ಒಬ್ಬ ಶಿಕ್ಷಕಿಯ ಮನದಾಳದಿಂದ...

ಒಬ್ಬ ಶಿಕ್ಷಕಿಯ ಮನದಾಳದಿಂದ...

ಹೊಸದಾಗಿ ಕೆಲಸಕ್ಕೆ ಸೇರಿದ ಶ್ರೀಮತಿ ಶೋಭಾ ಇಂಗ್ಲಿಷ್ ಟೀಚರ್ ಆಗಿದ್ದರು, ಇವರು ಕ್ಲಾಸ್ ರೂಮ್ ಗೆ ಬಂದು ಕೂಡಲೇ, ಮಕ್ಕಳು ‘ಗುಡ್ ಮಾರ್ನಿಂಗ್’ ಟೀಚರ್ ಹೇಳುತ್ತಲೇ, ಇವರು ಎಲ್ಲಾ ಮಕ್ಕಳಿಗೂ ಮರು ಹಾರೈಕೆ ಮಾಡಿ ಪಾಠ ಶುರು ಮಾಡುವವರು. ಅವರಿಗೆ,. ಒಮ್ಮೊಮ್ಮೆ ಅನಿಸುತಿತ್ತು, ಮಕ್ಕಳೇನೋ ತುಂಬು ಹೃದಯದಿಂದ ವಿಶ್ ಮಾಡ್ತಾರೆ. ಆದರೆ ನಾನು ನಿಜವಾಗಿಯೂ ಅವರಿಗೆ ಮನದಿಂದ ಹಾರೈಸುತ್ತೇನಾ? ನಾನು ಎಲ್ಲಾ ಮಕ್ಕಳನ್ನು ಒಂದೇ ರೀತಿ ಪ್ರೀತಿಸುತ್ತಿದ್ದೇನೆಯಾ?

ಹೌದು, ಶೋಭಾ ಟೀಚರ್ ಎಲ್ಲ ಮಕ್ಕಳನ್ನೂ ಒಂದೇ ತರಹ ನೋಡುವುದಿಲ್ಲ. ಏಕೆಂದರೆ ಕೊನೆಯ ಬೆಂಚಿನ ಹುಡುಗ ಶೈಲೇಶ್, ಕಲಿಕೆಯಲ್ಲಿ ಯಾವ ತರಹದ ಆಸಕ್ತಿಯನ್ನೂ ತೋರಿಸುತ್ತಿಲ್ಲ. ನೋಡಲು ಅಸಹ್ಯ, ಕೊಳಕು ಬಟ್ಟೆ,  ಮಾತೂ ಆಡುವುದಿಲ್ಲ, ಎಷ್ಟು ಹೊಡೆದರೂ, ಸುಮ್ಮನೆ ಕೂಡುವನು, ಯಾವ ತರಹದ  ಪ್ರತ್ಯುತ್ತರವೂ ಇಲ್ಲ, ಇವನೆಂತಹ ದಡ್ಡ ಹುಡುಗ? ಎಂದು ಶೋಭಾ ಟೀಚರ್ ಆ ಹುಡುಗನ ಗೋಜಿಗೂ ಹೋಗುತ್ತಿರಲಿಲ್ಲ.

ಪಾಠದಲ್ಲಿ ಯಾವುದಾದರೂ ನಕಾರಾತ್ಮಕ ವಿಷಯ ಬಂತೆಂದರೆ, ಶೋಭಾ ಟೀಚರ್ ಶೈಲೇಶನ ಉದಾಹರಣೆ ಕೊಡುವರು. ಮತ್ತೆ ಯಾವುದಾದರೂ ಸಕಾರಾತ್ಮಕ ವಿಷಯ ಬಂತೆಂದರೆ, ಅವನನ್ನು ನಿರ್ಲಕ್ಷ್ಯ ಮಾಡುವರು. ಹೀಗೆಯೇ ದಿನಗಳು ಉರುಳಿದವು. ಸಹ ಶಿಕ್ಷಕರು ಕೇಳಿದರೆ, ಓಹೋ, ಅವನಾ , ಶೈಲೇಶ್… ಅವನಿಗೆ ಪಾಠ ಮಾಡುವುದೇ ಒಂದೇ, ಕಲ್ಲಿನ ಮೇಲೆ ನೀರು ಸುರಿಯುವುದೂ ಒಂದೇ...ಹೀಗೇ ಅವನ ಬಗ್ಗೆ ಅಪಹಾಸ್ಯ ಮಾಡುತಿದ್ದರು.

