ಒತ್ತುವರಿ (ಒತ್ತು-worry)
ಇತ್ತೀಚೆಗೆ ರಾಜಾಕಾಲುವೆ ಒತ್ತುವರಿ ತೆರವಿನ ಸುದ್ಧಿ ಓದಿ ಮೊದಲಿಗೆ ಬಹಳ ಸಂತೋಷಪಟ್ಟೆ- ಅಕ್ರಮ ಒತ್ತುವರಿದಾರರಿಗೆ ತಕ್ಕ ಶಾಸ್ತಿ ಆಯ್ತಲ್ಲ ಕೊನೆಗೂ ಅಂತ. ಆದರೆ, ಈ ಒತ್ತುವರಿ ತೆರವಿನ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯುತ್ತಿದ್ದಂತೆ, ನನ್ನ ಸಂತೋಷ ದುಃಖದೆಡೆಗೆ ತೆರಳಿತು. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾಗ್ಬೇಕೇ? ಪ್ರಭಾವೀ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅವರೊಂದಿಗೆ ಶಾಮೀಲಾದ ಸರ್ಕಾರೀ ಅಧಿಕಾರಿಗಳ ಧನದಾಹಕ್ಕೆ, ಈ ಮುಗ್ಧ ಜನರು ಬಲಿಯಾಗುವುದನ್ನು ಯಾರು ತಾನೇ ಸಮರ್ಥಿಸಿಯಾರು?
ಬೆಂಗಳೂರು ಮಹಾನಗರ ಪಾಲಿಕೆಯಿಂದ ಸಕ್ರಮವಾಗಿ ಖಾತೆಗಳನ್ನು ಹೊಂದಿದ್ದು, ಪ್ರತಿ ವರ್ಷ ತೆರಿಗೆ ಪಾವತಿಸಿದ್ದ, ಈ ಜನರ ಬದುಕನ್ನು ಮೂರಾಬಟ್ಟೆ ಮಾಡುವ ಬದಲು, ಇವರನ್ನು ವಂಚಿಸಿದ ಅಧಿಕಾರಿಗಳು / ಬಿಲ್ಡರ್‍ಗಳನ್ನು ಶಿಕ್ಷಿಸಬೇಕಾದ್ದು ನ್ಯಾಯ. ಆದರೆ, ದುರದೃಷ್ಟವಶಾತ್ ಭಾರತ ದೇಶದಲ್ಲಿ `ನ್ಯಾಯ' ಬಿಕರಿಗಿದೆ ! ಹಣ, ಅಧಿಕಾರವಿದ್ದಾತ ನ್ಯಾಯವನ್ನು ಕೊಳ್ಳಬಲ್ಲ. ಅದಕ್ಕೇ ಹೇಳಿದ್ದು - ನ್ಯಾಯ ಜೇಡರಬಲೆ ಇದ್ದಂತೆ- ಅದರಲ್ಲಿ ಸಣ್ಣ ಸಣ್ಣ ಕೀಟಗಳು ಬಂಧಿಯಾದಾವೇ ಹೊರತು ದೊಡ್ಡ ಜೀವಿಗಳಲ್ಲ! ಇನ್ನು ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡದಿರುವುದೇ ಲೇಸು. ಜನಗಳ ಮೇಲೆ ಕಾರು ಹಾಯಿಸಿದ ಸಲ್ಮಾನ್‍ಖಾನ್ ಪ್ರಕರಣ ತೆಗೆದುಕೊಳ್ಳಿ – 15 ವರ್ಷ ಎಳೆದಾಟದ ನಂತರ, ಹೈಕೋರ್ಟ್ ಆತನನ್ನು ನಿರ್ದೋಷಿ ಅನ್ನುತ್ತದೆ! ನ್ಯಾಯಾಲಯದಲ್ಲಿ ಪ್ರಕರಣಗಳು ಕೊಳೆ ಬೀಳುವುದರಿಂದ ಬಡ-ಜನಸಾಮಾನ್ಯರಿಗೆ ನ್ಯಾಯವೆಂಬುದು ಗಗನ ಕುಸುಮ. ಈ ಭಂಡ ಧೈರ್ಯವಿರುವುದರಿಂದಲೇ ಈ ಅಧಿಕಾರಿಗಳು / ಭೂ ಮಾಫಿಯಾ ಒತ್ತುವರಿ ಮಾಡಿಯೇ `ವಂಚನೆ'ಯನ್ನು ಬೇರೋರ್ವರ ತಲೆಗೆ ಕಟ್ಟಿ, ಹಣ ಮಾಡಿಕೊಂಡು ನೆಮ್ಮದಿಯಿಂದ ಇರುವುದು. ಈ ಮುಗ್ಧ ಜನರಿಗೆ ಈಗ ಹಣವೂ ಇಲ್ಲ – ತಲೆಯ ಮೇಲೆ ಸೂರೂ ಇಲ್ಲ ! ಇದು ಇಂದಿನ ದಾರುಣ ಪರಿಸ್ಥಿತಿ !
