ಒಬಾಮ ಮತ್ತು ಕ್ಯಾರೆಟ್ ಹಲ್ವ

ಒಬಾಮ ಮತ್ತು ಕ್ಯಾರೆಟ್ ಹಲ್ವ

“ನ್ಯೂಯಾರ್ಕಿನಲ್ಲಿದೀರಂತೆ, ವಾಷಿಂಗ್ಟನ್ ಗೆ ಯಾವಾಗ ಬರ್ತೀರ? ಬಂದಾಗ ವೈಟ್ ಹೌಸ್ ಗೆ ಬರೋದು ಮರೀಬೇಡಿ".
 
ಅರೆ! ಸಾಕ್ಷಾತ್ ಬರಾಕ್ ಒಬಾಮ ಅವರ ಧ್ವನಿ. ನನಗೇ ಫೋನ್ ಮಾಡಿದ್ದರು. ಆದರೆ ಅವರಿಗೆ ಹೇಗೆ ಗೊತ್ತಾಯ್ತು ನಾನು ನ್ಯೂಯಾರ್ಕಿನಲ್ಲಿರೋದು?
 
“ ಓ ಟೋಂಟ್ ಬಾದರ್, ಸೀಕ್ರೇಟ್ ಸರ್ವೀಸ್ ನನಗೆ ಎಲ್ಲ ವಿಷಯ ತಿಳಿಸುತ್ತೆ. ಹಾಗಾಗಿ ಗೊತ್ತಾಯ್ತು" ಅಮೆರಿಕದ ಅಧ್ಯಕ್ಷರು ವಿವರಿಸಿದರು.
 
ಅಂದರೆ ನನ್ನನ್ನು ಸಿಐಎ ಬೇಹುಗಾರರು ಗಮನಿಸಿದ್ದಾರೆ. ಆದರೆ ನನಗೆ ಗೊತ್ತೇ ಆಗಲಿಲ್ಲ. ಹೌ ವಂಡರ್ ಫುಲ್!
 
“ಆದರೆ ಸರ್, ನೀವು ತುಂಬ ಬ್ಯುಸಿ ಇರ್ತೀರಿ. ಸುಮ್ಮನೆ ನಿಮಗೇಕೆ ನಾನು ಬಂದು ತೊಂದರೆ ಕೊಡಲಿ?” ಎಂದು ಉತ್ತರಿಸಿದೆ.
 
“ಡೋಂಟ್ ಬಿ ಸೊ ಫಾರ್ಮಲ್ . ನೀವು ಬಂದರೆ ನನಗೆ ಖುಷಿ. ನೀವು ನ್ಯೂಯಾರ್ಕಿನಿಂದ ಹೊರಟಾಗ ನನಗೆ ಮೆಸೇಜ್ ಮಾಡಿ" ಎಂದು ನಂಬರ್ ಕೊಟ್ಟರು.
 
(ಸಾರಿ. ಅದು ಅವರ ಪರ್ಸನಲ್ ನಂಬರ್, ಇಲ್ಲಿ ಕೊಡಲಾಗದು)
 
“ಬೇಡ ಬಿಡಿ ಸರ್. ನೀವೀಗ ಸಿರಿಯಾ - ಇರಾಕ್ ಮುಂತಾದ ವಿಷಯದಲ್ಲಿ ಬ್ಯುಸಿ. ವಿಸಿಟರ್ ತರಹ ನಾನು ನಿಮ್ಮ ಮನೇನ ಅಂದರೆ ವೈಟ್ ಹೌಸ್ ನ ದೂರದಿಂದಲೇ ನೋಡಿ ಹೋಗ್ತೀನಿ...” ಎಂದು ಹೇಳುತ್ತಿದ್ದೆ. ಆಗ ಅವರು ನನ್ನನ್ನು ಮಧ್ಯಕ್ಕೇ ತಡೆದು "ನೊ..ನೊ...ಅದು ಇ ದ್ದದ್ದೇ . ಅದರ ಪಾಡಿಗೆ ಅದು. ನೀವು ಬನ್ನಿ. ಅಂದ ಹಾಗೆ, ನಿಮಗೆ ಹಾಗಲಕಾಯಿ ಗೊಜ್ಜು ಅಂದರೆ ಇಷ್ಟ ಎಂದು ತಿಳೀತು...” ಎಂದರು.
 
“ಆದರೆ ಸರ್, ಅದು ನಿಮಗೆ ಹೇಗೆ ತಿಳೀತು...?
 
“ಸೀಕ್ರೆಟ್ ಸರ್ವೀಸ್.”
 