ಮುಂದೆ  ತ್ರೈಮಾಸಿಕ ಪರೀಕ್ಷೆ ಬಂತು. ಯಥಾ ಪ್ರಕಾರ, ಶೈಲೇಶ್ ಫೇಲ್. ಮಧ್ಯಾವಧಿ ಪರೀಕ್ಷೆಯಲ್ಲಿಯೂ ಶೈಲೇಶ್ ಫೈಲ್..

ಅವನ ಅಂಕ ಪಟ್ಟಿಯನ್ನು ಅವನ ಕೈಗೆ ಕೊಟ್ಟು ಹೆತ್ತವರ ಸಹಿ ಮಾಡಿಸಿ ತಂದು ಕೊಡಲು ಶೋಭಾ ಟೀಚರ್ , ಶೈಲೇಶ್ ನ ಕೈಗೆ ಅವನ ಅಂಕ ಪಟ್ಟಿಯನ್ನು ಕೊಟ್ಟರು..

ಕೆಲವು ದಿನಗಳ ನಂತರ ಅವನು ತನ್ನ ಅಂಕ ಪಟ್ಟಿಯನ್ನು ಶೋಭಾ ಟೀಚರ್ ಗೆ ವಾಪಸು ಮಾಡಿದ, ಅವರು ಅದನ್ನು ತೆರೆದು ನೋಡುವ ಗೋಜಿಗೂ ಹೋಗಲಿಲ್ಲ. ಮುಂದೆ ಒಮ್ಮೆ ಮುಖ್ಯೋಪಾಧ್ಯಾಯರ ಕಚೇರಿಯಲ್ಲಿ ಎಲ್ಲ ಟೀಚರ್ ಗಳ ಮೀಟಿಂಗ್ ಆಗಿ, ಮುಖ್ಯೋಪಾಧ್ಯಾಯರು ಎಲ್ಲಾ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಪರಾಮರ್ಶೆ ಮಾಡಿದರು. ಆ ಸಮಯದಲ್ಲಿ ಅವರು ಶೈಲೇಶ್ ನ ಹಿಂದಿನ ವರ್ಷಗಳ ಅಂಕಪಟ್ಟಿಯನ್ನು ತುಲನೆ ಮಾಡಿದಾಗ ಅವನು ಹಿಂದೆಲ್ಲಾ ವರ್ಷಗಳಲ್ಲಿ ತರಗತಿಯಲ್ಲೇ ಅಧಿಕ ಅಂತ ತೆಗೆದುಕೊಳ್ಳುವ ವಿದ್ಯಾರ್ಥಿ ಆಗಿದ್ದ.,ಶೋಭಾ ಟೀಚರ್ ಅವರಿಗೆ ಅಚ್ಚರಿಯಾಯಿತು. ಮುಖ್ಯೋಪಾಧ್ಯಾಯರು ಕೂಡಲೇ ಶೈಲೇಶ್ ನನ್ನು ತಮ್ಮ ಕಚೇರಿಗೆ ಕರೆಸಿದರು.

ಆಗ ಗೊತ್ತಾಯಿತು, ಕಳೆದ ವರ್ಷ ಅವನ ತಾಯಿಗೆ ಕ್ಯಾನ್ಸರ್ ರೋಗ ಬಂದಿರುವುದು ತಿಳಿದು ಅವಳು ಜೀವನದ ಕೊನೆಯ ಹಂತದಲ್ಲಿದ್ದಾಳೆ ಎಂದು. ಈ ಕಾರಣದಿಂದ ಶೈಲೇಶ್ ನ ವಿದ್ಯಾಭ್ಯಾಸದತ್ತ ಗಮನ ಕೊಡುವವರು ಯಾರೂ ಇಲ್ಲದೇ, ಅವನೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಶೈಲೇಶನ ಕೆಲಸ ಈಗ ತಾಯಿಯ ಸೇವೆಯಲ್ಲಿ, ಅಭ್ಯಾಸದ ಕಡೆ ಗಮನ ಕಡಿಮೆ ಆಗಿ, ಅವನು ಫೈಲ್  ಆಗುತ್ತಿದ್ದಾನೆ ಎಂದು ಶೋಭಾ ಟೀಚರ್ ಗೆ ಅರ್ಥವಾಯಿತು.ಅವರಿಗೆ ಅವರ ಮೇಲೆಯೇ ಬೇಸರವಾಯಿತು. ನಾನು ಟೀಚರ್ ಆಗಿ ನನ್ನದೇ ವಿದ್ಯಾರ್ಥಿಗಳಲ್ಲಿ ಭೇಧಭಾವ ಮಾಡುತ್ತಿದ್ದೆನಲ್ಲಾ ಎಂದು. ಇನ್ನಾದರೂ ನನ್ನ ಗುಣ-ನಡತೆಯನ್ನು ಬದಲಾಯಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿದರು.

