ಒಬ್ಬರ ಪಲ್ಲವಿ ; ಮತ್ತೊಬ್ಬರ ಚರಣ...ಏನಿದು ಜುಗಲ್ ಬಂದಿ ?!
ಚಲನಚಿತ್ರಗಳ ಗೀತೆ ರಚನೆಯ ಸಂದರ್ಭದಲ್ಲಿ ಒಬ್ಬರು ಪಲ್ಲವಿ ಬರೆದು ಮತ್ತೊಬ್ಬರು ಚರಣ ಬರೆದ ದಾಖಲೆ ಇರಲಿಕ್ಕಿಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ರೀತಿಯ ಒಂದು ಅಪರೂಪದ ಘಟನೆ ಸುಮಾರು ಐದು ದಶಕಗಳ ಹಿಂದೆಯೇ ನಡೆದಿದೆ. ಗೀತ ರಚನೆಕಾರರು ತಾವು ಬರೆದ ಯಾವುದೇ ಹಾಡನ್ನು ಬೇರೆಯವರು ತಿದ್ದಲು ಬಿಡಲಾರರು, ಅವರಿಗೆ ಹೀಗೆ ಮಾಡಿಸಿದರೆ ಕೆಟ್ಟ ಕೋಪ ಬರುತ್ತದೆ. ತಾವು ಬರೆದ ಹಾಡಿನಲ್ಲಿರುವ ಒಂದೇ ಒಂದು ಪದವನ್ನು ಬದಲಾಯಿಸಲೂ ಅವರು ಸುತರಾಂ ಒಪ್ಪಲಾರರು. ಹಾಗಿರುವಾಗ ಒಬ್ಬರು ಬರೆದ ಪಲ್ಲವಿಗೆ ಮತ್ತೊಬ್ಬರು ಚರಣ ಬರೆದದ್ದು ಹೇಗೆ ಮತ್ತು ಏಕೆ?
ಅದನ್ನು ತಿಳಿಯಬೇಕಾದರೆ ನೀವು ೧೯೬೭ರ ಕಾಲಘಟ್ಟಕ್ಕೆ ಹೋಗಬೇಕು. ಈ ಎಲ್ಲಾ ಘಟನೆಗಳು ನಡೆದದ್ದು ‘ಬಂಗಾರದ ಹೂವು' ಎಂಬ ಚಿತ್ರದ ನಿರ್ಮಾಣದ ಸಮಯದಲ್ಲಿ. ‘ಬಂಗಾರದ ಹೂವು’ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದು ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದ ಅರಸು ಕುಮಾರ್ ಎಂಬವರು. ಇವರು ಒಂದು ರೀತಿಯಲ್ಲಿ ‘ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾರು'. ಪತ್ರಕರ್ತರಾಗಿದ್ದವರು ನಾಟಕಕಾರರಾದರು, ಸಂಘಟಕರಾದರು, ಚಿತ್ರ ನಿರ್ಮಾಪಕರಾದರು, ನಿರ್ದೇಶಕರಾದರು. ವಾಣಿಜ್ಯ ಮಂಡಳಿಯ ಕಾರ್ಯದರ್ಶಿಯೂ ಆದರು. ನಂತರ ಅದೇ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆದರು.