ಆ ಜಾಗದಲ್ಲಿ ರಾಜಾ ಕಾಲುವೆ ಇತ್ತೆಂಬ `ಮಾಹಿತಿ' ಇಂದಿನದಲ್ಲ. ಒತ್ತುವರಿಯಾಗುತ್ತಿದ್ದಾಗಲೂ ಇದ್ದ ಮಾಹಿತಿ. ಆಗ ಆ ಮಾಹಿತಿಯನ್ನು ಅನುಕೂಲಕ್ಕಾಗಿ ಬದಿಸರಿಸಿ, ಜನಗಳಿಗೆ ಖಾತಾ ಕೊಟ್ಟು, ತನ್ಮೂಲಕ ನೀರು, ವಿದ್ಯುತ್ ಮುಂತಾದ ಸಕಲ ಸವಲತ್ತುಗಳನ್ನು ಒದಗಿಸಿ, ತೆರಿಗೆ ಸಂಗ್ರಹಣೆ ಮಾಡುತ್ತಿದ್ದು, ಈಗ ಏಕಾಏಕೀ ಇದು ಅಕ್ರಮ ಮನೆ ಎನ್ನುವುದು ಎಷ್ಟು ಸರಿ? ಪರಿಸ್ಥಿತಿ ಇಂತಿದ್ದಾಗ, ಒತ್ತುವರಿ ತೆರವು ಹೇಗೆ ಕಾನೂನುಬದ್ಧವಾಗುತ್ತದೆ? ಇದು, ಮನೆಯಲ್ಲಿ ಕಳ್ಳತನವಾದಾಗ, ಕಳ್ಳನನ್ನು ಶಿಕ್ಷಿಸುವುದನ್ನು ಬಿಟ್ಟು, ಮನೆಯವನನ್ನೇ ಶಿಕ್ಷಿಸಿದಂತೆ ಇದೆ ! ಇದು ತಪ್ಪು ಅಂತಲೂ ನಮ್ಮ ಸರ್ಕಾರಕ್ಕೆ ಅನ್ನಿಸುತ್ತಿಲ್ಲವಲ್ಲಾ ಅದೇ ನನ್ನ ವ್ಯಥೆ. ಸರ್ಕಾರ ಅಷ್ಟು ಜಡ್ಡುಗಟ್ಟಿ ಹೋಗಿದೆಯಾ ಅಥವಾ `The king can do no wrong' ಅನ್ನುವ ಮನೋಭಾವವೋ? ಇದರಿಂದ ಬೆಂಗಳೂರಿನ ಎಲ್ಲ ನಿವಾಸಿಗಳಿಗೂ ಈಗ ನಡುಕ ಹುಟ್ಟಿದೆ – ಯಾವಾಗ ಯಾವ ಅಧಿಕಾರಿ ಯಾವುದೋ ಅಂದಕಾಲತ್ತಿಲ್ ನಕ್ಷೆ ಹಿಡಿದುಕೊಂಡು ಬಂದು "ಇಲ್ಲಿ ರಾಜಾ ಕಾಲುವೆ ಇತ್ತು. ಆದ್ದರಿಂದ, ನಿಮ್ಮ ಮನೆ ಅಕ್ರಮ. ಈಗಿಂದೀಗ್ಲೇ ಕೆಡುವುತ್ತೇವೆ" ಅಂತ ಬರ್ತಾನೋ ಅಂತ!
