ಒಬಾಮಾ ಹಾದಿಯಲ್ಲಿ ಅಡ್ವಾಣಿ

ಒಬಾಮಾ ಹಾದಿಯಲ್ಲಿ ಅಡ್ವಾಣಿ

ಬರಹ

ಒಬಾಮಾ ಹಾದಿಯಲ್ಲಿ ಅಡ್ವಾಣಿಅಡ್ವಾಣಿ
ಅಮೆರಿಕಾದ ಅಧ್ಯಕ್ಷರಾಗಿ ಚುನಾಯಿತರಾದ ಒಬಾಮಾ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಅಂತರ್ಜಾಲ ತಾಣವನ್ನು ಬಹಳ ಸಮರ್ಥವಾಗಿ ಬಳಸಿಕೊಂಡಿದ್ದರು. ತಮ್ಮ ಯೋಜನೆಗಳನ್ನು ಜನರಿಗೆ ಮುಟ್ಟಿಸಲು, ಪ್ರಚಲಿತ ಸಂಗತಿಗಳ ಬಗ್ಗೆ ತಮ ನಿಲುವನ್ನು ಸ್ಪಷ್ಟಪಡಿಸಲು.ತಮ್ಮ ಪ್ರಚಾರದ ಕಾರ್ಯಕ್ರಮವನ್ನು ಪ್ರಕಟಿಸಲು,ಜನರ ಜತೆ ಸಂವಹನಕ್ಕೆ ಹೀಗೆ ವಿವಿಧ ರೀತಿಗಳಲ್ಲಿ ಅವರು ಅಂತರ್ಜಾಲ ತಾಣವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ನಮ್ಮ ನಾಯಕರೂ ಇದರಿಂದ ಪಾಠ ಕಲಿತ ಹಾಗಿದೆ. ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ಬಿಜೆಪಿ ನಾಯಕ ಎಲ್ ಕೆ ಅದ್ವಾನಿಯವರು ತಮ್ಮ ಅಂತರ್ಜಾಲ ತಾಣವನ್ನು www.lkadvani.in ಒಬಾಮಾ ತಾಣದ ರೀತಿಯೇ ರೂಪಿಸಿದಂತಿದೆ. ಟ್ರಕ್ ಮುಷ್ಕರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ನೀಡುವುದು, ನೇಪಾಳದ ಅರ್ಚಕರ ವಿವಾದದ ಬಗ್ಗೆ ತಾವು ನೇಪಾಳ ಪ್ರಧಾನಿ ಜತೆ ನಡೆಸಿದ ಮಾತುಕತೆ ವಿವರಗಳನ್ನು ನೀಡುವ ಮೂಲಕ ಅದ್ವಾನಿಯವರು ಅಂತರ್ಜಾಲ ತಾಣವನ್ನು ಜನರನ್ನು ಮುಟ್ಟಲು ಅಂತರ್ಜಾಲವನ್ನು ಬಳಸಿಕೊಂಡಿದ್ದಾರೆ. ಜನರೂ ಅದ್ವಾನಿಯವರಿಗೆ ಸಲಹೆ ಸೂಚನೆಗಳನ್ನು ತಾಣದ ಮೂಲಕ ನೀಡಲು ವ್ಯವಸ್ಥೆಯಿದೆ.ಒಬಾಮಾರ ತಾಣದಷ್ಟು ಅದ್ವಾನಿಯವರ ತಾಣವು ಜನಪ್ರಿಯವಾಗುವುದು ಸಾಧ್ಯವಿಲ್ಲ್ಲವಾದರೂ, ಈ ಕ್ರಮ ಒಂದು ಸ್ವಾಗತಾರ್ಹ ಬದಲಾವಣೆ ಎನ್ನುವುದನ್ನು ಒಪ್ಪಲೇ ಬೇಕು.
------------------------------------------------------------------------------
ದುಬಾರಿ ಫೋನ್ ಮತ್ತು ಪಾಮ್ ಪ್ರಿ!
ಐಫೋನ್‌ನ ಹೊಸ ಮಾದರಿ ಐಫೋನ್ ತ್ರೀಜಿ "ಕಿಂಗ್ ಬಟನ್" ಅತ್ಯಂತ ದುಬಾರಿ ಫೋನ್. ಇದರ ಬೆಲೆ ಹದಿನೆಂಟು ಲಕ್ಷ ಪೌಂಡ್‌ಗಳು. ಹದಿನೆಂಟು ಕ್ಯಾರಟ್ ಚಿನ್ನದಿಂದ ಪೋನನ್ನು ತಯಾರಿಸಲಾಗಿದೆ. ಇದರ ಮುಖ್ಯ ಗುಂಡಿಯಾಗಿ  ಅಪೂರ್ವ ವಜ್ರವನ್ನೇ ಅಳವಡಿಸಲಾಗಿದೆ.ಐಫೋನ್ಪ್ರಿ
ಈಗ ಲಾಸ್ ವೆಗಸ್‌ನಲ್ಲಿ ನಡೆಯುತ್ತಿರುವ ಇಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನವೊಂದರಲ್ಲಿ ಪಾಮ್ ಕಂಪೆನಿಯು ತನ್ನ ಹೊಸ ಸ್ಮಾರ್ಟ್ ಫೋನ್ "ಪ್ರಿ" ಯನ್ನು ಪ್ರದರ್ಶಿಸಿದೆ. ಮಾಧ್ಯಮಗಳಿದನ್ನು ಐಫೋನ್ ಪ್ರತಿಸ್ಪರ್ಢಿ ಎಂದು ಹಣೆಪಟ್ಟಿ ನೀಡಿದ್ದರೂ, ಪಾಮ್ ಕಂಪೆನಿ ಹೊಸ ಚತುರ ಫೋನ್, ತನ್ನ ಹಳೆಯ ಸಾಧನಗಳಿಗೆ ಇದು ಸ್ಪರ್ಧಿ,ಐಫೋನಿಗಲ್ಲ ಎಂದಿದೆ. ಸ್ಪರ್ಶ ಸಂವೇದಿ ತೆರೆ, ಜಿ ಪಿ ಎಸ್, ಎಂಟು ಗಿಗಾ ಬೈಟು ಸ್ಮರಣ ಸಾಮರ್ಥ್ಯ,ನಿಸ್ತಂತು ಸಾಮರ್ಥ್ಯ, ಮಡಚಿಡಲು ಅನುವು ಮಾಡುವ ಕೀಲಿ ಮಣೆ ಇವುಗಳೆಲ್ಲಾ ಪ್ರಿಯನ್ನು ಅನನ್ಯವಾಗಿಸಿದೆ.ಐಫೋನ್ ಮಾತ್ರವಲ್ಲದೆ,ಬ್ಲ್ಯಾಕ್ ಬೆರಿಯಂತಹ ಕಂಪೆನಿಯ ಸಾಧನಗಳ ಕಾರಣ ಪಾಮ್ ಕಂಪೆನಿಗೆ ಇತ್ತೀಚಿನ ದಿನಗಳಲ್ಲಿ ಗ್ರಹಣ ಹಿಡಿದಿತ್ತು.ಪಾಮ್ ಸಾಧನಗಳು ಸ್ಪ್ರಿಂಟ್ ಎನ್ನುವ ದೂರಸಂಪರ್ಕ ಕಂಪೆನಿಯ ಜಾಲಗಳಲ್ಲಿ ಬಳಕೆಯಾಗುತ್ತದೆ. ಈಗ ಪಾಮ್ ಹೊಸ ಸಾಧನ ಜನಪ್ರಿಯವಾದರೆ, ಸ್ಪ್ರಿಂಟ್‌ಗೂ ಲಾಭವಾಗಬಹುದು.ಐಫೋನ್ ಸಾಧನವು ಏಟಿಅಂಡ್‌ಟಿ ಜಾಲಗಳಲ್ಲಿ ಕೆಲಸ ಮಾಡುತ್ತದೆ.