ಮರುದಿನದಿಂದ ಅವರ ಹಾರೈಕೆ, ಪಾಠಗಳು ಅವರ ಮನದಾಳದಿಂದ ಬರ ತೊಡಗಿತು. ಈಗ ಅವರು ಶೈಲೇಶ್ ನ ಕಡೆ ನೋಡುವ ದೃಷ್ಟಿ ಕೋನ ಬದಲಾಯಿತು. ಅವರು ಶೈಲೇಶನ ಜೊತೆ ಮುಕ್ತವಾಗಿ ಮಾತನಾಡಿ, ಅವನಿಗೆ ಕಲಿಕೆಯಲ್ಲಿ ಸಹಕಾರ, ಬೆಂಬಲ ನೀಡತೊಡಗಿದರು.

ಪರಿಣಾಮ ಮತ್ತೆ ಶೈಲೇಶ್ ತರಗತಿಯಲ್ಲಿ ಮೊದಲಿಗನಾದ. ಅವನಿಗಿಂತ ಹೆಚ್ಚು ಸಂತೋಷವಾದದ್ದು ಶೋಭಾ ಟೀಚರ್ ಗೆ.

ಒಬ್ಬ ಶಿಕ್ಷಕಿ, ಅಂತಃ ಕರಣ, ತೋರಿಸಿ ಪಾಠ ಮಾಡಿದರೆ, ಏನೆಲ್ಲಾ ಚಮತ್ಕಾರ ಮಾಡಬಹುದು, ಇದಕ್ಕೆ ಶೋಭಾ ಟೀಚರ್ ಅಂತಹ ಗುರು ಮತ್ತು ಶೈಲೇಶ್ ನಂತಹ ವಿದ್ಯಾರ್ಥಿಯೇ ಉದಾಹರಣೆ.

ಹತ್ತನೇ ತರಗತಿಯ ವಿದ್ಯಾಭ್ಯಾಸ ಮುಗಿದು, ಮಕ್ಕಳು ಇನ್ನೇನು ಶಾಲೆ ಬಿಟ್ಟು  ಹೋಗುತ್ತಾರೆ ಎಂದು ಆ ದಿನ ಶಾಲೆಯಲ್ಲಿ ಮಕ್ಕಳಿಗೋಸ್ಕ ರ ಒಂದು ವಿದಾಯ ಸಮಾರಂಭ ಇಟ್ಟು ಕೊಂಡಿದ್ದರು. ಸಮಾರಂಭ ಮುಗಿಯಿತು, ಎಲ್ಲರ ಭಾಷಣ ಕೂಡ ಆದವು , ಕೊನೆಯಲ್ಲಿ ಮಕ್ಕಳು ತಮ್ಮ ತಮ್ಮ ಇಚ್ಛೆ ಅನುಸಾರ ಟೀಚರ್ ಗಳಿಗೆ ಏನೋ ಗಿಫ್ಟ್ ಕೊಟ್ಟರು, ಕೆಲವರು ಪೆನ್ ಕೊಟ್ಟರೆ, ಇನ್ನು ಕೆಲವರು ಹೂವು. ಹೀಗೆ ಏನೇನೋ ತಮಗೆ ತಿಳಿದಂತೆ ಗಿಫ್ಟ್ ಕೊಟ್ಟರು, 

ಶೈಲೇಶ್ ನಿಧಾನವಾಗಿ ಶೋಭಾ ಟೀಚರ್ ಬಳಿ ಬಂದು ಒಂದು ಹಳೆಯ ಸುಗಂಧ ದ್ರವ್ಯದ ಬಾಟಲಿ ಮತ್ತು ನಾಲ್ಕು  ಬಂಗಾರ ಬಣ್ಣದ ಬಳೆಗಳನ್ನು ಗಿಫ್ಟ್ ಆಗಿ ಕೊಟ್ಟು ಕಾಲಿಗೆ ಬಿದ್ದು ನಮಸ್ಕಾರ ಮಾಡಿದನು.