ಇವರು ನಿರ್ಮಿಸಿದ ‘ಬಂಗಾರದ ಹೂವು' ಅಂದಿನ ದಿನಗಳಲ್ಲಿ ದೊಡ್ದ ಪಿಡುಗಾಗಿದ್ದ ಕುಷ್ಟರೋಗದ ಸಮಸ್ಯೆಯ ನಿರ್ಮೂಲನೆಯ ಮೇಲೆ ತಯಾರಾಗಿತ್ತು. ಅಂದಿನ ದಿನಗಳಲ್ಲಿ ಕುಷ್ಟರೋಗ ಪೀಡಿತರನ್ನು ಯಾರೂ ಸಮಾಜದ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಈ ರೋಗ ಸಂಪೂರ್ಣ ಗುಣಮುಖವಾಗುತ್ತದೆ ಎಂದು ತಿಳಿದ ಬಳಿಕವೂ ರೋಗಿ ತನ್ನ ಕುಟುಂಬದಿಂದ, ಸಮಾಜದಿಂದ ದೂರವೇ ಉಳಿಯಬೇಕಾಗಿ ಬರುತ್ತಿತ್ತು. ಇಂತಹ ಒಂದು ಸಮಾಜದ ಕಣ್ಣು ತೆರೆಸುವ ಚಲನ ಚಿತ್ರವನ್ನು ಸೊಗಸಾದ ಪ್ರೇಮ ಕಥೆಯ ಮೂಲಕ ತಿಳಿಸಿ, ಕುಷ್ಟರೋಗಿಗಳನ್ನು ದೂರ ಮಾಡಬೇಡಿ ಎನ್ನುವ ಸಂದೇಶ ನೀಡಹೊರಟಿದ್ದು ನಿರ್ದೇಶಕರಾದ ಅರಸು ಕುಮಾರ್ ಅವರ ಚತುರತೆ.
ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಅರಸು ಕುಮಾರ್ ಅವರಿಗೆ ಆಗ ಚಲನ ಚಿತ್ರಗಳ ನಿರ್ದೇಶನ ಮಾಡಬೇಕೆಂಬ ತುಡಿತ ಬಹಳ ಇತ್ತು. ಈ ಕಾರಣದಿಂದ ಅವರು ಅಂದು ನಡೆಯುತ್ತಿದ್ದ ಕನ್ನಡ ಚಳುವಳಿಯನ್ನು ತಮ್ಮ ಹಾದಿಯ ಮೆಟ್ಟಲನ್ನಾಗಿ ಬಳಸಿಕೊಂಡರು. ತಮ್ಮ ಉದ್ದೇಶ ಸಾಧನೆಗಾಗಿ ಅಂದಿನ ಮದರಾಸು (ಚೆನ್ನೈ) ಹೋದರು. ಅಲ್ಲಿ ಚಿತ್ರ ಬ್ರಹ್ಮ ವಿಠಲಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸಿ, ಅವರ ಗರಡಿಯಲ್ಲಿ ಪಳಗಿ ಬೆಂಗಳೂರಿಗೆ ಹಿಂದಿರುಗಿದರು. ಹಿಂದಿರುಗಿ ಬಂದ ಕೂಡಲೇ ಅವರು ಮಾಡಿದ ಕೆಲಸವೆಂದರೆ ತಾವು ಹಿಂದೊಮ್ಮೆ ಬರೆದಿಟ್ಟಿದ್ದ ನಾಟಕವನ್ನು ಸಿನೆಮಾ ರಂಗಕ್ಕೆ ಅಳವಡಿಸಿದ್ದು.
‘ಬಂಗಾರದ ಹೂವು' ಚಿತ್ರಕ್ಕೆ ಅರಸು ಕುಮಾರ್ ಅವರು ನಾಯಕರಾಗಿ ಸಹಿ ಮಾಡಿದ್ದು ಡಾ. ರಾಜ್ ಕುಮಾರ್ ಅವರನ್ನು. ಜೊತೆಗೆ ಕಲ್ಪನಾ, ಪಂಡರೀಬಾಯಿ, ಉದಯ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಶಾಂತಮ್ಮ ಮುಂತಾದವರೂ ಈ ಚಿತ್ರದಲ್ಲಿದ್ದುದರಿಂದ ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವೂ ಇರಲಿಲ್ಲ. ಅಂದಿನ ಸಮಯ ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಬೆರಳೆಣಿಕೆಯಷ್ಟಾದುದರಿಂದ ಸಿನೆಮಾವೊಂದು ಚಿತ್ರ ಮಂದಿರಕ್ಕೆ ಬಂದ ಕೂಡಲೇ ‘ಹೌಸ್ ಫುಲ್' ಆಗುತ್ತಿತ್ತು. ಪ್ರೇಕ್ಷಕರಿಗೆ ಆಗ ಚಲನ ಚಿತ್ರವೇ ಅತೀ ದೊಡ್ಡ ಮನೋರಂಜನೆಯಾಗಿತ್ತು. ‘ಬಂಗಾರದ ಹೂವು' ಚಿತ್ರಕ್ಕೆ ಅರಸು ಕುಮಾರ್ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿದ್ದು ರಾಜನ್ ನಾಗೇಂದ್ರ ಅವರನ್ನು. ಹಾಡುಗಳನ್ನು ಬರೆಸಿದ್ದು ಚಿ.ಉದಯಶಂಕರ್, ವಿಜಯನಾರಸಿಂಹ ಮತ್ತು ಆರ್ ಎನ್ ಜಯಗೋಪಾಲ್ ಇವರಿಂದ. ಈ ಮೂರೂ ಮಂದಿ ಅದ್ಭುತ ಗೀತರಚನೆಕಾರರು ಎನ್ನುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.
