ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ

ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ

ಬರಹ

ಜನ ಮಾತ್ರ ಒಬ್ಬರಿಗೊಬ್ಬರು ಬೆರೆಯುವ ಸ್ವಭಾವದವರಲ್ಲ. ಜಗಳವಾಡುತ್ತಾರೆಂದೇನಲ್ಲ. ಆದರೆ ಮದುವೆಯಾಗದವರು, ಒಬ್ಬರನ್ನೊಬ್ಬರು ತೊರೆದವರು ಎರಡೆರೆಡು ಮನೆಗಳನ್ನು ಹೊಂದಿರುತ್ತಾರಿಲ್ಲಿ. ವಿಚ್ಛೇದನ ಪಡೆದ ನಿರುದ್ಯೋಗಿಯೊಬ್ಬ ಒಂಟಿಯಾಗಿ ಬದುಕುತ್ತಿದ್ದ. ಆತನ ಮಾಜಿ ಹೆಂಡತಿ (ಪಾಟ್ನರ್!) ಅದೇ ನಗರದಲ್ಲಿ ಬದುಕಿದ್ದಳು. ವಯಸ್ಸಿಗೆ ಬಂದ ಇಬ್ಬರು ಮಕ್ಕಳೂ ಇದ್ದರು ಆತನಿಗೆ. ನೆರೆಹೊರೆಯವರಿದ್ದರು. ನಿರುದ್ಯೋಗಿಯಾದುದರಿಂದ, ಮತ್ತು ಫಿನ್ನಿಶ್ ಸಮಾಜ 'ವೆಲ್‌ಫೇರ್ ಸಮಾಜವಾದ್ದರಿಂದ' ಆತನಿಗೆ ತಿಂಗಳಿಗೆ ಪಿಂಚಣಿ ರೂಪದ ಸಂಬಳ ಬರುತ್ತಿತ್ತು. ಮತ್ತು ಅದು ಬೆಂಗಳೂರು ಯೂನಿವರ್ಸಿಟಿಯ ಸೀನಿಯರ್ ಗ್ರೇಡ್ ಉಪಾಧ್ಯಾಯನಿಗಿಂತಲೂ ಹೆಚ್ಚಿತ್ತು.

ಅನೇಕ ದಿನಗಳ ಕಾಲ ಆತ ಯಾರಿಗೂ ಕಾಣಲಿಲ್ಲ. ಯಾರೂ ಕೇರ್ ಮಾಡಲಿಲ್ಲ. ತಿಂಗಳುಗಟ್ಟಲೆ ಆತ ಪತ್ರಗಳಿಗೆ ಉತ್ತರಿಸಲಿಲ್ಲ. ಯಾರೂ ಕ್ಯಾರೆ ಅನ್ನಲಿಲ್ಲ. ದೂರವಾಣಿ ಕರೆಗಳನ್ನು ಆತ ಸ್ವೀಕರಿಸುತ್ತಿರಲಿಲ್ಲ. ಯಾರೂ ಕ್ಯಾರೆ ತುಮಾರೆ ಅನ್ನಲಿಲ್ಲ--ಅದು ಫಿನ್ನಿಶ್ ಸಂಸ್ಕೃತಿ. ಪ್ರತಿ ತಿಂಗಳು ಬಿಟ್ಟಿ ಸಂಬಳ ಆತನ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿತ್ತು. ಹಾಗೆ ಬಿಟ್ಟಿ ಉಣ್ಣುವವರು, ಉಂಡ ನಂತರ ಅದನ್ನು ಕರಗಿಸಲು ಹೆಲ್ಸಿಂಕಿಯ ಚರ್ಚ್‌ಗಳಲ್ಲಿ ನೀಡಲಾಗುತ್ತಿದ್ದ ಬಿಟ್ಟಿ ಬ್ರೆಡ್, ಬಿಸ್ಕಟ್‌ಗಳನ್ನು ಪಡೆಯಲು ಕ್ಯೂ ನಿಲ್ಲುತ್ತಿದ್ದರು. ಅಂತಹ ಸಾಲಿನಲ್ಲಿ ನಿಲ್ಲುವುದೆಂದರೆ ತಾನು 'ಪಾಪರ್' ಎಂದು ಊರಿಗೇ ಸಾರಿದಂತೆ. ನಿತ್ಯಪಾಪರ್‌ನಂತೆ ಅಲ್ಲಿ ಕಾಣಸಿಗುತ್ತಿದ್ದ ಈ ಮಿಸ್ಟರ್‌ನನ್ನು ಜನ ನೋಡಿ ವರ್ಷಗಳೇ ಉರುಳಿದ್ದವು. "ಮಾನವಂತನಾಗಿ ಬದುಕುತ್ತಿರಬೇಕಾತ" ಎಂದುಕೊಂಡರು ಸಾಲಿನಲ್ಲಿ ಆತನ ಹಿಂದು ಮುಂದು ನಿಲ್ಲುತ್ತಿದ್ದವರು.