ಶೋಭಾ ಟೀಚರ್ ಹಳೆಯ ಮಾಸಿದ ಸುಗಂಧ ದ್ರವ್ಯದ ಬಾಟಲಿ ಮತ್ತು ಆ ಬಳೆಗಳ ಕಡೆ ನೋಡಿದರು. ಏನೂ ಬೇಸರಿಸದೇ ಆ ಸುಗಂಧ ದ್ರವ್ಯವನ್ನು ತಮ್ಮ ಸೀರೆಯ ಮೇಲೆ ಸಿಂಪಡಿಸಿಕೊಂಡರು ಮತ್ತು ಆ ಬಳೆಗಳನ್ನು ತಮ್ಮ ಕೈಗೆ ಹಾಕಿ ಕೊಂಡರು. ಆಗ ಶೈಲೇಶ್ ನ ಮುಖದಲ್ಲಿ ತೃಪ್ತಿಯ ನಗು ಮೂಡಿತು. ಅವನ ತಾಯಿ ಕೆಲವೇ ದಿನಗಳ ಹಿಂದೆ ನಿಧನ ಹೊಂದಿದ್ದರು. ಮತ್ತು ಅವನು ತಂದುಕೊಟ್ಟ ವಸ್ತುಗಳು ಅವನ ತಾಯಿ ಬಳಸುತ್ತಿದ್ದ ವಸ್ತುಗಳೇ ಆಗಿದ್ದವು.

ಟೀಚರ್, ಈಗ ನೀವು ನನ್ನ ತಾಯಿಯ ಹಾಗೆ ಕಾಣಿಸುತ್ತೀರಿ. ಅವಳ ಹತ್ತಿರ ಹೋದಾಗ ಅವಳ ಸೀರೆಯಿಂದಲೂ ಇದೇ ರೀತಿಯ ಸುಗಂಧ ಹೊಮ್ಮುತ್ತಿತ್ತು. ಅವಳು ನನ್ನ ಬಿಟ್ಟು ಹೋದಳು, ಆದರೆ ಅವಳು ಜೀವಂತವಿದ್ದಾಗ ಉಪಯೋಗ ಮಾಡುತಿದ್ದ ಅತೀ ಅಚ್ಚು ಮೆಚ್ಚಿನ  ಸಾಮಗ್ರಿಗಳು ಇವು. ಶೈಲೇಶ್ ಮಾತಿಗೆ ಶೋಭಾ ಟೀಚರ್ ಹಾಗೂ ಇತರ ಶಿಕ್ಷಕರ ಕಣ್ಣಲಿಗಳು ತುಂಬಿ ಬಂದಿದ್ದವು. ಶೋಭಾ ಟೀಚರ್ ಅಂತೂ ಶೈಲೇಶ್ ಅನ್ನು ಗಟ್ಟಿಯಾಗಿ ಅಪ್ಪಿಕೊಂಡು ಅತ್ತೇ ಬಿಟ್ಟರು.

ವರ್ಷಗಳು ಉರುಳಿದವು. ಶೋಭಾ ಟೀಚರ್ ತಮ್ಮ ಅನಾರೋಗ್ಯದ ಕಾರಣದಿಂದ ವೃತ್ತಿಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡರು. ಒಂದು ದಿನ ಅವರಿಗೆ ಒಂದು ವಿದೇಶದಿಂದ ಕಾಗದ ಬಂತು. ಕಳಿಸಿದವರ ಹೆಸರು ಡಾ.ಶೈಲೇಶ್, ಲಂಡನ್ ಎಂದಾಗಿತ್ತು.

ಓಹ್.. ಶೋಭಾ ಟೀಚರ್ ಅಚ್ಚರಿಯಲ್ಲಿ ಮುಳುಗಿದರು. ಅವನ ಬಳೆ ಮತ್ತು ಸುಗಂಧ ದ್ರವ್ಯದ ಬಾಟಲಿ ನೆನಪಿಗೆ ಬಂತು. ಪತ್ರ ಬಿಚ್ಚಿ ಓದಲು ಪ್ರಾರಂಭಿಸಿದರು..