ಮೂರು ಮಂದಿ ಗೀತ ರಚನೆಕಾರರು ಇದ್ದ ಕಾರಣವೋ ಏನೋ, ಇಲ್ಲಿ ಪುಟ್ಟ ಎಡವಟ್ಟೊಂದು ನಡೆದು ಹೋಯಿತು. ‘ಬಂಗಾರದ ಹೂವು' ಚಿತ್ರದ ಸೂಪರ್ ಹಿಟ್ ಗೀತೆ ‘ನೀ ನಡೆವ ಹಾದಿಯಲ್ಲಿ...'ಎಂಬ ಹಾಡು ಇಬ್ಬರು ಗೀತೆ ರಚನೆಕಾರರು ಬರೆದ ಅಪರೂಪದ ಗೀತೆಯಾಗಿ ದಾಖಲಾಗಿ ಹೋಯಿತು. ಹೇಗಾಯಿತು ಈ ಸಂಗತಿ ಎಂದರೆ -ಮೂರು ಮಂದಿ ಗೀತ ರಚನಾಕಾರರನ್ನು ಆಯ್ದುಕೊಂಡ ಅರಸು ಕುಮಾರ್ ಅವರು ಆದಷ್ಟು ಬೇಗನೇ ಹಾಡುಗಳನ್ನು ಬರೆದು ಕೊಡಲು ಅವರನ್ನು ವಿನಂತಿಸಿಕೊಂಡರು. ಏಕೆಂದರೆ ತಡ ಮಾಡಿದಷ್ಟು ಚಿತ್ರದ ವೆಚ್ಚ ಏರುತ್ತದೆ ಎಂಬ ಗಾಬರಿ ಅವರಿಗಿತ್ತು. ಮೂವರಲ್ಲಿ ಚಿ. ಉದಯ ಶಂಕರ್ ಅವರು ಕೂಡಲೇ ತಮ್ಮ ಹಾಡುಗಳನ್ನು ಬರೆದು ಕೊಟ್ಟರು. ಆದರೆ ವಿಜಯನಾರಸಿಂಹ ಅವರು ಹಾಡುಗಳನ್ನು ನೀಡಲು ತಡ ಮಾಡಿದರಂತೆ. ಆಗ ಅರಸು ಕುಮಾರ್ ಅವರು ಹಾಡು ಬರೆದುಕೊಡಿ ಎಂದು ಆರ್ ಎನ್ ಜಯಗೋಪಾಲ್ ಅವರನ್ನು ಒತ್ತಾಯಿಸಿದರಂತೆ. ಅವರು ಆಗಲೇ ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...' ಎಂಬ ಹಾಡಿನ ಪಲ್ಲವಿಯನ್ನು ಬರೆದು, ಚರಣ ಹೇಗಿರಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದರು. ದಿನಗಟ್ಟಲೆ ಯೋಚನೆ ಮಾಡಿದರೂ ಅವರಿಗೆ ಈ ಹಾಡಿನ ಚರಣಗಳು ಹೊಳೆಯಲೇ ಇಲ್ಲ. ಅದೇ ಸಮಯದಲ್ಲಿ ಈ ಪಲ್ಲವಿಯ ಸಂಗತಿ ವಿಜಯನಾರಸಿಂಹ ಅವರಿಗೆ ಗೊತ್ತಾಯಿತು. ಪಲ್ಲವಿಯನ್ನು ಕಂಡಕೂಡಲೇ ಅವರಿಗೆ ಅಚಾನಕ್ ಆಗಿ ಅದರ ಚರಣಗಳು ಹೊಳೆದವು. ಆದರೆ ಬೇರೊಬ್ಬ ಸಾಹಿತಿಯ ಹಾಡಿಗೆ ತಾವು ಚರಣ ಬರೆದರೆ ತಪ್ಪಾದೀತು ಎನ್ನುವ ಆತಂಕದಲ್ಲಿ ಅವರು ಅರಸು ಕುಮಾರ್ ಅವರಿಗೆ ಆರ್ ಎನ್ ಜಯಗೋಪಾಲ್ ಅವರ ಬಳಿ ಈ ವಿಷಯ ತಿಳಿಸಲು ಹೇಳಿದರು. ಈ ವಿಷಯ ತಿಳಿದ ಆರ್ ಎನ್ ಜಯಗೋಪಾಲ್ ಅವರು ಬಹಳ ಸಂತಸ ಪಟ್ಟು ತಾವು ಬರೆದ ಪಲ್ಲವಿಯನ್ನು ವಿಜಯನಾರಸಿಂಹ ಅವರಿಗೆ ಒಪ್ಪಿಸಿಬಿಟ್ಟರು. ಹೀಗಿತ್ತು ಅಂದಿನ ಸಾಹಿತಿಗಳ ಹೃದಯ ವೈಶಾಲ್ಯತೆ.
ಆರ್ ಎನ್ ಜಯಗೋಪಾಲ್ ಅವರ ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ..' ಎಂಬ ಪಲ್ಲವಿಗೆ ವಿಜಯನಾರಸಿಂಹ ಅವರು ‘ಈ ಬಾಳ ಬುತ್ತಿಯಲೀ ಸಿಹಿಪಾಲು ನಿನಗಿರಲಿ ಕಹಿಯೆಲ್ಲ ನನಗಿರಲಿ...' ಎಂಬ ಚರಣವನ್ನು ಸೇರಿಸಿಬಿಟ್ಟರು. ಇವರಿಬ್ಬರ ಜುಗಲ್ ಬಂದಿ ಹಾಡು ಅಂದು ಸೂಪರ್ ಹಿಟ್ ಹಾಡಾಗಿ ಮೆರೆಯಿತು. ಆರ್ ಎನ್ ಜಯಗೋಪಾಲ್ ತಮ್ಮ ಹಾಡು ಎನ್ನುವ ಅಹಂ ಬಿಟ್ಟು ವಿಜಯನಾರಸಿಂಹ ಅವರಿಗೆ ಚರಣವನ್ನು ಸೇರಿಸಲು ಔದಾರ್ಯ ತೋರಿದ್ದು ಒಂದು ಅಪರೂಪದ ಘಟನೆಯೇ ಸರಿ. ಇದರಿಂದಾಗಿ ಹಾಡು, ಚಿತ್ರ ಶ್ರೀಮಂತವಾಯಿತು. ಚಿತ್ರರಂಗದ ಇತಿಹಾಸದಲ್ಲಿ ಒಂದು ಅದ್ಭುತ ಹಾಡು ದಾಖಲಾಯಿತು. ಈ ಹಾಡುಗಳ ಜೊತೆಗೆ “ಆ ಮೊಗವು ಎಂಥಾ ಚೆಲುವು, ಓದಿ ಓದಿ ಕೂಚು ಭಟ್ಟನಾಗಬೇಡ, ಮದುವೆ ಗಂಡಿಗೂ ಹೆಣ್ಣಿಗೂ ಮದುವೆ, ಓಡುವ ನದಿ ಸಾಗರವ ಸೇರಲೇ ಬೇಕು" ಮುಂತಾದ ಹಾಡುಗಳೂ ಜನಜನಿತವಾದುವು.
(ಮಾಹಿತಿ: ಗಣೇಶ್ ಕಾಸರಗೋಡು ಅವರ ಕೃತಿಯಿಂದ)
ಚಿತ್ರ ಕೃಪೆ: ಅಂತರ್ಜಾಲ ತಾಣ