ಹೌದಲ್ಲ! ಲಾಡೆನ್ ನನ್ನೇ ಹುಡುಕಿದ ಸೀಕ್ರೇಟ್ ಸರ್ವೀಸ್ ಗೆ ನನ್ನ ಬಗ್ಗೆ ತಿಳಿದುಕೊಳ್ಳೋದು ಏನು ಕಷ್ಟ?
 
“ಹಾಗಲಕಾಯಿ ಗೊಜ್ಜು ಜತೆಗೆ ಹಿತಕವರೆ ಹುಳಿ. ಬಾಡಿಸಿಕೊಳ್ಳೋಕೆ ಬಾಳಕ, ಸಂಡಿಗೆ ಮತ್ತು ತಿಳಿ ಸಾರು...”
 
“ಸಾರ್... ಇವೆಲ್ಲಾ... ವೈಟ್ ಹೌಸ್ ನಲ್ಲಿ....” ನನಗೆ ಆಗಲೇ ಬಾಯಲ್ಲಿ ನೀರೂರತೊಡಗಿತು.
 
“ಡೋಂಟ್ ವರಿ. ಐ ಹ್ಯಾವ್ ಎ ಕುಕ್ ಫ್ರಂ ಉಡುಪಿ... ಹಿ ವಿಲ್ ಡು ಎವೆರಿತಿಂಗ್. ಅಂದ ಹಾಗೆ ಡೆಸೆರ್ಟ್ಸ್ ಗೆ ಏನಿರಲಿ? ಕ್ಯಾರೆಟ್ ಹಲ್ವ ನಿಮಗೆ ಇಷ್ಟ ಅಲ್ವ?” ಒಬಾಮ ವಿಚಾರಿಸಿದರು.
 
ಮೈಗಾಡ್! ಈ ಮನುಷ್ಯನಿಗೆ ನನ್ನ ಇಡೀ ಜಾತಕ ಗೊತ್ತು.
 
“ಹೌದು ಸರ್, ಕ್ಯಾರೆಟ್ ಹಲ್ವ ನನ್ನ ಫೇವರೆಟ್. ಬಾಯಿನಲ್ಲಿ ನೀರೂರುತ್ತಿದೆ. ವೈಟ್ ಹೈಸ್ ಹಲ್ವ ಅಂದರೆ. ಖಂಡಿತ ಬರ್ತೀನಿ ಸರ್, ಖಂಡಿತ.”
 
“ರೀ.. ರೀ... ಅದೇನು ಖಂಡಿತ, ಖಂಡಿತ, ಅಂತಾ ಇದೀರಾ? ಇದೇನು ದಿಂಬು ಎಲ್ಲಾ ಒದ್ದೆ? ಮತ್ತೆ ಜೊಲ್ಲು ಸುರಿಸಿದಿರಾ?” ಹೆಂಡತಿ ಎಚ್ಚರಿಸಿದಳು.
 
ಒಬಾಮ... ಕ್ಯಾರೆಟ್ ಹಲ್ವಾ... ಅಂದರೆ ಅವಳು ನಗದಿರಳೆ? ಹಾಗಾಗಿ ಏನು ಹೇಳಲಿಲ್ಲ.
 
ಅಂದಹಾಗೆ, ವಾಷಿಂಹ್ಟನ್ ಗೆ ಹೋದೆ. ಎಲ್ಲರೂ ನೋಡಿದಂತೆ ದೂರದದಿಂದಲೇ ವೈಟ್ ಹೌಸ್ ನೋಡಿದೆ. ಸುತ್ತಲೂ ಸೀಕ್ರೆಟ್ ಸರ್ವೀಸ್ ಕಾರುಗಳಿದ್ದವು. ಸೀಕ್ರೆಟ್ ಏಜೆಂಟರು ನನ್ನನ್ನು ನೋಡಿರಬಹುದೆ?
(ಚಿತ್ರ ಕೃಪೆ : ಗೂಗಲ್)

Comments

Submitted by Ranjith M Sat, 05/27/2017 - 06:22

ನಿಮ್ಮ‌ ಬರಹ‌ ಇಷ್ಟ ಆಯಿತು, ಚೆನ್ನಾಗಿದೆ .

ವೈಟ್ ಹೈಸ್ ನೋಡಲು ಯಾಕೆ ಅಸ್ಟು ದೂರ‌ ಹೊಗುತ್ತೀರೊ ಗೊತ್ತಾಗುತ್ತಿಲ್ಲ‌.....ಅದರಲ್ಲೆನಿದೆ ಅಂತಹ‌ ವಿಶೇಷ ? ಹೋಗಲಿ ಬಿಡಿ.