ಒಪ್ಪಂದ

ಒಪ್ಪಂದ

ಕವನ

ಒಪ್ಪಂದ

ನಿಮಗೆ ತಿಳಿದಿರಲಿ

ಎಂದಷ್ಟೇ ಹೇಳುತಿರುವುದು

ನನ್ನ ಮತ್ತು ನನ್ನ ನೆನಪುಗಳು ಸೇರಿ

ಗಾಯ ಕೆರೆಯುವುದಿಲ್ಲ ಎಂದು ನಾನು

ಕೀವು ಒಸರುವುದಿಲ್ಲ ಎಂದು ಅವುಗಳು

ಇತ್ತಂಡ ಒಮ್ಮತದ ಒಪ್ಪಂದವಾಗಿದೆ...

 

ಏನೋ...

ಭಾನುವಿನುದಯಕೆ ಆಗಸದಿ

ಬಣ್ಣದ ದಿಬ್ಬಣವು ಹೊರಟಾಗ...

ರಜನಿಯಪ್ಪುಗೆಯನು ಬಿಡಿಸಿಕೊಂಡ

ಇಳೆವೆಣ್ಣು ಬಣ್ಣದುಡುಗೆಯನು ತೊಡುವಾಗ...

 

ಅಚ್ಚ ಹಸುರೆಲೆಗಳ ನಡುವೆ

ಹಕ್ಕಿ ಕಲರವದ ಅಲೆಯು ಹೊಮ್ಮಿದಾಗ...

ಅಂಗಳದ ಹೂವಿನೊಡಲಿನ ಬಂಡನು

ಬಣ್ಣದ ರೆಕ್ಕೆಯ ಚಿಟ್ಟೆಯು ಹೀರುವಾಗ...

 

ಮಧ್ಯಾಹ್ನದ ಸುಡುಬಿಸಿಲಿನಲಿ

ಅಂಗಳದ ಹೊಂಗೆಯ ಮರವು

ನೆರಳ ರಂಗೋಲಿ ಬಿಡಿಸಿದಾಗ...

ಸಂಜೆಯ ಗೋಧೂಳಿಯಲಿ

ಮನೆ ಮುಂದಿನ ಹಾದಿಯು

ಮೀಯುತಲಿರುವಾಗ...

 

ರಾತ್ರಿ ಬಾನಿನಂಗಳದಲಿ 

ಚಂದಿರನು ಬೆಳ್ಳಿಯ ಬಟ್ಟಲಾದಾಗ...

ಕಣ್ಣನು ಕಡಿದರೂ ನಿದ್ದೆಯು

ಸುಳಿವೀಯದಿರುವಾಗ...

 

ಹೀಗೆ...

ಸುಮ್ಮನೆ ಕುಳಿತಿರುವಾಗ

ನಮ್ಮ ಒಪ್ಪಂದ 

ಮುರಿಯುತ್ತಿರುತ್ತೇವೆ...

ಅಷ್ಟೇ...

                                         :-ಕಾಂತರಾಜು ಕನಕಪುರ

https://avadhimag.in/%e0%b2%92%e0%b2%aa%e0%b3%8d%e0%b2%aa%e0%b2%82%e0%b2%a6/

06/08/2021 ಅವಧಿ