ಐದಾರು ವರ್ಷಕ್ಕೊಮ್ಮೆ ಪ್ರತಿಯೊಬ್ಬರೂ ತಾವಿರುವ ಮನೆಯ 'ಇರುವಿಕೆಯನ್ನು' ಸರ್ಕಾರದಲ್ಲಿ ನವೀಕರಿಸಬೇಕು. ಮಿಸ್ಟರ್ ಆತ ಅದನ್ನೂ ಮಾಡಲಿಲ್ಲ. ಅಧಿಕಾರಿಗಳು ಬಂದು ಮನೆ ಬಾಗಿಲು ತಟ್ಟಿದರು. ಮತ್ತೆ ಮತ್ತೆ ತಟ್ಟಿದರು ಮುಂದೊಂದಷ್ಟು ದಿನ. ಕೊನೆಗೊಂದು ದಿನ ಬಾಗಿಲನ್ನು ಮುರಿದರು, ಏಕೆಂದರೆ ಬೀಗ ಮುರಿಯಲು ಅದನ್ನು ಹಾಕಿರಲೇ ಇಲ್ಲ. ಒಳಗೆ ಅಂಚೆ ಕಾಗದಗಳ ಒಂದು ಗೋಡೆಯೇ ಇತ್ತು. ಆರು ವರ್ಷದ ಟಪಾಲಿನ ಗೋಡೆಯದು. ಒಳಗೆ, ಹಾಸಿಗೆಯ ಮೇಲೆ ಒಂದು ಮಮ್ಮಿ. ಇಬ್ಬರು ಮಕ್ಕಳ ತಂದೆಯ ಮಮ್ಮಿ ಮಲಗಿತ್ತು. ಹಾಸಿಗೆಯಲ್ಲೇ ಆಗಿದ್ದ ಹಾರ್ಟ್ ಅಟ್ಯಾಕ್‌ಗೇ ಆರು ವರ್ಷವಾಗಿತ್ತು. ಎಕ್ಸಾಸ್ಟ್ ಪೈಪ್‌ನ ದೆಸೆಯಿಂದಾಗಿ ಆತ ಬದುಕಿದ್ದಾಗ ಆತನೊಂದಿಗಿದ್ದ ದೇಹದ 'ವಾಸನೆ'ಯು, ಆತ ಅದನ್ನು ಬಿಟ್ಟು ಹೋದ ನಂತರ ಆತನ ಹಿಂದೆಯೇ ಹೋಗಲು ಹೊರ ಬಂದಾಗ, ಪೈಪಿನ ಓಳಕ್ಕೆ ಸೇರಿಕೊಂಡಿತ್ತು. ಆದ್ದರಿಂದ ಹೆಣದ ವಾಸನೆ ಸವಿಯುವ ಭಾಗ್ಯದಿಂದ ಅಕ್ಕಪಕ್ಕದವರು ವಂಚಿತರಾಗಿದ್ದಾರೆ.