ಆತ್ಮೀಯ ಶೋಭಾ ಟೀಚರ್,

ನಾನು ನನ್ನ ಜೀವಮಾನದಲ್ಲಿ ಭೇಟಿಯಾದ ಅತ್ಯುತ್ತಮ ವ್ಯಕ್ತಿ ನೀವು. ನಾನು ಈಗ ಏನಾಗಿದ್ದೇನೆ ಎಂಬುವುದಕ್ಕೆ ಭದ್ರ ಬುನಾದಿ ಹಾಕಿದವರು ನೀವು. ನನ್ನ ಮದುವೆ ನಿಶ್ಚಯವಾಗಿದೆ. ಹುಡುಗಿಯೂ ಡಾಕ್ಟರ್. ಲಂಡನ್ ನಲ್ಲೇ ಮದುವೆ.

ನೀವಿಲ್ಲದಿದ್ದರೆ, ಈ ಮದುವೆ ಖಂಡಿತಾ ನಡೆಯದು..

ಈ ಪತ್ರದ ಜೊತೆ, ಲಂಡನ್ ಗೆ ಹೋಗಿ ಬರುವ ವಿಮಾನದ ಟಿಕೇಟ್ ಕಳಿಸುತ್ತಾ ಇದ್ದೇನೆ. ಇನ್ನೂ ಸಮಯವಿದೆ ನಿಮಗೆ ತಯಾರಾಗಲು. ವೀಸಾ ಬಗ್ಗೆ ಚಿಂತಿಸಬೇಡಿ, ಪಾಸ್ ಪೋರ್ಟ್ ಇಲ್ಲವಾದರೆ ಕೂಡಲೇ ಮಾಡಿಸಿ. ದಯವಿಟ್ಟು ಆಗುವುದಿಲ್ಲ ಎನ್ನಬೇಡಿ,

ನಿಮ್ಮ ದಾರಿ ಕಾಯುವ..

ಶೈಲೇಶ್

ಶೋಭಾ ಟೀಚರ್ ಅವನು ನೀಡಿದ ಸುಗಂಧ ದ್ರವ್ಯದ ಬಾಟಲಿಯತ್ತ ನೋಡಿದ. ಅದರಲ್ಲಿರುವ ದ್ರವ ಖಾಲಿಯಾಗಿದ್ದರೂ ಬಾಟಲಿಯನ್ನು ನೋಡುವಾಗ ಶೈಲೇಶ್ ನೆನಪು, ಆ ಸುಗಂಧದ ನೆನಪು ಅವರಿಗಾಗುತ್ತಲೇ ಇತ್ತು. ಅವನು ಕೊಟ್ಟ ಆ ಬಳೆಗಳನ್ನು ಇನ್ನೂ ಜೋಪಾನವಾಗಿಯೇ ಇಟ್ಟಿದ್ದರು.

ಶೋಭಾ ಟೀಚರ್  ತಮ್ಮ ಅನಾರೋಗ್ಯವನ್ನೂ, ಮನೆಯವರ ವಿರೋಧವನ್ನೂ ಲೆಕ್ಕಿಸದೇ ಲಂಡನ್ ಗೆ ಪ್ರಯಾಣ ಬೆಳೆಸಿದರು. ಲಂಡನ್ ತಲುಪಿದರು, ವಿಮಾನ ನಿಲ್ದಾಣದಿಂದ ಮದುವೆ ಸಮಾರಂಭ ನಡೆಯುವ ಸ್ಥಳಕ್ಕೆ ತಲುಪಿಸಲು ಶೈಲೇಶ್ ಎಲ್ಲಾ ವ್ಯವಸ್ಥೆ ಮಾಡಿದ್ದ. ಅವರು ಇಂಗ್ಲೀಷ್ ಟೀಚರ್ ಆದದ್ದರಿಂದ ಭಾಷಾ ಸಮಸ್ಯೆಯೇನೂ ಆಗಲಿಲ್ಲ. ಬಹಳಷ್ಟು ಜನರಿದ್ದರು. ಶೈಲೇಶ್ ಲಂಡನ್ ನ ಖ್ಯಾತ ವೈದ್ಯ. ಜನಜಂಗುಳಿಯ ನಡುವೆ ಹೋಗಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಲಲು ಮುಜುಗರವಾಗಿ ಶೋಭಾ ಟೀಚರ್ ಹಿಂದಿನ ಸಾಲಿನಲ್ಲಿ ಕುಳಿತುಕೊಂಡರು.

ಶೈಲೇಶ್ ಅನ್ನು ನೋಡಿದ್ದು ಬಹಳ ವರ್ಷಗಳ ಹಿಂದೆ. ಅವನು ಈಗ ಹೇಗೆ ಕಾಣಿಸುತ್ತಾನೋ? ನನಗೆ ಅವನ ಗುರುತು ಸಿಗುತ್ತದೆಯೋ ಇಲ್ಲವೋ? ಅಂದುಕೊಂಡು ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತರು, ಅಷ್ಟರಲ್ಲಿ ಯಾರೋ ಇವರನ್ನು ಹುಡುಕಿ ಕೊಂಡು ಬಂದು.

ನೀವು ಶೋಭಾ ಮೇಡಂ ಅವರಾ? ಎಂದು ಆಂಗ್ಲಭಾಷೆಯಲ್ಲಿ ಕೇಳಿದಾಗ ಅವರು ಹೌದು ಎಂದು ಉತ್ತರಿಸಿದರು. ಕೂಡಲೇ ಆ ಯುವಕ ಅವರ ಕೈ ಹಿಡಿದು ಮುಂದಿನ ಸಾಲಿನತ್ತ ಕರೆದು ಕೊಂಡುಹೋದ. ಅಲ್ಲಿ ಒಂದು ಸುಖಾಸೀನದ ಮೇಲೆ ಕೂಡಿಸಿದ. ಅದರ ಮೇಲೆ ಹೀಗೆಂದು ಬರೆದಿತ್ತು..

Shobha Teacher, My Loving Mother....

ಅಷ್ಟರಲ್ಲಿ ಶೈಲೇಶ್, ತನ್ನ ಪತ್ನಿ ಮತ್ತು ಅವರ ಪರಿವಾರದ ಸಮೇತ ಶೋಭಾ ಟೀಚರ್ ಇದ್ದ ಕಡೆ ಬಂದು, ಅವರ ಎರಡೂ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾ ಪತ್ನಿಗೆ ಹೇಳಿದ. ಇವರು ನನ್ನ ಜೀವನದಲ್ಲಿ ನನ್ನ ತಾಯಿ ನಂತರ ಆ ಸ್ಥಾನವನ್ನು ತುಂಬಿದವರು. ಇಂದು ನಾನು ಏನಾಗಿರುವನೋ ಅದಕ್ಕೆಲ್ಲ ಸ್ಪೂರ್ತಿ ತುಂಬಿದವರು ಇವರೇ. ನನ್ನ ಶೋಭಾ ಟೀಚರ್, ನನ್ನ ಅಮ್ಮ.

ಈ ಮಾತುಗಳನ್ನು ಕೇಳಿ ಶೋಭಾ ಟೀಚರ್ ಅವರ ಕಣ್ಣುಗಳು ತುಂಬಿ ಬಂದವು. ಅದಕ್ಕೆ ಶೋಭಾ ಟೀಚರ್ ಮಾರ್ಮಿಕವಾಗಿ ಉತ್ತರಿಸಿದರು,

‘ಇಲ್ಲ, ಇಲ್ಲ, ಅಂದು ಶೈಲೇಶ್ ನನ್ನ ತರಗತಿಯಲ್ಲಿ ಇರದೇ ಹೋದ ಪಕ್ಷದಲ್ಲಿ, ನನಗೆ ಗೊತ್ತೇ ಆಗುತ್ತಿರಲಿಲ್ಲ, ಶಿಕ್ಷಕಿ ಮೊದಲು ಪ್ರತಿ ವಿದ್ಯಾರ್ಥಿಯ ತಾಯಿ ಆಗಬೇಕು. ನಂತರ ಶಿಕ್ಷಕಿ ಆಗಬೇಕು ಎಂದು'

ಎಷ್ಟೊಂದು ಅರ್ಥಗರ್ಭಿತ  ಮಾತು..

ಮೊಬೈಲ್, ಸಾಮಾಜಿಕ ಜಾಲತಾಣಗಳ ಮುಖಾಂತರ  ಮನುಷ್ಯರೆನೋ ಜೋಡಿಸಲ್ಪಡುತಿದ್ದಾರೆ, ಆದರೆ ಮಾನವೀಯತೆ ಎಲ್ಲೋ ಕಳೆದು ಹೋದಂತೆ ಭಾಸವಾಗುತ್ತಿದೆ. ಈ ಭಾವನಾತ್ಮಕ ಕಥೆಯೂ ವಾಟ್ಸಾಪ್ ಮೂಲಕವೇ ಪ್ರಸಾರವಾಗಿ ಬಂದಿದೆ. ಬರೆದ ಅಜ್ಞಾತ ಲೇಖಕನಿಗೆ ನಮೋ ನಮಃ

***

ಚಿತ್ರ ಕೃಪೆ: ಅಂತರ್ಜಾಲ ತಾಣ