿದ್ದ. ನಾಥಪಂಥದ ಜೋಗಿಗಳು ಅಲ್ಲಿ ತಂಗುತ್ತಿದ್ದುಂಟು. ಈಗ ಅಲ್ಲಿ ನೀರಿಗಾಗಿ ತಂಗುವುದು ಅದಿರುಲಾರಿಗಳು ಮಾತ್ರ.

೪. ಈಗ ಪೂರ್ವ-ಪಶ್ಚಿಮ ಭೇದವಿಲ್ಲದೆ ಎರಡೂ ಕಡೆಗಳಲ್ಲಿ ಬಾಕ್ಸೈಟ್‍ಗಾಗಿ ಮುರಮಣ್ಣುಕಲ್ಲುಗಳನ್ನು ಅಗೆದಗೆದು ಲಾರಿಗಳಿಗೆ ತುಂಬಿಸಿ ಬೆಳಗಾವಿಗೆ ಕಳುಹಿಸುತ್ತಿದ್ದಾರೆ. ಮೊಲಮುಂಗುಸಿನರಿಗಳು ಹಗಲುಹೊತ್ತಿನಲ್ಲೂ ಓಡಾಡುತ್ತಿರುವಲ್ಲಿ ತಂಬಿಗೆ ಹಿಡಿದ ಕೂಲಿಕಾರರು, ಅವರ ಸಂಸಾರದವರು, ಲಾರಿಚಾಲಕಕ್ಲೀನರುಗಳು ಓಡಾಡುತ್ತಿದ್ದಾರೆ.

೫. ಹೊಯ್ಗೆಸಿಮೆಂಟ್ ಅಥವಾ ಇನ್ಯಾವುದೇ ಪ್ಲಾಸ್ಟರ್‌ನ ಮೂರ್ತಿಯಲ್ಲವಂತೆ. ಅದು ಕೃತಕ ಪೈಬರ್‌ನದಂತೆ. ಒಂದೇ ಗಾಳಿಗೆ ಮಗುಚಿ ರಸ್ತೆಯ ಮೇಲೆ ಬಿದ್ದೀತು.

****** ****** ****** ****** ******