ಫಿನ್ಲೆಂಡಿನಲ್ಲಿ ಪ್ರಾಣ ಮಿಂಚಿನಂತಾದರೆ, ದೇಹ ಗುಡುಗಿನಂತೆ. ಪ್ರಾಣ ಹೋದ ಐದಾರು ತಿಂಗಳ ನಂತರ ದೇಹ ಸೇರುವುದು ಒಂದು ಸಹಜ ಕ್ರಿಯೆ. ಅಷ್ಟು ಪರಸ್ಪರ ಅಪರಿಚಿತರು ಜನ. ಆದರೆ ಈ ಐದಾರು ವರ್ಷ ದೇಹವನ್ನು ನೋಡದಿರುವುದನ್ನು ಅವರುಗಳು ಅಸಹಜವೆಂದು ಭಾವಿಸಿವುದಿಲ್ಲ. ಡಬ್ಲುಡಬ್ಲುಡಬ್ಲು.ಹೆಲ್ಮೆಟ್.ಪಿ಼ ಎಂಬ ಭೌತಿಕವಾದ ಹಾಗೂ 'ರೇಖೆಯ ಮೇಲಿರುವ' (ಆನ್‌ಲೈನ್) ಲೈಬ್ರರಿಯನ್ನೊಮ್ಮೆ ವೀಕ್ಷಿಸಿ ನೋಡಿ. ಇಂತಹ 'ಅಸಹಜ' ಘಟನೆಗಳಲ್ಲಿ 'ಅ'ವನ್ನು ತೆಗೆದುಹಾಕಿರುವ ಅನೇಕ ವಿಷಯಗಳು ತಿಳಿದುಬರುತ್ತದೆ. ಸತ್ತವರನ್ನೂ ಬದುಕಿರುವವರಂತೆ ಮನೆಯಲ್ಲಿ ಇರಲು ಬಿಡುವ ಫಿನ್ನಿಶ್ ಸಂಸ್ಕೃತಿಗೆ ಒಂದು ಕಾರಣ ಹುಡುಕಿದ್ದೇನೆ. ಕೇವಲ ಎರಡು ಮೂರು ಗಂಟೆಗಳ ಪ್ರಯಾಣ ಮಾಡಿದರೆ ಸಾಕು. ಅರ್ಧ ಶತಮಾನದಿಂದಲೂ ಜೀವ ಹಾಗೂ ಅದು ಅಡಗಿದ್ದ ದೇಹವೊಂದನ್ನು ಪರಸ್ಪರ ಬೇರ್ಪಡಿಸಿರುವ ಸಾಕ್ಷಿಯೊಂದು ದೊರಕುತ್ತದೆ ಮಾಸ್ಕೊ ನಗರದಲ್ಲಿ. ರಷ್ಯದ ಅದ್ಯಾವದೋ ಋತುವಿನ ರಾಜಧಾನಿಯಾದ ಈ ನಗರದಲ್ಲಿ ಆ ಜೀವ ಈ ದೇಹ ಬಿಟ್ಟು ಸುಮಾರು ಐದಾರು ದಶಕಗಳಾಗಿವೆ. ದೇಹವನ್ನು ಮಮ್ಮಿಫೈ ಮಾಡಿ, ಆತನನ್ನು 'ಫಾದರ್' (ದೇಶಕ್ಕೇ ತಂದೆ) ಎಂದು ಆರಾಧಿಸುವವರಿದ್ದಾರೆ. ಲೆನಿನನ ದೇಹದ ಕಳೇಬರಹ ಅಲ್ಲಿ ಇನ್ನೂ ಜೀವಂತವಿದೆ! ಆದ್ದರಿಂದಲೇ ನಾಲ್ಕಾರು ವರ್ಷಗಳ 'ಮಮ್ಮಿ'ಗಳನ್ನು ಫಿನ್ನಿಶ್ ಜನ ಮಣ್ಣುಮಾಡುವಾಗ ಲೆನಿನ್ನನ ರೆಕಾರ್ಡ್ ಮುರಿಯಲಾಗದಿರುವುದಕ್ಕೆ ಬೇಸರ ಪಟ್ಟು ತಮ್ಮ ಮಮ್ಮಿಯ ದಾಖಲೆ ಕಮ್ಮಿ ಎಂದೇ ಭಾವಿಸುವುದು. ನೂರಾರು ವರ್ಷ ಕಾಲ ರಷ್ಯನ್ನರಿಂದ ಆಳಿಸಿಕೊಂಡಿದ್ದರಿಂದ ಫಿನ್ನಿಶ್ ಜನರಿಗೆ ಇಂತಹ ಬೇಸರ ಹೆಚ್ಚಿರಬಹುದು. ಫಿನ್ಲೆಂಡ್ ಯಾರನ್ನಾದರೂ ಸ್ವಾಗತಿಸುತ್ತದೆ, ರಷ್ಯನ್ನರನ್ನು ಹೊರತುಪಡಿಸಿ. ರಷ್ಯದ ಆಕರ್ಷಕ ಯುವಕ ಯುವತಿಯರು ತಾವೂ ಫಿನ್ಲೆಂಡಿನೊಳಕ್ಕೆ ಬರುವುದರ ಜೊತೆಗೆ ಡ್ರಗ್ಸ್, ಮಾಫಿಯ ಹಾಗೂ ಏಯ್ಡ್ಸ್‌ಗಳನ್ನು ಬಿಟ್ಟಿಯಾಗಿ ತರುವುದೇ ಇವರಿಗೆ ತಲೆನೋವಾಗಿದೆ. ಝಾರ್ ವಂಶಸ್ಥ ರಷ್ಯನ್ನರು ಬೇಸಿಗೆಯಲ್ಲಿ ಮುಂಜಾನೆ ನಾಲ್ಕು ಗಂಟೆಗೇ ಕೇಂದ್ರ ರೈಲ್ವೇ ಸ್ಟೇಷನ್ನಿನ ಮುಂದೆ ತಲೆಬಗ್ಗಿಸಿಕೊಂಡು ಪಿಯಾನೇ ಬಾರಿಸುತ್ತಿರುತ್ತಾರೆ. ರಷ್ಯನ್ನರು ಅಂತಹವರನ್ನು ಕಂಡು ಫಿನ್ಲೆಂಡಿನಲ್ಲಿ ಅವರ ಸ್ಥಿತಿಯ ಬಗ್ಗೆ ಬೇರೇನೂ ಮಾಡಲಾಗದಿರುವುದರಿಂದ ಮಮ್ಮಲ ಮರುಗುತ್ತಾರೆ, ತಲೆ ಬಾಗಿ ವಂದಿಸುತ್ತಾರೆ, ಅವರು ಕುಡಿದ ಅಮಲಿನಲ್ಲಿ ಉಗಿದರೆ, ಹಾಗೆ ಉಗಿದರಲ್ಲ ಎಂಬ ಸಂತುಷ್ಟ ಭಾವದಿಂದ ಎಳ್ಳಷ್ಟೂ ಬೇಸರ ಮಾಡಿಕೊಳ್ಳದೆ ಮುಖವೊರೆಸಿಕೊಳ್ಳುತ್ತಾರೆ. ಏಕೆಂದರೆ "ಎಳ್ಳಷ್ಟು' ಎಂಬ ಕನ್ನಡ ಪದ ಗೊತ್ತಿದ್ದರಲ್ಲವೆ ಅವರು ಎಳ್ಳಷ್ಟು ಬೇಸರ ಮಾಡಿಕೊಳ್ಳುವುದು!?

ಈ ಪ್ರವಾಸ ಕಥನದ ಇತರ ಭಾಗಗಳು

 

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