ಒನ್ ಮಿನಿಟ್ ಸಕ್ಸಸ್

ಒನ್ ಮಿನಿಟ್ ಸಕ್ಸಸ್

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಗಣೇಶ್ ಕೋಡೂರು
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಕೋಡೂರು, ಹೊಸನಗರ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೧೨.೦೦, ಮುದ್ರಣ: ೨೦೧೧

ಪತ್ರಕರ್ತ ಲೇಖಕ ಕೆ.ಗಣೇಶ್ ಕೋಡೂರು ಅವರ ಪುಟ್ಟ ಪುಸ್ತಕವೇ ‘ ಒನ್ ಮಿನಿಟ್ ಸಕ್ಸಸ್'. ಲೇಖಕರ ಪ್ರಕಾರ ಬದುಕಿನ ಅತಿ ದೊಡ್ಡ ಗೆಲುವನ್ನು ಆ ಕೊನೆಯ ಒಂದು ನಿಮಿಷವೇ ನಿರ್ಧರಿಸುತ್ತದೆ. ಒಂದು ನಿಮಿಷವೆಂದರೆ ಅದು ಕೇವಲ ಅರವತ್ತು ಸೆಕೆಂಡುಗಳಲ್ಲ. ಬರೀ ಅರವತ್ತು ಸೆಕೆಂಡುಗಳಲ್ಲಿ ಏನು ಮಾಡಲಿಕ್ಕೆ ಸಾಧ್ಯ ಎಂದುಕೊಂಡು ಸುಮ್ಮನುಳಿದು ಬಿಟ್ಟಿರೋ, ಅದೇ ಸಮಯ ನಿಮ್ಮ ಬಳಿ ಮುಂದೆ ಅರವತ್ತು ವರ್ಷಗಳ ಪೆನಾಲ್ಟಿ ಕೇಳುತ್ತದೆ. ಅದೇ ನೀವು ಈ ಒಂದು ನಿಮಿಷವನ್ನೂ ಸುಮ್ಮನೆ ಬಿಡದೇ ಇಟ್ಟುಕೊಂಡ ಟಾರ್ಗೆಟ್ಟನ್ನು ರೀಚ್ ಆದಿರಿ ಎಂದುಕೊಳ್ಳಿ. ಅರವತ್ತು ಸೆಕೆಂಡುಗಳಲ್ಲಿ ದಕ್ಕಿದ ಈ ಗೆಲುವು ನಿಮ್ಮ ಇಡೀ ಜೀವಮಾನವನ್ನೇ ಶ್ರೀಮಂತಿಕೆಯಲ್ಲಿ ತೂಗಿಸಿ ಬಿಡುತ್ತದೆ…

ಸುಮಾರು ೫೬ ಪುಟಗಳ ಪುಟ್ಟ ಪಾಕೆಟ್ ಪುಸ್ತಕವಿದು. ಒಂದು ನಿಮಿಷ ನಿಮ್ಮ ಜೀವಮಾನದಲ್ಲಿ ಎಷ್ಟು ಮುಖ್ಯ ಎನ್ನುವ ಮಾಹಿತಿ ನೀಡುತ್ತದೆ. ಪುಸ್ತಕದ ಒಂದೆಡೆ ‘ಒಂದು ನಿಮಿಷದಲ್ಲಿ… ' ಎಂದು ಬರೆಯುತ್ತಾ ಹೀಗೆ ಹೇಳುತ್ತಾರೆ ಲೇಖಕರು “ವರ್ಷ, ಗಂಟೆಗಳ ಮಾತನ್ನೆಲ್ಲ ಪಕ್ಕಕ್ಕಿಟ್ಟು ಬಿಡಿ. ಒಂದು ನಿಮಿಷದಲ್ಲೇ ಈ ಜಗತ್ತು ಏನೆಲ್ಲ ಬದಲಾಗಿರುತ್ತದೆಂದರೆ, ಇದು ಹೀಗಿತ್ತಾ ಎಂದು ನಾವೇ ಆಶ್ಚರ್ಯ ಪಡಬೇಕು ಹಾಗಾಗಿ ಬಿಟ್ಟಿರುತ್ತದೆ. ಅಂತಹದ್ದರಲ್ಲಿ ನಮ್ಮಂತಹ ಒಬ್ಬ ಮನುಷ್ಯನ ಬದುಕನ್ನು ಗೆಲುವಿನ ಎತ್ತರಕ್ಕೊಯ್ಯಲು, ಸೋಲಿನ ಪಾತಾಳಿಗೆ ತಳ್ಳಲು ಅದಕ್ಕೆ ಸಾಧ್ಯವಿರುವುದಿಲ್ಲವಾ?

ಖಂಡಿತಾ ಸಾಧ್ಯವಿದೆ. ಅರವತ್ತು ಸೆಕೆಂಡುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಈ ಒಂದು ನಿಮಿಷದಲ್ಲಿ ಅಬ್ಬಾ ಎನ್ನುವಂತಹ ಬದಲಾವಣೆಗಳಾಗಿರುತ್ತದೆ. !

  • ಒಂದೇ ನಿಮಿಷದಲ್ಲಿ ನೀವು ಹತ್ತಾರು ವರ್ಷಗಳಿಂದ ಮಾಡಿಕೊಂಡೂ ಬಂದ ಕೆಲಸ ಕೈತಪ್ಪಿ ಹೋಗಬಹುದು. ಬದುಕು ಪ್ರಶ್ನೆಯಾಗಬಹುದು. 
  • ಅತಿ ಮುಖ್ಯವಾದ, ನಿಮ್ಮ ಬದುಕಿನ ಬಾಗಿಲಿಗೆ ಬಂಗಾರವನ್ನೇ ತೊಡಿಸುವಂತಹ ಸಂದರ್ಶನವೊಂದು ಒಂದು ನಿಮಿಷದಲ್ಲಿ ನಿಮ್ಮಿಂದ ತಪ್ಪಿ ಹೋಗಬಹುದು. ಬದುಕು ಮತ್ತೆ ಇಂತಹದೊಂದು ಅವಕಾಶ ಪಡೆಯುವ ಅವಕಾಶ ಮೊದಲೇ ಮುಗಿದು ಹೋಗಬಹುದು. 
  • ವಿಮಾನದ ಪೈಲೆಟ್ ಒಂದು ನಿಮಿಷದಲ್ಲಿ ಮಾಡಿದ ತೂಕಡಿಕೆಯಂತಹ ಪುಟ್ಟದೊಂದು ತಪ್ಪು ಇಡೀ ವಿಮಾನವನ್ನೇ ಸುಟ್ಟು ಭಸ್ಮ ಮಾಡಬಹುದು.
  • ಒಂದೇ ಒಂದು ನಿಮಿಷದ ಮೈಮರೆವು ನಿಮ್ಮ ಬಳಿ ಅಲ್ಲಿಯವರೆಗೆ ಸೇಫಾಗಿದ್ದ ಕೋಟಿ ಕೋಟಿ ಹಣವನ್ನು ಕಳೆದುಕೊಳ್ಳಬಹುದು.”

ಹೀಗೆ ಒಂದು ನಿಮಿಷದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಪುಸ್ತಕ ಪುಟ್ಟದಾಗಿದ್ದರೂ ಮಾಹಿತಿ ಸಣ್ಣದಲ್ಲ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದ ಪುಸ್ತಕ ಇದು.