ಪೇಪರ್‍ಗಳಲ್ಲಿ ಬಂದ ವರದಿಗಳ ಪ್ರಕಾರ, ಮನೆ ಕೆಡವಲು ಬಂದ ಅಧಿಕಾರಿ ವರ್ಗದವರು, ಅಲ್ಲಿಯ ನಿವಾಸಿಗಳು ತಮಗೆ ಈ ಬಗ್ಗೆ ನೋಟೀಸ್ ನೀಡಿಲ್ಲವೆಂದಾಗ, ಯಾವುದೋ ಕಾಯ್ದೆಗಳನ್ನುದ್ಧರಿಸಿ, ರಾಜಾಕಾಲುವೆ ಒತ್ತುವರಿ ತೆರವಿಗೆ ನೋಟೀಸ್ ಬೇಕಿಲ್ಲ ಎಂದಿದ್ದಾರಂತೆ ! ಹೀಗೆ ಅಮಾನವೀಯವಾಗಿ ಯೋಚಿಸುವವರನ್ನು ನಾವು ಮನುಷ್ಯರು ಎನ್ನಬೇಕೇ? ಯಾರಾದರೂ ಅವರ ಮನೆಯನ್ನು ಏಕಾಏಕೀ ಕೆಡವಿದ್ದಲ್ಲಿ ಮಾತ್ರ ಅವರಿಗೆ ಪರಿಸ್ಥಿತಿಯ ಅರಿವುಂಟಾಗುತ್ತಿತ್ತು ! ಅವರಿಗೆ ಅರ್ಥೈಸಲು ನಾವೂ ಅವರ ದಾರಿಗೇ ಇಳೀಬೇಕೇನೋ!
ಈಗ ಸರ್ಕಾರೀ ಯಂತ್ರದಿಂದ ತಪ್ಪಾಗಿದೆ – ರಾಜಾಕಾಲುವೆಯ ಒತ್ತುವರಿ ಜಾಗಗಳಲ್ಲಿ ಖಾತಾ ಕೊಟ್ಟು ಸಕ್ರಮಗೊಳಿಸಿದ್ದು. ಸಂತ್ರಸ್ತರಿಗೆ ತೊಂದರೆಯಾಗದಂತೆ ಈ ತಪ್ಪನ್ನು ತಿದ್ದಲು ಸಾಧ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು, ತನ್ನ ತಪ್ಪಿಗೆ ತನ್ನ ಪ್ರಜೆಗಳೇ ಅನುಭವಿಸುವಂತಾಗಬಾರದಲ್ವೇ! ಒತ್ತುವರಿ ಬಯಲಾದಾಗ, ಈ ನಿವಾಸಿಗಳಿಗೆ ನೋಟೀಸ್ ಕೊಟ್ಟು ಅವರಿಗೆ ಬೇರೆ ಕಡೆ ಬದಲೀ ವ್ಯವಸ್ಥೆ ಮಾಡಿ, `ಪರಿಹಾರ' ನೀಡಬೇಕಾದ್ದು ಸರ್ಕಾರದ ಕರ್ತವ್ಯ. ಇದು, ಸರ್ಕಾರದ ತಪ್ಪಿನಿಂದಾದ ಸಕ್ರಮ ಒತ್ತುವರಿ ಬಗ್ಗೆ ಮಾತ್ರ. ಅಕ್ರಮವಾಗಿ ಒತ್ತುವರಿ ಆದ ಕಡೆ ಅಲ್ಲ. ಇದರ ನಂತರ, ಈ ಅಕ್ರಮ ವ್ಯವಹಾರಕ್ಕೆ ಕಾರಣರಾದ ಎಲ್ಲ ಅಧಿಕಾರಿ ವರ್ಗ ಹಾಗೂ ಭೂ ಮಾಫಿಯಾದವರಿಂದ ದಂಡ ಪೀಕಿಸಿ, ಅವರನ್ನು ಶಿಕ್ಷಿಸಬೇಕು. ತಾನು `ಪರಿಹಾರ'ವಾಗಿ ಕೊಟ್ಟ ಹಣವನ್ನು, ಅವರು ಅಕ್ರಮವಾಗಿ ಸಂಪಾದಿಸಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ನಷ್ಟ ಭರ್ತಿ ಮಾಡಿಕೊಳ್ಳಬೇಕು. ಆಗಲಾದರೂ ಈ ಅಧಿಕಾರಿಗಳಿಗೆ ಸ್ವಲ್ಪ ಭಯ ಹುಟ್ಟಿ, ಇಂತಹ 'ಒತ್ತು-worry'ಗಳಿಗೆ ಕಡಿವಾಣ ಬಿದ್ದೀತು!
Comments
ಉ: ಒತ್ತುವರಿ (ಒತ್ತು-worry)
ಹೌದು, ಸರ್ಕಾರ ಮಾಡುತ್ತಿರುವುದು ತಪ್ಪು.
In reply to ಉ: ಒತ್ತುವರಿ (ಒತ್ತು-worry) by Palahalli Vishwanath
ಉ: ಒತ್ತುವರಿ (ಒತ್ತು-worry)
ಧನ್ಯವಾದಗಳು ಸಾರ್. ಏನ್ಮಾಡೋದು. ಹರ ಕೊಲ್ಲಲ್ ಪರ ಕಾಯ್ವನೇ?