--------------------------------------------------------------------------
ಜೀವಜಲಕ್ಕೀಗ ಜೀವಪಡ್ರೆ
ನೀರಿನ ಬಗ್ಗೆ ಜನಜಾಗೃತಿಯನ್ನು ಹುಟ್ಟುಹಾಕುವಲ್ಲಿ ಖ್ಯಾತ ಅಂಕಣಕಾರ ಶ್ರೀಪಡ್ರೆಯವರು ಪ್ರಮುಖರು.ಇದುವರೆಗೂ ಅವರ ಬ್ಲಾಗು ಅಂತರ್ಜಾಲದಲ್ಲಿ ಲಭ್ಯವಿರಲಿಲ್ಲ. ಕಳೆದವಾರ ಮಂಗಳೂರಿನಲ್ಲಿ ಇಂಡಿಯ ವಾಟರ್ ಪೋರ್ಟಲ್ ಸಮುದಾಯವು ಮಂಗಳೂರಿನಲ್ಲಿ "ನೀರ ನಿಶ್ಚಿಂತೆ" ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಹೊಸ ತಂತ್ರಜ್ಞಾನ ಮತ್ತು ಬ್ಲಾಗುಗಳನ್ನು ನೀರ ನಿಶ್ಚಿಂತೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ವಿಚಾರ ವಿನಿಮಯ ನಡೆಯಿತು. "ಸಂಪದ"ದ ಹರಿಪ್ರಸಾದ್ ನಾಡಿಗ್,ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮೋಟಾರ್ ಸೈಕಲ್ ಯಾತ್ರೆ ಮಾಡಿ ಜನಜಾಗೃತಿ ಉಂಟು ಮಾಡಿದ ಸಿ ಶಾರದಾ ಪ್ರಸಾದ್ ಮತ್ತು ತಂತ್ರಜ್ಞ ವಸಂತ್ ಕಜೆಯವರು ಶ್ರೀಪಡ್ರೆ ಮತ್ತು ಅಡ್ಡೂರು ಕೃಷ್ಣರಾವ್ ಜತೆಗೂಡಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಫಲಶ್ರುತಿಯೊ ಎನ್ನುವಂತೆ ಶ್ರೀಪಡ್ರೆಯವರ ಬ್ಲಾಗು ಈಗ ಅಂತರ್ಜಾಲದಲ್ಲಿ ಉದಯವಾಗಿದೆ. http://jeevajala.blogspot.comದಲ್ಲಿ ಈ ಬ್ಲಾಗ್ ಲಭ್ಯ.(ಚಿತ್ರ ಕೃಪೆ:ಶ್ರೀಪಡ್ರೆ)ಜೀವಜಲ
-------------------------------------------------------------------------
ವಿಂಡೋಸ್ 7 ಬೀಟಾ ಬಿಡುಗಡೆ
ವಿಂಡೋಸ್ ವಿಸ್ತಾ ಕಂಪ್ಯೂಟರ್ ನಿರ್ವಹಣಾ ತಂತ್ರಾಂಶವು ನಿರೀಕ್ಷಿತವಾದಷ್ಟು ಜನಪ್ರಿಯವಾಗಲಿಲ್ಲ. ಈಗ ಮೈಕ್ರೋಸಾಫ್ಟ್ ತನ್ನ ಹೊಸ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಜನರಿಗೆ ಲಭ್ಯವಾಗಿಸಿದೆ. ವಿಂಡೋಸ್ 7 ಚುರುಕುಗತಿಯಲ್ಲಿ ಚಾಲನೆಯಾಗಿ,ಅತ್ಯುತ್ತಮ ಬಳಕೆದಾರ ಸ್ನೇಹಿ ಗುಣಗಳನ್ನು ಹೊಂದುವಂತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಕಂಪೆನಿಯ ಅಂಬೋಣ.ಮನೆಯಲ್ಲಿ ಹಲವು ಕಂಪ್ಯೂಟರುಗಳನ್ನು ಹೊಂದಿದ್ದರೆ, ಅವುಗಳ ಜಾಲ ನಿರ್ಮಿಸಿ,ಪರಸ್ಪರ  ವಿಡಿಯೋ,ಚಿತ್ರ ಇತ್ಯಾದಿ ಕಡತಗಳ ವಿನಿಮಯವನ್ನು ಸುಲಭವಾಗಿಸಲು ಇದರಲ್ಲಿ ವ್ಯವಸ್ಥೆಯಿದೆ. ಹಲವು ತಂತ್ರಾಂಶಗಳು ಚಾಲೂ ಇದ್ದು, ಹಲವಾರು ಬ್ರೌಸರ್ ಕಿಟಕಿಗಳು ತೆರೆದಿದ್ದಾಗಲೂ, ಅವುಗಳ ಸುಲಭ ನಿಯಂತ್ರಣಕ್ಕೆ ಹೊಸ ತಂತ್ರಾಂಶದಲ್ಲಿ ಅವಕಾಶ ಇದೆ ಎನ್ನುವುದು ಪ್ಲಸ್ ಪಾಯಿಂಟ್.ಕಂಪ್ಯೂಟರಿನಲ್ಲಿರುವ ಮಾಹಿತಿ ಸುಭದ್ರವಾಗಿರಲು ಮತ್ತು ವೈರಸ್ ಕಾಟಕ್ಕೆ ಅವಕಾಶ ನೀಡದ ರಕ್ಷಣಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದ್ದರೂ, ಅದರನ್ನು ಯಾರೂ ನಂಬುವುದಿಲ್ಲ! ಹೊಸ ಆವೃತ್ತಿ ತಂತ್ರಾಂಶಕ್ಕೆ ದುಬಾರಿ ಹಣ ನೀಡುವ ಬದಲು ಉಚಿತವಾಗಿ ಲಭ್ಯವಿರುವ ಲಿನಕ್ಸ್ ತಂತ್ರಾಂಶ ಬಳಸಿದ ರುಚಿ ಹಿಡಿದವರು ಈ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಾರರು.
------------------------------------------------------------------
ವಿಡಿಯೋ ಗೇಮ್ ಆಡಿ ಗಾಯ!
ವಿಡಿಯೋ ಗೇಮ್ ಆಡಿ ಮೈಕೈ ನೋವು- ಹೇಗೆ ಸಾಧ್ಯ ಎಂದಿರಾ? ಹೌದು, ಆಧುನಿಕ ವಿಡಿಯೋ ಗೇಂಗಳನ್ನು ಖುರ್ಚಿಯಲ್ಲಿ ಕುಳಿತು ಆಡುವುದಿಲ್ಲ. ಟಿವಿಯ ಮುಂದೆ ರಿಮೋಟ್ ಹಿಡಿದು ,ವ್ಯಾಯಾಮ ಮಾಡುವ ರೀತಿಯಲ್ಲಿ ವಿಡಿಯೋ ಆಟಗಳನ್ನು ಆಡುವ ನಿಂಟೆಂಡೋ ಎನ್ನುವ ಗೇಂ ಕನ್ಸೋಲುಗಳೀಗ ಬಂದಿವೆ. ಇವನ್ನು ಗಂಟೆಗಟ್ಟಲೆ ಆಡಿ,ಮೈಕೈ ನೋವು ಬಂದವರದ್ದೀಗ ಹೊಸ ಸಮಸ್ಯೆ.
-----------------------------------------------------------
ಸತ್ಯಂ ಸುಂದರಂ?
ಸತ್ಯವು ಯಾವಾಗಲೂ ಅಪ್ರಿಯ. ಸತ್ಯಂ ಕಂಪ್ಯೂಟರ್ ಬಗ್ಗೆ ಈ ಮಾತು ನಿಜವಾಗಿ ಬಿಟ್ಟಿದೆ. ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಪೈಕಿ ನಾಲ್ಕನೇಯ ಸ್ಥಾನದಲ್ಲಿದೆಯೆಂದು ಭಾವಿಸಲಾಗಿದ್ದ ಸತ್ಯಂ ಕಂಪ್ಯೂಟರ್ ಕಂಪೆನಿಯು ತನ್ನ ಸ್ಥಾನವನ್ನು ಸುಳ್ಳಿನ ಬಲದಿಂದಲೇ ಗಿಟ್ಟಿಸಿಕೊಂಡಿದೆಯೆನ್ನುವುದನ್ನು ಕಂಪೆನಿಯ ಮಾಜಿ ಸಿಇಓ ಅವರೇ ಒಪ್ಪಿಕೊಂಡಿದ್ದಾರೆ.ಕಂಪ್ಯೂಟರ್ ಉಂಟು ಮಾಡುವ ಭ್ರಾಮಕ ಲೋಕದಲ್ಲಿ ಇಂತಹ ವೈಚಿತ್ರ್ಯಗಳೂ ಇರುತ್ತವೆಯೆಂದು ಯಾರಾದರೂ ಊಹಿಸಿದ್ದರೇ?

ಅಶೋಕ್ ವರ್ಲ್ಡ್

ಉದಯವಾಣಿ

*ಅಶೋಕ್‌ಕುಮಾರ್ ಎ